ಒಂದು ಕಾಲದಲ್ಲಿ (film industry) ಸಿನಿಮಾ ರಂಗಕ್ಕೆ ಪ್ರವೇಶ ಪಡೆಯೋದೇ ಸಾಹಸವೆಂಬಂಥಾ ವಾತಾವರಣವಿತ್ತು. ಹಾಗೊಂದು ವೇಳೆ ಪ್ರಯಾಸ ಪಟ್ಟು ಎಂಟ್ರಿ ಕೊಟ್ಟರೂ, ಆ ಬಳಿಕ ಎದುರಾಗೋ ಸವಾಲುಗಳ ಮುಂದೆ ಅನೇಕರು ಮಂಡಿಯೂರಿದ್ದಿದೆ. ಬದುಕಿನ ಅನಿವಾರ್ಯತೆಗಳ ಸೆಳವಿಗೆ ಸಿಕ್ಕು ಎಲ್ಲೆಲ್ಲೋ ಕಳೆದು ಹೋದವರಿದ್ದಾರೆ. ಅಂಥಾದ್ದರಲ್ಲಿ ಯಾರಾದರೂ ದಶಕಗಟ್ಟಲೆ ಅವುಡುಗಚ್ಚಿ ಸಿನಿಮಾ ರಂಗದಲ್ಲೇ ಮುಂದುವರೆದರೆ, ನಿರಾಸೆಗಳನ್ನು ನುಂಗಿಕೊಂಡು ಅಂದುಕೊಂಡಿದ್ದನ್ನು ಸಾಧಿಸಿದರೆ ಖಂಡಿತವಾಗಿಯೂ ಅಂಥವರ ಬಗೆಗೊಂದು ಬೆರಗು ಮೂಡಿಕೊಳ್ಳುತ್ತೆ. ಜನವರಿ 3ರಂದು ತೆರೆಗಾಣಲು ಅಣಿಗೊಂಡಿರುವ (guns and roses movie) `ಗನ್ಸ್ ಅಂಡ್ ರೋಸಸ್’ ಚಿತ್ರದ ನಿರ್ದೇಶಕ (director h.s shrinivas kumar)ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಕೂಡಾ ಅಂಥಾದ್ದೊಂದು ಬೆರಗಿನ ಸಿನಿಮಾ ಯಾನ. ಯಾಕೆಂದರೆ, ಈ ಚಿತ್ರದ ಹಿಂದೆ ಭರ್ತಿ ಇಪ್ಪತೈದು ವರ್ಷಗಳ ತಪಸ್ಸಿದೆ!
ಮೈಸೂರಿನ ಹುಣಸೂರು ಮೂಲದವರಾದ (director h.s shrinivas kumar) ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಪಾಲಿಗೆ ಸಿನಿಮಾ ಎಂಬುದು ಆರಂಭದಿಂದಲೇ ಆವರಿಸಿಕೊಂಡಿದ್ದ ಮಾಯೆ. ಅದಾಗಲೇ ಆ ನೆಲದಿಂದ (hunasuru krishnamurthy) ಹುಣಸೂರು ಕೃಷ್ಣಮೂರ್ತಿ, ಭಾರ್ಗವರಂಥಾ ನಿರ್ದೇಶಕರು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು. ಅದೆಲ್ಲವನ್ನೂ ಬೆರಗುಗಣ್ಣಿನಿಂದ ನೋಡುತ್ತಾ, ಶಾಲಾ ಕಾಲೇಜು ದಿನಗಳಲ್ಲಿಯೇ ಸಿನಿಮಾ ಕನಸನ್ನು ತಮ್ಮೊಳಗೆ ಸಾಕಿಕೊಂಡಿದ್ದವರು ಹೆಚ್.ಎಸ್ ಶ್ರೀನಿವಾಸ್ ಕುಮಾರ್. ಓದು ಮುಗಿಸಿಕೊಂಡ ಬಳಿಕ ಬಲು ಪ್ರಯಾಸಪಟ್ಟು ಸಿನಿಮಾ ರಂಗಕ್ಕೆ ಪ್ರವೇಶ ಪಡೆಯಲು ಪ್ರಯತ್ನಿಸಿದ್ದರು. ಎರಡು ದಶಕಗಳ ಹಿಂದೆ ಚಿತ್ರರಂಗಕ್ಕೆ ಎಂಟ್ರಿ ಕೊಡೋದು ಎಷ್ಟು ಕಷ್ಟವಾಗಿತ್ತೆಂಬುದರ ಅರಿವಿರುವವರಿಗೆ ಆ ಬಗ್ಗೆ ಹೆಚ್ಚೇನೂ ವಿವರಿಸುವ ಅಗತ್ಯವಿಲ್ಲ.
