ಸಿನಿಮಾ ರಂಗದಲ್ಲಿ ಗೆಲುವಿನ ಪ್ರಭೆಯಲ್ಲಿ ಮಿಂದೆದ್ದವರ ಕಥೆಗಳ ಮರೆಯಲ್ಲಿಯೇ ನಾನಾ ಆಘಾತಗಳಿಂದ ನೊಂದೆದ್ದು ಹೋದವರ ದಂಡಿ ದಂಡಿ ಕಥೆಗಳಿವೆ. ಚಿತ್ರರಂಗಲ್ಲೇನಾದರೂ ಸಾಧಿಸಬೇಕೆಂಬ ಗುರಿಯನ್ನೇ ಬದುಕಾಗಿಸಿಕೊಂಡ ಎಷ್ಟೋ ಮಂದಿ ಗುರುತೇ ಇರದಂತೆ ಮರೆಯಾಗಿದ್ದಾರೆ. ಸಿನಿಮಾ ಕನಸಿಗಾಗಿ ಎಲ್ಲವನ್ನೂ ಕಳೆದುಕೊಂಡು, ಆ ಕೊರಗಿನಲ್ಲಿಯೇ ಜೀವ ಬಿಟ್ಟವರೂ ಇದ್ದಾರೆ. ಗಾಂಧಿನಗರದ ಗಲ್ಲಿಗುಂಟ ಇಂಥಾ ಎಂದೂ ಮಾಯದ ಅಗೋಚರ ಗಾಯಗಳ ಗುರುತುಗಳಿದ್ದಾವೆ. ಅದು ಝಗಮಗಿಸುವ ಬಣ್ಣದ ಜಗತ್ತಿನ ಕತ್ತಲ ಕಥನ. ಆದರೆ, ಈಗ ಹೇಳಹೊರಟಿರೋದು ಅದೆಲ್ಲವನ್ನೂ ಮೀರಿಕೊಂಡ ದುರಂತಗಾಥೆಯ ಬಗ್ಗೆ. ಇದರ ಕೇಂದ್ರಬಿಂದುವಾದ ಮೂವತ್ತೊಂದರ ಸ್ನೇಹಜೀವಿಯ ಜೀವಮಾನದ ಕನಸೊಂದು ಇನ್ನೇನು ನನಸಾಗೋದರಲ್ಲಿತ್ತು. ಎಂತೆಂಥಾದ್ದೋ ಸರ್ಕಸ್ಸು ನಡೆಸಿ ಸ್ವತಂತ್ರ ನಿರ್ದೇಶಕನಾಗಿ, ಸಿನಿಮಾವೊಂದನ್ನು ರೂಪಿಸಿದ್ದ ಆತ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಕನಸು ಕಂಡಿದ್ದರು. ವಿಪರ್ಯಾಸವೆಂದರೆ, ಅಷ್ಟು ಕಷ್ಟಪಟ್ಟು ರೂಪಿಸಿದ ಸಿನಿಮಾದ ಫಸ್ಟ್ ಕಾಪಿ ನೋಡುವ ಭಾಗ್ಯವೂ ಅವರ ಪಾಲಿಗೆ ಸಿಕ್ಕಲೇ ಇಲ್ಲ. ಒಂದು ಸಾಮಾನ್ಯ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಆ ಸಿನಿಮಾ ವ್ಯಾಮೋಹಿ ದಿನದೊಪ್ಪತ್ತಿನಲ್ಲೇ ಮರಳಿದ್ದು ಶವವಾಗಿ!
