ಕಂಡೋರ ಮನೆಯ ಹೆಣ್ಣುಮಕ್ಕಳನ್ನು ಬೆತ್ತಲಾಗಿಸಿ ಕೋಟಿ ಕೋಟಿ ಕಮಾಯಿ ನಡೆಸುತ್ತಾ ಬಂದಿದ್ದವನು (raj kundra) ರಾಜ್ ಕುಂದ್ರಾ. ಮಂಗಳೂರು ಹುಡುಗಿ (actress shilpa shetty) ಶಿಲ್ಪಾ ಶೆಟ್ಟಿಯ ಗಂಡ ಕುಂದ್ರಾನ ದಂಧೆಗಳು ಕೇವಲ ಬ್ಲೂ ಫಿಲಂ ಮೇಕಿಂಗಿಗೆ ಮಾತ್ರವೇ ಸೀಮಿತವಾಗಿಲ್ಲ. ಮತ್ತೊಂದಷ್ಟು ಅಡ್ಡಕಸುಬುಗಳ ಮೂಲಕವೂ ಈತ ಕೈತುಂಬ ಕಾಸು ಮಾಡಿಕೊಂಡಿದ್ದಾನೆಂಬ ಮಾತಿದೆ. ಇಂಥಾ ಕುಂದ್ರಾನ ಮೇಲೆ ಈ ಹಿಂದೊಂದು ಸಲ ಇಡಿ ಅಧಿಕಾರಿಗಳು ರೇಡು ನಡೆಸಿದ್ದರು. ಕೋಟಿಗಟ್ಟಲೆ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಹೇಗೋ ಅದರಿಂದ ಬಚಾವಾಗಿ ನಿರಾಳವಾಗಿದ್ದ ರಾಜ್ ಕುಂದ್ರಾನ ಮನೆಮೇಲೆ ಇದೀಗ ಮತ್ತೊಮ್ಮೆ ರೇಡ್ ನಡೆದಿದೆ. ಕೆಲ ದಿನಗಳ ಹಿಂದಷ್ಟೇ ರಾಜ್ ಕುಂದ್ರಾ ವಿವಾಹ ವಾರ್ಶಿಕೋತ್ಸವವನ್ನು ಆಡಂಬರದಿಂದ ನಡೆಸಿದ್ದ. ಹಾಗೆ ಖುಷಿಯಲ್ಲಿ ಮಿಂದೆದ್ದಿದ್ದ ಈ ಬ್ಲೂ ಫಿಲಂ ಮೇಕರ್ ಗೀಗ ಮತ್ತೊಂದು ಸುತ್ತಿನ ಚಳಿ ಜ್ವರ ಒಟ್ಟೊಟ್ಟಿಗೆ ಬಾಧಿಸಿದಂತಾಗಿದೆ.
ಈ ಹಿಂದೆ ರೇಡ್ ನಡೆಸಿದ್ದ ಇಡಿ ಅಧಿಕಾರಿಗಳು 97ಚಿಲ್ಲರೆ ಕೋಟಿ ಮೊತ್ತದ ಆಸ್ತಿ ಪಾಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದರು. ಆದರೆ, ಕಾನೂನು ಕಟ್ಟಳೆಗಳ ಕಣ್ಣಿಗೆ ಮಣ್ನೆರಚಿ ಸಾವಿರ ಕೋಟಿ ಕಮಾಯಿಸಿದ್ದ ಕುಂದ್ರಾ ಅದರಿಂದ ವಿಚಲಿತನಾಗಿರಲಿಲ್ಲ. ಒಂದಷ್ಟು ಕಾಲ ತಣ್ಣಗೆ ಕುಂದ್ರಾನ ಮೇಲೆ ಕಣ್ಣಿಟ್ಟಿದ್ದ ಇಡಿ ಅಧಿಕಾರಿಗಳೀಗ ಮತ್ತೆ ದಾಳಿ ನಡೆಸಿದ್ದಾರೆ. ಈತನನ್ನು ಕೂರಿಸಿಕೊಂಡು ವಿಸ್ತೃತವಾಗಿ ತನಿಖೆ ನಡೆಸುತ್ತಿದ್ದಾರೆ. ಇದು ಸರಿಯಾದ ದಿಕ್ಕಿನಲ್ಲಿ ಮುಂದುವರೆದರೆ ಕುಂದ್ರಾ ಮತ್ತೊಂದು ಸಲ ಜೈಲು ಪಾಲಾದರೂ ಅಚ್ಚರಿಯೇನಿಲ್ಲ. ಯಾಕೆಂದರೆ, ಅಂಥಾ ಅಕ್ರಮಗಳ ಸರದಾರನೀತ. ಹೆಣ್ಣುಮಕ್ಕಳ ಬಟ್ಟೆ ಬಿಚ್ಚಿಸಿ ಅದರ ಮೂಲಕವೇ ಕೋಟಿ ಸಂಪಾದಿಸಿದ್ದ ಈತನಿಗೀಗ ಕರ್ಮವೆಂಬುದು ಇಡಿ ಅಧಿಕಾರಿಗಳ ರೂಪದಲ್ಲಿ ಬೆಂಬಿದ್ದಿದೆ. ಅದು ಇಷ್ಟರಲ್ಲಿಯೇ ಕುಂದ್ರಾನ ಸಾಮ್ರಾಜ್ಯವನ್ನು ನಿರ್ನಾಮ ಮಾಡೋ ಸಾಧ್ಯತೆಗಳಿದ್ದಾವೆ.
