ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ `ಅಪಾಯವಿದೆ ಎಚ್ಚರಿಕೆ’. ಕನ್ನಡದಲ್ಲಿನ ಹಾರರ್ ಸಿನಿಮಾ ಪ್ರಿಯರಿಗೆ ಮಾತ್ರವಲ್ಲದೇ, ಎಲ್ಲ ವರ್ಗದ ಪ್ರೇಕ್ಷಕರಿಗೂ ಹಿಡಿಸುವಂಥಾ ಕಥನದೊಂದಿಗೆ ಈ ಸಿನಿಮಾ ಮೈ ಕೈ ತುಂಬಿಕೊಂಡಿದೆ. ಎಲ್ಲೆಡೆ ಹಬ್ಬಿಕೊಂಡಿರುವ ಸಕಾರಾತ್ಮಕ ವಾತಾವರಣದಲ್ಲಿ ಈ ಚಿತ್ರ ನಾಳೆ ಅಂದರೆ, ಫೆಬ್ರವರಿ ೨೮ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗಾಣಲಿದೆ. ಇದರ ಕಥೆಯನ್ನು ವರ್ಷಗಟ್ಟಲೆ ಶ್ರಮ ವಹಿಸಿ ಸಿದ್ಧಪಡಿಸಿರುವ ಅಭಿಜಿತ್ ತೀರ್ಥಹಳ್ಳಿ, ಅಷ್ಟೇ ಆಸ್ಥೆಯಿಂದ ಆಯಾ ಪಾತ್ರಕ್ಕೆ ಹೊಂದುವಂಥಾ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೊಸಬರನ್ನು ರಿಹರ್ಸಲ್ ಮೂಲಕ ಅಣಿಗೊಳಿಸಿ, ಅನುಭವಿ ಕಲಾವಿದರಿಗೆ ಪಾತ್ರದ ಬಗ್ಗೆ ಕಣ್ಣಿಗೆ ಕಟ್ಟುವಂತೆ ತಿಳಿಸುವ ಮೂಲಕ ಒಂದಿಡೀ ಸಿನಿಮಾವನ್ನು ಕಳೆಗಟ್ಟುವಂತೆ ಮಾಡಿದ ತೃಪ್ತಿ ನಿರ್ದೇಶಕರಿಗಿದೆ.
ಯಾವುದೇ ಸಿನಿಮಾದ ಕಥೆಯ ಘಟ್ಟದಲ್ಲಿಯೇ ಆಯಾ ಪಾತ್ರಗಳಿಗೆ ಇಂತಿಂಥಾ ಕಲಾವಿದರೇ ಸೂಕ್ತ ಅಂತೊಂದು ನಿರ್ಧಾರ ಗಟ್ಟಿಗೊಂಡಿರುತ್ತದೆ. ಆದರೆ, ಗೆಲ್ಲುವ ಛಲದೊಂದಿಗೆ ಯಾವುದೂ ನಿಖರವಾಗಿರದ ದಿನಗಳಲ್ಲಿ ಈ ಕಥೆ ಸಿದ್ಧಪಡಿಸಿದ್ದ ಅಭಿಜಿತ್ ಪಾಲಿಗೆ ಅಂಥಾ ಅವಕಾಶವೇನೂ ಇರಲಿಲ್ಲ. ಆದರೆ, ಈ ಕಥೆಯ ಬಹುಮುಖ್ಯ ತಿರುವಿನ ಪಾತ್ರವೊಂದಕ್ಕೆ ಮಾತ್ರ ಹರಿಣಿ ಶ್ರೀಕಾಂತ್ ಅವರೇ ಜೀವ ತುಂಬಿದರೆ ಸೂಕ್ತ ಎಂಬ ನಿರ್ಧಾರ ಅವರೊಳಗೆ ಊಟೆಯೊಡೆದಿತ್ತು. ನಂತರ ಕಥೆಯೆಲ್ಲ ರೆಡಿಯಾಗಿ, ನಿರ್ಮಾಪಕರಾದ ವಿ.ಜಿ ಮಂಜುನಾಥ್ ಅವರ ಕಡೆಯಿಂದಲೂ ಗ್ರೀನ್ ಸಿಗ್ನಲ್ ಬಂದ ನಂತರ ಅಭಿಜಿತ್ ಹರಿಣಿಯವರನ್ನು ಈ ಪಾತ್ರಕ್ಕಾಗಿ ಸಂಪರ್ಕಿಸಿ, ವಿವರಿಸಿದ್ದರಂತೆ.
