ಹೊಸಾ ವರ್ಷದ ಶುರುವಾತಿನಲ್ಲಿಯೇ ಹೊಸಬರ ಹಂಗಾಮಾ ಶುರುವಾಗಿದೆ. ವಾರದ ಹಿಂದೆ ಬಿಡುಗಡೆಗೊಂಡಿದ್ದ ಅಪಾಯವಿದೆ ಎಚ್ಚರಿಕೆ ಚಿತ್ರಕ್ಕೆ ಸಿಗುತ್ತಿರುವ ಪ್ರೇಕ್ಷಕರ ಮೆಚ್ಚುಗೆ ಮತ್ತು ಅದರ ಫಲವಾಗಿಯೇ ಸಾಧ್ಯವಾಗಿರುವ ಯಶಸ್ವೀ ಪ್ರದರ್ಶನಗಳ ಮೂಲಕ ಗೆಲುವಿನ ಶುಭ ಸೂಚನೆಗಳು ಢಾಳಾಗಿಯೇ ಗೋಚರಿಸಲಾರಂಭಿಸಿವೆ. ಹಾರರ್ ಥ್ರಿಲ್ಲರ್ ಜಾನರಿನ ಸಿದ್ಧ ಸೂತ್ರಗಳನ್ನು ಮೀರಿಕೊಳ್ಳುವ ಉಮೇದಿನೊಂದಿಗೆ ರೂಪುಗೊಂಡಿರುವ ಚಿತ್ರ ಅಪಾಯವಿದೆ ಎಚ್ಚರಿಕೆ. ಒಟ್ಟಾರೆ ಕಥೆ, ಕಾಡಿನ ಗರ್ಭದ ಸಹಜ ದೃಶ್ಯವೈಭವ ಹಾಗೂ ಎಲ್ಲಿಯೂ ವಿಚಲಿತವಾಗದಂತೆ ನೋಡಿಕೊಳ್ಳುವ ಬಿಗುವಿನ ನಿರೂಪಣೆಯ ಮೂಲಕ ಈ ಸಿನಿಮಾ ಪ್ರೇಕ್ಷಕರ ಮನ ಗೆದ್ದಿದೆ. ಹೀಗೆ ಹಬ್ಬಿಕೊಂಡ ಸದಭಿಪ್ರಾಯದಿಂದಲೇ ಚಿತ್ರಮಂದಿರ ತುಂಬಿಕೊಳ್ಳಲಾರಂಭಿಸಿದೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಪ್ರಥಮ ಹೆಜ್ಜೆಯಲ್ಲಿಯೇ ಗೆದ್ದ ಖುಷಿಯೊಂದು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿಗೆ ಇಡಿಯಾಗಿ ದಕ್ಕಿದೆ.
ಯಾವುದೇ ಸಿನಿಮಾ ತೆರೆಗಂಡಾಗಲೂ ಪ್ರೇಕ್ಷಕರ ಮುಂದೆ ಗರಿಬಿಚ್ಚಿಕೊಳ್ಳೋ ದೃಷ್ಯಗಳ ಹಿಂದೆ ಹತ್ತಾರು ವರ್ಷಗಳ ಶ್ರಮ, ಕನಸುಗಳಿರುತ್ತವೆ. ಸಾಕಷ್ಟು ಹತಾಶೆ, ಸೋಲು, ಬಿಕ್ಕಳಿಕೆಗಳೂ ಇದ್ದೇ ಇರುತ್ತವೆ. ಈಗ್ಗೆ ದಶಕಗಳಿಂದೀಚೆಗೆ ಕನ್ನಡ ಚಿತ್ರರಂಗದ ಭಾಗವಾಗಿ, ಹತ್ತಾರು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಅಭಿಜಿತ್ ತೀರ್ಥಹಳ್ಳಿ ಕೂಡಾ ಅದೆಲ್ಲವನ್ನೂ ದಾಟಿಕೊಂಡು ಬಂದಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲಿಯೇ ಸಿನಿಮಾ ಧ್ಯಾನ ಹೊಂದಿದ್ದ ಅಭಿಜಿತ್ ಪಾಲಿಗೆ ನೀನಾಸಂ ವತಿಯಿಂದ ತೀರ್ಥಹಳ್ಳಿ ಸೀಮೆಯ್ಲ್ಲಿ ನಡೆಯುತ್ತಿದ್ದ ರಂಗ ಶಿಬಿರಗಳು ವರವಾಗಿ ಸಿಕ್ಕಿದ್ದವು. ಡಾ. ಮಾಲತಿ ಎಸ್.ಸಾಗರ ಅವರ ಮಾರ್ಗದರ್ಶನದಲ್ಲಿ ನಟನೆ ಮತ್ತು ನಿರ್ದೇಶನ ವಿಭಾದ ಬೆರಗುಗಳಿಗೆ ಒಡ್ಡಿಕೊಳ್ಳುವ ಅವಕಾಶವೂ ಸಿಕ್ಕಿತ್ತು.
