ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ತಯಾರಾಗಿ, ಜನವರಿ 3ರಂದು ಬಿಡುಗಡೆಗೆ ಸಜ್ಜುಗೊಂಡಿರುವ ಚಿತ್ರ (guns and roses movie) `ಗನ್ಸ್ ಅಂಡ್ ರೋಸಸ್’. ಪ್ಯಾನಿಂಡಿಯಾ ಮಟ್ಟದ ಈ ಚಿತ್ರದ ಮೂಲಕ (arjun) ಅರ್ಜುನ್ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡಿದ್ದ ಟೀಸರ್ ಮೂಲಕ ಒಟ್ಟಾರೆ ಸಿನಿಮಾದ ಆಂತರ್ಯದ ಅಂದಾಜು ಪ್ರೇಕ್ಷಕರಲ್ಲಿ ಮೂಡಿಕೊಂಡಿದೆ. ಪ್ರಧಾನವಾಗಿ ಗನ್ಸ್ ಅಂಡ್ ರೋಸಸ್ ಕಥನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದರ ಜೊತೆ ಜೊತೆಗೇ ಘಟಾನುಘಟಿಗಳ ತಾರಾಗಣ ಕೂಡಾ ಗಮನ ಸೆಳೆಯುತ್ತಿದೆ. ಕಿಶೋರ್, ಶೋಭರಾಜ್, ಅವಿನಾಶ್ ಮುಂತಾದ ಹಿರಿಯ ನಟರು ಇಲ್ಲಿ ಬಹುಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರ ನಡುವೆ ಖಡಕ್ ವಿಲನ್ ಆಗಿ ಅಬ್ಬರಿಸಿರುವವರು (jeevan richi) ಜೀವನ್ ರಿಚ್ಚಿ!
ಇತ್ತೀಚೆಗೆ ತೆರೆಗಂಡು ಭರ್ಜರಿ ಯಶ ಕಂಡಿರುವ (bhairathi ranagal movie) ಭೈರತಿ ರಣಗಲ್ ಚಿತ್ರದಲ್ಲಿ ಜೀವನ್ ರಿಚ್ಚಿ ವಿಲನ್ ಆಗಿ ಅಬ್ಬರಿಸಿದ್ದರು. (shivaraj kumar) ಶಿವರಾಜ್ ಕುಮಾರ್ ಜೊತೆಗಿನ ಮುಖಾಮುಖಿ ದೃಶ್ಯಗಳನ್ನು ಕಂಡು ಪ್ರೇಕ್ಷಕರು ಥ್ರಿಲ್ ಆಗಿದ್ದರು. ಇಂಥಾ ಜೀವನ್ ಬಿಡುಗಡೆಗೆ ತಯಾರಾಗಿರುವ ಗನ್ಸ್ ಅಂಡ್ ರೋಸಸ್ ಚಿತ್ರದಲ್ಲಿಯೂ ಖಳನಾಗಿ ಆರ್ಭಟಿಸಿದ್ದಾರೆ. ಭಾರೀ ಖದರ್ ಹೊಂದಿರುವ ಈ ಪಾತ್ರ ತನಗೆ ಒಲಿದು ಬಂದ ಬಗ್ಗೆ ಖುದ್ದು ಅವರೊಳಗೇ ಅಚ್ಚರಿಯಿದೆ. ಹೆಜ್ಜೆ ಹೆಜ್ಜೆಗೂ ಭಿನ್ನ ಪಾತ್ರಗಳನ್ನು ಧ್ಯಾನಿಸುವ ಕಲಾವಿದನಾಗಿ ಇಂಥಾದ್ದೊಂದು ಪಾತ್ರವನ್ನು ಆವಾಹಿಸಿಕೊಂಡ ಬಗ್ಗೆ ಜೀವನ್ ರಿಚ್ಚಿ ಅವರೊಳಗೊಂದು ತೃಪ್ತ ಭಾವ ಮೂಡಿಕೊಂಡಿದೆ. ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ನಟನೆಯ ಕಸುವಿನಿಂದಲೇ ಗಮನ ಸೆಳೆದಿರುವ ಜೀವನ್ ಪಾಲಿಗೆ, ಗನ್ಸ್ ಅಂಡ್ ರೋಸಸ್ ಪಾತ್ರ ತನ್ನ ಸಿನಿಮಾ ಪಯಣದಲ್ಲೊಂದು ಮೈಲಿಗಲ್ಲಾಗುತ್ತದೆ ಎಂಬ ಭರವಸೆಯೂ ಇದೆ.
