ಶೇಕ್ ಇಟ್ ಪುಷ್ಪವತಿ ಎಂಬ ಹಾಡಿನ ಮೂಲಕ ಏಕಾಏಕಿ ಕರ್ನಾಟಕ ಕ್ರಶ್ ಆಗಿ ಮಿಂಚಿದ್ದವರು ನಿಮಿಕಾ ರತ್ನಾಕರ್. ಒಂದಷ್ಟು ಸಿನಿಮಾಗಳಲ್ಲಿ ನಟಿದ ನಂತರ ಸಿಕ್ಕಬಹುದಾದ ಪ್ರಖ್ಯಾತಿ ಇದೊಂದು ಹಾಡಿನ ಮೂಲಕವೇ ನಿಮಿಕಾ ಪಾಲಿಗೆ ದಕ್ಕಿತ್ತು. ಅದಾದ ನಂತರ ಅವರನ್ನು ಅನೇಕ ಒಳ್ಳೆ ಅವಕಾಶಗಳು ಅರಸಿ ಬರಲಾರಂಭಿಸಿದ್ದವು. ರಿಯಲ್ ಸ್ಟಾರ್ ಉಪೇಂದ್ರ ಜೊತೆಗಿನ ಸಿನಿಮಾ ಅಂತಿಮ ಘಟ್ಟದಲ್ಲಿರುವಾಗಲೇ, ಮತ್ತೊಂದೆರಡು ಚಿತ್ರಗಳಲ್ಲಿಯೂ ನಿಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿಶೇಷವೆಂದರೆ, ನಟಿಯಾಗಿ ಬಹುದೂರ ಸಾಗಿದ ನಂತರವಷ್ಟೇ ಸಿಗಬಹುದಾದಂಥಾ ಅಪೂರ್ವ ಅವಕಾಶಗಳೂ ಕೂಡಾ ನಿಮಿಕಾ ಪಾಲಿಗೆ ಒದಗಿ ಬರುತ್ತಿವೆ. ಸದ್ಯ ಮಹಿಳಾ ಪ್ರಧಾನ ಸಿನಿಮಾವೊಂದರಲ್ಲಿಯೂ ನಟಿಸುತ್ತಿರುವ ಅವರು ಮತ್ತೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಅದರ ಮುಹೂರ್ತ ಸಮಾರಂಭ ಕಳೆದ ಶುಕ್ರವಾರ ಮಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿದೆ.
ಹೀಗೆ ಮುಹೂರ್ತದ ಮೂಲಕ ಆರಂಭಗೊಂಡಿರುವ ಈ ಚಿತ್ರಕ್ಕೆ `ವೈಲ್ಡ್ ಟೈಗರ್ ಸಫಾರಿ’ ಎಂಬ ಶೀರ್ಷಿಕೆ ನಿಕ್ಕಿಯಾಗಿದೆ. ಈ ಚಿತ್ರವನ್ನು ಕೆಜಿಎಫ್ ಖ್ಯಾತಿಯ ಚಂದ್ರಮೌಲಿ ನಿರ್ದೇಶನ ಮಾಡಲಿದ್ದಾರೆ. ಕೆಜಿಎಫ್ ಚಿತ್ರದ ಎರಡೂ ಭಾಗಗಳಲ್ಲಿಯೂ ರೈಟರ್ ಆಗಿ ಕಾರ್ಯನಿರ್ವಹಿಸಿದ್ದವರು ಚಂದ್ರಮೌಳಿ. ಕೆಜಿಎಫ್ ಸರಣಿಯಲ್ಲಿ ಕಲಾ ನಿರ್ದೇಶಕರಾಗಿದ್ದ ಶಿವಕುಮಾರ್ ವೈಲ್ಡ್ ಟೈಗರ್ ಸಫಾರಿ ಚಿತ್ರಕ್ಕೂ ಕಲಾ ನಿರ್ದೇಶನ ಮಾಡಲಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇಕನ್ನುಳಿದಂತೆ ಹೊಸಾ ಹುಡುಗ ಶಿಥಿಲ್ ಪೂಜಾರಿ ಸದರಿ ಸಿನಿಮಾ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಒಂದು ಚೆಂದದ ಪಾತ್ರದ ಮೂಲಕ ನಿಮಿಕಾ ರತ್ನಾಕರ್ ನಾಯಕಿಯಾಗಿ ಜೊತೆಯಾಗಲಿದ್ದಾರೆ. ಬಾಲಿವುಡ್ಡಿನಲ್ಲಿ ಹೆಸರುವಾಸಿಯಾಗಿರುವ ಡ್ಯಾನ್ಸರ್ ಧರ್ಮೇಶ್ ಹಾಗೂ ಸುಶಾಂತ್ ಪೂಜಾರಿ ಈ ಚಿತ್ರದಲ್ಲಿ ಬಹುಮುಖ್ಯವಾದ ಪಾತ್ರಗಳಲ್ಲಿ ನಟಿಸಲಿದ್ದಾರೆ.