ಹಾಗೆ ಕಾಲೇಜು ದಿನಮಾನದಲ್ಲಿಯೇ ನೀನಾಸಂ ರಂಗ ಶಿಬಿರಗಳಲ್ಲಿ ಭಾಗಿಯಾಗಿದ್ದ ಅಭಿಜಿತ್ ಪಾಲಿಗೆ ಓದು ಮುಗಿಯುವ ಹೊತ್ತಿಗೆಲ್ಲ ಗುರಿಯೆಂಬುದು ನಿಖರವಾಗಿತ್ತು. ಮಲೆನಾಡು ಭಾಗದ ಅಪ್ಪಟ ರೈತಾಪಿ ವರ್ಗದಿಂದ ಬಂದವರು ಅಭಿಜಿತ್. ಸಾಮಾನ್ಯವಾಗಿ ಮಧ್ಯಮ ವರ್ಗದಿಂದ ಬಂದವರನ್ನು ಅದೆಂಥಾದ್ದೇ ಕನಸು ಕಾಡುತ್ತಿದ್ದರೂ, ಅದೆಷ್ಟೇ ಪ್ರತಿಭೆ ಇದ್ದರೂ, ಬದುಕಿನ ಅನಿವಾರ್ಯತೆಗಳು ಮತ್ತೊಂದ್ಯಾವುದೋ ಗುರುತಿರದ ಗಮ್ಯದತ್ತ ಸೆಳೆದುಕೊಂಡು ಬಿಡೋದಿದೆ. ಆದರೆ, ಅಭಿಜಿತ್ ತೀರ್ಥಹಳ್ಳಿ ಅಂಥಾ ಅನಿವಾರ್ಯತೆಗಳನ್ನೆಲ್ಲ ಮೀರಿಕೊಂಡು, ಹತ್ತು ವರ್ಷಗಳ ಹಿಂದೆ ಹೋಗಿ ನಿಂತದ್ದು ಗಾಂಧಿನಗರವೆಂಬೋ ಮಾಯಾ ಜಗತ್ತಿಗೆ!
ಆ ಬಳಿಕ ಅವರ ಪಾಲಿಗೆ ಒಂದಷ್ಟು ಒಳ್ಳೆ ಅನುಭವಗಳು, ಮತ್ತೊಂದಷ್ಟು ವಾಸ್ತವಿಕ ದಿಗ್ಧರ್ಶನಗಳೆಲ್ಲ ಸಾಕಷ್ಟಾಗಿವೆ. ಇದೆಲ್ಲದರಾಚೆಗೆ ಪ್ರತಿಭೆಯನ್ನು ಹಿಂಡಿಕೊಳ್ಳುವ ಮಂದಿಯ ಸಂತೆಯಲ್ಲಿ ಸ್ವತಂತ್ರ ಅಸ್ತಿತ್ವ ಹುಡುಕಿಕೊಳ್ಳೋದೇ ಒಳ್ಳೆಯದ್ದೆಂಬ ಜ್ಞಾನೋದಯವೂ ಆಗಿತ್ತು. ಆ ಹೊತ್ತಿಗೆಲ್ಲ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಲೇ ಒಂದಷ್ಟು ಹಿಟ್ ಸೀರಿಯಲ್ ಟೈಟಲ್ ಟ್ರ್ಯಾಕ್ ಗಳಿಗೆ ಸಾಹಿತ್ಯ ಬರೆಯುವ ಮೂಲಕವೂ ಅಭಿಜಿತ್ ಗಮನ ಸೆಳೆದಿದ್ದರು. ಈ ನಡುವೆ ಸ್ವಂತ್ರರ ನಿರ್ದೇಶಕರಾಗಬೇಕೆಂಬ ನಿರ್ಧಾರಕ್ಕೆ ಬಂದಿದ್ದ ಅಭಿಜಿತ್ ಪಾಲಿಗೆ ಕದ್ದುಮುಚ್ಚಿ ಅಂತೊಂದು ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಕ್ಕಿತ್ತು. ಆ ಸಿನಿಮಾವನ್ನು ವಿ.ಜಿ ಮಂಜುನಾಥ್ ಅತ್ಯಂತ ಪ್ರೀತಿಯಿಂದ, ನಾನಾ ಮಹತ್ವಾಕಾಂಕ್ಷೆಗಳನ್ನಿಟ್ಟುಕೊಂಡು ನಿರ್ಮಾಣ ಮಾಡಿದ್ದರು.