ಹಾಗೆ ಶತಪ್ರಯತ್ನ ಪಟ್ಟ ಬಳಿಕ ಥ್ರಿಲ್ಲರ್ ಮಂಜು ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಗೆ ಅವಕಾಶ ಕೊಟ್ಟಿದ್ದರು. ಆ ನಂತರದಲ್ಲಿ ಹಲವಾರು ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಆ ಘಳಿಗೆಯಲ್ಲಿ ಎಲ್ಲದರಲ್ಲಿಯೂ ಪಳಗಿಕೊಳ್ಳಬೇಕು, ಎಲ್ಲವನ್ನೂ ಅರಿತುಕೊಳ್ಳಬೇಕೆಂಬ ಆಕಾಂಕ್ಷೆಯೇ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಅವರನ್ನು ಚಿತ್ರರಂಗದಲ್ಲಿ ಉಳಿದುಕೊಳ್ಳುವಂತೆ ಮಾಡಿತ್ತು. ಈ ನಡುವೆ ಸಹಜವಾಗಿಯೇ ಅನೇಕ ಸವಾಲುಗಳು, ಪರೀಕ್ಷೆಗಳು ಅವರನ್ನೆದುರಾಗಿದ್ದವು. ಅದೆಲ್ಲವನ್ನೂ ಎದುರಿಸಿ ಮುನ್ನಡೆಯುವ ಕಸುವು ತುಂಬಿದ್ದು ನಿರ್ದೇಶಕನಾಗಬೇಕೆಂಬ ಗುರಿ. ಈ ಹಾದಿಯಲ್ಲಿ ಇದುವರೆಗೂ ಎಂಭತ್ತಕ್ಕೂ ಹೆಚ್ಚು ಸಿನಿಮಾಗಳ ನಿರ್ದೇಶನ ವಿಭಾಗದಲ್ಲವರು ಕೆಲಸ ಮಾಡಿದ್ದಾರೆ. ನಾನಾ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿದ್ದಾರೆ. ಅನೇಕ ಘಟಾನುಘಟಿ ಕಲಾವಿದರ ಪ್ರೀತಿ, ನಂಬಿಕೆ ಸಂಪಾದಿಸಿಕೊಂಡಿದ್ದಾರೆ. ಆ ಎಲ್ಲ ಅನುಭವಗಳನ್ನು ಒಟ್ಟುಗೂಡಿಸಿಕೊಂಡು ಗನ್ಸ್ ಅಂಡ್ ರೋಸಸ್ ಚಿತ್ರವನ್ನು ರೂಪಿಸಿದ್ದಾರೆ.
