ಒಳ್ಳೆ ಕೆಲಸ ಯಾವುದೇ ಇದ್ದರೂ ಕೆಟ್ಟದ್ದರಷ್ಟು ಸಲೀಸಾಗಿ ಆಗುವಂಥಾದ್ದಲ್ಲ. ಅಂದುಕೊಂಡಿದ್ದನ್ನು ಅದಕ್ಕೆ ತಕ್ಕುದಾಗಿ ಮಾಡಬೇಕೆಂದರೆ ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ. ಆಯಾ ಘಳಿಗೆಗೆ ತಕ್ಕಂತೆ ಸರಕು ಹುಟ್ಟಿಸುವ ಕಸುಬು ಸಿನಿಮಾದಂಥಾ ಕ್ರಿಯೇಟಿಕವ್ ಮಾಧ್ಯಮಕ್ಕೆ ಒಗ್ಗುವಂಥಾದ್ದಲ್ಲ. ಕನ್ನಡ ಚಿತ್ರರಂಗದ್‌ಲ್ಲಿ ಒಂದು ಸಿನಿಮಾ ಮೂಲಕ ಸದ್ದು ಮಾಡಿದವರು ಮೌನವಾದಾಗ, ಆ ಬಗ್ಗೆ ನಾನಾ ಅಂತೆಕಂತೆಗಳು ಹರಿದಾಡಿದಾಗ ನೈಜ ಸಿನಿಮಾ ಪ್ರೇಮಿಗಳು ಮೇಲ್ಕಂಡ ಧಾಟಿಯಲ್ಲಿ ಆಲೋಚಿಸುತ್ತಾರೆ. ಬಹುಶಃ ಇದೀಗ ಅಜ್ಞಾತವಾಸಿ ಚಿತ್ರದ ನಂತರ ನಿರ್ದೇಶಕರಾಗಿ ಮರಳಿರುವ ಜನಾರ್ಧನ್ ಚಿಕ್ಕಣ್ಣನವರ ಆಲೋಚನಾ ಲಹರಿಗೂ, ಸಿನಿಮಾಸಕ್ತರ ಅಂದಾಜಿಗೂ ಪಕ್ಕಾ ತಾಳೆಯಾಗುತ್ತೆ. ಗುಳ್ಟು ಗೆಲುವಿನ ನಂತರ ಸುದೀರ್ಘ ಅಂತರ ಕಾಯ್ದುಕೊಂಡಿದ್ದ (director janardhan chikkanna) ಜನಾರ್ಧನ್ ಚಿಕ್ಕಣ್ಣ ಇದೀಗ ಎಲ್ಲ ರೀತಿಯಿಂದಲೂ ಪಕ್ವಗೊಂಡ ದೃಶ್ಯಕಾವ್ಯದ ಮೂಲಕ ವಾಪಾಸಾಗಿದ್ದಾರೆ!
ಗುಳ್ಟು (gultu movie) ಚಿತ್ರ ಅದೆಂಥಾ ಅಲೆ ಸೃಷ್ಟಿಸಿತ್ತೆಂಬುದನ್ನು ಸಿನಿಮಾ ಪ್ರೇಮಿಗಳು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ. ಎಲ್ಲರೂ ಒಂದು ದಿಕ್ಕಿನಲ್ಲಿ ಸಾಗುತ್ತಿರುವಾಗ, ಬೇರೆಯದ್ದೇ ಪಥ ಸೃಷ್ಟಿಸಿಕೊಂಡವರು ಖಂಡಿತಾ ಗಮನ ಸೆಳೆಯುತ್ತಾರೆ. (director janardhan chikkanna) ಜನಾರ್ಧನ್ ಚಿಕ್ಕಣ್ಣ ಗುಳ್ಟು ಮೂಲಕ ಆಯ್ಕೆ ಮಾಡಿಕೊಂಡಿದ್ದದ್ದು ಕೂಡಾ ಅಂಥಾದ್ದೇ ಅಪರೂಪಪದ ಹಾದಿಯೊಂದನ್ನು. ಹಾಗೊಂದು ಯಶಸ್ವೀ ಸಿನಿಮಾ ಕೊಟ್ಟ ನಂತರದಲ್ಲಿ ಅವರು ಸಾಲುನ ಸಾಲು ಸಿನಿಮಾಗಳನ್ನು ನಿರ್ದೇಶನ ಮಾಡುತ್ತಾರೆಂದೇ ಬಹುತೇಕರು ಅಂದುಕೊಂಡಿದ್ದರು. ಆದರೆ, ವರ್ಷಗಟ್ಟಲೆ ಚಾಲ್ತಿಯಲ್ಲಿದ್ದದ್ದು ಮಹಾ ಮೌನ. ಈ ನಡುವೆ ಸಿನಿಮಾವೊಂದನ್ನು ನಿರ್ಮಾಣ ಮಾಡಿದ್ದ ಜನಾರ್ಧನ್ ಚಿಕ್ಕಣ್ಣ ಒಂದೊಳ್ಳೆ ಕಥನವ್ನ್ನು ಆಯ್ಕೆ ಮಾಡಿಕೊಂಡು ನಿರ್ದೇಶನಕ್ಕೆ ಮರಳಿದ್ದಾರೆ. ಹಾಗೆ ಅವರು ನಿರ್ದೇಶನ ಮಾಡಿರೋ ಅಜ್ಞಾತವಾಸಿ (agnyathavasi movie) ದೊಡ್ಡ ಮಟ್ಟದ ಗೆಲುವು ಕಾಣುವ ನಿರೀಕ್ಷೆ ಎಲ್ಲೆಡೆ ಮೂಡಿಕೊಂಡಿದೆ.
