ಈ ವರ್ಷದ ಆರಂಭದಲ್ಲಿಯೇ ಸಿನಿಮಾ ಪ್ರೇಮಿಗಳ ಪಾಲಿಗೆ ಸುಗ್ಗಿಯಾಗಬಹುದಾದ ವಾತಾವರಣವೊಂದು ಕಣ್ಣಡ ಚಿತ್ರರಂಗವನ್ನು ವ್ಯಾಪಿಸಿಕೊಂಡಿದೆ. ಯಾಕೆಂದರೆ, ಒಂದಕ್ಕೊಂದು ಭಿನ್ನವಾದ, ಹೊಸತನ ಹೊದ್ದುಕೊಂಡಿರುವಂಥಾ ಒಂದಷ್ಟು ಸಿನಿಮಾಗಳು ಬಿಡುಗಡೆಯ ಸರತಿಯಲ್ಲಿವೆ. ಆ ಯಾದಿಯಲ್ಲಿ ಮುಂಚೂಣಿಯಲ್ಲಿರುವ ಹಯವದನ ನಿರ್ದೇಶನದ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರ ಈ ವಾರ ಅಂದರೆ, ಫೆಬ್ರವರಿ ೨೧ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಈ ಮೂಲಕ ಅಂಜನ್ ನಾಗೇಂದ್ರ ನಾನಾ ಶೇಡುಗಳಿರುವ ಗಟ್ಟಿ ಪಾತ್ರವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಅಣಿಗೊಂಡಿದ್ದಾರೆ. ಈ ಪಾತ್ರದ ಚಹರೆ, ಅದು ತನಗೊಲಿದ ಬಗೆ ಹಾಗೂ ಒಂದಿಡೀ ಸಿನಿಮಾ ತನ್ನೊಳಗೆ ಮೂಡಿಸಿರುವ ಭರವಸೆಯ ಬಗ್ಗೆ ಖುದ್ದು ಅಂಜನ್ ನಾಗೇಂದ್ರ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಈ ಹಿಂದೆ ಕಂಬ್ಳಿ ಹುಳ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟಿದ್ದವರು ಅಂಜನ್. ಮೊದಲ ಹೆಜ್ಜೆಯಲ್ಲಿಯೇ ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಸಿನಿಮಾದ ಭೂಮಿಕೆಯಲ್ಲಿಯೇ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ನಾಯಕನಾಗೋ ಅವಕಾಶ ಅವರ ಪಾಲಿಗೆ ಒಲಿದದ್ದು ನಿಜಕ್ಕೂ ಅಚ್ಚರಿಯ ಸಂಗತಿ. ಎಳವೆಯಿಂದಲೇ ರಂಗಭೂಮಿಯ ನಂಟು ಹೊಂದಿದ್ದ ಅಂಜನ್ ಪಾಲಿಗೆ ನಟನಾಗಿ ಯಾವ ದಿಕ್ಕಿನತ್ತ ಸಾಗಬೇಕು, ಯಾವ ಬಗೆಯ ಕಥೆಯನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ಸ್ಪಷ್ಟವಾದ ಅಂದಾಜಿದೆ. ಕಂಬ್ಳಿ ಹುಳ ಚಿತ್ರದ ನಂತರ ಭಿನ್ನವಾದ ಪಾತ್ರದಲ್ಲಿ ನಟಿಸಬೇಕೆಂಬುದು ಅಂಜನ್ ಆಸೆಯಾಗಿತ್ತು. ಅದು ಕಂಬ್ಳಿಹುಳ ಚಿತ್ರ ಬಿಡುಗಡೆಗೆ ಮುನ್ನವೇ ಸಾಕಾರಗೊಂಡು ಸ್ವತಃ ಅಂಜನ್ ರನ್ನೇ ಅಚ್ಚರಿಗೀಡು ಮಾಡಿತ್ತು.