ಹಾಗೊಂದು ದಾರುಣ ಅಂತ್ಯ ಕಂಡವರು ಬಿಡುಗಡೆಯ ಹೊಸ್ತಿಲಲ್ಲಿದ್ದ `ಡ್ಯಾಡ್’ ಚಿತ್ರದ ನಿರ್ದೇಶಕ ಅರ್ಜುನ್ ಕೃಷ್ಣ. ರಾಕಿಂಗ್ ಸ್ಟಾರ್ ಯಶ್ ಅವರ ಬಾಲ್ಯ ಸ್ನೇಹಿತರಾಗಿದ್ದ ಅರ್ಜುನ್ ಸಾಗರ್ ಕೃಷ್ಣ. ಆಪ್ತ ವಲಯದಲ್ಲಿ ಅರ್ಜುನ್ ಕೃಷ್ಣ ಅಂತಲೇ ಪರಿಚಿತರಾಗಿದ್ದ ಅವರದ್ದು ಅಪ್ಪಟ ಸ್ನೇಹಶೀಲ ಸ್ವಭಾವ. ಈವತ್ತಿಗೆ ಅವರ ಹಠಾತ್ ನಿರ್ಗಮನದ ನೋವು ಸ್ನೇಹ ವಲಯ, ಡ್ಯಾಡ್ ಸಿನಿಮಾ ತಂಡವನ್ನು ತೀವ್ರವಾಗಿ ಕಾಡುತ್ತಿರೋದಕ್ಕೆ ಪ್ರಧಾನ ಕಾರಣ ಅವರು ಸಾಗಿ ಬಂದ ದಾರಿ. ಆ ಯಾನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದ ಪರಿ ಮತ್ತು ಆಸುಪಾಸು ಸುಳಿವವರನ್ನೆಲ್ಲ ಬರಸೆಳೆದುಕೊಂಡು ಪ್ರೀತಿ ತೋರಿಸುತ್ತಿದ್ದ ನಿಸ್ಪೃಹ ವ್ಯಕ್ತಿತ್ವ. ಇಂಥಾ ಅರ್ಜುನ್ ಕೃಷ್ಣ ಅದೆಂಥಾ ಸಿನಿಮಾ ವ್ಯಾಮೋಹಿ ಎಂಬ ವಿಚಾರ ಯಶ್ ಸೇರಿದಂತೆ, ಹತ್ತಿರವಿದ್ದ ಎಲ್ಲರಿಗೂ ಗೊತ್ತಿದ್ದ ವಿಚಾರ. ಇನ್ನೇನು ಬಿಡುಗಡೆಗೆ ಸಜ್ಜಾಗಿದ್ದ ಡ್ಯಾಡ್ ಚಿತ್ರಕ್ಕಾಗಿ ಅವರು ಪಟ್ಟಿದ್ದ ಶ್ರಮ ಇದೆಯಲ್ಲಾ? ಅದನ್ನು ಯಾರೆಂದರೆ ಯಾರೂ ಊಹಿಸಲು ಸಾಧ್ಯವಿಲ್ಲ. ಇನ್ನೇನು ತನ್ನ ಕನಸೊಂದು ಸಾಕಾರಗೊಳ್ಳುವ ಖುಷಿಯಲ್ಲಿದ್ದ ಅರ್ಜುನ್ ಕೃಷ್ಣ ಡ್ಯಾಡ್ ಚಿತ್ರದ ಫಸ್ಟ್ ಪ್ರಿಂಟ್ ನೋಡುವ ಭಾಗ್ಯವೂ ಇಲ್ಲದಂತೆ ಎದ್ದು ನಡೆದಿದ್ದಾರೆ.
