ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ವಿದ್ಯಾಪತಿ ಚಿತ್ರವೀಗ ನಿರೀಕ್ಷೆಯಂತೆಯೇ ರಾಜ್ಯಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಎಂಬುದೇ ಮನೋರಂಜನಾ ಮಾಧ್ಯಮ. ಅದರಲ್ಲಿ ಎಂತೆಂಥಾ ಪ್ರಯೋಗಗಳು ನಡೆದರೂ ಕೂಡಾ ನಕ್ಕು ಹಗುರಾಗುವಂಥಾ, ಆ ಹಾದಿಯಲ್ಲಿಯೇ ಚೆಂದದ ಕಥೆ ಹೇಳುವ ಸಿನಿಮಾಗಳಿಗಾಗಿ ಪ್ರೇಕ್ಷಕರು ಹಾತೊರೆಯುತ್ತಾರೆ. ಈಗಂತೂ ಬೇಸಿಗೆ ರಜೆ ಚಾಲ್ತಿಯಲ್ಲಿದೆ. ಈ ಹೊತ್ತಿನಲ್ಲಿ ಎಲ್ಲರೂ ಕುಟುಂಬ ಸಮೇತರಾಗಿ ಕೂತು ನೋಡುವ ಸಿನಿಮಾಗಳಿಗಾಗಿ ಹಂಬಲಿಸುತ್ತಾರೆ. ಸರಿಯಾಗಿ ಇದೇ ಸಂರ್ಭದಲ್ಲಿ ವಿದ್ಯಾಪತಿ ಚಿತ್ರ ಬಿಡುಗಡೆಗೊಂಡಿದೆ. ನಿರೀಕ್ಷೆಯಂತೆಯೇ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ವಿದ್ಯಾಪತಿ ಅದೇ ಆವೇಗದಲ್ಲಿ ಪ್ರದರ್ಶನ ಕಾಣುತ್ತಿದೆ.
ಇದು ನಾಗಭೂಷಣ್ ಮತ್ತು ಮಲೈಕಾ ವಸುಪಾಲ್ ಜೋಡಿಯಾಗಿ ನಟಿಸಿರುವ ಸಿನಿಮಾ. ನಾಗಭೂಷಣ್ ಆರಂಭಿಕ ದಿನಗಳ್ಲ್ಲಿ ಹಾಸ್ಯದ ಧಾಟಿಯ ಒಂದಷ್ಟು ಪಾತ್ರಗಳಲ್ಲಿ ನಟಿಸುವ ಮೂಲಕ ಸೈ ಅನ್ನಿಸಿಕೊಂಡಿದ್ದವರು. ಹಾಗೆ ಸಿಕ್ಕ ಪಾತ್ರಗಳಲ್ಲಿಯೇ ತಮ್ಮ ವಿಶಿಷ್ಟವಾದ ಮ್ಯಾನರಿಸಂ ಮೂಲಕ ಛಾಪು ಮೂಡಿಸಿ, ಈಗೊಂದಷ್ಟು ನಕಾಲದಿಂದ ನಾಯಕನಾಗಿಯೂ ಬಡ್ತಿ ಹೊಂದಿದ್ದರು. ಹೀರೋಯಿಸಮ್ಮಿನ ಸನಿಹ ಸುಳಿಯದೆ, ಹಾಸ್ಯದ ಸರಹದ್ದಿನಲ್ಲಿ ಸುಳಿಯುವ ಪಾತ್ರಗಳನ್ನಷ್ಟೇ ನಿರ್ವಹಿಸುತ್ತಾ ಸಾಗಿರುವ ನಾಗಭೂಷಣ್ ಇದೀಗ ವಿದ್ಯಾಪತಿಯಾಗಿಯೂ ಗಮನ ಸೆಳೆದಿದ್ದಾರೆ. ಆ ಪಾತ್ರಕ್ಕೆ ಸಿಗುತ್ತಿರುವ ಮೆಚ್ಚುಗೆಗಳನ್ನು ಗಮನಿಸಿದರೆ, ವಿದ್ಯಾಪತಿಯ ಮೂಲಕ ಅವರ ವೃತ್ತಿ ಬದುಕು ಮಹತ್ವದ ಘಟ್ಟ ತಲುಪಿಕೊಂಡಂತೆ ಭಾಸವಾಗುತ್ತಿದೆ.
ಇಶಾಂ ಹಾಗೂ ಹಸೀಂ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಒಂದು ಗಹನವಾದ ಕಥನವನ್ನು ಮನೋರಂಜನೆಯನ್ನೇ ಪ್ರಧಾನ ಉದ್ದೇಶವಾಗಿಸಿಕೊಂಡು ಹೇಳೋದು ಕಡುಗಷ್ಟದ ಕೆಲಸ. ನಾಗಭೂಷಣ್ ಎಂಬ ಬಲದೊಂದಿಗೆ ಈ ನಿರ್ದೇಶಕರು ವಿದ್ಯಾಪತಿಯನ್ನು ಯಶಸ್ವಿಯಾಗಿ ದೃಶ್ಯೀಕರಿಸಿದ್ದಾರೆ. ಇಲ್ಲಿ ಸೂಪರ್ ಸ್ಟಾರ್ ಹೆಂಡತಿಯ ಹೆಸರು ಮತ್ತು ಕಾಸನ್ನೇ ಬಂಡವಾಳವಾಗಿಸಿಕೊಂಡು ಕೆನೆಯುವ ಪಾತ್ರವನ್ನು ನಾಗಭೂಷಣ್ ನಿರ್ವಹಿಸಿದ್ದಾರೆ. ಹಾಗಂತ ಅವರ ಪಾತ್ರ ಇಷ್ಟಕ್ಕೇ ಸೀಮಿತವಾಗಿಲ್ಲ. ಅನೇಕ ಭಾವುಕ ಚಹರೆ ಹೊಂದಿರುವ ಈ ಪಾತ್ರವನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಅದೂ ಸೇರಿದಂತೆ ಒಂದಿಡೀ ಸಿನಿಮಾದ ಅಸಲೀ ಸ್ವಾದವನ್ನು ಸಿನಿಮಾ ಮಂದಿರಗಳಲ್ಲಿಯೇ ಆಸ್ವಾದಿಸಿದರೆ ಚೆನ್ನ!
ಇಶಾಂ ಹಾಗೂ ಹಸೀಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಂಕಲನದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ ಮತ್ತು ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗಭೂಷಣ್, ಮಲೈಕಾ ವಸುಪಾಲ್, ರಂಗಾಯಣ ರಘು, ಕಾರ್ತಿಕ್ ರಾವ್ ತಾರಾಗಣವಿದೆ. ಡಾಲಿ ಧನಂಜಯ್ ಅವರಂತೂ ಈ ಕಥೆಯ ಮೇಲೆ ನಂಬಿಕೆಯಿಟ್ಟು ಯಾವುದಕ್ಕೂ ಕೊರತೆಯಾಗದಂತೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆ ಆಸ್ಥೆ, ದೃಷ್ಯಗಳಲ್ಲಿ ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಕಂಟೆಂಟು, ಕ್ವಾಲಿಟಿ ಸೇರಿದಂತೆ ಎಲ್ಲ ವಿಧದಲ್ಲಿಯೂ ವಿದ್ಯಾಪತಿ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದೆ.