ಅತೀವ ಕನಸಿಟ್ಟುಕೊಂಡು ಒಂದು ಸಿನಿಮಾವನ್ನು ರೂಪಿಸೋದು ಎಷ್ಟು ಕಷ್ಟವೋ, ಹಾಗೆ ರೂಪುಗೊಂಡ ಸಿನಿಮಾವನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ತಲುಪಿಸೋದೂ ಕೂಡಾ ಅಷ್ಟೇ ಕಷ್ಟದ ವಿಚಾರ. ಸಾಮಾನ್ಯವಾಗಿ ಹೊಸಬರ ತಂಡವೊಂದು ಆಗಮಿಸಿದಾಗ, ಮೊದಲು ಕಾಡೋದೇ ಬಿಡುಗಡೆಯ ಹಾದಿಯ ಸವಾಲುಗಳು ತೀವ್ರವಾಗಿ ಕಾಡುತ್ತವೆ. ಬಿಡುಗಡೆಯ ನಂತರವೂ ಅನೇಕ ಎಡರುತೊಡರುಗಳು ಎದುರಾಗುತ್ತವೆ. ಹೆಚ್ಚಿನ ಸಿನಿಮಾ ತಂಡಗಳು ಅಂಥಾದ್ದರ ಮುಂದೆ ಮಂಡಿಯೂರಿ ಹತಾಶೆಯಿಂದ ಮರಳೋದೇ ಹೆಚ್ಚು. ಆದರೆ, ಮತ್ತೂ ಕೆಲ ತಂಡಗಳು ಅದೇನೇ ಬಂದರೂ ಜಗ್ಗದೆ, ಶತಾಯಗತಾಯ ಜಿದ್ದಿಗೆ ಬಿದ್ದಂತೆ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಾರೆ. ಅಂಥಾ ಛಾತಿ ಹೊಂದಿರೋ ಮಂದಿಯ ಸಾಲಿಗೆ ಇಂಟರ್ವೆಲ್ ಚಿತ್ರತಂಡ ನಿಸ್ಸಂದೇಹವಾಗಿಯೂ ಸೇರಿಕೊಳ್ಳುತ್ತೆ. ಈ ಮೂಲಕ ನವ ನಿರ್ದೇಶಕ ಭರತ್ ವರ್ಷ ಅವರ ಇಷ್ಟೂ ವರ್ಷಗಳ ಶ್ರಮ ಸಾರ್ಥಕ್ಯ ಕಂಡಂತಾಗಿದೆ.
ಸಿನಿಮಾ ಎಂಬ ಮಾಯೆ ಯಾವ ಕ್ಷೇತ್ರದಲ್ಲಿರುವವರನ್ನೂ ಬರಸೆಳೆದು ಅಪ್ಪಿಕೊಳ್ಳುತ್ತೆ. ಈ ಮಾತಿಗೆ ತಕ್ಕುದಾದ ಅನೇಕಾನೇಕ ಉದಾಹರಣೆಗಳು ಗಾಂಧಿನಗರದಲ್ಲಿ ದಂಡಿ ದಂಡಿಯಾಗಿ ಸಿಗುತ್ತವೆ. ಅದರಲ್ಲಿಯೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಐಟಿ ಕ್ಷೇತ್ರದಿಂದ ಅನೇಕ ಪ್ರತಿಭಾನ್ವಿತರು ಚಿತ್ರರಂಗದ ನಾನಾ ವಿಭಾಗಗಳಿಗೆ ಆಗಮಿಸುತ್ತಿದ್ದಾರೆ. ಇದೀಗ ಇಂಟರ್ವೆಲ್ ಚಿತ್ರದ ಮೂಲಕ ಭರತ್ ವರ್ಷ ಆಗಮನವಾಗಿದೆ. ಈಗೊಂದಷ್ಟು ವರ್ಷಗಳಿಂದ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೇ ನಿರ್ದೇಶಕನಾಗಬೇಕೆಂಬ ಕನಸು ಹೊತ್ತಿದ್ದವರು ಭರತ್ ವರ್ಷ. ಕಡೆಗೂ ಸುಕಿ ಅವರೊಂದಿಗೆ ಸೇರಿಕೊಂಡು ಚೆಂದದ್ದೊಂದು ಕಥೆ ಸಿದ್ಧಪಡಿಸಿ, ಅಂದುಕೊಂಡತೆಯೇ ಅದಕ್ಕೆ ದೃಷ್ಯ ರೂಪ ನೀಡಿದ್ದಾರೆ.