ಇಂಥಾದ್ದೊಂದು ಮಿರ್ಯಾಕಲ್ ಸಂಭವಿಸಿದ್ದು ಕಂಬ್ಳಿಹುಳ ಚಿತ್ರದ ಪ್ರೀಮಿಯರ್ ಶೋ ಭೂಮಿಕೆಯಲ್ಲಿ. ಈ ಪ್ರೀಮಿಯರ್ ಶೋಗೆ ನಿರ್ದೇಶಕ ಹಯವದನ ಕೂಡಾ ಆಗಮಿಸಿದ್ದರು. ಸಿನಿಮಾ ನೋಡುತ್ತಲೇ ಹಯವದನ ಅದಾಗಲೇ ರೆಡಿ ಮಾಡಿಟ್ಟುಕೊಂಡಿದ್ದ `ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರಕ್ಕೆ ನಾಯಕನಾಗಲು ಅಂಜನ್ ನಾಗೇಂದ್ರ ಸೂಕ್ತ ಎಂಬಂಥಾ ತೀರ್ಮಾನಕ್ಕೆ ಬಂದಂತಿತ್ತು. ಈ ಕಾರಣದಿಂದಲೇ ಪ್ರೀಮಿಯರ್ ಶೋ ಮುಗಿಯುತ್ತಲೇ ಇಂಥಾದ್ದೊಂದು ಪ್ರಸ್ತಾವನೆಯನ್ನು ಅಂಜನ್ ಮುಂದಿಟ್ಟಿದ್ದರಂತೆ. ನಿಂತ ನಿಲುವಿನಲ್ಲಿಯೇ ಹಯವದನ ಒಂದೆಳೆ ಕಥೆ ಹೇಳಿದಾಕ್ಷಣವೇ ಅಂಜನ್ ನಾಗೇಂದ್ರ ಥ್ರಿಲ್ ಆಗಿ ಒಪ್ಪಿಗೆ ಸೂಚಿಸಿದ್ದರಂತೆ. ಹಾಗೆ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾ ಯಾನಕ್ಕೊಂದು ವಿದ್ಯುಕ್ತ ಚಾಲನೆ ಸಿಕ್ಕಂತಾಗಿತ್ತು.
ಆ ನಂತರ ಅತ್ಯಂತ ವೇಗವಾಗಿ ರಿಹರ್ಸಲ್ಲು ನಡೆದಿತ್ತು. ಅದರಲ್ಲಿ ಅಂಜನ್ ನಾಗೇಂದ್ರ ಅತ್ಯಂತ ಉತ್ಸಾಹದಿಂದಲೇ ಭಾಗಿಯಾಗಿದ್ದರು. ಅಷ್ಟೆಲ್ಲ ಆದ ನಂತರ ಅತ್ಯಂತ ವ್ಯವಸ್ಥಿತವಾಗಿ ಈ ಚಿತ್ರದ ಚಿತ್ರೀಕರಣ ಶುರುವಾಗಿತ್ತು. ಇಲ್ಲಿ ಬೆಂಗಳೂರಿನಿಂದ ಹಿಮಾಲಯದವರೆಗೂ ಹಬ್ಬಿಕೊಂಡಿರೋ ಕಥೆ ಇರೋದರಿಂದ, ಚಿತ್ರೀಕರಣದ ಪ್ರತೀ ಘಟ್ಟದಲ್ಲೂ ಬೇರೆಯದ್ದೇ ಜಗತ್ತೊಂದು ಕಣ್ಮುಂದೆ ಪ್ರತ್ಯಕ್ಷವಾದಂಥಾ ಅನುಭೂತಿ ದಕ್ಕಲಾರಂಭಿಸಿತ್ತು. ಬೇರೆ ಬೇರೆ ಭೂಬಾಗ, ಭಿನ್ನವಾದ ಸಂಸ್ಕೃತಿಗಳನ್ನು ಮನತುಂಬಿಕೊಳ್ಳುತ್ತಾ, ಒಂದಷ್ಟು ರಿಸ್ಕು ತೆಗೆದುಕೊಂಡು ಚಿತ್ರೀಕರಣದಲ್ಲಿ ಭಾಗಿಯಾದ ಥ್ರಿಲ್ಲಿಂಗ್ ಅನುಭವವನ್ನು ಅಂಜನ್ ನಾಗೇಂದ್ರ ತಮ್ಮದಾಗಿಸಿಕೊಂಡಿದ್ದಾರೆ.
