ಗುಳ್ಟು ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ `ಅಜ್ಞಾತವಾಸಿ’ ಚಿತ್ರ ಈ ವಾರ ತೆರೆಗಂಡು ಯಶಸ್ವೀ ಪ್ರದರ್ಶನ ನಡೆಸುತ್ತಿದೆ. ಮರ್ಡರ್ ಮಿಸ್ಟ್ರಿ ಜಾನರಿನ ಸಿನಿಮಾ ಅಂದರೇನೇ ಥ್ರಿಲ್ ಆಗುವಂಥಾ ದೊಡ್ಡ ಮಟ್ಟದ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಒಂದು ಹಂತದಲ್ಲಿ ಆ ಪ್ರೇಕ್ಷಕರನ್ನು ಸೆಳೆದಂತಿರೋ ಈ ಚಿತ್ರ, ಮುಂದಿನ ದಿನಗಳಲ್ಲಿ ಹೇಗೆಲ್ಲ ಆವರಿಸಿಕೊಳ್ಳುತ್ತದೆ ಎಂಬುದರ ಮೇಲೆ ಗೆಲುವು ನಿರ್ಧಾರವಾಗಲಿದೆ. ಈ ಸಿನಿಮಾದಲ್ಲಿನ ಪಾತ್ರಗಳೂ ಕೂಡಾ ಪ್ರೇಕ್ಷಕರಿಗೆ ಹಿಡಿಸಿವೆ. ಅದಲ್ಲೊಂದು ಮಹತ್ವದ ಪಾತ್ರವನ್ನು ನಿರ್ವಹಿಸಿರುವ ಸಿದ್ದು ಮೂಲಿಮನಿಗೂ ಕೂಡಾ ಭರಪೂರ ಮೆಚ್ಚುಗೆ ಮೂಡಿಕೊಳ್ಳುತ್ತಿದೆ. ಈ ಮೂಲಕ ಪಾರು ಸೀರಿಯಲ್ಲಿನ ಪ್ರೀತು ಆಗಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ಸಿದ್ದು ಹಿರಿತೆರೆಯಲ್ಲಿಯೂ ಭದ್ರ ನೆಲೆ ಕಂಡುಕೊಳ್ಳುವ ಲಕ್ಷಣಗಳು ಢಾಳಾಗಿಯೇ ಗೋಚರಿಸಲಾರಂಭಿಸಿವೆ!
ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಆರಂಭದಲ್ಲಿಯೇ ಈ ಕಥೆಗೆ ಪಕ್ಕಾ ಸರಿ ಹೊಂದುವಂಥಾ ಕಲಾವಿದರನ್ನು ನಿಕ್ಕಿಯಾಗಿಸಿಕೊಂಡಿದ್ದರು. ಈ ಹಿಂದೆ ಅವರು ಸಾರ್ವಜನಿಕರಿಗೆ ಸುವರ್ಣಾವಕಾಶ ಅಂತೊಂದು ಸಿನಿಮಾ ನಿರ್ಮಾಣ ಮಾಡಿದ್ದರಲ್ಲಾ? ಅದರಲ್ಲಿ ಸಿದ್ದು ಮೂಲಿಮನಿ ಕೂಡಾ ಒಂದು ಚೆಂದದ ಪಾತ್ರವನ್ನು ನಿರ್ವಹಿಸಿದ್ದರು. ಅದರಲ್ಲಿನ ನಟನೆ ನೋಡಿದ್ದ ಜನಾರ್ಧನ್ ಚಿಕ್ಕಣ್ಣ ತಾನು ನಿರ್ದೇಶನ ಮಾಡಲಿರೋ ಸಿನಿಮಾದಲ್ಲಿ ನಟಿಸುವ ಸಂಬಂಧವಾಗಿ ಸಿದ್ದು ಜೊತೆ ಮಾತಾಡಿದ್ದರಂತೆ. ಆ ಕಾಲದಲ್ಲಿ ಅವರು ರವಿ ಬೆಳಗೆರೆ ಬರೆದಿದ್ದ ಒಮಾರ್ಟಾ ಕಾದಂಬರಿಗೆ ಸಿನಿಮಾ ರೂಪ ಕೊಡುತ್ತಿದ್ದಾರೆಂಬ ಸುದ್ದಿ ಹಬ್ಬಿಕೊಂಡಿತ್ತು. ಬಹುಶಃ ಅದೇ ಸಿನಿಮಾದಲ್ಲಿ ತನಗೆ ನಟಿಸೋ ಅವಕಾಶ ದಕ್ಕಬಹುದೆಂದು ಸಿದ್ದುಗೆ ಅನ್ನಿಸಿತ್ತು.