ಹೀಗೆ ಹೊಸಬರ ತಂಡ ಕಟ್ಟಿಕೊಂಡು ಹೊಸಬರೇ ಅಖಾಡಕ್ಕಿಳಿದಿದ್ದಾರೆಂದರೆ ಗಟ್ಟಿ ಕಂಟೆಂಟೊಂದು ಸಿದ್ಧಗೊಂಡಿದೆ ಎಂದೇ ಅರ್ಥ. ಇಂಟರ್ವೆಲ್ ಆರಂಭಿಕವಾಗಿ ಗಮನ ಸೆಳೆದಿದ್ದದ್ದೂ ಕೂಡಾ ಈ ಕಾರಣದಿಂದಲೇ. ಹಾಗೆ ಮೂಡಿಕೊಂಡಿದ್ದ ನಿರೀಕ್ಷೆ ತುಸುವೂ ಮುಕ್ಕಾಗದಂತೆ ಕಟ್ಟಿಕೊಂಡಿದ್ದರಿಂದಲೇ ನೋಡುಗರೆಲ್ಲ ಥ್ರಿಲ್ ಆಗಿದ್ದಾರೆ. ಇದರ ಬಲದಿಂದ ಇಂಟರ್ವೆಲ್ ಇಪ್ಪತೈದು ದಿನಗಳನ್ನು ದಾಟಿಕೊಂಡು ಅತ್ಯಂತ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದರೊಂದಿಗೆ ಈ ವರ್ಷದ ಮೊದಲ ಭಾಗದಲ್ಲಿಯೇ ಒಂದು ಹೊಸಬರ ಸಿನಿಮಾ ಗೆದ್ದಂತಾಗಿದೆ. ಹೀಗೆ ಪ್ರೇಕ್ಷಕರ ಕಡೆಯಿಂದ ಸಿಗುತ್ತಿರುವ ಭರಪೂರ ಬೆಂಬಲದಿಂದ ನಾನಾ ಸವಾಲುಗಳನ್ನು ಎದುರಿಸಿ ಬಸವಳಿದಿದ್ದ ಚಿತ್ರ ತಂಡಕ್ಕೆ ನವ ಚೈತನ್ಯ ಸಿಕ್ಕಂತಾಗಿದೆ.
ಯುವ ಸಮುದಾಯದ ತಲ್ಲಣಗಳನ್ನೊಳಗೊಂಡಿರುವ ಚಿತ್ರಗಳ ಬಗ್ಗೆ ಪ್ರೇಕ್ಷಕರ ನಡುವಲ್ಲೊಂದು ವಿಶೇಷವಾದ ಅಕ್ಕರಾಸಕ್ತಿ ಇದ್ದೇ ಇದೆ. ಹಾಗಿದ್ದ ಮೇಲೆ ಗಹನವಾದ ವಿಚಾರವನ್ನು ಹಾಸ್ಯದ ಧಾಟಿಯಲ್ಲಿ ಹೇಳಿರುವ ಇಂಟರ್ವಲ್ ಸಹಜವಾಗಿಯೇ ಪ್ರೇಕ್ಷಕರಿಗೆ ಇಷ್ಟವಾಗಿದೆ. ಚೆಂದದ ಕಥೆ, ಅದಕ್ಕೆ ಪೂರಕವಾದ ದೃಷ್ಯಾವಳಿ ಮತ್ತು ಪ್ರತೀ ಫ್ರೇಮನ್ನೂ ಶೃಂಗರಿಸಿರುವ ಪಂಚಿಂಗ್ ಡೈಲಾಗುಗಳ ಸರಿಮಳೆ ಈ ಸಿನಿಮಾಕ್ಕೆ ವಿಶೇಷವಾದ ಸ್ಥಾನಮಾನ ನೀಡಿವೆ. ಯಾವುದೇ ಸಿನಿಮಾ ನೋಡಿದ ಮಂದಿಯ ಬಾಯಿಂದ ಬಾಯಿಗೆ ಹಬ್ಬಿಕೊಳ್ಳುವ ಒಳ್ಳೆ ಮಾತುಗಳಿವೆಯಲ್ಲಾ? ಅದನ್ನು ಮೀರಿಸುವಂಥಾ ಪ್ರಚಾರ ಪ್ರಕ್ರಿಯೆ ಬೇರೊಂದಿಲ್ಲ. ಇಂಥಾ ಕಮಾಲ್ ಒಂದು ಇಂಟರ್ವೆಲ್ ಸಿನಿಮಾ ಭೂಮಿಕೆಯಲ್ಲಿ ನಡೆದಿದೆ. ಈ ಕಾರಣದಿಂದಲೇ ಈ ಚಿತ್ರವೀಗ ಯಶಸ್ಸಿನತ್ತ ದಾಪುಗಾಲಿಡುತ್ತಿದೆ.
ಸತ್ಯ ಸೀರಿಯಲ್ಲಿನ ಬಾಲಾ ಎಂಬ ಪಾತ್ರದ ಮೂಲಕ ಪ್ರಸಿದ್ಧಿ ಪಡೆದುಕೊಂಡಿರುವವರು ಶಶಿರಾಜ್. ಅವರು ಈ ಸಿನಿಮಾದ ನಾಯನಾಗಿ ಚೆಂದದ ಪಾತ್ರವೊಂದರಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಸಜ್ಜಾಗಿದ್ದಾರೆ. ರಂಗಭೂಮಿ ಕಲಾವಿದ ಪ್ರಜ್ವಲ್ ಗೌಡ, ಸುಖಿ ಮತ್ತು ರಂಗನಾಥ್ ಶಿವಮೊಗ್ಗ ಮುಂತಾದವರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಾಜ್ ಕಾಂತ್ ಛಾಯಾಗ್ರಹಣ, ಪ್ರಮೋದ್ ಮರವಂತೆ ಮತ್ತು ಸುಕಿ ಸಾಹಿತ್ಯ ಹಾಗೂ ಶಶಿಧರ್ ಸಂಕಲನ ಈ ಚಿತ್ರಕ್ಕಿದೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಸುಕಿ ನಿಭಾಯಿಸಿದ್ದಾರೆ. ಕಥೆ, ಪಾತ್ರವರ್ಗ, ನಿರೂಪಣೆ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ಕೂಡಾ ಇಂಟರ್ವೆಲ್ ಗೆ ಭರಪೂರ ಮೆಚ್ಚುಗೆ ಮೂಡಿಕೊಳ್ಳುತ್ತಿದೆ.