ಯಾವುದೇ ಸಿನಿಮಾದ ಬಗ್ಗೆ ಅಪ್ರಜ್ಞಾಪೂರ್ವಕವಾಗಿ ಪ್ರೇಕ್ಷಕರ ನಡುವಲ್ಲೊಂದು ಚರ್ಚೆ ಹುಟ್ಟಿಕೊಳ್ಳೋದು ಆರಂಭಿಕ ಗೆಲುವಿನ ಲಕ್ಷಣ. ಈ ನಿಟ್ಟಿನಲ್ಲಿ ನೋಡ ಹೋದರೆ, ಈ ವಾರ ಬಿಡುಗಡೆಗೊಳ್ಳಲಿರುವ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ಸುತ್ತ ಧನಾತ್ಮಕ ವಾತಾವರಣ ಹಬ್ಬಿಕೊಂಡಿರುವುದು ಸ್ಪಷ್ಟವಾಗುತ್ತೆ. ಅಗ್ನಿಸಾಕ್ಷಿ, ನಾಗಿಣಿ, ಕಮಲಿ ಸೇರಿದಂತೆ ಅನೇಕ ಹಿಟ್ ಸೀರಿಯಲ್ಲುಗಳನ್ನು ನಿರ್ದೇಶನ ಮಾಡಿರುವ ಹಯವದನ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಚಿತ್ರವಿದು. ಅಂಜನ್ ನಾಗೇಂದ್ರ ನಾಯಕನಾಗಿ ನಟಿಸಿದ್ದರೆ, ವೆನ್ಯಾ ರೈ ಮತ್ತು ಸಂಜನಾ ದಾಸ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಭರತನಾಟ್ಯ ಕಲಾವಿದೆಯಾಗಿರುವ ಸಂಜನಾ ದಾಸ್ ಪಾಲಿಗೂ ಒಂದೊಳ್ಳೆ ಪಾತ್ರ ದಕ್ಕಿದೆ.
ಸಂಜನಾ ದಾಸ್ ಮೂಲತಃ ಬೆಂಗಳೂರು ಹುಡುಗಿ. ಎಳವೆಯಿಂದಲೇ ಭರತನಾಟ್ಯದತ್ತ ಆಕರ್ಷಿತರಾಗಿದ್ದ ಆಕೆಯ ಪಾಲಿಗೆ ಬರಬರುತ್ತಾ ನಟನೆಯ ಸೆಳೆತ ಮೂಡಿಕೊಂಡಿತ್ತು. ಈ ನಿಟ್ಟಿನಲ್ಲಿ ಮಒಂದಷ್ಟು ಅವಕಾಶ ಪಡೆದುಕೊಂಡಿದ್ದ ಸಂಜನಾ ವರ್ಷದ ಹಿಂದೆ ಬಿಡುಗಡೆಗೊಂಡಿದ್ದ ಕೇಟಿಎಂ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ಸಿನಿಮಾದ ಟೀಸರ್ ನೋಡಿದ ನಿರ್ದೇಶಕ ಹಯವದನ ಸಂಜನಾರನ್ನು ಸದರಿ ಪಾತ್ರಕ್ಕೆ ನಿಕ್ಕಿಯಾಗಿಸಿದ್ದರಂತೆ. ಇಂಥಾದ್ದೊಂದು ಪಾತ್ರ ಅಚಾನಕ್ಕಾಗಿ ಒಲಿಯುತ್ತಲೇ ಸಂಜನಾ ಸಹಜವಾಗಿಯೇ ಥ್ರಿಲ್ ಆಗಿದ್ದರು. ನಂತರ ಚಿತ್ರೀಕರಣದುದ್ದಕ್ಕೂ ಆ ಪಾತ್ರದ ಆವೇಗಕ್ಕೆ ತಕ್ಕಂಥಾ ಅನುಭೂತಿ ಪಡೆಯುತ್ತಾ, ಹೊಸಾ ಅನುಭವಗಳಿಗೆ ತೆರೆದುಕೊಳ್ಳುತ್ತಾ ಸಾಗಿದ ಸಂಜನಾ ಪಾಲಿಗೆ ಸದರಿ ಸಿನಿಮಾ ತನಗೊಂದು ಬ್ರೇಕ್ ನೀಡುವ ಗಾಢ ಭರವಸೆ ಇದೆ.
ಸಂಜನಾ ದಾಸ್ ಇಲ್ಲಿ ತಮಿಳು ಹುಡುಗಿಯಾಗಿ ನಟಿಸಿದ್ದಾರೆ. ಅವರ ಭಾಗದ ಚಿತ್ರೀಕರಣ ಮನಾಲಿಯ ಸುಂದರ ವಾತಾವರಣದಲ್ಲಿ ನಡೆದಿದೆ. ಸಾಹಸೀ ಪ್ರವೃತ್ತಿ ಹೊಂದಿರುವ ಆ ಪಾತ್ರಕ್ಕೆ ತೃಪ್ತಿದಾಯಕವಾಗಿ ಜೀವ ತುಂಬಿದ ಖುಷಿ ಸಂಜನಾಗಿದೆ. ಟ್ರೈಲರ್ ನಲ್ಲಿಯೂ ಈಕೆಯ ಪಾತ್ರ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಒಂದಷ್ಟು ಕಿರುಚಿತ್ರಗಳಲ್ಲಿ ನಟಿಸುತ್ತಾ ಬಂದಿದ್ದ ಸಂಜನಾ, ಮತ್ತೊಂದೆರಡು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಸದ್ದಯ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದತ್ತ ಅವರ ಗಮನ ಕೇಂದ್ರೀಕರಿಸಿಕೊಂಡಿದೆ. ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೃಜನ್ ರಾಘವೇಂದ್ರ, ಚೇತನ್, ಹಯವದನ ಚಿತ್ರಕಥೆ, ವೇಣು ಹಸ್ರಾಳಿ ಸಂಭಾಷಣೆ, ನಟರಾಜು ಮದ್ದಾಲ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಶಿವಪ್ರಸಾದ್ ಸಂಗೀತ ನಿರ್ದೇಶನವಿರುವ ಈ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.