ಪ್ರಯಾಸ ಪಟ್ಟು ಸಿನಿಮಾ ಮಾಡಿ ಪ್ರೇಕ್ಷಕರು ಸಿನಿಮಾ ಮಂದಿರದತ್ತ ಸುಳಿಯದೆ ಅದೆಷ್ಟೋ ಸಿನಿಮಾಗಳು ಉಸಿರು ಚೆಲ್ಲಿದ ಉದಾಹರಣೆಗಳಿದ್ದಾವೆ. ಈಗಿನ ವಾತಾವರಣದಲ್ಲಿ ಕನ್ನಡ ಮಾತ್ರವಲ್ಲದೇ ಪ್ರತೀ ಚಿತ್ರರಂಗಗಳಲ್ಲಿಯೂ ಸಿನಿಮಾವೊಂದನ್ನು ನೆಲೆಗಾಣಿಸಲು ನಾನಾ ಸವಾಲುಗಳಿದ್ದಾವೆ. ಒಂದು ವೇಳೆ ಎಲ್ಲವನ್ನೂ ಮೀರಿ ಚಿತ್ರವೊಂದು ಯಶಸ್ವೀ ಪ್ರದರ್ಶನ ಕಾಣುವ ಹೊತ್ತಿಗೆಲ್ಲ ಮಹಾನ್ ಗಂಡಾಂತರವೊಂದು ಥಿಯೇಟರಿನೊಳಗೇ ಮುಗುಮ್ಮಾಗಿ ಹೊಂಚಿ ಕೂತಿರುತ್ತೆ. ಅದು ಬಹುತೇಕ ಎಲ್ಲ ಭಾಷೆಗಳ ಚಿತ್ರಗಳನ್ನೂ ಕಾಡಿಸಿ ಕಂಗಾಲು ಮೂಡುತ್ತಿರೋ ಪೈರಸಿ ಪಿಡುಗು. ಈ ದಂಧೆಯೀಗ ತೆಲುಗು ಚಿತ್ರರಂಗವನ್ನು ಹಿಂಡಿ ಹಾಕುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆ ಕಂಡು, ಒಂದಷ್ಟು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ನಾಗಚೈತನ್ಯನ ಥಂಡೇಲ್ ಚಿತ್ರಕ್ಕೂ ಪೈರಸಿ ಪಿಡುಗು ಕೊಡಬಾರದ ರೀತಿಯಲ್ಲಿ ಕಾಟ ಕೊಟ್ಟಿದೆ.
ಸಾಮಾನ್ಯವಾಗಿ, ಹೆಚ್ಚಿನ ಸಿನಿಮಾ ನಿರ್ಮಾತೃಗಳು ಈ ಪೈರಸಿ ಬಾಧೆಯ ವಿರುದ್ಧ ಕಾಲೂರಿ ನಿಂತು ಸೆಳೆಸಾಡುವ ಕಸುವುಉ ಹೊಂದಿರುವುದಿಲ್ಲ. ಅಷ್ಟಕ್ಕೂ ಈಗ ಪೈರಸಿ ಎಂಬುದು ಕುಂತಲ್ಲೇ ಕೋಟಿ ಬಾಚುವ ದಂಧೆಯಾಗಿ ಬಿಟ್ಟಿದೆ. ಅದೊಂದು ರೀತಿಯಲ್ಲಿ ಯಾರದ್ದೇ ಬೆವರಿನಲ್ಲಿ ಫಾಯಿದೆ ಗಿಟ್ಟಿಸಿಕೊಳ್ಳುವ ಹಡಬೆ ಕಸುಬು. ಇಂಥಾ ದಂಥೆಯ ವಿರುದ್ಧ ಇದೀಗ ಥಂಡೇಲ್ ಚಿತ್ರದ ನಿರ್ಮಾಪಕರು ಸಮರ ಸಾರಿದ್ದಾರೆ. ಥಂಡೇಲ್ ಬಿಡುಗಡೆಯಾದ ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಆದರೆ ಪೈರಸಿ ಖದೀಮರು ಇದರ ಹೆಚ್‌ಡಿ ಆವೃತ್ತಿಯನ್ನ ಪೈರಸಿ ಮಾಡಿದ್ದರು. ಒಂದಷ್ಟು ಒಳ್ಳೆ ಅಭಿಪ್ರಾಯ ಮೂಡಿಕೊಂಡು ಸಂಜೆಯಾಗೋದರೊಳಗೆ ಥಂಡೇಲ್ ಚಿತ್ರದ ಪೈರೇಟೆಡ್ ವರ್ಷನ್ನು ಸಾಮಾಜಿಕ ಜಾಲತಾಣದಲ್ಲಿ ಇಟ್ಟಾಡಲಾರಂಭಿಸಿತ್ತು.