ಅದಾಗಿ ವರ್ಷದ ಬಳಿಕ ಮತ್ತೆ ಕರೆ ಮಾಡಿದ್ದ ಜನಾರ್ಧನ ಚಿಕ್ಕಣ್ಣ, ಅಜ್ಞಾತವಾಸಿಯ ಪಾತ್ರಕ್ಕಾಗಿ ಆಹ್ವಾನಿಸಿದ್ದರಂತೆ. ಆ ಬಳಿಕ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಿದ್ದು ಪಾಲಿಗೆ ಹೆಜ್ಜೆ ಹೆಜ್ಜೆಗೂ ಅಪರೂಪದ ಅನುಭವಗಳೇ ಸಿಕ್ಕಿವೆ. ಒಂದು ಚೆಂದದ ಪಾತ್ರ ಮಾತ್ರವಲ್ಲದೇ, ಅಪರೂಪದ ಸಿನಿಮಾವೊಂದರ ಭಾಗವಾದ ತುಂಬು ಖುಷಿಯೂ ಅವರಲ್ಲಿದೆ. ಸಿದ್ದು ಮೂಲಿಮನಿ ನಿರ್ವಹಿಸಿರುವ ಪಾತ್ರವನ್ನು ಕಂಡು ಪ್ರೇಕ್ಷಕರೆಲ್ಲ ಮೆಚ್ಚಿಕೊಂಡಿದ್ದಾರೆ. ಸಿದ್ದು ಇದುವರೆಗೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆಯ ಮೂಲಕ ಗಮನವನ್ನೂ ಸೆಳೆದಿದ್ದಾರೆ. ಅಜ್ಞಾತವಾಸಿಯ ಮೂಲಕ ಅವರ ವೃತ್ತಿ ಬದುಕಿಗೆರ ಮತ್ತಷ್ಟು ಆವೇಗ ಸಿಗುವ ಸಾಧ್ಯತೆಗಳಿದ್ದಾವೆ. ಅಂಥಾದ್ದೊಂದು ಭರವಸೆ ಖುದ್ದು ಸಿದ್ದು ಮೂಲಿಮನಿ ಮನಸಲ್ಲಿಯೂ ಮೂಡಿಕೊಂಡಂತಿದೆ.
ನಿರ್ದೇಶಕರಾಗಿ ಗೆದ್ದಿರುವ ಹೇಮಂತ್ ರಾವ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹೇಮಂತ್ ಮತ್ತು ಜನಾರ್ಧನ್ ಚಿಕ್ಕಣ್ಣ ಸೇರಿಕಜೊಂಡು ಕಟ್ಟುಮಸ್ತಾದೊಂದು ತಂಡದ ಮೂಲ ಅಜ್ಞಾತವಾಸಿಯನ್ನು ರೂಪಿಸಿದ್ದಾರೆ. ಪಾವನಾ ಗೌಡ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಮುಂತಾದವರ ತಾರಾಗಣವಿದೆ. ದಾಕ್ಷಾಯಿಣಿ ಟಾಕೀಸ್ ಬ್ಯಾನರಿನಡಿಯಲ್ಲಿ ಅಜ್ಞಾತವಾಸಿ ನಿರ್ಮಾಣಗೊಂಡಿದೆ. ಅದೈತ್ ಗುರುಮೂರ್ತಿ ಛಾಯಾಗ್ರಹಣ, ಎನ್ ಹರಿಕೃಷ್ಣ ಸಹ ನಿರ್ದೇಶನದೊಂದಿಗೆ ಈ ಚಿತ್ರ ಮೂಡಿ ಬಂದಿದೆ. ಅಜ್ಞಾತವಾಸಿಗೀಗ ಲ್ಲೆಡೆಗಳಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದ್ದಾವೆ. ದಿನದಿಂದ ದಿನಕ್ಕೆ ಯಶಸ್ವೀ ರದರ್ಶನ ಸಾಂಘವಾಗಿ ನೆರವೇರಲಾರಂಭಿಸಿದೆ. ಇಂಥಾ ವಾತಾವರಣ ಒಂದಿಡೀ ಚಿತ್ರತಂಡವನ್ನು ಖುಷಿಗೊಳಿಸಿದೆ.