ಜೀವನ್ ರಿಚ್ಚಿ ಗನ್ಸ್ ಅಂಡ್ ರೋಸಸ್ ಚಿತ್ರತಂಡಕ್ಕೆ ಸೇರ್ಪಡೆಗೊಂಡಿದ್ದ ಹಿಂದೆ ಹಿರಿಯ ನಟ ಶೋಭರಾಜ್ ಅವರ ಪಾತ್ರವಿದೆ. ಶೋಭರಾಜ್ ಈ ಸಿನಿಮಾದ ಮಹತ್ವದ ಪಾತ್ರವೊಂದಕ್ಕೆ ಒಪ್ಪಿಕೊಂಡಿದ್ದರು. ಇದೇ ಹಂತದಲ್ಲಿ ನಿರ್ದೇಶಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಇನ್ಸ್ ಪೆಕ್ಟರ್ ಪಾತ್ರಕ್ಕಾಗಿ ಕಲಾವಿದರ ಹುಡುಕಾಟದಲ್ಲಿದ್ದರು. ಈ ವಿಚಾರ ತಿಳಿದಿದ್ದ ಶೋಭರಾಜ್ ಜೀವನ್ ಗೆ ಕರೆ ಮಾಡಿ ಹೋಗಿ ನಿರ್ದೇಶಕರನ್ನು ಭೇಟಿಯಾಗುವಂತೆ ಸೂಚಿಸಿದ್ದರಂತೆ. ಶೋಭರಾಜ್ ರನ್ನು ಅಣ್ಣನ ಸ್ಥಾನದಲ್ಲಿಟ್ಟು ಶೋಭಣ್ಣ ಅಂತಲೇ ಕರೆಯುವ ಜೀವನ್ ಮರು ಮಾತಾಡದೆ ಒಪ್ಪಿಕೊಂಡು ನಿರ್ದೇಶಕರನ್ನು ಸಂಪರ್ಕಿಸಿದ್ದರು. ಮಾರನೇ ದಿನವೇ ಕಚೇರಿಗೆ ಹೋದಾಗ ಎದುರುಗೊಂಡಿದ್ದು ಸಿನಿಮಾ ಕಥೆಗಾರ ಅಜಯ್ ಕುಮಾರ್ ಮುತ್ತು ನಿರ್ದೇಶಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್.
ಜೀವನ್ ರನ್ನು ಮಾತಾಡಿಸುತ್ತಲೇ ಅಜಯ್ ಕುಮಾರ್ ನಿರ್ದೇಶಕರೊಂದಿಗೆ ಕ್ಯಾಬಿನ್ನಿನ ಒಳ ಹೋಗಿದ್ದರು. ಹಾಗೆ ಹೋದವರು ಸುದೀರ್ಘ ಡಿಸ್ಕಷನ್ನು ನಡೆಸಿದ್ದರು. ಗಂಟೆಗಟ್ಟಲೆ ಏನೂ ಸದ್ದಿಲ್ಲದಾಗ ಜೀವನ್‌ರನ್ನು ಇನ್ಸ್ ಪೆಕ್ಟರ್ ಪಾತ್ರ ಕೈತಪ್ಪಿದ ಕಸಿವಿಸಿ ಕಾಡಲಾರಂಭಿಸಿತ್ತು. ಕಡೆಗೂ ವಿಚಾರಕ್ಕೆ ಬಂದ ನಿರ್ದೇಶಕರು ಇನ್ಸ್ ಪೆಕ್ಟರ್ ಪಾತ್ರದ ಬದಲು ವಿಲನ್ ಪಾತ್ರ ಮಾಡುವಂತೆ ಸೂಚಿಸಿದ್ದರು. ಬಳಿಕ ನಿರ್ದೇಶಕ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಒಂದೇ ವೇಗದಲ್ಲಿ ಒಂದಿಡೀ ಕಥೆ ಹೇಳಿ, ಆ ಪಾತ್ರದ ಬಗ್ಗೆ ವಿವರಿಸಿದಾಗ ಜೀವನ್ ರಿಚ್ಚಿ ಅಕ್ಷರಶಃ ಥ್ರಿಲ್ ಆಗಿದ್ದರಂತೆ. ಸಿನಿಮಾ ನೋಡಿದ ಪ್ರತಿಯೊಬ್ಬರೊಳಗೂ ಅಂಥಾದ್ದೇ ಥ್ರಿಲ್ ವ್ಯಾಪಿಸಿಕೊಳ್ಳುತ್ತದೆಂಬ ಭರವಸೆ ಜೀವನ್ ಅವರಲ್ಲಿದೆ.
