ಕನ್ನಡ ಚಿತ್ರರಂಗದಲ್ಲೀಗ ಬೇರೆಯದ್ದೇ ಧಾಟಿಯ ಟ್ರೆಂಡ್ ಒಂದು ಚಾಲ್ತಿಯಲ್ಲಿದೆ. ಅದೆಂಥಾ ಮಾಸ್ ಕಥನಗಳು ಬಂದರೂ, ಯಾವ್ಯಾವ ರೀತಿಯ ಥರದ ಪ್ರಯೋಗಗಳು ನಡೆದರೂ ತಾಜಾ ಪ್ರೇಮದ ಛಾಯೆ (love story) ಹೊಂದಿರೋ ಸಿನಿಮಾಗಳ ಧ್ಯಾನ ಎಂದೂ ನಿಲ್ಲುವುದಿಲ್ಲ. ಕನ್ನಡದ ಮಟ್ಟಿಗೆ ಹೇಳೋದಾದರೆ, ಇಲ್ಲಿ ಆ ಬಗೆಯ ಸಿನಿಮಾಗಳು ದೊಡ್ಡ ಮಟ್ಟದಲ್ಲಿಯೇ ಗೆಲುವು ಕಂಡಿವೆ. ಆ ಥರದ ಧ್ಯಾನದ ಮುಂದೆ ಏಕಾಏಕಿ ಪ್ರತ್ಯಕ್ಷಗೊಂಡಂತೆ (vishnupriya movie) ವಿಷ್ಣುಪ್ರಿಯ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಜಿಟಿ ಮಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ (kiccha sudeepa) ಕಿಚ್ಚ ಸುದೀಪ್ ಈ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದ್ದಾರೆ. (shreyas manju) ಶ್ರೇಯಸ್ ಮಂಜುಗೆ ಬೆನ್ತಟ್ಟಿ ಪ್ರೋತ್ಸಾಹಿಸುತ್ತಲೇ ವಿಷ್ಣುಪ್ರಿಯಾ ಸಿನಿಮಾದ ಗೆಲುವಿಗಾಗಿ ಹಾರೈಸಿದ್ದಾರೆ. ಈ ಮೂಲಕ ಮಹತ್ವದ ಹಂತದತ್ತ ಹೊರಳಿಕೊಂಡಿರುವ ಈ ಸಿನಿಮಾ ಫೆಬ್ರವರಿ ೨೧ರಂದು ರಾಜ್ಯಾದ್ಯಂತ ತೆರೆಗಾಣಲಿದೆ.
ವಿ.ಕೆ ಪ್ರಕಾಶ್ (director v.k prakash) ನಿರ್ದೇಶನದ ಈ ಸಿನಿಮಾ ಈಗಾಗಲೇ ಗಾಢ ಪ್ರೇಮದ ಘಮಲು ಮೆತ್ತಿಕೊಂಡಂತಿದ್ದ ಹಾಡುಗಳ ಮೂಲಕ ಪ್ರೇಕ್ಷಕರನ್ನು ತಾಕಿದೆ. ಈ ಹಾಡುಗಳಲ್ಲಿದ್ದ ತಾಜಾತನದ ಛಾಯೆಯನ್ನು ಆವಾಹಿಸಿಕೊಂಡಂತಿರೋ ಸದರಿ ಟ್ರೈಲರ್ ಕೂಡಾ ಒಂದಷ್ಟು ನಿರೀಕ್ಷೆಗಳನ್ನು ಮೂಡಿಸುವಂತೆ ಮೂಡಿ ಬಂದಿದೆ. ಬಹುಶಃ ಬರೀ ಪ್ರೀತಿ, ಪ್ರೇಮಗಳ ಸುಳಿವಷ್ಟೇ ಸಿಕ್ಕಿದ್ದರೆ ಪ್ರತಿಕ್ರಿಯೆಗಳು ಬೇರೆಯದ್ದಿರುತ್ತಿತ್ತೇನೋ. ಆದರೆ, ನಿರ್ದೇಶಕರಿಲ್ಲಿ ಪ್ರೇಮದ ಚುಂಗು ಹಿಡಿದೆ ಹಲವಾರು ಕೊಂಬೆ ಕೋವೆಗಳಿರುವ ಸಂಕೀರ್ಣ ಕಥೆಯೊಂದಕ್ಕೆ ದೃಷ್ಯ ರೂಪ ಕೊಟ್ಟಂತಿದೆ. ಈ ಕಾರಣದಿಂದಲೇ ಸದರಿ ಟ್ರೈಲರ್ ಸಿನಿಮಾಸಕ್ತರ ನಡುವೆ ಒಂದಷ್ಟು ಚರ್ಚೆ ಹುಟ್ಟು ಹಾಕಿ, ನಿರೀಕ್ಷೆ ಮೂಡಿಸಿರೋದಂತೂ ನಿಜ!
