ಹಿಟ್ಲರ್ ಎಂಬ ಧಾರಾವಾಹಿಯ ಮೂಲಕ ಕಿರುತೆರೆ ಜಗತ್ತಿಗೆ ಪಾದಾರ್ಪಣೆ ಮಾಡಿದ್ದವರು ಮಲೈಕಾ ವಸುಪಾಲ್. ಆ ಪಾತ್ರಕ್ಕೆ ತಕ್ಕಂಥಾ ಚುರುಕಿನ ಸ್ವಭಾವದ ಮೂಲಕ ಅಪಾರ ಪ್ರಮಾಣದಲ್ಲಿ ಅಭಿಮಾನಿ ಬಳಗ ಸಂಪಾದಿಸಿದ್ದ ಮಲೈಕಾ, ಉಪಾಧ್ಯಕ್ಷ ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ಆ ಮೂಲಕ ತಕ್ಕಮಟ್ಟಿನ ಆರಂಭಿಕ ಯಶ ಗಳಿಸಿದ್ದ ಆಕೆಯೀಗ ವಿದ್ಯಾಪತಿ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ. ಇಡೀ ಚಿತ್ರದ ಕೇಂದ್ರಬಿಂದುವಿನಂಥಾ ಪಾತ್ರವಾಗಿ, ಆ ಪಾತ್ರ ತಾನೇ ಆದಂತೆ ನಟಿಸಿದ ರೀತಿಯಿಂದ ಮತ್ತೆ ನೋಡುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಮೂಲಕ ನಾಯಕಿಯಾಗಿ ಎರಡನೇ ಹೆಜ್ಜೆಯಲ್ಲಿ ಮಲೈಕಾ ಮುಂದೆ ದೊಡ್ಡ ಗೆಲುವೊಂದು ಕಣ್ಣು ಮಿಟುಕಿಸುತ್ತಿರುವಂತೆ ಭಾಸವಾಗುತ್ತಿದೆ.
ಡಾಲಿ ಧನಂಜಯ್ ಈ ಚಿತ್ರವನ್ನು ಅತೀವ ಶ್ರದ್ಧೆಯಿಂದ ನಿರ್ಮಾಣ ಮಾಡಿದ್ದಾರೆ. ಇಶಾಂ ಹಾಗೂ ಹಸೀಮ್ ಸೃಷ್ಟಿಸಿದ್ದ ಕಥೆ ಕೇಳಿ, ಬಹುವಾಗಿ ಮೆಚ್ಚಿಕೊಂಡೇ ಅವರು ಈ ಸಿನಿಮಾ ಮೇಲೆ ಕಾಸು ಹೂಡುವ ನಿರ್ಧಾರ ಮಾಡಿದ್ದರು. ಅದರ ಹಿಂದೆ ತನ್ನ ಗೆಣೆಕಾರ ನಾಗಭೂಷಣ್ ಗೆ ಈ ಮೂಲಕ ಸಾಥ್ ಕೊಟ್ಟಿದ್ದರು. ಇದೀಗ ಈ ಸಿನಿಮಾ ಬಿಡುಗಡೆಗೊಂಡಿದೆ. ನೋಡುಗರಿಗೆಲ್ಲ ಡಾಲಿಯ ಆಯ್ಕೆ ಸರಿಯಾಗಿದೆ ಎಂಬಂಥಾ ಭಾವ ಮೂಡಿಕೊಂಡಿದೆ. ಅದರಲ್ಲಿಯೂ ವಿಶೇಷವಾಗಿ, ನಾಗಭೂಷಣ್ ಹಾಗೂ ಮಲೈಕಾ ಜೋಡಿ ಅಕ್ಷರಶಃ ಮೋಡಿ ಮಾಡಿದೆ. ಇಲ್ಲಿ ಮಲೈಕಾ ಸೂಪರ್ ಸ್ಟಾರ್ ನಟಿಯಾಗಿ ಅಭಿನಯಿಸಿದ್ದಾರೆ. ಆ ಪಾತ್ರದ ಚಹರೆಗಳೆಲ್ಲ ನೋಡುಗರನ್ನು ಆವರಿಸಿಕೊಂಡಿವೆ.