ಒಟ್ಟಾರೆ ಕಥೆ ಮತ್ತು ಆ ಪಾತ್ರದ ಚಹರೆ ತಿಳಿಯುತ್ತಲೇ ಹರಿಣಿ ಶ್ರೀಕಾಂತ್ ಕೂಡಾ ಒಪ್ಪಿಗೆ ಸೂಚಿಸಿದ್ದರು. ಆ ನಂತರ ಚಿತರ್ರೀಕರಣದಲ್ಲಿ ಭಾಗಿಯಾದ ಹರಿಣಿ ಪಾಲಿಗೆ ಅಮೋಘವಾದ ಅನುಭವ ದಕ್ಕಿದೆ. ಆ ಪಾತ್ರದ ಬಗ್ಗೆ ಇದುವರೆಗೂ ಚಿತ್ರತಂಡ ಹೆಚ್ಚೇನೂ ಹೇಳಿಕೊಂಡಿಲ್ಲ. ಹರಿಣಿಯವರ ಕಡೆಯಿಂದಲೂ ರಹಸ್ಯ ಬಯಲಾಗಿಲ್ಲ. ಅದರರ್ಥವೇನೆಂದರೆ, ಆ ಪಾತ್ರದಲ್ಲಿ ಈ ಕಥೆಯ ಬಹುಮುಖ್ಯ ತಿರುವುಗಳಿದ್ದಾವೆ. ಅದರ ಕೆಲ ಚಹರೆಗಳನ್ನ ಗಮನಿಸಿದರೆ, ಈ ಕಥೆಗೆ ಮತ್ಯಾವುದೋ ಕಾಲಘಟ್ಟದ ಕೊಂಡಿಯೊಂದು ಬೆಸೆದುಕೊಂಡಿರೋದೂ ಪಕ್ಕಾ ಆಗುತ್ತದೆ. ಹರಿಣಿ ಅವರು ನಿಭಾಯಿಸಿರುವ ಪಾತ್ರ ಯಾವುದು? ಅದರ ಕಿಮ್ಮತ್ತೇನೆಂಬ ಪ್ರಶ್ನೆಗಳಿಗೆ ಈ ರಾತ್ರಿ ಕರಗಿ, ಮುಂಜಾವು ಅರಳುತ್ತಲೇ ನಿಖರ ಉತ್ತರ ಸಿಗಲಿದೆ.
ಸೀರಿಯಲ್ಲುಗಳ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿರೋ ಹರಿಣಿ ಶ್ರೀಕಾಂತ್, ಕೆಲ ರಿಯಾಲಿಟಿ ಶೋ ಮೂಲಕವೂಊ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಹಾಗಂತ ಹಿರಿತೆರೆ ಪ್ರೇಕ್ಷಕರಿಗೆ ಹರಿಣಿ ಶ್ರೀಕಾಂತ್ ಅಪರಿಚಿತರು ಅಂದುಕೊಳ್ಳುವಂತಿಲ್ಲ. ಸಿನಿಮಾಗಳಲ್ಲಿಯೂ ಥರ ಥರದ ಪಾತ್ರ ಮಾಡುವ ಮೂಲಕ ಅವರು ಗೆದ್ದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಒಂದಷ್ಟು ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದುಕೊಂಡಿದ್ದಾರೆ. ಅಪಾಯವಿದೆ ಎಚ್ಚರಿಕೆ ಚಿತ್ರದ ಪಾತ್ರ ಅವರ ವೃತ್ತಿ ಬದುಕಿನಲ್ಲಿ ಮತ್ತೊದು ಮೈಲಿಗಲ್ಲಾಗೋ ಸಾಧ್ಯತೆಗಳಿದ್ದಾವೆ. ವಿ.ಜಿ ಮಂಜುನಾಥ್ ಮತ್ತು ಪೂರ್ಣಿಮಾ ಎಂ. ಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುನಾದ್ ಗೌತಮ್ ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶನ, ಗುರುಪ್ರಸಾದ್ ಸಹ ನಿರ್ದೇಶನ, ಹರ್ಶಿತ್ ಪ್ರಭು ಸಂಕಲನ, ವಿಕಾಸ್ ಉತ್ತಯ್ಯ, ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ ಶ್ರೀಕಾಂತ್ ಮುಂತಾದವರ ತಾರಾಗಣವಿದೆ.