ಹಾಗಾದರೆ, ಈ ರಾಜ್ ಕುಂದ್ರಾ ಯಾರು? ಆತ ಹುಟ್ಟು ಶ್ರೀಮಂತನಾ? ಕುಂದ್ರಾನ ಶ್ರೀಮಂತಿಕೆಯ ಮೂಲ ಯಾವುದು? ಹೀಗೆ ನಾನಾ ಪ್ರಶ್ನೆಗಳು ಹುಟ್ಟಿಕೊಳ್ಳೋದು ಸಹಜ. ಈ ಬಗ್ಗೆ ಕೆದಕುತ್ತಾ ಹೋದರೆ, ಮಧ್ಯಮ ವರ್ಗದ ಲಂಡನ್ನಿನ ಹುಡುಗನೊಬ್ಬ ದೇಶ ದೇಶಗಳ ಗಡಿ ದಾಟಿ, ಥರ ಥರದ ದಂಧೆ ನಡೆಸುತ್ತಾ ಕೋಟಿ ಕುಳವಾದ ರೋಚಕ ಕಥನವೊಂದು ತೆರೆದುಕೊಳ್ಳುತ್ತೆ. ಆ ಕಥೆಯ ಬೇರುಗಳಿರೋದು ದೂರದ ದೇಶ ಲಂಡನ್ನಿನಲ್ಲಿ. ೧೯೭೫ರಲ್ಲಿ ಲಂಡನ್ನಿನ ಬಡ ಮಧ್ಯಮ ವರ್ಗದಲ್ಲಿ ಜನಿಸಿದ್ದವನು ರಾಜ್ ಕುಂದ್ರಾ. ಈಗ ಅವನು ವಿಶ್ವ ಮಟ್ಟದಲ್ಲಿ ಬ್ಯುಸಿನೆಸ್‌ಮ್ಯಾನ್ ಆಗಿ ಗುರುತಿಸಿಕೊಂಡಿದ್ದಾನೆ. ಆತನ ವೈಭೋಗ ಕಂಡವರೆಲ್ಲ ಕುಂದ್ರಾ ಓರ್ವ ಹುಟ್ಟು ಶ್ರೀಮಂತ ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ, ಹುಟ್ಟಿದಂದಿನಿಂದ ಯೌವನಾವಸ್ಥೆ ತಲುಪೋವರೆಗೂ ಕುಂದ್ರಾ ಭಾರೀ ಬಡತನವನ್ನೇ ಕಂಡುಂಡು ಬೆಳೆದಿದ್ದ.