ಯಶ್ ಅವರ ಬಾಲ್ಯ ಸ್ನೇಹಿತ ಅರ್ಜುನ್ ಕೃಷ್ಣ ನಿರ್ದೇಶಕನಾಗುವುದಕ್ಕೇ ಬದುಕಿದ್ದಂತೆ ಭಾಸವಾಗುವಂಥಾ ಕನಸು ಹೊಂದಿದ್ದವರು. ಅದಕ್ಕೊಪ್ಪುವ ಪ್ರತಿಭೆ, ಪರಿಶ್ರಮ ಹೊಂದಿದ್ದ ಅವರ ಪಾಲಿಗೆ ಡ್ಯಾಡ್ (ದೇವರಾಜ್ ಅಲಿಯಾಸ್ ಡೇವಿಡ್) ಚಿತ್ರ ಜೀವಮಾನದ ಕನಸಾಗಿತ್ತು. ಅದಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟಂತಿದ್ದ ಅರ್ಜುನ್ ಪಾಲಿಗೆ ಕಾಲವೆಂಬುದು ಕೊರೋನಾ ಸೇರಿದಂತೆ ನಾನಾ ರೂಪಗಳಲ್ಲಿ ಆಘಾತ ಕೊಟ್ಟಿತ್ತು. ಅದೆಲ್ಲವನ್ನೂ ಎದುರಿಕೊಂಡು ಬಂದಿದ್ದ ಅರ್ಜುನ್ ಕೃಷ್ಣ ಈ ವರ್ಷದ ಜನವರಿ ತಿಂಗಳಲ್ಲಿ ಡಿಐ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗುವ ಖುಷಿಯಲ್ಲಿದ್ದರು. ಇದೇ ಹೊತ್ತಿನಲ್ಲಿ ಅವರಿಗೆ ಸಣ್ಣ ಸ್ವರೂಪದಲ್ಲಿ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಗಾಲ್ ಬ್ಲಾಡರ್ ಸ್ಟೋನ್ ಸಮಸ್ಯೆ ಅವರಲ್ಲಿ ಕಾಣಿಸಿಕೊಂಡಿತ್ತು. ಆ ಹೊತ್ತಿಗೆಲ್ಲ ಸಿನಿಮಾ ಕೆಲಸ ಕಾರ್ಯಗಳಲ್ಲಿ ಮುಳುಗಿ ಹೋಗಿದ್ದ ಅರ್ಜುನ್ ಕೃಷ್ಣ ಆಯುರ್ವೇದ ಔಷಧಿಯ ಮೊರೆ ಹೋಗಿದ್ದರು. ಸ್ವಲ್ಪ ದಿನಗಳ ಕಾಲ ಔಷದೋಪಚಾರ ಆದ ನಂತರ ಚೇತರಿಸಿಕೊಂಡು ಮತ್ತೆ ಸಿನಿಮಾ ಕೆಲಗಳಲ್ಲಿ ಬ್ಯುಸಿಯಾಗಿದ್ದರು.
ಇದಾದ ನಂತರ ಅವರಿಗೆ ಮತ್ತೊಂದು ಸುತ್ತಿನ ಆಘಾತ ಕಾಡಿದ್ದ ಇದೇ ಫೆಬ್ರವರಿ ತಿಂಗಳಿನಲ್ಲಿ. ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದಾಗಿ ಆಸ್ಪತ್ರೆಗೆ ತೆರಳಿದಾಗ ಗಾಲ್ ಬ್ಲಾಡರ್ ಸ್ಟೋನ್ ಸಮಸ್ಯೆ ಉಲ್ಬಣಿಸಿ, ಅದರ ಸೋಂಕು ಫ್ಯಾಂಕ್ರಿಯಾಸ್ ಗೂ ಹಬ್ಬಿಕೊಂಡಿದೆ ಎಂಬ ಆಘಾತಕಾರಿ ವಿಚಾರವನ್ನು ವೈದ್ಯರು ಹೇಳಿದ್ದರು. ಅಷ್ಟಾಗುತ್ತಲೇ ಅರ್ಜುನ್ ಕೃಷ್ಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿಚಾರ ತಿಳಿದ ಡ್ಯಾಡ್ ಚಿತ್ರತಂಡಕ್ಕೆ ಬೇಸರವಾದರೂ ಕೂಡಾ ಯಾವ ಕೆಡುಕಿನ ಸೂಚನೆಯೂ ಇರಲಿಲ್ಲ. ಯಾಕೆಂದರೆ, ಕಿಡ್ನಿ ಸ್ಟೋನು ಮತ್ತು ಅದರ ಚಿಕಿತ್ಸೆ ಈವಾಗಂತೂ ಮಾಮೂಲು. ಇಂಥಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಅರ್ಜುನ್ ಕೃಷ್ಣ ಬೇಗನೆ ಮರಳುತ್ತಾರೆಂಬ ನಿರೀಕ್ಷೆ ಚಿತ್ರತಂಡದ್ದಾಗಿತ್ತು. ಅವರ ಮನೆಮಂದಿ ಮತ್ತು ಸ್ನೇಹಿತರೂ ಕೂಡಾ ಹಾಗೆಯೇ ಅಂದುಕೊಂಡಿದ್ದರು.