ಆದರೆ, ಆ ಸಿನಿಮಾ ಭೂಮಿಕೆಯಲ್ಲಿ ಒಂದಷ್ಟು ಪಲ್ಲಟಗಳು ಜರುಗಿದ್ದವು. ಅದರ ಫಲವಾಗಿ ಅಭಿಜಿತ್ ತೀರ್ಥಹಳ್ಳಿ ಹೆಗರಿಗೆ ಒಂದಷ್ಟು ಗುರುತರ ಜವಾಬ್ದಾರಿಗಳೂ ಕೂಡಾ ರವಾನೆಯಾಗಿದ್ದವು. ಕಡೆಗೂ ಅಂಥಾ ಜವಾಬ್ದಾರಿಗಳನ್ನೆಲ್ಲ ಮುಗಿಸಿಕೊಂಡಿದ್ದ ಅಭಿಜಿತ್ ಇನ್ನು ಅಚ್ಚುಕಟ್ಟಾದೊಂದು ಕಥೆ ರೆಡಿ ಮಾಡಿ ನಿರ್ದೇಶನಕ್ಕಿಳಿಯುವ ಅಚಲ ತೀರ್ಮಾನಕ್ಕೆ ಬಂದಿದ್ದರು. ಅದರ ಫಲವಾಗಿಯೇ ವರ್ಷಗಟ್ಟಲೆ ಶ್ರಮ ವಹಿಸಿ, ಚೆಂದದ್ದೊಂದು ಕಥೆ ಸಿದ್ಧಪಡಿಸಿಕೊಂಡಿದ್ದ ಅಭಿಜಿತ್ ಅದನ್ನು ನಿರ್ಮಾಪಕ ವಿ.ಜಿ ಮಂಜುನಾಥ್ ಅವರ ಮುಂದೆ ಹರವಿದ್ದರು. ಅದಾಗಲೇ ಕದ್ದುಮುಚ್ಚಿ ಸಿನಿಮಾ ಮೂಲಕ ನಾನಾ ಆಘಾತಗಳನ್ನುಉ ಕಂಡುಂಡಿದ್ದ ವಿ.ಜಿ ಮಂಜುನಾಥ್ ಹೆಚ್ಚೂ ಕಡಿಮೆ ಚಿತ್ರ ನಿರ್ಮಾಣದ ಸಹವಾಸವೇ ಬೇಡ ಎಂಬಷ್ಟರ ಮಟ್ಟಿಗೆ ರೋಸತ್ತು ಹೋಗಿದ್ದರು.
