ಹೇಮಂತ್ ರಾವ್ ನಿರ್ಮಾಣ ಮಾಡಿರುವ ಅಜ್ಞಾತವಾಸಿ ಚಿತ್ರ ನಾಳೆ ಅಂದರೆ ಏಪ್ರಿಲ್ ೧೧ರಂದು ತೆರೆಗಾಣಲಿದೆ. ಪ್ರತಿಭಾನ್ವಿತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಹೇಮಂತ್ ರಾವ್ ಹಾಗೂ ಗುಳ್ಟು ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ ಜೊತೆ ಸೇರಿದ್ದರಿಂದಾಗಿ ಆರಂಭಿಕವಾಗಿಯೇ ಈ ಸಿನಿಮಾ ಚರ್ಚೆ ಹುಟ್ಟು ಹಾಕಿತ್ತು. ಸಾಮಾನ್ಯವಾಗಿ ಯಶಸ್ವೀ ನಿರ್ದೇಶಕರೋರ್ವರು ನಿರ್ಮಾಪಕರಾಗಿ ಸಾಥ್ ಕೊಡೋದು ಅಪರೂಪದ ಪಲ್ಲಟ. ಅದರಲ್ಲಿಯೂ ಹೇಮಂತ್ ರಾವ್ ಸಿನಿಮಾದ ಆಳ ಅಗಲ, ಸೂಕ್ಷ್ಮತೆ ಬಲ್ಲ ಇರ್ದೇಶಕ. ಅಂಥವರೇ ಬಹುವಾಗಿ ಮೆಚ್ಚಿಕೊಂಡು ಈ ಕಥೆ ಆರಿಸಿಕೊಂಡಿದ್ದಾರೆಂದರೆ, ನಿರ್ಮಾಣ ಮಾಡೋ ಸಾಹಸಕ್ಕೆ ಮುಂದಾಗಿದ್ದಾರೆಂದರೆ ಅಜ್ಞಾತವಾಸಿಯ ಬಗ್ಗೆ ಸಹಜವಾಗಿಯೇ ಪ್ರೇಕ್ಷಕರು ಆಕರ್ಷಿತರಾಗುತ್ತಾರೆ. ಇಂಥಾ ಬಹುನಿರೀಕ್ಷಿತ ಚಿತ್ರದಲ್ಲಿ ಚೆಂದದೊಂದು ಪಾತ್ರಕ್ಕೆ ಜೀವ ತುಂಬಿರುವವರು ಪಾವನಾ ಗೌಡ!
ಪಾವನಾ ಜಟ್ಟ ಎಂಬ ಚಿತ್ರದಿಂದ ನಟಿಯಾಗಿ ಬೆಳಕು ಕಂಡಿದ್ದವರು. ಆ ನಂತರದಲ್ಲಿಯೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರೂ ಕೂಡಾ ಅದೇಕೋ ಆಗಾಗ ಅಜ್ಞಾತವಾಸಿಯಾಗುತ್ತಾ ಬಂದಿದ್ದರು. ಇದೆಲ್ಲದರಾಚೆಗೆ ಓರ್ವ ನಟಿಯಾಗಿ ಅದೆಂಥಾ ಪಾತ್ರಗಳಿಗಾದರೂ ಜೀವ ತುಂಬೋ ಕಸುವು ಈಕೆಯಲ್ಲಿದೆ ಎಂಬುದು ಸತ್ಯ. ಬಹುಶಃ ಅಂಥಾದ್ದೊಂದು ಛಾತಿ ಇಲ್ಲದೇ ಹೋಗಿದ್ದರೆ ಅಜ್ಞಾತವಾಸಿಯ ಆ ಪಾತ್ರ ಪಾವನಾಗೆ ಒಲಿಯಲು ಸಾಧ್ಯವಾಗುತ್ತಿರಲಿಲ್ಲ. ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಹಾಗೂ ನಿರ್ಮಾಪಕ ಹೇಮಂತ್ ರಾವ್ ಪ್ರತೀ ಪಾತ್ರಗಳಿಗೂ ಕೂಡಾ ನಾನಾ ದಿಕ್ಕಿನಲ್ಲಿ ಆಲೋಚಿಸಿಯೇ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ, ವಿಶಿಷ್ಟ ಚಹರೆಯ ಅದೊಂದು ಪಾತ್ರಕ್ಕಾಗಿ ಮಾತ್ರ ಹುಡುಕಾಟ ಚಾಲ್ತಿಯಲ್ಲಿತ್ತು.