ಅರ್ಜುನ್ ಕೃಷ್ಣ ಹುಷಾರಾಗಿ ಬರೋದರೊಳಗೆ ಉಳಿಕೆ ಕಾರ್ಯ ಮುಗಿಸಬೇಕೆಂಬ ಇರಾದೆಯಿಂದ ಚಿತ್ರತಂಡ ಕೆಲಸ ಮಾಡುತ್ತಿತ್ತು. ಆದರೆ, ಶಿವರಾತ್ರಿಯ ಮುಂಚಿನ ದಿನ ಅಂದರೆ, ಫೆಬ್ರವರಿ ೨೫ರಂದು ನಿಂತಲ್ಲಿಯೇ ಕುಸಿದು ಹೋಗುವಂತೆ ಅರ್ಜುನ್ ಇನ್ನಿಲ್ಲವೆಂಬ ಸುದ್ದಿ ಬಂದೆರಗಿತ್ತು. ಗಾಲ್ ಬ್ಲಾಡರಿನಿಂದ ಫ್ಯಾಂಕ್ರಿಯಾಸ್ ಗೆ ಹಬ್ಬಿಕೊಂಡಿದ್ದ ಸೋಂಕು ತೀವ್ರ ಸ್ವರೂಪ ಪಡೆದ ಪರಿಣಾಮವಾಗಿ, ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿ ಅರ್ಜುನ್ ಉಸಿರು ನಿಲ್ಲಿಸಿದ್ದಾರೆಂದು ವೈದ್ಯರು ಸಮಜಾಯಿಶಿ ಕೊಟ್ಟಿದ್ದರು. ಅಲ್ಲಿಗೆ ಅಪ್ಪಟ ಸಿನಿಮಾ ವ್ಯಾಮೋಹಿಯ ಬದುಕು ಅರ್ಧ ಹಾದಿಯಲ್ಲಿಯೇ ಮುಕ್ತಾಯವಾದಂತಾಗಿತ್ತು. ಮೈಸೂರು ಭಾಗವೂ ಸೇರಿದಂತೆ ಎಲ್ಲೆಡೆ ಹಬ್ಬಿಕೊಂಡಿದ್ದ ಸ್ನೇಹಿತರು, ನಮ್ ಸಿನಿಮಾ ಖ್ಯಾತಿಯ ಶಿವರಾಜ್ ಕುಮಾರ್ ಸೇರಿದಂತೆ ಡ್ಯಾಡ್ ಚಿತ್ರತಂಡ, ಅರ್ಜುನ್ ಕೃಷ್ಣರನ್ನೇ ಜಗತ್ತೆಂದುಕೊಂಡಿದ್ದ ಅಮ್ಮ, ಅಣ್ಣ, ಮಡದಿ ಮತ್ತು ಪುಟ್ಟ ಕಂದನ ಆಘಾತವನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಈ ಕ್ಷಣಕ್ಕೂ ಯಶ್ ಸೇರಿದಂತೆ ಸ್ನೇಹ ವಲಯದಲ್ಯಾರಿಗೂ ಸ್ನೇಹಜೀವಿ ಅರ್ಜುನ್ ಕೃಷ್ಣ ಇನ್ನಿಲ್ಲವೆಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಹೀಗೆ ಒಂದು ಸಣ್ಣ ಅನಾರೋಗ್ಯ ಸಮಸ್ಯೆ ಉಲ್ಬಣಿಸಿ, ಅದಕ್ಕೆ ಬಲಿಯಾಗಿರುವ ಅರ್ಜುನ್ ಕೃಷ್ಣರಿಗೆ ಈಗಿನ್ನೂ ಮೂವತ್ತೊಂಬತ್ತು ವರ್ಷವಾಗಿತ್ತಷ್ಟೆ. ಅವರೊಳಗೆ ಬೆಟ್ಟದಷ್ಟು ಸಿನಿಮಾ ಸಂಬಂಧಿತವಾದ ಕನಸಿತ್ತು. ತನ್ನವರನ್ನೆಲ್ಲ ಬರಸೆಳೆದು ಅಪ್ಪಿಕೊಳ್ಳುತ್ತಲೇ ಉಸಿರಾಡುವಂಥಾ ಅಪ್ಪಟ ಪ್ರಿತಿಯ ಒರತೆಯೂ ಅವರೊಳಗಿತ್ತು. ದುರಂತವೆಂದರೆ, ಅಂಥಾ ಜೀವ ತನ್ನ ಕನಸಿನಂಥಾ ಮೊದಲ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗೋದನ್ನು ನೋಡುವ ಅವಕಾಶವನ್ನೂ ಕೊಡದ ಕ್ರೂರ ವಿಧಿ ಜೀವವನ್ನೇ ಕಿತ್ತುಕೊಂಡು ಬಿಟ್ಟಿದೆ. ಹೀಗೆ ಅಕಾಲಿಕವಾಗಿ ನಿರ್ಗಮಿಸಿರುವ ಅರ್ಜುನ್ ಕೃಷ್ಣ ರಾಕಿಂಗ್ ಸ್ಟಾರ್ ಯಶ್ ಅವರ ಕುಚಿಕ್ಕೂ ಗೆಳೆಯ. ಅವರಿಬ್ಬರ ಸ್ನೇಹ ಪ್ರಾಥಮಿಕ ಶಾಲಾ ಹಂತದಿಂದಲೇ ಕುದುರಿಕೊಂಡಿತ್ತು. ಈವತ್ತಿಗೂ ಯಶ್ ಮೈಸೂರು ಭಾಗದಲ್ಲಿ ಒಂದು ಸಣ್ಣ ಸ್ನೇಹವಲಯವನ್ನು ಕಾಪಿಟ್ಟುಕೊಂಡು ಬಂದಿದ್ದಾರೆ. ಆ ತಂಡದ ಭಾಗವಾಗಿದ್ದವರು ಅರ್ಜುನ್ ಕೃಷ್ಣ.

ಹಾಗೆ ಶಾಲಾ ದಿನಗಳಲ್ಲಿ ಜೊತೆಯಾಗಿದ್ದ ಯಶ್ ಸ್ಟಾರ್ ನಟನಾಗೋ ಕನಸು ಕಂಡರೆ, ಅರ್ಜುನ್ ಕೃಷ್ಣ ನಿರ್ದೇಶಕನಾಗುವ ಕನಸು ಕಟ್ಟಿಕೊಂಡಿದ್ದರು. ಬಳಿಕ ಬಹುದೂರ ಒಟ್ಟೊಟ್ಟಿಗೇ ಸಾಗಿ ಬಂದು, ಯಶ್ ಗಮ್ಯದತ್ತ ದಾಪುಗಾಲಿಟ್ಟಿದ್ದರು. ಹಂತ ತಂಹವಾಗಿ ಗೆಲುವು ಕಾಣುತ್ತಾ ಸಾಗಿದ್ದರು. ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ, ರಾಜಾ ಹುಲಿಯಂಥಾ ಅನೇಕ ಚಿತ್ರಗಳಲ್ಲಿ ಯಶ್ ಅವರಿಗೆ ಅರ್ಜುನ್ ಸಾಥ್ ಕೊಟ್ಟಿದ್ದರು. ಹೀಗೆ ಗೆಳೆಯ ಗೆಲ್ಲುತ್ತಲೇ ತನ್ನ ಗುರಿಯ ಬೆಂಬಿದ್ದಿದ್ದ ಅರ್ಜುನ್ ಸ್ವತಂತ್ರ ನಿರ್ದೇಶಕನಾಗುವತ್ತ ಗಂಭೀರ ಪ್ರಯತ್ನ ನಡೆಸಿದ್ದರು. ೨೦೧೨ರ ಸುಮಾರಿಗೆಲ್ಲ ಮೊದಲ ಹೆಜ್ಜೆಯೆಂಬಂತೆ ಅರ್ಜುನ್ ಅಹಂ ಅಂತೊಂದು ಕಿರುಚಿತ್ರ ನಿರ್ದೇಶನ ಮಾಡಿದ್ದರು. ಅದನ್ನು ಖುದ್ದಾಗಿ ಯಶ್ ಬಿಡುಗಡೆಗೊಳಿಸಿ ಸಾಥ್ ಕೊಟ್ಟಿದ್ದರು. ಆ ಕಿರುಚಿತ್ರ ಅರ್ಜುನ್ ಅವರೊಳಗಿದ್ದ ನಿರ್ದೇಶನದ ಕಸುವಿಗೆ ಕನ್ನಡಿಯಾದಂತಿತ್ತು.