ಕೊಡಗಿನ ವಿರಾಜಪೇಟೆ ತಾಲೂಕಿನ ಕುಕ್ಕುಲೂರಿನವರು ಜೀವನ್ ರಿಚ್ಚಿ. ಬಡತನದ ಕುಟುಂಬದಲ್ಲಿ ಹುಟ್ಟಿ, ಆ ಸಂಕಷ್ಟಗಳನ್ನು ಕಂಡುಂಡು ಬೆಳೆದ ಇವರಿಗೆ ಒಂದಿಡೀ ಬದುಕಿನ ಮಾರ್ಗದರ್ಶಿಯಂತಿದ್ದವರು ತಂದೆ. ಹಾಗೆ ಆ ವಾತಾವರಣದಲ್ಲಿ ಬಹುತೇಕ ಎಲ್ಲ ಕೆಲಸಗಳನ್ನೂ ಮಾಡಿ, ಕಡೆಗೊಂದು ದಿನ ಇಪ್ಪತೈದು ವರ್ಷಗಳ ಹಿಂದೆ ಜೇಬಿನಲ್ಲಿ ನೂರೈವತ್ತು ರೂಪಾಯಿ ಇಟ್ಟುಕೊಂಡು ಬೆಂಗಳೂರಿಗೆ ಬಂದಿಳಿದಿದ್ದವರು ಜೀವನ್. ಒಂಬತ್ತನೇ ತರಗತಿಯಷ್ಟೇ ಓದಿದ್ದ ಅವರಿಗೆ ಓದಿನ ಆಧಾರದಲ್ಲಿ ಕೆಲಸ ಹುಡುಕೋ ಅವಕಾಶವಿರಲಿಲ್ಲ. ಆದ್‌ದರಿಂದಲೇ ಎಸ್‌ಟಿಡಿ ಬೂತ್, ಹೋಟೆಲ್ ಅಂತೆಲ್ಲ ನಾನಾ ಕೆಲಸ ಮಾಡಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದ್ದರು. ಕಷ್ಟಪಟ್ಟು ದುಡಿಕಯುತ್ತಾ ತಾವೇ ಹೊಟೇಲ್ ಉದ್ಯಮ ಶುರುವಿಟ್ಟುಕೊಂಡಿದ್ದರು. ಅದರಲ್ಲಿ ಕೈ ಸುಟ್ಟುಕೊಂಡು ಟ್ರಾವೆಲ್ಸ್ ಕಸುಬಿನತ್ತ ಹೊರಳಿಕೊಂಡಿದ್ದ ಜೀವನ್ ಕೆಟರಿಂಗ್ ಬ್ಯುಸಿನೆಸ್ ನಡೆಸುತ್ತಾ ಜೀವನದಲ್ಲಿ ನೆಲೆ ಕಂಡುಕೊಂಡಿದ್ದರು. ಮದುವೆಯಾದ ಬಳಿಕ ತಮ್ಮನ್ನು ಸದಾ ಕಾಡುತ್ತಿದ್ದ ನಟನಾಗುವ ಕನಸನ್ನು ನನಸು ಮಾಡಿಕೊಳ್ಳುವತ್ತ ಪ್ರಯತ್ನಿಸಿದ್ದರು.
ಇಂಥಾ ಪ್ರಯತ್ನದ ಹಾದಿಯಲ್ಲಿ ಮೊದಲು ಎದುರಾದದ್ದು ಅವಮಾನ. ನಂತರ ವರ್ಷಗಟ್ಟಲೆ ಅವಮಾನದೊಂದಿಗೆ ನೋವು, ನಿರಾಸೆಗಳ ಸರಣಿ ಮುಂದುವರೆದಿತ್ತು. ಸಿಕ್ಕ ಪುಟ್ಟ ಪಾತ್ರಗಳಲ್ಲಿಯೇ ಅಚ್ಚುಕಟ್ಟಾಗಿ ನಟಿಸುತ್ತಾ ಸಾಗಿ ಬಂದಿದ್ದ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಮಹತ್ವದ ಪಾತ್ರಗಳು ಸಿಗಲಾರಂಭಿಸಿವೆ. ಎಂಥಾ ಪಾತ್ರಕ್ಕಾದರೂ ಸೈ ಎಂಬಂಥಾ ಛಾತಿ ಹೊಂದಿರುವ ಜೀವನ್ ಅವರ ನಟನೆಯ ಕಸುವು ಎಲ್ಲರಿಗೂ ಪರಿಚಯವಾಗಿದೆ. ಭೈರತಿ ರಣಗಲ್ ಚಿತ್ರದ ಪಾತ್ರದ ಮೂಲಕ ಅವರ ಪ್ರಭೆ ಮತ್ತಷ್ಟು ಪ್ರಜ್ವಲಿಸಿದೆ. ಅವರು ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಮಿಂಚುವ ಸ್ಪಷ್ಟ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಗನ್ಸ್ ಅಂಡ್ ರೋಸಸ್ ಪಾತ್ರ ಅವರ ವೃತ್ತಿ ಬದುಕಿಗೆ ಮತ್ತಷ್ಟು ಆವೇಗ ಕೊಡೋದರಲ್ಲಿ ಯಾವ ಸಂದೇಹವೂ ಇಲ್ಲ.
ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಎಚ್.ಆರ್ ನಟರಾಜ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಈ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿ ಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ ೩ರಂದು ತೆರೆಗಾಣಲಿದೆ.