ಹೀಗೆ ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದ ನಾಯಕನಾಗಿ ನಟಿಸಿರುವ ಅಂಜನ್ ನಾಗೇಂದ್ರ ಮೂಲತಃ ಹಾಸನದವರು. ಇವರ ತಂದೆ ನಾರಾಯಣ ಆ ಕಾಲಕ್ಕೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವರು. ಈ ಕಾರಣದಿಂದ ಅಂಜನ್ ಪಾಲಿಗೆ ಪುಟ್ಟ ವಯಸ್ಸಿನಲ್ಲಿಯೇ ರಂಗಭೂಮಿಯ ವಾತಾವರಣದಲ್ಲಿ ಬೆರೆಯುವ ಅವಕಾಶ ಸಿಕ್ಕಿತ್ತು. ಆ ಹಂತದಿಂದಲೇ ನಟಿಸುತ್ತಾ ಬಂದಿದ್ದ ಅವರ ಪಾಲಿಗೆ ಸಿನಿಮಾ ನಟನಾಗಬೇಕೆಂಬ ಕನಸು ಕಾಲೇಜು ದಿನಗಳವರೆಗೂ ಇರಲೇ ಇಲ್ಲವಂತೆ. ಕಡೆಗೂ ಹಾಸನದಲ್ಲಿಯೇ ಇಂಜಿನಿಯರಿಂಗ್ ಮುಗಿಸಿದ್ದ ಅಂಜನ್ ನಾಗೇಂದ್ರ ಒಂದೆರಡು ವರ್ಷ ಸಿನಿಮಾ ರಂಗದಲ್ಲಿ ನಟನಾಗಲು ಪ್ರಯತ್ನಿಸುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಅದೇನೇ ಸರ್ಕಸ್ಸು ನಡೆಸಿದರೂ ಎರಡು ವರ್ಷಗಳಲ್ಲಿ ಯಾವ ಬೆಳವಣಿಗೆಗಳೂ ಸಾಧ್ಯವಾಗಿರಲಿಲ್ಲ.
ಆದರೆ, ಎರಡು ವರ್ಷಗಳ ನಂತರ ತಾನೇ ತಾನಾಗಿ ಕಂಬ್ಳಿಹುಳ ಚಿತ್ರದ ನಾಯಕನಾಗುವ ಅವಕಾಶ ಒಲಿದು ಬಂದಿತ್ತು. ಆ ಬಳಿಕ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾ ಅವಕಾಶವೂ ಹುಡುಕಿ ಬಂದಿತ್ತು. ಈಗ ಮತ್ತೊಂದಷ್ಟು ಅವಕಾಶಗಳೂ ಅಂಜನ್ ಮುಂದಿವೆ. ನಿಖರವಾಗಿ ಹೇಳಬೇಕೆಂದರೆ ಸಿನಿಮಾ ಕಲೆಯೆಂಬುದು ಅವರನ್ನು ಬರಸೆಳೆದು ಅಪ್ಪಿಕೊಂಡಿದೆ. ಎಲ್ಲೋ ಜೋಗಪ್ಪ ನಿನ್ನರಮನೆ ಚಿತ್ರದ ಮೂಲಕ ತನ್ನ ಮುಂದಿನ ಹಾದಿ ಮತ್ತಷ್ಟು ಸುಗಮವಾಗಲಿದೆ ಎಂಬ ಗಾಢ ನಂಬಿಕೆ ಅವರಲ್ಲಿದೆ. ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸೃಜನ್ ರಾಘವೇಂದ್ರ, ಚೇತನ್, ಹಯವದನ ಚಿತ್ರಕಥೆ, ವೇಣು ಹಸ್ರಾಳಿ ಸಂಭಾಷಣೆ, ನಟರಾಜು ಮದ್ದಾಲ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಶಿವಪ್ರಸಾದ್ ಸಂಗೀತ ನಿರ್ದೇಶನವಿರುವ ಈ ಚಿತ್ರ ತೆರೆಗಾಣಲು ದಿನಗಣನೆ ಶುರುವಾಗಿದೆ.