ಅದನ್ನು ಕಂಡ ಯಾರಿಗೇ ಆದರೂ ಈತ ಗಟ್ಟಿ ಪ್ರತಿಭೆ ಹೊಂದಿದ್ದಾನೆಂಬ ವಿಚಾರ ಸ್ಪಷ್ಟವಾಗಿಯೇ ಮನದಟ್ಟಾಗುತ್ತಿತ್ತು. ಅದು ಕನಸಿನ ಹಾದಿಯಲ್ಲಿ ಅರ್ಜುನ್ ಕೃಷ್ಣ ಅವರಿಗೆ ಸಿಕ್ಕಿದ್ದ ಮೊದಲ ಗೆಲುವು. ಆ ನಂತರ ಈಗ್ಗೆ ಒಂದಷ್ಟು ವರ್ಷಗಳ ಹಿಂದೆ ಅಚ್ಚುಕಟ್ಟಾದೊಂದು ತಂಡ ಕಟ್ಟಿದ್ದ ಅರ್ಜುನ್ ಕೃಷ್ಣ ಆ ನಂತರ ಅನೇಕ ಸವಾಲುಗಳಿಗೆ ಎದೆಕೊಡುವಂತಾಗಿತ್ತು. ನಡುವಲ್ಲಿ ಕೊರೋನಾ ಬಂದು ಎರಡು ವರ್ಷ ಏನೂ ಮಾಡಲಾಗದ ಸ್ಥಿತಿ ನಿರ್ಮಾಣಗೊಂಡಿತ್ತು. ಇಂಥಾ ಘಳಿಗೆಯಲ್ಲಿ ಮನೆಯೊಂದನ್ನು ಮಾರಿ, ಕೈ ಸಾಲ ಪಡೆದು ಚಿತ್ರತಂಡವನ್ನು ಸಂಭಾಳಿಸಿದ್ದ ಸ್ನೇಹಜೀವಿ ಅರ್ಜುನ್ ಕೃಷ್ಣ. ಸಾಮಾನ್ಯವಾಗಿ, ಸಿನಿಮಾ ರಂಗದಲ್ಲಿ ದುಡಿಸಿಕೊಂಡು ಕೈಯೆತ್ತುವವರ ಸಂಖ್ಯೆ ಹೆಚ್ಚಿದೆ. ಆದರೆ ಸಾಲಸೋಲ ಮಾಡಿಯಾದರೂ ತನ್ನನ್ನು ನಂಬಿ ಬಂದ ತಂಡಕ್ಕೆ ಆವತ್ತಿನ ಸಂಭಾವನೆಯನ್ನು ಅಂದಂದೇ ನೀಡುವ ಮೂಲಕವೂ ಅರ್ಜುನ್ ಮಾದರಿಯಾಗಿದ್ದರು. ಈ ಸಿನಿಮಾ ನಾಯಕ ಹೊಸಾ ಹುಡುಗ. ಆರಂಭದಿಂದ ಇಲ್ಲಿಯವರೆಗೂ ಆತನನ್ನು ಜೊತೆಗಿಟ್ಟುಕೊಂಡು ಅಕ್ಷರಶಃ ಸಾಕಿದ್ದ ಅಪ್ಪಟ ತಾಯ್ತನ ಅರ್ಜುನ್ ಅವರದ್ದು.