ಎಳವೆಯಿಂದಲೂ ಚಾಲಾಕಿಯಾಗಿದ್ದ ಕುಂದ್ರಾ ಮೂಲತಃ ಭಾರತದ ಪಂಜಾಬಿನ ಲೂಧಿಯಾನ ಮೂಲದವನೇ. ಆತನ ಹೆತ್ತವರು ಬಹು ವರ್ಷಗಳ ಹಿಂದೆ ಲಂಡನ್ನಿಗೆ ಹೋಗಿ ನೆಲೆಸಿದ್ದರಷ್ಟೆ. ಈತನ ನಿಜವಾದ ಹೆಸರು ರಿಪು ಸುದನ್ ಕುಂದ್ರಾ. ಒಂದು ಕಾಲದಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ತಂದೆ ಬಾಲಕೃಷ್ಣ ಕುಂದ್ರಾ, ಆ ನಂತರ ಸಣ್ಣ ಮಟ್ಟದ್ದೊಂದು ಉದ್ಯಮ ಆರಂಭಿಸಿದ್ದರು. ಅದರಲ್ಲಿ ಸಂಸಾರ ನಿಭಾಯಿಸಲು ಸಾದ್ಯವಾಗದಿದ್ದಾಗ ಕುಂದ್ರಾನ ಅಮ್ಮ ರೀನಾ ಕುಂದ್ರಾ ಅಂಗಡಿಯೊಂದರಲ್ಲಿ ಸಹಾಯಕಿಯಾಗಿ ದುಡಿಯಲಾರಂಭಿಸಿದ್ದರು. ಇಂಥಾ ಕುಟುಂಬ ಕೂಸಾದ ರಾಜ್ ಕುಂದ್ರಾ, ಹದಿನೆಂಟರ ಹೊತ್ತಿಗೆಲ್ಲ ಪರಿಚಿತರ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆ ನಂತರ ಹೀಗೇ ಇದ್ದರೆ ಬಡತನ ಬದುಕನ್ನು ನುಂಗಿ ಹಾಕುತ್ತದೆಂದು ಗೊತ್ತಾಗಿ ಹೋಗಿತ್ತೇನೋ; ಸ್ವಂತ ಉದ್ಯಮ ಕಟ್ಟುವ ಕನಸು ಕಂಡ ಕುಂದ್ರಾ, ದುಬೈಗೆ ಹಾರಿದವನೇ ಡೈಮಂಡ್ ಬ್ಯುಸಿನೆಸ್ ಆರಂಭಿಸಿದ್ದ. ಆದರೆ, ಆರಂಭಿಕವಾಗಿಯೇ ಆತನಿಗೆ ಸೋಲು ಸುತ್ತಿಕೊಂಡಿತ್ತು.
ಒಂದಷ್ಟು ಸಾಲ ಮಾಡಿಕೊಂಡು ದುಬೈನಿಂದ ನೇಪಾಳಕ್ಕೆ ಬಂದಿಳಿದ ಕುಂದ್ರಾ, ಅಲ್ಲಿ ಬೇಡಿಕೆಯಿದ್ದ ಮೈ ಬೆಚ್ಚಗಾಗಿಸೋ ಉಡುಪುಗಳನ್ನು ಮಾರಾಟ ಮಾಡೋ ಕೆಲಸ ಶುರುವಿಟ್ಟುಕೊಂಡಿದ್ದ. ನೇಪಾಳದಿಂದ ನೂರು ಉಡುಪುಗಳನ್ನು ಖರೀದಿಸಿ, ಲಂಡನ್ನಿಗೆ ತೆರಳಿದವನೇ ಅಲ್ಲಿನ ಫ್ಯಾಶನ್ ಕಂಪೆನಿಗೆ ಮಾರಿ ಒಂದಷ್ಟು ಲಾಭ ಕಂಡಿದ್ದ. ನಂತರ ಅದನ್ನೇ ಪ್ರಧಾನ ಕಸುಬಾಗಿಸಿಕೊಂಡು ಯಶ ಕಂಡು ಬಿಟ್ಟಿದ್ದ. ಆ ವ್ಯವಹಾರದಲ್ಲಿ ಅದ್ಯಾವ ಪರಿಯಾಗಿ ಖ್ಯಾತಿ ಗಳಿಸಿದನೆಂದರೆ, ೨೦೦೪ರ ಹೊತ್ತಿಗೆಲ್ಲ ಯುಕೆ ಯ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಕುಂದ್ರಾನ ಯಶೋಗಾಥೆ ಪ್ರಕಟವಾಗಿ ಬಿಟ್ಟಿತ್ತು!