ಒಟ್ಟಾರೆಯಾಗಿ, ಇಪ್ಪತೈದು ವರ್ಷಗಳ ತಪಸ್ಸಿನ ಫಲವೆಂಬಂತೆ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಗನ್ಸ್ ಅಂಡ್ ರೋಸಸ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಮೂಲಕ ಇಷ್ಟು ವರ್ಷಗಳ ಸುದೀರ್ಘ ಯಾನ ಫಲ ಕೊಡುತ್ತದೆಂಬ ಅಗಾಧ ನಂಬಿಕೆ ಅವರಲ್ಲಿದೆ. ಈಗಾಗಲೇ ಟೀಸರ್ ಕಂಡವರು ಒಳ್ಳೆ ಮಾತುಗಳನ್ನಾಡುತ್ತಿದ್ದಾರೆ. ಪರಭಾಷಾ ನೆಲದಲ್ಲಿಯೂ ಸಕಾರಾತ್ಮಕ ವಾತಾವರಣ ಹರಳುಗಟ್ಟಿಕೊಂಡಿದೆ. ಈ ಸಿನಿಮಾ ಆರಂಭ ಹಾಗೂ ಬಿಡುಗಡೆಯ ಘಟ್ಟ ತಲುಪಿಕೊಳ್ಳುವ ನಡುವಿನ ಹಾದಿಯೇನು ಸಲೀಸಿನದ್ದಾಗಿರಲಿಲ್ಲ. ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಇದನ್ನು ಅಣಿಗೊಳಿಸಿ, ಎಲ್ಲ ಪ್ರೇಕ್ಷಕರಿಗೂ ಹಿಡಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಹೆಗಲೇರಿಕೊಂಡಿತ್ತು. ಆರಂಭಿಕವಾಗಿ ಮೂಡಿಕೊಂಡಿರುವ ವಾತಾವರಣ, ಪರಭಾಷಾ ಚಿತ್ರರಂಗದ ವಿತರಕರೇ ಆಡುತ್ತಿರುವ ಒಳ್ಳೆ ಮಾತುಗಳೆಲ್ಲವೂ ಅವರೊಳಗಿನ ಭರವಸೆ ಗಟ್ಟಿಗೊಳ್ಳುವಂತೆ ಮಾಡಿದೆ.
ಈ ಚಿತ್ರ ಆರಂಭಿಸುವಾಗಲೇ ಒಂದಷ್ಟು ಪಾತ್ರಗಳನ್ನು ಇಂತಿಂಥಾ ಕಲಾವಿದರೇ ನಿಭಾಯಿಸಬೇಕೆಂದು ಹೆಚ್.ಎಸ್ ಶ್ರೀನಿವಾಸ್ ಕುಮಾರ್ ನಿರ್ಧರಿಸಿದ್ದರು. ಈ ಸಂಬಂಧವಾಗಿ ಶೋಭರಾಜ್, ಅವಿನಾಶ್, ಕಿಶೋರ್ ರಂಥಾ ನಟರನ್ನು ಸಂಪರ್ಕಿಸಿದ್ದರು. ಅವರ ಮುಂದೆ ಕಥೆ ಹೇಳಿ ಪಾತ್ರದ ಬಗ್ಗೆ ವಿವರಿಸುತ್ತಲೇ ಮರುಮಾತಿಲ್ಲದೆ ಒಪ್ಪಿಕೊಂಡಿದ್ದರು. ಅವರೆಲ್ಲರೂ ರೇಟಿನ ಬಗ್ಗೆ ಸೊಲ್ಲೆತ್ತದೆ ಡೇಟಿನ ಬಗ್ಗೆ ವಿಚಾರಿಸಿಕೊಂಡಿದ್ದರು. ಅದು ಈ ಇಪ್ಪತೈದು ವರ್ಷಗಳ ಕಾಲ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಚಿತ್ರರಂಗದೊಂದಿಗೆ ಬೆರೆತಿರುವ ರೀತಿಗೆ ಸಿಕ್ಕ ಪ್ರತಿಫಲ. ಕಡೆಗೂ ನುರಿತ ಕಲಾವಿದರ ಜೊತೆಗೆ, ಹೊಸಬರಿಗೂ ಅವಕಾಶ ಕೊಟ್ಟು ಒಂದಿಡೀ ಸಿನಿಮಾವನ್ನು ಅಂದುಕೊಂಡಂತೆಯೇ ರೂಪಿಸಿದ ತೃಪ್ತ ಭಾವ ನಿರ್ದೇಶಕರಲ್ಲಿದೆ.