ಅಜ್ಞಾತವಾಸಿಯ ಆತ್ಮದಂತಿರೋ ಸಾದಾ ಸೀದಾ ಹುಡುಗಿಯ ಆ ಪಾತ್ರಕ್ಕಾಗಿ ಪಾವನಾ ಸೇರಿದಂತೆ ಒಂಬತ್ತು ನಟಿಯರು ರೇಸಿನಲ್ಲಿದ್ದರು. ಒಂದು ಬಗೆಯ ತಾದಾತ್ಮ್ಯ ಇಲ್ಲದೇ ಹೋದರೆ ಆ ಪಾತ್ರವನ್ನು ಒಳಗಿಳಿಸಿಕೊಳ್ಳು ಸಾಧ್ಯವಾಗುವಂತಿರಲಿಲ್ಲ. ಕಡೆಗೂ ಕೆಲ ನಟನಾ ಪಟ್ಟು ಗಳ ಪ್ರದರ್ಶನದಲ್ಲಿ ಎಲ್ಲ ನಟಿಯರನ್ನು ಹಿಂದಿಕ್ಕಿ ಆ ಪಾತ್ರಕ್ಕೆ ನಿಕ್ಕಿಯಾದವರು ಪಾವನಾ ಗೌಡ. ಆ ಪಾತ್ರದ ಒಂದಷ್ಟು ಫಲುಕುಗಳು ಟ್ರೈಲರ್ ಮೂಲಕ ಜಾಹೀರಾಗಿವೆ. ಅದು ಮೂಡಿ ಬಂದಿರುವ ಪರಿಯ ಝಲಕ್ಕು ಕಂಡೇ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಆ ಪಾತ್ರದ ಬಗ್ಗೆ ಹೆಚ್ಚೇನೂ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ನಾಳೆ ಸಿನಿಮಾ ಮಂದಿರಗಳಲ್ಲಿ ಪಂಕಜಾ ಎಂಬ ಪಾವನಾ ನಿರ್ವಹಿಸಿರುವ ಪಾತ್ರ ಪ್ರೇಕ್ಷಕರ ಮುಂದೆ ಮೂಡಿಕೊಳ್ಳಲಿದೆ.
ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಮುಂತಾದವರ ತಾರಾಗಣವಿದೆ. ದಾಕ್ಷಾಯಿಣಿ ಟಾಕೀಸ್ ಬ್ಯಾನರಿನಡಿಯಲ್ಲಿ ಅಜ್ಞಾತವಾಸಿ ನಿರ್ಮಾಣಗೊಂಡಿದೆ. ಅದೈತ್ ಗುರುಮೂರ್ತಿ ಛಾಯಾಗ್ರಹಣ, ಎನ್ ಹರಿಕೃಷ್ಣ ಸಹ ನಿರ್ದೇಶನದೊಂದಿಗೆ ಈ ಚಿತ್ರ ಮೂಡಿ ಬಂದಿದೆ. ಚರಣ್ ರಾಜ್ ಸಂಗೀತ ನಿರ್ದೇಶನ, ಭರತ್ ಎಂ.ಸಿ ಸಂಕಲನದೊಂದಿಗೆ ಈ ಚಿತ್ರ ಮೂಡಿ ಬಂದಿದೆ. ಟ್ರೈಲರ್ ಗೆ ಸಿಗುತ್ತಿರುವ ಒಳ್ಳೆ ಅಭಿಪ್ರಾಯಗಳು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಸಕಾರಾತ್ಮಕ ಚರ್ಚೆ ಹುಟ್ಟು ಹಾಕಿವೆ. ಇದು ಬೇಸಿಗೆ ರಜೆಯ ಮಜಾ ನಾಡನ್ನೆಲ್ಲ ಆವರಿಸಿಕೊಂಡಿರುವ ಘಳಿಗೆ. ಈ ಹೊತ್ತಿನಲ್ಲಿ ಮನೋರಂಜನೆಗಾಗಿ ಮಂದಿ ಸಕುಟುಂಬ ಸಮೇತರಾಗಿ ಸಿನಿಮಾ ಮಂದಿರದತ್ತ ದೃಷ್ಟಿ ನೆಟ್ಟಿದ್ದಾರೆ. ಅಂತಾ ಎಲ್ಲ ವರ್ಗದ ಪ್ರೇಕ್ಷಕರಿಗೂ ರುಚಿಸುವಂತೆ ಈ ಸಿನಿಮಾ ಮೂಡಿ ಬಂದಿದೆಯೆಂಬ ನಂಬಿಕೆ ಚಿತ್ರ ತಂಡದಲ್ಲಿದೆ.