ಹೀಗೆ ಉದ್ಯಮದಲ್ಲಿ ಯಹಶ ಕಾಣುತ್ತಲೇ ೨೦೦೩ರಲ್ಲಿ ಪಂಜಾಬ್ ಮೂಲಕದ ವ್ಯಾಪಾರಿಯ ಮಗಳು ಕವಿತಾಳನ್ನ ಮದುವೆಯಾಗಿದ್ದ. ಆದರೆ, ಎರಡೇ ವರ್ಷ ಕಳೆಯೋದರೊಳಗೆ, ಎರಡು ತಿಂಗಳ ಪುಟ್ಟ ಮಗಳನ್ನೂ ಲೆಕ್ಕಿಸದೆ ಮಡದಿಗೆ ಡಿವೋರ್ಸ್ ಕೊಟ್ಟಿದ್ದ. ೨೦೦೭ರ ಹೊತ್ತಿಗೆಲ್ಲ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಸುಗಂಧ ದ್ರವ್ಯ ಕಂಪೆನಿಯೊಂದಕ್ಕೆ ರಾಯೌಭಾರಿಯಾಗಿದ್ದಳು. ಅದರದ್ದೊಂದು ಕಾರ್ಯಕ್ರಮ ಲಂಡನ್ನಿನಲ್ಲಿ ಆಯೋಜನೆಗೊಂ ಡಿತ್ತು. ಅದರಲ್ಲಿ ಕುಂದ್ರಾ ಕೂಡಾ ಭಾಗಿಯಾಗಿದ್ದ. ಅಲ್ಲಿಂದಲೇ ಅವರಿಬ್ಬರ ನಡುವೆ ಪರಿಚಯವಾಗಿ, ಪ್ರೀತಿ ಮೊಳೆತುಕೊಂಡಿತ್ತು. ೨೦೦೯ರಲ್ಲಿ ಅವರಿಬ್ಬರೂ ಮದುವೆಯಾಗಿದ್ದರು.
ಕೇವಲ ೨೯ ವರ್ಷಕ್ಕೆಲ್ಲ ಯಶಸ್ವೀ ಉದ್ಯಮಿಯಾಗಿದ್ದ ಕುಂದ್ರಾ, ಶಿಲ್ಪಾಳನ್ನು ಮದುವೆಯಾದ ನಂತರ ಭಾರತಕ್ಕೆ ಮರಳಿದ್ದ. ಇಲ್ಲಿಯೇ ನಾನಾ ಥರದ ದಂಧೆ ನಡೆಸುತ್ತಾ ತನ್ನ ಕೋಟಿ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದ. ಅಸಾಧ್ಯ ಮಹತ್ವಾಕಾಂಕ್ಷಿಕಯಾಗಿದ್ದ ಕುಂದ್ರಾ, ಭಾರತದಲ್ಲಿಯೂ ಪ್ರತಿಷ್ಟಿತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ. ಈತ ಡೈಮಂಡ್ ವ್ಯವಹಾರದಲ್ಲಿ ನೆಲಕಚ್ಚಿದ್ದಾಗ ಕೈ ಹಿಡಿದದ್ದು ನೇಪಾಳದ ಬೆಚ್ಚನೆಯ ಉಡುಪುಗಳ ದಂಧೆ. ಆ ದಿರಿಸುಗಳನ ನು ಹಿಮಾಲಯದ ತಪ್ಪಲ್ಲಲ್ಲಿ ವಾಸಿಸುವ ಒಂದು ತಳಿಯ ಕುರಿಗಳ ಚರ್ಮ, ಉಣ್ಣೆಯಿಂದ ಮಾಡುತ್ತಿದ್ದರಂತೆ. ಹೀಗೆ ಕುಸಿದಾಗ ಕೈ ಹಿಡಿದದ್ದು ಕುರಿಗಳ ತೊಗಲು. ಹೇಗಿದ್ದರೂ ತೊಗಲು ದಂಧೆ ಕೈ ಹಿಡಿಯುತ್ತೆ ಅಂತ ನಂಬಿಕೊಂಡನೋ ಏನೋ; ಕಂಡೋರ ಮನೆ ಹೆಣ್ಣುಮಕ್ಕಳನ್ನು ಮಂಚಕ್ಕೆ ಕೆಡವಿ ನೀಲಿ ಚಿತ್ರ ತಯಾರಿಸೋ ದಂಧೆ ಶುರುವಿಟ್ಟುಕೊಂಡಿದ್ದ. ಅದರಿಂದಲೇ ಈಗ ಕುಂದ್ರಾನ ಖಾಸಗೀ ಬದುಕು ಮತ್ತೆ ಛಿದ್ರಗೊಂಡಿದೆ. ಅತ್ತ ಉದ್ಯಮಿಯಾಗಿಯೂ ಕಿಮ್ಮತ್ತು ಕಳೆದುಕೊಂಡಿರುವ ಕುಂದ್ರಾಗೀಗ ಅಕ್ಷರಶಃ ಕೇಡುಗಾಲ ಶುರುವಾದಂತಿದೆ!