ಯಾವ ಸಿನಿಮಾ ನಿರ್ಮಾಪಕರು, ಚಿತ್ರತಂಡದವರ ಪಾಲಿಗಾದರೂ ಇದೊಂದು ಆಘಾತಕರ ಸಂಗತಿ. ಆರಂಭದಲ್ಲಿ ಇದರಿಂದ ತತ್ತರಿಸಿ ಹೋಗಿದ್ದ ನಿರ್ಮಾಪಕರು ಕಡೆಗೂ ಪತ್ರಿಕಾ ಗೋಷ್ಠಿಯ ಮೂಲಕ ಪೈರಸಿ ದಂಧೆಕೋರರ ವಿರುದ್ಧ ಸಿಡಿದೆದ್ದಿದ್ದಾರೆ. ಈ ದಂಧೆಯನ್ನು ಬೇರು ಸಮೇತ ಕಿತ್ತೆಸೆಯುವ ನಿರ್ಧಾರದೊಂದಿಗೆ ನಿರ್ಣಾಯಕವಾಗಿಯೇ ಸಮರ ಸಾರಿದ್ದಾರೆ. ಈ ಸಂದರ್ಭದಲ್ಲಿ ಮಾತಾಡಿದ ನಿರ್ಮಾಪಕ ಅಲ್ಲು ಅರವಿಂದ್, ಸಿನಿಮಾ ಪೈರಸಿ ವರ್ಷನನ್ನು ಸಾಮಾಜಿಕ ಜಾಲತಾಣದ ನಾನಾ ಆಪ್ ಗಳಲ್ಲಿ ಅಡ್ಡಾಡಿಸಿದ ಅಡ್ಮಿನ್‌ಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ. ಇಂಥಾ ಪೈರೇಟೆಡ್ ಸಿನಿಮಾಗಳು ಯಾವ ಮೂಲದಿಂದ ಬರುತ್ತವೆ, ಅವು ಯಾವ ಜಾಲದಿಂದ ಹಂಚಿಕೆಯಾಗುತ್ತವೆ, ಇದರ ಹಿಂದೆ ಯಾರ್‍ಯಾರಿದ್ದಾರೆಂದು ಪತ್ತೆ ಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳುವ ಸೂಚನೆಯನ್ನೂ ಕೊಟ್ಟಿದ್ದಾರೆ.
ಮತ್ತೋರ್ವ ನಿರ್ಮಾಪಕ ಬನ್ನಿ ವಾಸ್ ಕೂಡಾ ಪೈರಸಿ ದಂಧೆಯನ್ನು ಖಂಡಿಸಿದ್ದಾರೆ. ಥಂಡೇಲ್ ಚಿತ್ರದ ಪೈರಸಿ ಆವೃತ್ತಿಯನ್ನು ಅಪಿಆರ್‌ಟಿಸಿ ಬಸ್ಸಿನಲ್ಲಿ ಭಹಿರಂಗವಾಗಿ ಪ್ರದರ್ಶಿಸಿದ ಘಟನೆಯನ್ನೂ ಕೂಡಾ ಅವರು ಖಂಡಿಸಿದ್ದಾರೆ. ಇಂಥಾ ಪೈರೇಟೆಡ್ ಸಿನಿಮಾಗಳನ್ನು ಸೆರೆ ಹಿಡಿದು ಹಂಚುವವರು ಮಾತ್ರವಲ್ಲ, ಡೌನ್ ಲೋಡ್ ಮಾಡಿಕೊಂಡು ನೋಡುವವರ ಮೇಲೂ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಥಂಡೇಲ್ ನಿರ್ಮಾಪಕರು ರವಾನಿಸಿದ್ದಾರೆ. ಈ ನಿಲುವಿನ ಬಗ್ಗೆ ಬೆಂಬಲದ ಮಾತುಗಳೇ ಕೇಳಿ ಬರುತ್ತಿವೆ. ಈ ಪೈರಸಿ ದಂಧೆಯ ಜಾಲದ ವಿರುದ್ಧ ಪ್ರತೀ ಭಾಷೆಗಳ ಚಿತ್ರರಂಗದ ಮಂದಿಯೂ ಇಂಥಾದ್ದೇ ನಿಲುವು ತಳೆಯದಿದ್ದರೆ ಖಂಡಿತಾ ಚಿತ್ರರಂಗಕ್ಕೆ ಉಳಿಗಾಲವಿರುವುದಿಲ್ಲ!