ಒಂದು ಸಾಮಾಜಿಕ ಸಂದೇಶವಿರುವ ಕಥೆಯನ್ನು ಕಮರ್ಶಿಯಲ್ ಚೌಕಟ್ಟಿಗೆ ಒಗ್ಗಿಸಿಕೊಂಡು ಸಿನಿಮಾ ರೂಪಿಸೋದಿದೆಯಲ್ಲಾ? ಅದು ನಿರ್ದೇಶಕರ ಪಾಲಿಗೆ ನಿಜವಾದ ಸವಾಲು. ಭೂಗತ ಜಗತ್ತಿನೊಂದಿಗೆ ತಟಿಕೆ ಹಾಕಿಕೊಂಡಿರುವ ನಶೆಯ ಲೋಕ ಮತ್ತು ಅಂಥಾ ಅಡ್ಡದಾರಿಗಿಳಿದರೆ ಏನಾಗುತ್ತದೆಂಬ ಕಥೆ ಹೊಂದಿಒರುವ ಈ ಸಿನಿಮಾದಲ್ಲಿ ಈ ಸಮಾಜದ ಒಡಲು ಕೊರೆಯುತ್ತಿರುವ ಒಂದಷ್ಟು ಪಲ್ಲಟಗಳತ್ತಲೂ ಫೋಕಸ್ ಮಾಡಲಾಗಿದೆಯಂತೆ. ಇಂಥಾದ್ದರ ನಡುವಲ್ಲಿಯೇ ಅರಳೋ ಪ್ರೇಮ, ಕಥೆಯೊಂದಿಗೇ ಸಾಗುವ ಆಕ್ಷನ್ ಸೀನುಗಳನ್ನೆಲ್ಲ ಎಲ್ಲಿಯೂ ಕೃತಕವೆನ್ನಿಸದಂತೆ ಕಟ್ಟಿ ಕೊಡುವ ಸವಾಲೂ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ರನ್ನು ಎದುರಾಗಿತ್ತು. ಅದೆಲ್ಲವನ್ನೂ ಮೀರಿಕೊಂಡು ಪಕ್ಕಾ ಮನೋರಂಜನಾತ್ಮಕ ಅಂಶಗಳೊಂದಿಗೆ ಗನ್ಸ್ ಅಂಡ್ ರೋಸಸ್ ಚಿತ್ರವನ್ನು ರೂಪಿಸಲಾಗಿದೆಯಂತೆ.
ಯಾರ ಪಾಲಿಗಾದರೂ ಇದೊಂದು ಮಹತ್ವದ ಘಳಿಗೆ. ಬದುಕಿನ ಇಪ್ಪತೈದು ವರ್ಷಗಳನ್ನು ಕನಸೊಂದಕ್ಕೆ ಧಾರೆ ಎರೆಯೋದೆಂದರೆ ಅದು ಸಲೀಸಿನ ಸಂಗತಿಯಲ್ಲ. ಅಂಥಾದ್ದೊಂದು ಸುದೀರ್ಘ ಯಾನ ಮಾಡಿರುವ ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಪಾಲಿಗೆ ಗನ್ಸ್ ಅಂಡ್ ರೋಸಸ್ ನಿಜಕ್ಕೂ ನಿರ್ಣಾಯಕ ಸಿನಿಮಾ. ದ್ರೋಣ ಕ್ರಿಯೇಷನ್ಸ್ ಮೂಲಕ ಈ ಚಿತ್ರವನ್ನು ಹೆಚ್.ಆರ್ ನಟರಾಜ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಕಥೆಗಾರ ಅಜಯ್ ಕುಮಾರ್ ಅವರ ಪುತ್ರ ಅರ್ಜುನ್ ಈ ಮೂಲಕ ನಾಯಕ ನಟನಾಗಿ ಆಗಮಿಸುತ್ತಿದ್ದಾರೆ. ಈಗಾಗಲೇ ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಕಿಶೋರ್, ಶೋಭರಾಜ್, ಅವಿನಾಶ್, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಜೀವನ್ ರಿಚ್ಚಿ, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಎಂ. ಸಂಜೀವ್ ರೆಡ್ಡಿ ಸಂಕಲನವಿರುವ ಗನ್ಸ್ ಅಂಡ್ ರೋಸಸ್ ಜನವರಿ ೩ರಂದು ತೆರೆಗಾಣಲಿದೆ.