ಗುಳ್ಟು ನಂತರ ಭಿನ್ನ ಬಗೆಯ ಸಿನಿಮಾ ನಿರ್ದೇಶನ ಮಾಡಬೇಕೆಂಬ ತಯಾರಿಯನ್ನು ಜನಾರ್ಧನ್ ಚಿಕ್ಕಣ್ಣ ಸದಾ ಚಾಲ್ತಿಯಲ್ಲಿಟ್ಟಿದ್ದರು. ಆದರೆ ತಾನು ಸೃಷ್ಟಿಸಿದ್ದ ಕಥಾ ಎಳೆ ಅವರಿಗೇ ತೃಪ್ತಿ ತರದಿದ್ದರಿಂದಾಗಿ ಒಂದೊಳ್ಳೆ ಕಥೆಗಾಗಿ ಹಂಬಲಿಸಲಾರಂಭಿಸಿದ್ದರು. ಕಡೆಗೂ ಕೋವಿಡ್ ಕಾಲಘಟ್ಟದ ಶುಷ್ಕ ವಾತಾವರಣದಲ್ಲಿ ಬೆರಗಿನ ಕೊಪ್ಪರಿಗೆಯಂಥಾ ಕಥೆಯೊಂದಿಗೆ ಅವರನ್ನು ಎದುರುಗೊಂಡವರು ಕೃಷ್ಣ ರಾಜ್. ಆ ಕಥೆ, ಸ್ಕ್ರೀನ್ ಪ್ಲೇ ಗಳನ್ನು ನೋಡಿದ ಜನಾರ್ಧನ್ ಚಿಕ್ಕಣ್ಣ ಕೂಡಲೇ ಆ ಬಗ್ಗೆ ಹೇಮಂತ್ ರಾವ್ ಅವರ ಬಳಿ ಚರ್ಚೆ ನಡೆಸಿದ್ದರಂತೆ. ಇಂಥಾದ್ದೊಂದು ಕಥೆ ಕೇಳಿದಾಕ್ಷಣವೇ ಹೇಮಂತ್ ಕಡೆಯಿಂದಲೂ ಸಕಾರಾತ್ಮಕ ಸ್ಪಂದನೆಯೇ ಸಿಕ್ಕಿತ್ತು. ಆ ನಂತರದಲ್ಲಿ ಮಿಕ್ಕುಳಿದ ತಯಾರಿ ಮುಗಿಸಿಕೊಂಡಿದ್ದ ಜನಾರ್ಧನ್ ಚಿಕ್ಕಣ್ಣ ಪಾತ್ರ ವರ್ಗವನ್ನೂ ಆಯ್ಕೆ ಮಾಡಿಕೊಂಡು, ಅಂದುಕೊಂಡಂತೆಯೇ ಈ ಸಿನಿಮಾವನ್ನು ರೂಪಿಸಿದ್ದಾರೆ. ಅದಕ್ಕೆ ಹೆಜ್ಜೆ ಹೆಜ್ಜೆಗೂ ಹೇಮಂತ್ ರಾವ್ ಸಾಥ್ ಕೊಟ್ಟಿದ್ದಾರೆ.
ಪಾವನಾ ಗೌಡ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಮುಂತಾದವರ ತಾರಾಗಣವಿದೆ. ದಾಕ್ಷಾಯಿಣಿ ಟಾಕೀಸ್ ಬ್ಯಾನರಿನಡಿಯಲ್ಲಿ ಅಜ್ಞಾತವಾಸಿ ನಿರ್ಮಾಣಗೊಂಡಿದೆ. ಅದೈತ್ ಗುರುಮೂರ್ತಿ ಛಾಯಾಗ್ರಹಣ, ಎನ್ ಹರಿಕೃಷ್ಣ ಸಹ ನಿರ್ದೇಶನದೊಂದಿಗೆ ಈ ಚಿತ್ರ ಮೂಡಿ ಬಂದಿದೆ. ಚರಣ್ ರಾಜ್ ಸಂಗೀತ ನಿರ್ದೇಶನ, ಭರತ್ ಎಂ.ಸಿ ಸಂಕಲನದೊಂದಿಗೆ ಈ ಚಿತ್ರ ಮೂಡಿ ಬಂದಿದೆ. ಟ್ರೈಲರ್ ಗೆ ಸಿಗುತ್ತಿರುವ ಒಳ್ಳೆ ಅಭಿಪ್ರಾಯಗಳು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಸಕಾರಾತ್ಮಕ ಚರ್ಚೆ ಹುಟ್ಟು ಹಾಕಿವೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿಯೇ ಅಜ್ಞಾತವಾಸಿಯ ಆಗಮನವಾಗುತ್ತಿದೆ.