ಹೀಗೆ ವೈಲ್ಡ್ ಟೈಗರ್ ಸಫಾರಿ ಚಿತ್ರದ ಮೂಲಕ ನಿಮಿಕಾ ರತ್ನಾಕರ್ ಮತ್ತೊಂದು ಒಳ್ಳೆ ಅವಕಾಶವನ್ನು ದಕ್ಕಿಸಿಕೊಂಡಿದ್ದಾರೆ. ಶೇಕ್ ಇಟ್ ಪುಷ್ಪವತಿ ಹಾಡಿನ ನಂತರದಲ್ಲಿ ನಿಮಿಕಾ ಮುಂದೆ ಅವಕಾಶಗಳು ಸಾಲುಗಟ್ಟಲಾರಂಭಿಸಿದ್ದವು. ಅವರೀಗಾಗಲೇ ಓಂಪ್ರಕಾಶ್ ರಾವ್ ನಿರ್ದೇಶನದ ತ್ರಿಶೂಲಂ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಆ ಚಿತ್ರವೀಗ ಕಡೇಯ ಘಟ್ಟ ತಲುಪಿಕೊಂಡಿದೆ. ಇದರ ಜೊತೆಗೇ ಫ್ಲರ್ಟ್ ಅಂತೊಂದು ಚಿತ್ರದಲ್ಲಿಯೂ ಅವರು ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೇ ಓಂಪ್ರಕಾಶ್ ರಾವ್ ನಿರ್ದೇಶನದಲ್ಲೇ ಮೂಡಿ ಬರಲಿರುವ ಫೀನಿಕ್ಸ್ ಎಂಬ ಮಹಿಳಾ ಪ್ರಧಾನ ಚಿತ್ರದ ನಾಯಕಿಯಾಗೋ ಅವಕಾಶವೂ ಅವರಿಗೆ ಒಲಿದು ಬಂದಿದೆ.
ಸಾಮಾನ್ಯವಾಗಿ, ಒಂದಷ್ಟು ವರ್ಷಗಳ ಕಾಲ ಥರ ಥರದ ಪಾತ್ರಗಳಲ್ಲಿ ನಟಿಸಿ ಗೆದ್ದ ನಟಿಯರಿಗೆ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುವ ಆಸೆ ಇರುತ್ತದೆ. ಆದರೆ, ಬಹುತೇಕರ ಪಾಲಿಗೆ ಅದು ಕನಸಾಗಿಯಷ್ಟೇ ಉಳಿದುಕೊಳ್ಳುತ್ತೆ. ನಿಮಿಕಾ ರತ್ನಾಕರ್ ಈ ಹಿನ್ನೆಲೆಯಲ್ಲಿ ಭಿನ್ನವಾಗಿ ನಿಲ್ಲುತ್ತಾರೆ. ಯಾಕೆಂದರೆ, ಅವರಿಗೆ ಆರಂಭಿಕ ಹೆಜ್ಜೆಯಲ್ಲಿಯೇ ಅಂಥಾದ್ದೊಂದು ಸದಾವಕಾಶ ಒಲಿದು ಬಂದಿದೆ. ಈ ಸಿನಿಮಾದಲ್ಲಿ ನಿಮಿಕಾ ಮನೆಗೆಲಸದ ಹುಡುಗಿಯಾಗಿ ನಟಿಸಲಿದ್ದಾರಂತೆ. ಇದರೊಂದಿಗೆ ಪುಷ್ಪವತಿ ಮತ್ತೊಂದು ಆಯಾಮದ ಗೆಲುವು ಸಿಕ್ಕಿವ ನಿರೀಕ್ಷೆಯಲ್ಲಿರುವಂತಿದೆ. ವೈಲ್ಡ್ ಟೈಗರ್ ಸಫಾರಿ ಕೂಡಾ ಭಿನ್ನ ಧಾಟಿಯ ಸಿನಿಮಾ ಎಂಬ ಮುನ್ಸೂಚನೆ ಮುಹೂರ್ತ ಸಮಾರಂಭದ ಮೂಲಕವೇ ಜಾಹೀರಾಗಿದೆ. ಅದರ ಬಗೆಗಿನ ಮತ್ತೊಂದಷ್ಟು ವಿವರಗಳು ಹಂತ ಹಂತವಾಗಿ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ.