ತೊಂಬತ್ತರ ದಶಕದಿಂದಲೇ ನಟನಾಗಿ ಗುರುತಿಸಿಕೊಂಡು, ಈ ಕ್ಷಣಕ್ಕೂ ಬೇಡಿಕೆಯ ಉತ್ತುಂಗದಲ್ಲಿರುವವರು (actor rangayana raghu) ರಂಗಾಯಣ ರಘು. ಓರ್ವ ಪ್ರತಿಭಾನ್ವಿತ ನಟ ಕ್ರಮಿಸಬಹುದಾಗ ಏರುಪೇರಿನ ಹಾದಿಯನ್ನು ಕ್ರಮಿಸುತ್ತಲೇ, ಆ ನಡುವೆ ಎದುರಾಗೋ ಒಂದಷ್ಟು ಸವಾಲುಗಳನ್ನೂ ಕೂಡಾ ಜಾಣ್ಮೆಯಿಂದಲೇ ಎದುರಿಸಿ ದಾಟಿಕೊಂಡಿದ್ದು ಅವರ ವೃತ್ತಿಬದುಕಿನ ಪ್ರಧಾನ ಅಂಶ. ಸುಮ್ಮನೊಮ್ಮೆ ಹಿಂತಿರುಗಿ ನೋಡಿ; ರಂಗಾಯಣ ರಘು ಚಾಲ್ತಿಗೆ ಬಂದ ನಂತರ ಇಲ್ಲಿಯವರೆಗೂ ಅವರಿಗೆ ಬೇಡಿಕೆ ತಗ್ಗಿದ ಕರುಹುಗಳೇ ಕಾಣ ಸಿಗುವುದಿಲ್ಲ. ಕೆಲ ಪಾತ್ರಗಳು ಅದದೇ ಛಾಯೆಯಿಂದ ಬೇಸರ ಮೂಡಿಸುತ್ತಲೇ, ಮತ್ತೊಂದಷ್ಟು ಪಾತ್ರಗಳು ಅವರಿಗೆಂದೇ ಸೃಷ್ಟಿಯಾದವು. ಈಗೊಂದೆರಡು ವರ್ಷದಿಂದಂತೂ ಅಂಥಾ ಪಾತ್ರಗಳ ಸುಗ್ಗಿ ಸಂಭ್ರಮವೊಂದು ರಂಗಾಯಣ ರಘು ಅವರ ಮುಂದೆ ಪೆರೇಡು ನಡೆಸುತ್ತಿದೆ. ಅದರ ಭಾಗವಾಗಿ ಕಾಣಿಸುತ್ತಿರುವ ಚಿತ್ರ (agnyathavasi`movie) ಅಜ್ಞಾತವಾಸಿ’!
ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ (director janardhan chikkanna) ಈ ಕಥೆ ಕಣ್ಮುಂದೆ ಬಂಧ ಘಳಿಗೆಯಲ್ಲಿಯೇ ಆ ಪ್ರಧಾನ ಪಾತ್ರಕ್ಕೆ ರಂಗಾಯಣ ರಘು ಅವರನ್ನೇ ನಿಕ್ಕಿಯಾಗಿಸಿಕೊಂಡಿದ್ದರಂತೆ. ಆ ಪಾತ್ರದ ಚಹರೆಗಳನ್ನು ಮನಮಗಂಡ ಜನಾರ್ಧನ್ ಪಾಲಿಗೆ ಆ ಪಾತ್ರವನ್ನು ರಘು ಬಿಟ್ಟು ಮತ್ಯಾರು ಮಾಡಿದರೂ ಪರಿಣಾಮಕಾರಿಯಾಗಿರೋದಿಲ್ಲ ಅನ್ನಿಸಿತ್ತಂತೆ. ತಕ್ಷಣವೇ ರಂಗಾಯಣ ರಘುರನ್ನು ಭೇಟಿಯಾಗಿ ಒಟ್ಟಾರೆ ಕಥೆ ಮತ್ತು ಆ ಪಾತ್ರದ ಬಗ್ಗೆ ವಿವರಿಸಿದಾಗ ಅವರು ಅಕ್ಷರಶಃ ಪತರುಗುಟ್ಟಿದ್ದರಂತೆ. ಒಂದು ಪಾತ್ರ ಕಲಾವಿದರನ್ನು ಆರಂಭದಲ್ಲಿಯೇ ಈ ಪರಿಯಾಗಿ ಕಾಡೋದಿದೆಯಲ್ಲಾ? ಅದು ಕಥೆಯೊಂದರ ಗಟ್ಟಿತನಕ್ಕಿರೋ ಪುರಾವೆ. ಸದಾ ಭಿನ್ನ ಪಾತ್ರಗಳನ್ನು ಧ್ಯಾನಿಸುವ ರಂಗಾಯಣ ರಘು ಮರು ಮಾತಿಲ್ಲದೆಯೇ ಒಪ್ಪಿಗೆ ಸೂಚಿಸಿ ಚಿತ್ರೀಕರಣದಲ್ಲಿಯೂ ಅತ್ಯುತ್ಸಾಹದಿಂದ ಭಾಗಿಯಾಗಿದ್ದಾರೆ. ಈ ಪಾತ್ರ ಅವರನ್ನು ಅದೆಷ್ಟು ಆವರಿಸಿಕೊಂಡಿದೆ ಎಂಬ ವಿಚಾರ ಅವರ ಮಾತುಗಳಲ್ಲಿಯೇ ಸ್ಫುರಿಸುತ್ತಿರುವಂತೆ ಭಾಸವಾಗುತ್ತದೆ.
ಓರ್ವ ಕಲಾವಿದ ಒಂದು ಪಾತ್ರವನ್ನು ಆವಾಹಿಸಿಕೊಳ್ಳುತ್ತಾ, ಒಂದಿಡೀ ಕಥೆಯಲ್ಲಿಯೇ ಲೀನವಾಗೋದಿದೆಯಲ್ಲಾ? ಅದು ಎಲ್ಲ ಸಿನಿಮಾಗಳಲ್ಲಿಯೂ ದಕ್ಕಬಹುದಾದ ಅನುಭೂತಿಯಲ್ಲ. ಅಂಥಾದ್ದೊಂದು ದಿವ್ಯ ಭಾವ ರಘು ಅವರನ್ನು ಅಜ್ಞಾತವಾಸಿಯ ಮೂಲಕ ಹೆಜ್ಜೆ ಹೆಜ್ಜೆಗೂ ಕಾಡಿದಂತಿದೆ. ಇಲ್ಲಿ ಪಾತ್ರಗಳನ್ನು ಸೃಷ್ಟಿಸಿದ ಆಸ್ಥೆಯ ಬಗ್ಗೆಯೂ ಅವರು ಮೆಚ್ಚುಗೆ ಹೊಂದಿದ್ದಾರೆ. ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಮುಂತಾದವರ ಪಾತ್ರಗಳೆಲ್ಲ ಹೊಟ್ಟೆ ಕಿಚ್ಚು ಮೂಡಿಸವಷ್ಟು ಚೆನ್ನಾಗಿದೆಯೆಂಬ ಮಾತುಗಳನ್ನೂ ಕೂಡಾ ರಂಗಾಯಣ ರಘು ಆಡಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಅವರ ಪಾತ್ರವೇನೆಂಬ ಕುತೂಹಲ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಅದು ಎಲ್ಲರ ಮುಂದೆ ಗರಿಬಿಚ್ಚಿಕೊಳ್ಳುವ ಕ್ಷಣಗಳು ಹತ್ತಿರಾಗುತ್ತಿವೆ.
ಪಾವನಾ ಗೌಡ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಮುಂತಾದವರ ತಾರಾಗಣವಿದೆ. ದಾಕ್ಷಾಯಿಣಿ ಟಾಕೀಸ್ ಬ್ಯಾನರಿನಡಿಯಲ್ಲಿ ಅಜ್ಞಾತವಾಸಿ ನಿರ್ಮಾಣಗೊಂಡಿದೆ. ಅದೈತ್ ಗುರುಮೂರ್ತಿ ಛಾಯಾಗ್ರಹಣ, ಎನ್ ಹರಿಕೃಷ್ಣ ಸಹ ನಿರ್ದೇಶನದೊಂದಿಗೆ ಈ ಚಿತ್ರ ಮೂಡಿ ಬಂದಿದೆ. ಚರಣ್ ರಾಜ್ ಸಂಗೀತ ನಿರ್ದೇಶನ, ಭರತ್ ಎಂ.ಸಿ ಸಂಕಲನದೊಂದಿಗೆ ಈ ಚಿತ್ರ ಮೂಡಿ ಬಂದಿದೆ. ಟ್ರೈಲರ್ ಗೆ ಸಿಗುತ್ತಿರುವ ಒಳ್ಳೆ ಅಭಿಪ್ರಾಯಗಳು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ಸಕಾರಾತ್ಮಕ ಚರ್ಚೆ ಹುಟ್ಟು ಹಾಕಿವೆ. ಇದು ಬೇಸಿಗೆ ರಜೆಯ ಮಜಾ ನಾಡನ್ನೆಲ್ಲ ಆವರಿಸಿಕೊಂಡಿರುವ ಘಳಿಗೆ. ಈ ಹೊತ್ತಿನಲ್ಲಿ ಮನೋರಂಜನೆಗಾಗಿ ಮಂದಿ ಸಕುಟುಂಬ ಸಮೇತರಾಗಿ ಸಿನಿಮಾ ಮಂದಿರದತ್ತ ದೃಷ್ಟಿ ನೆಟ್ಟಿದ್ದಾರೆ. ಅವರೆಲ್ಲರಿಗೂ ಅಜ್ಞಾತವಾಸಿ ಆಪ್ಯಾಯ ಅನುಭೂತಿ ನೀಡುತ್ತದೆಂಬ ಗಾಢ ಭರವಸೆ ಚಿತ್ರತಂಡದಲ್ಲಿದೆ.