ಹ್ಯಾಟ್ರಿಕ್ ಹೀರೋ (shivarajkumar) ಶಿವರಾಜ್ ಕುಮಾರ್ ಇದೀಗ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೇನು ಮತ್ತದೇ ಎನರ್ಜಿಯ ಪ್ರಭೆಯಲ್ಲಿ ಅವರು ಅಖಾಡಕ್ಕಿಳಿಯೋ ನಿರೀಕ್ಷೆಗಳಿದ್ದಾವೆ. ಇದೇ ಹೊತ್ತಿನಲ್ಲಿ ಶಿವಣ್ಣನ ಚಿತ್ರ ತೆಲುಗು ಓಟಿಟಿಯಲ್ಲಿ ಅಬ್ಬರಿಸಲು ಅಣಿಗೊಂಡಿದೆ. ಶಿವರಾಜ್ ಕುಮಾರ್ ನಟಿಸಿದ್ದ (bhairathi ranagal movie) ಭೈರತಿ ರಣಗಲ್ ಚಿತ್ರ ಕಳೆದ ವರ್ಷದ ಕಡೇಯ ಹಂತದಲ್ಲಿ ಬಿಡುಗಡೆಗೊಂಡಿತ್ತು. (director narthan) ನರ್ತನ್ ಥರದ ಪ್ರತಿಭಾನ್ವಿತ ನಿರ್ದೇಶಕನ ಸಾರಥ್ಯ ಇದ್ದದ್ದರಿಂದಾಗಿ ಇದರ ಬಗ್ಗೆ ಗಾಢ ಕುತೂಹಲವೊಂದು ಮೂಡಿಕೊಂಡಿತ್ತು. ಅದೆಲ್ಲವನ್ನೂ ಸರಿಗಟ್ಟುವಂಥಾ ಗಟ್ಟಿತನ ಹೊಂದಿದ್ದ ಭೈರತಿಯನ್ನು ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿಬಿಟ್ಟಿದ್ದರು. ಅದರ ಫಲವಾಗಿಯೇ ಸದರಿ ಸಿನಿಮಾ ಕಳೆದ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿತ್ತು.
ಇದೀಗ ಭೈರತಿ ರಣಗಲ್ ತೆಲುಗು ಓಟಿಟಿಗೆ ಎಂಟ್ರಿ ಕೊಡುತ್ತಿರೋದರ ಬಗೆಗಿನ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ. ಆರಂಭದಲ್ಲಿ ಕನ್ನಡದಲ್ಲಿ ಮಾತ್ರವೇ ಬಿಡುಗಡೆಗೊಂಡಿದ್ದ ಭೈರತಿ ರಣಗಲ್, ಇದೀಗ ತೆಲುಗಿಗೆ ಡಬ್ ಆಗಿದೆ. ಆಹಾ ಎಂಬ ತೆಲುಗು ಓಟಿಟಿ ಫ್ಲಾಟ್ ಫಾರ್ಮಿನಲ್ಲಿ ಇದೇ ಫೆಬ್ರವರಿ ಹದಿಮೂರರಂದು ಬಿಡುಗಡೆಗೊಳ್ಳಲಿದೆ. ಈ ವಿಚಾರ ತೆಲುಗು ನಾಡಿನಲ್ಲಿರುವ ಶಿವರಾಜ್ ಕುಮಾರ್ ಅಭಿಮಾನಿಗಳನ್ನು ಖುಷಿಗೊಳಿಸಿದೆ. ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿರುವ ಭೈರತಿ ರಣಗಲ್ ತೆಲುಗು ಪ್ರೇಕ್ಷಕರ ಬೇಡಿಕೆಯ ಮೇರೆಗೆ ಆ ಭಾಷೆಗೆ ಡಬ್ ಆಗಿದೆ. ಮಾಸ್ ಸೇರಿದಂತೆ ನಾನಾ ಅಂಶಗಳನ್ನು ಅಡಕವಾಗಿಸಿಕೊಂಡಿರುವ ಭೈರತಿ ರಣಗಲ್ ತೆಲುಗು ಓಟಿಟಿಯಲ್ಲಿಯೂ ಅಬ್ಬರಿಸೋ ಲಕ್ಷಣಗಳು ಢಾಳಾಗಿಯೇ ಗೋಚರಿಸುತ್ತಿವೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅರವತ್ತರಾಚೆಗೂ ಹದಿನೆಂಟರ ಹುಮ್ಮಸ್ಸು ಹೊಂದಿರುವ ಅಪರೂಪದ ನಟ. ಅವರು ಈ ವಯಸ್ಸಿನಲ್ಲಿಯೂ ಆಕ್ಟೀವ್ ಆಗಿರುವ ಪರಿ ಕಂಡು ಯುವ ನಟರೇ ಅವಾಕ್ಕಾಗುತ್ತಾರೆ. ಅದೆಷ್ಟೋ ನಟ ನಟಿಯರ ಪಾಲಿಗೂ ಸ್ಫೂರ್ತಿಯಾಗಿರುವ ಶಿವಣ್ಣ ಇದೀಗ ಶಸ್ತ್ರ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದಾರೆ. ಕ್ಯಾನ್ಸರ್ ನಂಥಾ ಮಾರಕ ಕಾಯಿಲೆಯನ್ನು ಜಯಿಸಿ ಬಂದಿರುವ ಅವರ ಪಾಲಿಗಿದು ಮರುಉ ಹುಟ್ಟೆಂದರೂ ಅತಿಶಯವೇನಲ್ಲ. ಈ ಕ್ಷಣಕ್ಕೂ ಅವರ ಕೈಲಿ ದಂಡಿ ದಂಡಿ ಚಿತ್ರಗಳಿದ್ದಾವೆ. ಈಗಾಗಲೇ ಒಂದೆರಡು ಸಿನಿಮಾಗಳು ಮುಕ್ತಾಯ ಘಟ್ಟದಲ್ಲಿವೆ. ಇನ್ನೇನು ತಿಂಗಳೊಪ್ಪತ್ತಿನಲ್ಲಿಯೇ ಮೈಗಂಟಿದ ಕಾಯಿಲೆಯ ಕಿಸುರನ್ನೆಲ್ಲ ಕೊಡವಿಕೊಂಡು ಮತ್ತೆ ಫಾರ್ಮಿಗೆ ಮರಳಲಿದ್ದಾರೆ. ಇದೇ ಹೊತ್ತಿನಲ್ಲಿ ಅವರು ನಟಿಸಿರುವ ಭೈರತಿ ರಣಗಲ್ ತೆಲುಗು ನಾಡಿಗೆ ಲಗ್ಗೆಯಿಡುತ್ತಿರೋ ಸುದ್ದಿ ಅಭಿಮಾನಿಗಳನ್ನು ಖುಷಿಗೊಳಿಸಿರೋದಂತೂ ಸತ್ಯ!