ಈ ಹಿಂದೆ ಪಡ್ಡೆಹುಲಿ ಚಿತ್ರದ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದವರು ಶ್ರೇಯಸ್ ಮಂಜು. ಅವರಿಲ್ಲಿ ಪ್ರೇಮಿಯಾಗಿ ಮಾತ್ರವಲ್ಲದೇ ಮಾಸ್ ಲುಕ್ಕಿನಲ್ಲಿಯೂ ಮಿಂಚಿರುವ ಲಕ್ಷಣಗಳು ಢಾಳಾಗಿಯೇ ಗೋಚರಿಸಿದೆ. ಶ್ರೇಯಸ್ ಪಾತ್ರದ ಒಂದಷ್ಟು ಚಹರೆಗಳೂ ಟ್ರೈಲರ್ನಲ್ಲಿ ಮಿಂಚಿದೆ. ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಮತ್ತು ಶ್ರೇಯಸ್ ಮಂಜು ಜೋಡಿ ಮೋಡಿ ಮಾಡುತ್ತಾ ಅನ್ನೋ ಪ್ರಶ್ನೆ ತೀವ್ರಗೊಂಡಿದೆ. ವಾರದೊಪ್ಪತ್ತಿನಲ್ಲಿಯೇ ಅದಕ್ಕೆ ನಿಖರವಾದ ಉತ್ತರವೂ ಸಿಗಲಿದೆ. ಪ್ರೇಮದ ಭೂಮಿಕೆಯಲ್ಲಿ ಗಹನವಾದ ಕಥೆ ತೆರೆದುಕೊಳ್ಳಬಹುದಾದ ಲಕ್ಷಣವೊಂದು ಪ್ರೇಕ್ಷಕರ ಮುಂದೆ ಫಳಗುಟ್ಟಿದೆ. ಟ್ರೈಲರ್ ನಲ್ಲಿಯ ತಾಜಾತನ, ಅಲ್ಲಿ ಕಾಣಿಸಿರುವ ಕುತೂಹಲ ಕಾಪಿಟ್ಟುಕೊಂಡೇ ಒಂದಿಡೀ ಸಿನಿಮಾ ಪ್ರೇಕ್ಷಕರ ಮುಂದೆ ಬಂದರೆ, ಪ್ರೇಮಿಗಳ ದಿನದ ಪ್ರಭೆಯಲ್ಲಿಯೇ ಪ್ರೇಮ ಕಥನಕ್ಕೆ ಗೆಲುವಾಗೋ ಸಾಧ್ಯತೆಗಳೂ ಕಾಣಿಸುತ್ತಿವೆ.
ಅಂದಹಾಗೆ, ಕೆ.ಮಂಜು ಸಿನಿಮಾಸ್ ಬ್ಯಾನರಿನಡಿಯಲ್ಲಿ ವಿಷ್ಣುಪ್ರಿಯ ಚಿತ್ರ ನಿರ್ಮಾಣಗೊಂಡಿದೆ. ಇದೊಂದು ತೊಂಬತ್ತರ ದಶಕದಲ್ಲಿ ನಡೆಯೋ ಕಥಾನಕದ ಸಿನಿಮಾ ಎಂಬ ಸುಳಿವನ್ನು ಈ ಹಿಂದೆ ಚಿತ್ರ ತಂಡ ಬಿಟ್ಟುಕೊಟ್ಟಿತ್ತು. ಆ ಕಾಲಘಟ್ಟದ ಪರಿಮಳವೊಂದು ದೃಷ್ಯರೂಪ ಧರಿಸಿ ಈ ಟ್ರೈಲರ್ ಮೂಲಕ ನೋಡುಗರನ್ನು ಸೋಕಿದೆ. ಅಷ್ಟಕ್ಕೂ ಎಲ್ಲವೂ ಆನ್ಲೈನ್ ಮಯವಾಗಿರುವ, ಭಾವನೆಗಳೂ ಬೆರಳ ಮೊನೆಗಿಳಿದಿರುವ ಈ ಕಾಲಘಟ್ಟದಲ್ಲಿ ತೊಂಬತ್ತರ ದಶಕದ ಪ್ರೇಮದ ಪುಳಕಗಳನ್ನು ಧ್ಯಾನಿಸೋದೇ ಥ್ರಿಲ್ಲಿಂಗ್ ವಿಚಾರ. ಅಂಥಾದ್ದೊಂದು ಥ್ರಿಲ್ ಈ ಟ್ರೈಲರ್ ಮೂಲಕ ದಾಟಿಕೊಂಡಿದೆ. ಆ ಕಾಲದ ವಾತಾವರಣ, ಕೆಂಪು ಪೋಸ್ಟ್ ಡಬ್ಬಿ ಸೇರಿದಂತೆ ಅನೇಕ ಆಹ್ಲಾದ ಟ್ರೈಲರ್ ಮೂಲಕವೇ ಮೂಡಿಕೊಂಡಿದೆ. ಅಚ್ಯುತ್ ರಾವ್, ಸುಚೇಂದ್ರ ಪ್ರಸಾದ್, ನಿಹಾಲ್ ರಾಜ್ ಮುಂತಾದವರ ತಾರಾಗಣವಿದೆ. ವಿನೋದ್ ಭಾರತಿ ಛಾಯಾಗ್ರಹಣ, ಗೋಪಿ ಸುಂದರ್ ಸಂಗೀತ ನಿರ್ದೇಶನ, ಸುರೇಶ್ ಅರಸ್ ಸಂಕಲನವಿರುವ ವಿಷ್ಣುಪ್ರಿಯ ಚಿತ್ರ ಫೆಬ್ರವರಿ ೨೧ರಂದು ಬಿಡುಗಡೆಗೊಳ್ಳಲಿದೆ.