ಓರ್ವ ವ್ಯಕ್ತಿ ಹೀಗೆ ಏಕಾಏಕಿ ಮರೆಯಾದಾಗ ಆ ನಿರ್ವಾತ ಸ್ಥಿತಿ ತೀವ್ರವಾಗಿ ಕಾಡೋದು ಆತನ ಸಾಧನೆಯಿಂದಲ್ಲ; ವ್ಯಕ್ತಿತ್ವದಿಂದ. ಓರ್ವ ವ್ಯಕ್ತಿಯಾಗಿ ಅರ್ಜುನ್ ತಟವಟಗಳಿಲ್ಲದ ವ್ಯಕ್ತಿತ್ವ ಹೊಂದಿದ್ದವರು. ಯಾರೇ ಬಂದು ಅರೆಘಳಿಗೆ ಮಾತಾಡಿದರೂ ಅವರು ಅರ್ಜುನ್ ಸ್ನೇಹ ವಲಯಕ್ಕೆ ಸೇರಿಕೊಳ್ಳುತ್ತಿದ್ದರು. ಈ ಕಾರಣದಿಂದಲೇ ಅವರ ಸ್ನೇಹ ವಲಯ ದೊಡ್ಡದಿತ್ತು. ಇನ್ನು ಓರ್ವ ನಿರ್ದೇಶಕನಾಗಿ ತಂಡವನ್ನು ಸಂಭಾಳಿಸೋದರಲ್ಲಿಯೂ ಅರ್ಜುನ್ ಭಿನ್ನವಾಗಿ ನಿಲ್ಲುತ್ತಾರೆ. ಅವರೆಂದೂ ನಿರ್ದೇಶಕನೆಂಬ ಅಹಮ್ಮಿಕೆ ಪ್ರದರ್ಶಿಸಿದವರಲ್ಲ. ಯಾರನ್ನೋ ಹತ್ತಿಕ್ಕಿ ತಾನು ಏಣಿ ಹತ್ತುವ ಜಾಯಮಾನವೂ ಅವರದ್ದಲ್ಲ. ತನ್ನನ್ನು ನಂಬಿ ಬಂದವರೆಲ್ಲ ಬಂಧುಗಳೆಂಬ ಆ ಆಪ್ತ ಜೀವದ ಅಗಲಿಕೆ ಶಿವರಾಜ್ ಕುಮಾರ್ ಸೇರಿದಂತೆ ಒಂದಿಡೀ ಚಿತ್ರತಂಡವನ್ನು ತೀವ್ರವಾಗಿ ಕಾಡುತ್ತಿದೆ. ಅದು ಸಲೀಸಾಗಿ ಮಾಸಬಹುದಾದ ದುಃಖವಂತೂ ಅಲ್ಲ.

