ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳೆಲ್ಲ ಇದೀಗ ಟಾಕ್ಸಿಕ್ ಚಿತ್ರದತ್ತ ಕಣ್ಣಿಟ್ಟು ಕಾಯುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಹೊಸಾ ವಿಚಾರಗಳಿಗಾಗಿ ಎಲ್ಲೆಡೆ ಕುತೂಹಲ ಹಬ್ಬಿಕೊಂಡಿದೆ. ಈ ಹಿಂದೆ ಕೆಜಿಎಫ್ ಆರಂಭವಾದಲ್ಲಿಂದ ಹಿಡಿದು ಇಲ್ಲೀವರೆಗೂ ಯಶ್ ಅಭಿಮಾನಿಗಳು ಒಂದು ಚಿತ್ರಕ್ಕಾಗಿ ವರ್ಷಗಟ್ಟಲೆ ಕಾದಿದ್ದಾರೆ. ಅಂಥಾದ್ದೊಂದು ಕಾಯುವಿಕೆಯೂ ಸಾರ್ಥಕವಾಗುವಂತೆ ರಾಕಿಂಗ್ ಸ್ಟಾರ್ ನೋಡಿಕೊಂಡಿದ್ದೂ ಆಗಿದೆ. ಆದರೆ, ಟಾಕ್ಸಿಕ್ ವಿಚಾರದಲ್ಲಿ ಇಂಥಾ ಕಾಯುವಿಕೆಗೆ ಬ್ರೇಕ್ ಹಾಕಿ, ಬಹು ಬೇಗನೆ ಪ್ರೇಕ್ಷಕರ ಮುಂದೆ ಬರುವ ನಿರ್ಧಾರಕ್ಕೆ ಯಶ್ ಬಂದಂತಿದ್ದರು. ಅದಕ್ಕೆ ತಕ್ಕುದಾಗಿಯೇ ಇದೀಗ ಟಾಕ್ಸಿಕ್ ಚಿತ್ರೀಕರಣ ಅವ್ಯಾಹತವಾಗಿ ನಡೆಯಲಾರಂಭಿಸಿದೆ. ಅದರ ನಡುವಲ್ಲಿಯೇ ಯಶ್ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಚಿತ್ರವಾದ ರಾಮಾಯಣದ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದಾರೆ.
ರಾಮಾಯಣ ಚಿತ್ರದ ರಾವಣನ ಪಾತ್ರಕ್ಕಾಗಿ ನಿರ್ದೇಶಕ ನಿತೇಶ್ ತಿವಾರಿ ಯಶ್ ರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಶೂಟಿಂಗ್ ಡೇಟ್ಸ್ ಸಮಸ್ಯೆ ಉಂಟಾಗಬಹುದೆಂಬ ಕಾರಣದಿಂದ ಯಶ್ ಕೊಂಚ ಹಿಂದೇಟು ಹಾಕಿದ್ದರೆಂದೂ ಹೇಳಲಾಗುತ್ತಿದೆ. ಇತ್ತ ಟಾಕ್ಸಿಕ್ ಚಿತ್ರೀಕರಣವೂ ನಡೆಯುತ್ತಿರೋದರಿಂದ ರಾವಣನಾಗಿ ಅಬ್ಬರಿಸಲು ಯಶ್ ಗೆ ಕೊಂಚ ಅಡೆತಡೆ ಉಂಟಾಗಿದ್ದು ನಿಜ. ಹಾಗಂತ ಟಾಕ್ಸಿಕ್ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡ ನಂತರ ರಾಮಾಯಣದತ್ತ ಗಮನ ಹರಿಸುವಂತೆಯೂ ಇರಲಿಲ್ಲ. ಇದೆಲ್ಲದರಿಂದ ಕಂಗೆಟ್ಟಿರುವ ಯಶ್ ಕೊಂಚ ಹೈರಾಣಾದರೂ ಎರಡೂ ಸಿನಿಮಾಗಳನ್ನು ಏಕಕಾಲದಲ್ಲಿಯೇ ಸಂಭಾಳಿಸುವ ನಿರ್ಧಾರಕ್ಕೆ ಬಂದಂತಿದೆ. ಅದರ ಫಲವಾಗಿಯೇ ಅವರು ರಾಮಾಯಣ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದಾರೆ.
ಒಂದು ಮೂಲದ ಪ್ರಕಾರ ಮುಂಬೈನ ಅಕ್ಸಾ ಬೀಚ್ ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಯುದ್ಧ ಸನ್ನಿವೇಶಗಳಲ್ಲಿ ಯಶ್ ರಾವಣನಾಗಿ ಅಬ್ಬರಿಸುತ್ತಿದ್ದಾರೆ. ನಿರ್ದೇಶಕ ತಿವಾರಿ ಯರ್ಶ ಭಾಗದ ಎಲ್ಲ ಸೀನುಗಳನ್ನು ಒಂದೇ ಹಂತದಲ್ಲಿ ಚಿಕತ್ರೀಕರಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಯಶ್ ಕೂಡಾ ಅದಕ್ಕೆ ಎಸ್ ಅಂದಿದ್ದಾರೆ. ಅದು ಒಂದು ಹಂತದಲ್ಲಿ ಮುಗಿದು ಬಿಟ್ಟರೆ ಟಾಕ್ಸಿಕ್ ನತ್ತ ಸಂಪೂರ್ಣ ಗಮನ ಹರಿಸಬಹುದೆಂಬ ನಿರ್ಧಾರ ಯಶ್ ಗಿದ್ದಂತಿದೆ. ಅಲ್ಲಿಗೆ ಟಾಕ್ಸಿಕ್ ಮತ್ತು ರಾಮಾಯಣ ಚಿತ್ರಗಳತ್ತ ಅಭಿಮಾನಿಗಳು ಥ್ರಿಲ್ ಆಗಿ ಕಾಯುವಂತಾಗಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ, ಈ ಎರಡೂ ಸಿನಿಮಾಗಳು ಒಂದರ ಬೆನ್ನಿಗೊಂದರಂತೆ ತೆರೆಗಂಡರೂ ಅಚ್ಚರಿಯೇನಿಲ್ಲ. ಅದು ಸಾಧ್ಯವಾದರೆ, ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಹಬ್ಬವಾಗೋದು ಖಾತರಿ!