ಭಾರತೀಯ ಚಿತ್ರರಂಗವೆಂದರೆ ಬರೀ (bollywood) ಬಾಲಿವುಡ್ ಮಾತ್ರ ಎಂಬಂಥಾ ತಿಮಿರು ಇದೀಗ ಥಂಡಾ ಹೊಡೆದಿದೆ. ದಕ್ಷಿಣ ಭಾರತೀಯ ಚಿತ್ರರಂಗವನ್ನು ಕೇವಲವಾಗಿ ನೋಡುತ್ತಿದ್ದ ಬಾಲಿವುಡ್ ಮಂದಿಯ ಕಣ್ಣುಗಳಲ್ಲೇ ಇದೀಗ ಅಸೀಮ ಬೆರಗೊಂದು ಪ್ರಜ್ವಲಿಸಲಾರಂಭಿಸಿದೆ. ಇಂಥಾ ಹೊತ್ತಿನಲ್ಲಿ ಬಾಲಿವುಡ್ಡನ್ನು ಆಳಿದ್ದ ಖಾನ್ ಗಳ ಸ್ಥಿತಿ ಹೀನಾಯ ಹಂತಕ್ಕಿಳಿದಿದೆ. (south cinima industry) ದಕ್ಷಿಣದ ಸಿನಿಮಾಗಳ ಬಿರುಗಾಳಿಯ ಮುಂದೆ ಬಾಲಿವುಡ್ ಸಿನಿಮಾಗಳ ತರಗೆಲೆಗಳಂತೆ ಚದುಉರಿ ದಿಕ್ಕಾಪಾಲಾಗುತ್ತಿದೆ. ಕೊಂಚ ಎಚ್ಚರ ತಪ್ಪಿದರೂ ಬಾಲಿವುಡ್ ಹೀರೋಗಳು ಬಿರುದು ಬಾವಲಿಗಳ ಸಮೇತ ಮನೆ ಸೇರಿಕೊಂಡು ಪವಡಿಸಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯೇನಿಲ್ಲ. ಇದೆಲ್ಲವನ್ನೂ ಮನಗಂಡಿರುವ ಚಾಲಾಕಿ ಖಾನ್ ಗಳೀಗ ಗೆಲುವಿಗಾಗಿ ದಕ್ಷಿಣದ ನಿರ್ದೇಶಕರನ್ನೇ ನೆಚ್ಚಿಕೊಳ್ಳುತ್ತಿದ್ದಾರೆ!
ಬಾಲಿವುಡ್ಡಿನ ಮೂವರು ಖಾನ್ ಗಳಿಗೆ ಸೋಲಿನ ಪರ್ವ ಶೂರುವಾಗಿ ಒಂದಷ್ಟು ವರ್ಷಗಳು ಕಳೆದಿವೆ. ಈ ಮೂವರಲ್ಲಿ ಶಾರೂಖ್ ಖಾನ್ ಕಳೆದ ವರ್ಷ ಸಾಲು ಸಾಲು ಹಿಟ್ ಸಿನಿಮಾ ನೀಡುವ ಮೂಲಕ ಒಂದಷ್ಟು ನಿರಾಳವಾದಂತಿದೆ. ಸಲ್ಮಾನ್ ಮತ್ತು ಆಮೀರ್ ಪಾಲಿಗೆ ಮಾತ್ರ ಗೆಲುವೆಂಬುದು ಅಕ್ಷರಶಃ ಸತಾಯಿಸಲಾರಂಭಿಸಿದೆ. ಶಾರೂಖ್ ಖಾನ್ ಗೆ ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಗೆಲುವು ತಂದು ಕೊಟ್ಟಿದ್ದ ಚಿತ್ರ ಜವಾನ್. ಅದನ್ನು ನಿರ್ದೇಶನ ಮಾಡಿದ್ದದ್ದು ತಮಿಳು ನಿರ್ದೇಶಕ ಅಟ್ಲಿ. ಈ ಮೂಲಕ ಶಾರೂಖ್ ಕೂಡಾ ಗೆಲುವಿಗಾಗಿ ದಕ್ಷಿಣದ ನಿರ್ದೇಶಕನನ್ನೇ ನೆಚ್ಚಿಕೊಂಡಿದ್ದರು. ಇದೆಲ್ಲದರ ನಡುವೆ ಭರಪೂರವಾದೊಂದು ಗೆಲುವಿಗಾಗಿ ಹಪಾಹಪಿಸುತ್ತಿರುವ ಸಲ್ಮಾನ್ ಖಾನ್ ಶಾರೂಖ್ ಫಾರ್ಮುಲಾವನ್ನೇ ನಂಬಿ ಹೊರಟಿದ್ದಾರೆ.
ಸಲ್ಮಾನ್ ಖಾನ್ ವಜನ್ನಿಗೆ ಒಪ್ಪುವಂಥಾ ಗೆಲುವುಗಳು ಇತ್ತೀಚಿನ ವರ್ಷಗಳಲ್ಲಿ ಮರೀಚಿಕೆಯಾಗಿದೆ. ಹೀಗೇ ಮುಂದುವರೆದರೆ ಸ್ಟಾರ್ ಗಿರಿಗೆ ಸಂಚಕಾರ ಬರುತ್ತದೆ, ದಕ್ಷಿಣ ಭಾರತೀಯ ಸಿನಿಮಾಗಳ ಅಬ್ಬರದಲ್ಲಿ ಕಳೆದು ಹೋಗಬೇಕಾಗುತ್ತದೆ ಅನ್ನೋ ಸತ್ಯ ಸಲ್ಲುಗೆ ಅರಿವಾದಂತಿದೆ. ಈ ಕಾರಣದಿಂದಲೇ ಅವರು ಅಟ್ಲಿ ನಿರ್ದೇಶನದ ಚಿತ್ರಕ್ಕೆ ಎಸ್ ಅಂದಿದ್ದಾರಂತೆ. ಹಾಗಂತ, ಸಲ್ಲುಗೆ ಈಗಷ್ಟೇ ಜ್ಞಾನೋದಯವಾಗಿದೆ ಅಂದುಕೊಳ್ಳಬೇಕಿಲ್ಲ. ವರ್ಷದ ಹಿಂದೆಯೇ ಅಸಲೀ ವಾತಾವರಣದ ಅರಿವಾದದ್ದರಿಂದಲೇ ಮುರುಗಾ ದಾಸ್ ಜೊತೆ ಸಿಖಂದರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಸಿಕಂದರ್ ಚಿತ್ರೀಕರಣ ಚಾಲ್ತಿಯಲ್ಲಿದೆಅದು ಮುಗಿದಾಕ್ಷಣವೇ ಅಟ್ಲಿ ನಿರ್ದೇಶನದ ಸಿನಿಮಾಕ್ಕೆ ಚಾಲನೆ ಸಿಗಲಿದೆ.