ಆದರೂ ಕದ್ದುಮುಚ್ಚಿ ಚಿತ್ರದ ಸಂದರ್ಭದಲ್ಲಿ ಅಭಿಜಿತ್ ರನ್ನು ಹತ್ತಿರದಿಂದ ಕಂಡು, ಅವರ ಪ್ರತಿಭೆಯ ಅರಿವಿದ್ದ ವಿ.ಜಿ ಮಂಜುನಾಥ್ ಪಾಲಿಗೆ ಸದರಿ ಕಥೆ ಇಷ್ಟವಾಗಿತ್ತು. ಮೊದಲ ಅನುಭವದಿಂದ ಅಗಾಧವಾದ ಪಾಠ ಕಲಿತಿದ್ದ ನಿರ್ಮಾಪಕರು ಆರಂಭದಿಂದ ಕಡೆಯವರೆಗೂ ಅತ್ಯಂತ ಆಸ್ತೆಯಿಂದ, ಎಚ್ಚರದಿಂದ ಅಪಾಯವಿದೆ ಎಚ್ಚರಿಕೆ ಚಿತ್ರವನ್ನು ಪೊರೆದಿದ್ದಾರೆ. ಒಂದಿಡೀ ತಂಡವನ್ನು ಮುನ್ನಡೆಸಿದ್ದಾರೆ. ಆರಂಭದಲ್ಲಿ ಸಣ್ಣದೊಂದು ಬಜೆಟ್ಟಿನ ರೂಪುರೇಷೆಯೊಂದಿಗೆ ಈ ಸಿನಿಮಾ ಆರಂಭವಾಗಿತ್ತು. ಆ ನಂತರ ವಿ.ಜಿ ಮಂಜುನಾಥ್ ಅವರು ಬಜೆಟ್ಟಿನ ಮಿತಿಯಾಚೆಗೂ, ಯಾವುದಕ್ಕೂ ಕೊರತೆಯಾಗದಂತೆ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಹಾಗೆ ತನ್ನ ಮೇಲೆ ನಂಬಿಕೆಯಿಟ್ಟು, ಕಹಿ ಅನುಭವದಾಚೆಗೂ ಸಾಥ್ ಕೊಟ್ಟ ನಿರ್ಮಾಪಕರ ಬಗ್ಗೆ ಅಭಿಜಿತ್ ಗೆ ಅಚ್ಚರಿ ಬೆರೆತ ಅಭಿಮಾನವಿದೆ.
ಕಡೆಗೂ ಈ ಸಿನಿಮಾ ತನ್ನ ಕಸುವಿನ ಕಾರಣದಿಂದಲೇ ಗೆಲುವಿನತ್ತ ಹೆಜ್ಜೆ ಹಾಕುತ್ತಿದೆ. ಇದರೊಂದಿಗೆ ನಿರ್ಮಾಪಕ ವಿ.ಜಿ ಮಂಜುನಾಥ್ ಅವರೂ ಖುಷಿಗೊಂಡಿದ್ದಾರೆ. ಹೆಚ್ಚೂ ಕಡಿಮೆ ಹೊಸಬರೇ ತುಂಬಿಕೊಂಡಿರುವ ಒಂದಿಡೀ ತಂಡ ಪ್ರೇಕ್ಷಕರ ಕಡೆಯಿಂದ ಸಿಗುತ್ತಿರೋ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಸಂಭ್ರಮಿಸುತ್ತಿದೆ. ಕಥೆ, ಸಂಭಾಷಣೆ, ಹಾಡುಗಳು ಸೇರಿದಂತೆ ಎಲ್ಲ ವಿಚಾರದಲ್ಲಿಯೂ ಅಪಾಯವಿದೆ ಎಚ್ಚರಿಕೆ ಚಿತ್ರಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಡುತ್ತಿದ್ದಾರೆ. ಈ ಮೂಲಕ ನವ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿಯ ಮೊದಲ ಹೆಜ್ಜೆಗೆ ಭರ್ಜರಿ ಆವೇಗ ಸಿಕ್ಕಿದೆ. ನಿರ್ದೇಶನದ ಕುಸುರಿಯನ್ನು ಸರಿಕಟ್ಟಾಗಿಯೇ ಅರ್ಥ ಮಾಡಿಕೊಂಡಿರೋ ಅಭಿಜಿತ್ ತೀರ್ಥಹಳ್ಳಿ ಇನ್ನೊಂದಷ್ಟು ಶ್ರಮ ಹಾಕಿದರೆ, ತಯಾರಿ ನಡೆಸಿದರೆ ಅವರ ಕಡೆಯಿಂದ ಮತ್ತೊಂದಷ್ಟುಉ ಬಗೆಯ ಸಿನಿಮಾಗಳನ್ನು ಖಮಡಿತವಾಗಿಯೂ ನಿರೀಕ್ಷಿಸಬಹುದು. ಹೀಗೊಂದು ನಂಬಿಕೆಯ ಭಾವ ಅಪಾಯವಿದೆ ಎಚ್ಚರಿಕೆ ಚಿತ್ರ ನೋಡಿದವರಲ್ಲೆಲ್ಲ ಮೂಡಿಕೊಂಡಿದೆ.