ಇಂಥಾ ಸ್ನೇಹಶೀಲ ವ್ಯಕ್ತಿತ್ವದ ಅರ್ಜುನ್ ಕೃಷ್ಣ ಅಂದರೆ ಯಶ್ ಅವರಿಗೂ ಅತೀವ ಪ್ರೀತಿಯಿತ್ತು. ಅರ್ಜುನ್ ವಿಕ್ಟೋರಿಯಾ ಆಸ್ಪತ್ರೆಗೆ ವದಾಖಲಾದ ಘಳಿಗೆಯಲ್ಲವರೆ ಟಾಕ್ಸಿಕ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಆದರೂ ದಿನಕ್ಕೊಂದಷ್ಟು ಸಲ ಕರೆ ಮಾಡಿ ಧೈರ್ಯ ತುಂಬುತ್ತಿದ್ದರು. ಹುಷಾರಾಗಿ ಬಂದ ನಂತರ ಡ್ಯಾಡ್ ಚಿತ್ರದ ಬಿಡುಗಡೆಗೆ ಪಕ್ಕಾ ಪ್ಲಾನು ಮಾಡೋಣ ಅಂತೆಲ್ಲ ಉತ್ಸಾಹ ತುಂಬುತ್ತಿದ್ದರು. ಅರ್ಜುನ್ ಆಪ್ತ ಬಳಗವೂ ಅದೇ ರೀತಿ ಸಾಥ್ ಕೊಟ್ಟಿತ್ತು. ಆದರೆ, ಯಾವ ಹರಕೆ ಹಾರೈಕೆಗಳೂ ಫಲಿಸದೆ ಅರ್ಜುನ್ ಕೃಷ್ಣ ಎಂಬ ಸ್ನೇಹಜೀವಿ ಶಾಶ್ವತವಾಗಿ ಕಣ್ಮುಚ್ಚಿದ್ದಾರೆ. ಒಟ್ಟಿಗಿದ್ದವರ ಪಾಲಿಗೆ ಮಾತ್ರ ಆ ಸತ್ಯವನ್ನು ಅರಗಿಸಿಕೊಳ್ಳಲು ಈ ಕ್ಷಣಕ್ಕೂ ಸಾಧ್ಯವಾಗುತ್ತಿಲ್ಲ.
ಈಗ್ಗೆ ನಾಲಕ್ಕು ವರ್ಷಗಳ ಹಿಂದೆ ಅರ್ಜುನ್ ಮದುವೆಯಾಗಿದ್ದರು. ಮಗುವೊಂದು ಅವರ ಮಡಿಲು ತುಂಬಿತ್ತು. ಇದೀಗ ಅಣ್ಣ, ಅಮ್ಮ, ಮಡದಿ ಮತ್ತು ಪುಟ್ಟ ಮಗುವನ್ನು ಅರ್ಜುನ್ ತಬ್ಬಲಿಗಳಾಗಿಸಿ ನಿರ್ಗಮಿಸಿದ್ದಾರೆ. ಡ್ಯಾಡ್ ಚಿತ್ರತಂಡಕ್ಕೂ ಕೂಡಾ ಅಂಥಾದ್ದೊಂದು ತಬ್ಬಲಿತನ ತೀವ್ರವಾಗಿ ಕಾಡುತ್ತಿದೆ. ಅರ್ಜುನ್ ಅವರ ಇದುವರೆಗಿನ ಬದುಕಿನತ್ತ ಒಮ್ಮೆ ಕಣ್ಣಾಡಿಸಿದರೆ, ಅದು ಹತ್ತಿರ ಸುಳಿದವರಿಗೆಲ್ಲ ಪ್ರೀತಿ ತೋರಿಸುತ್ತಾ, ನಿರ್ದೇಶಕನಾಗಲೆಂದೇ ಹುಟ್ಟಿದ ಜೀವವೇನೋ ಎಂಬಂಥಾ ಭಾವವೊಂದು ಉತ್ಕಟವಾಗಿ ಕಾಡುತ್ತದೆ. ಆದರೀಗ ಅರ್ಧ ದಾರಿಯಲ್ಲಿಯೇ ಅವರು ನಿರ್ಗಮಿಸಿದ್ದಾರೆ. ಅವರ ಜೀವಮಾನದ ಕನಸಾಗಿದ್ದ ಡ್ಯಾಡ್ ಚಿತ್ರ ಅರ್ಧ ಮುಗಿದ ಕನಸಾಗಲಿದರಲಿ. ಅವರನ್ನೇ ನಂಬಿಕೊಂಡಿದ್ದ ಮಡದಿ ಮತ್ತು ಪುಟ್ಟ ಕಂದನ ಮುಂದಿನ ಬದುಕು ಹಸನಾಗಿರಲಿ. ಅವರ ಸ್ನೇಹಿತರಿಗೆ, ಡ್ಯಾಡ್ ಚಿತ್ರತಂಡಕ್ಕೆ ಈ ಆಘಾತವನ್ನು ಭರಿಸಿಕೊಳ್ಳುವ ಶಕ್ತಿ ಸಿಗಲೆಂಬುದು ಹಾರೈಕೆ…