ಓರ್ವ ಸ್ಟಾರ್ ನಟಿಯಾಗಿದ್ದರೂ ಕೂಡಾ ಸಾಮಾನ್ಯರಂತೆ ಸೀದಾ ಸಾದ ಬಹುಕು ನಡೆಸೋ ನಹಪಾಹಪಿ ಹೊಂದಿರೋ ಪಾತ್ರವದು. ಅತ್ತ ಧನದಾಹದ ಗಂಡನನ್ನು ಸಂಬಾಳಿಸುತ್ತಾ, ತನ್ನ ಮನಃಸ್ಥಿತಿ ಮುಕ್ಕಾಗದಂತೆ ಕಾಪಿಟ್ಟುಕೊಂಡು ಸಾಗೋ ಆ ಪಾತ್ರ ಸಂಕೀರ್ಣವಾಗಿದೆ. ಅದರ ಬಿಂದುವಿನಿಂದಲೇ ನಾನಾ ತಿರುವುಗಳು ಸಂಭವಿಸುತ್ತವೆ. ಅದೆಲ್ಲವನ್ನೂ ಕೂಡಾ ಮಲೈಕಾ ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಮೂಲತಃ ದಾವಣಗೆರೆ ಸೀಮೆಯ ಹುಡುಗಿಯಾದ ಮಲೈಕಾ ಇಂಜಿನಿಯರಿಂಗ್ ಓದಿದ್ದರೂ ನಟಿಯಾಗೋದನ್ನೇ ಬದುಕಿನ ಗುರಿಯಾಗಿಸಿಕೊಂಡಿದ್ದವರು. ಕಡೆಗೂ ಅದರಲ್ಲಿ ಯಶ ಕಂಡಿದ್ದ ಮಲೈಕಾ ವಿದ್ಯಾಪತಿ ಪಾತ್ರದ ಮೂಲಕ ವೃತ್ತಿ ಬದುಕಿನ ಮಹತ್ವದ ಘಟ್ಟದತ್ತ ಹೊರಳಿಕೊಂಡಂತಿದೆ.
ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್, ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಸಿನಿಮಾ ಬಗ್ಗೆ ಓರ್ವ ನಟನಾಗಿ ಅತೀವ ಪ್ರೀತಿ ಹೊಂದಿರುವ ಡಾಲಿ ಧನಂಜಯ, ಹೊಸಾ ಪ್ರತಿಭೆಗಳು ಮತ್ತು ತನ್ನ ವಲಯದವರನ್ನು ಬೆಳೆಸುವ ಗುಣ ಹೊಂದಿದ್ದಾರೆ. ಅಂತಾದ್ದೊಂದು ಅಕ್ಕರಾಸ್ಥೆಯಿಂದಲೇ ವಿದ್ಯಾಪತಿ ಚಿತ್ರವನ್ನವರು ನಿರ್ಮಾಣ ಮಾಡಿದ್ದಾರೆ. ಇದೀಗ ಪ್ರೇಕ್ಷಕರ ಕಡೆಯಿಂದ ಸಿಗುತ್ತಿರುವ ಭರಪೂರ ಮೆಚ್ಚುಗೆ ಕಂಡು ಚಿತ್ರ ತಂಡ ಖುಷಿಗೊಂಡಿದೆ. ಬೇಸಿಗೆ ರಜೆಯ ಮಜಕ್ಕೆ ಮತ್ತಷ್ಟು ಮೆರುಗು ತುಂಬಬಲ್ಲ ಈ ಸಿನಿಮಾ ಕುಟುಂಬ ಸಮೇತರಾಗಿ ನೋಡಿಸಿಕೊಳ್ಳುವ ಗುಣಗಳೊಂದಿಗೆ ವಿದ್ಯಾಪತಿ ಎಲ್ಲರನ್ನೂ ಸಾರಾಸಗಟಾಗಿ ಸೆಳೆಯುತ್ತಿದ್ದಾನೆ.