ಕಿಚ್ಚನ (kiccha sudeep) ಅಭಿಮಾನಿ ಪಾಳೆಯದಲ್ಲೊಂದು ಸಂತೃಪ್ತ ವಾತಾವರಣ ಪಸರಿಸಿಕೊಂಡಿದೆ. ಸರಿಯಾಗಿ ಎರಡು ವರ್ಷಗಳಿಂದ ನಿರಂತರವಾಗಿ ಕಿಚ್ಚನ ಅಭಿಮಾನಿಗಳ ಪಾಲಿಗೆ ಶುಷ್ಕ ಸ್ಥಿತಿ ಕವುಚಿಕೊಂಡಿತ್ತು. ಮ್ಯಾಕ್ಸ್ ಅಂತೊಂದು ಸಿನಿಮಾ ಬರಲಿದೆ ಎಂಬ ಏಕಮಾತ್ರ ಸಮಾಧಾನದ ಹೊರತಾಗಿ ಮತ್ತೆಲ್ಲವೂ ಮುಸುಕು ಮುಸುಕು. ಚಿತ್ರತಂಡವಾಗಲಿ, ಖುದ್ದು ಸುದೀಪ್ ಆಗಲಿ, ಮ್ಯಾಕ್ಸ್ (max kannada movie) ಬಿಡುಗಡೆಯ ಬಗ್ಗೆ ನಿಖರವಾಗಿ ಏನನ್ನೂ ಹೇಳದೆ ಮುಂದುವರೆಯುತ್ತಾ ಬಂದಿದ್ದರು. ಇನ್ನೇನು ದಿನವೆರಡು ಮಗುಚಿಕೊಂಡರೆ, ಈ ವರ್ಷದ ಕಡೇಯ ತಿಂಗಳ ಪುಟ ತೆರೆದುಕೊಳ್ಳುತ್ತೆ. ತನ್ನ ನೆಚ್ಚಿನ ನಟನ ಸಿನಿಮಾ ಬಿಡುಗಡೆಯಾಗುತ್ತದೆಂಬ ನಿರೀಕ್ಷೆಯ ಕಟ್ಟ ಕಡೆಯ ಕಿಂಡಿಯೂ ಮುಚ್ಚಿಕೊಳ್ಳುತ್ತದೆ ಎಂಬಂಥಾ ವಾತಾವರಣವಿದ್ದದ್ದು ಸುಳ್ಳಲ್ಲ. ಕಡೆಗೂ ಚಿತ್ರತಂಡ ಬಿಡುಗಡೆ ದಿನಾಂಕ ಘೋಶಿಸಿದೆ. ಅದನ್ನು ಕಂಡು ಅಭಿಮಾನಿ ಬಳಗ ಅಕ್ಷರಶಃ ನಿಟ್ಟುಸಿರು ಬಿಟ್ಟಿದೆ!
ಕಿಚ್ಚ ಬಿಗ್ ಬಾಸ್ ಶೋ (biggboss kannada) ಸೇರಿದಂತೆ ಒಂದಷ್ಟು ವಿಚಾರಗಳಲ್ಲಿ ಬ್ಯುಸಿಯಾಗುತ್ತಾ ಬಂದಿದ್ದರು. ಇಂಥಾ ಕಾರಣಗಳಿಂದಲೇ ಮ್ಯಾಕ್ಸ್ ಮುಂದೂಡಲ್ಪಡುತ್ತಿದೆ ಎಂಬಂಥಾ ಅಸಹನೆಯೊಂದು ಅಭಿಮಾನಿಗಳ ನಡುವಲ್ಲೇ ಹಬೆಯಾಡಲಾರಂಭಿಸಿತ್ತು. ಅದರಲ್ಲಿ ನಿಜವಿರೋದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ನಿಜ, ಒಂದು ಬಿಗ್ ಬಜೆಟ್ ಸಿನಿಮಾ ಸಾಕಷ್ಟು ಸಮಯ ಬೇಡುತ್ತದೆ. ಹಾಗಂತ, ವರ್ಷಗಟ್ಟಲೆ ಕಾಯೋ ವ್ಯವಧಾನ ಅಭಿಮಾನಿಗಳಿಗೂ ಇರುವುದಿಲ್ಲ. ಸ್ಟಾರ್ ನಟನೊಬ್ಬನ ಸಿನಿಮಾಗಳು ಹೀಗೆ ವರ್ಷಗಟ್ಟಲೆ ಎಳೆದಾಡೋದಿದೆಯಲ್ಲಾ? ಅದು ಚಿತ್ರರಂಗದ ಏಳಿಗೆಯ ದೃಷ್ಟಿಯಿಂದಲೂ ಒಳಿತಲ್ಲ. ಈ ಸಂಬಂಧವಾಗಿ ಕಿಚ್ಚ ಸೂಕ್ಷ್ಮತೆ ಮರೆತು ಮುಂದುವರೆಯುತ್ತಿದ್ದಾರಾ ಅಂತೊಂದು ಅನುಮಾನ ಎಲ್ಲರನ್ನೂ ಕಾಡಿದ್ದು ಸುಳ್ಳಲ್ಲ.
ಕಡೆಗೂ ಮ್ಯಾಕ್ಸ್ ಚಿತ್ರ ಇದೇ ಡಿಸೆಂಬರ್ ೨೫ರಂದು ಬಿಡುಗಡೆಯಾಗೋದು ನಿಕ್ಕಿಯಾಗಿದೆ. ಹಾಗೆ ನೋಡಿದರೆ, ೨೦೨೨ರಲ್ಲಿ ಬಿಡುಗಡೆಗೊಂಡಿದ್ದ ವಿಕ್ರಾಂತ್ ರೋಣ ಚಿತ್ರವೇ ಕೊನೆ; ಆ ನಂತರ ಸುದೀಪ್ ಅಭಿನಯದ ಒಂದು ಚಿತ್ರವೂ ಬಿಡುಗಡೆಗೊಂಡಿಲ್ಲ. ಮ್ಯಾಕ್ಸ್ ಸೇರಿದಂತೆ ಒಂದಷ್ಟು ಸಿನಿಮಾಗಳು ಸುದೀಪ್ ಕೈಲಿದ್ದರೂ ಅಭಿಮಾನಿಗಳನ್ನು ಎರಡು ವರ್ಷಗಳ ಕಾಲ ತಾಕುತ್ತಾ ಬಂದಿದ್ದು ನಿರಾಸೆ ಮಾತ್ರ. ಆದರೆ, ಮ್ಯಾಕ್ಸ್ ಟೀಸರ್ ಒಂದು ರಿಲೀಸಾಯ್ತು ನೋಡಿ? ಅದರ ಖದರ್ರೇ ಅಸಹನೆಗಳನ್ನು ನೀಗಿಸಿ, ಕಾಯುವ ಸೈರಣೆ ತುಂಬಿದ್ದರಲ್ಲಿ ಎರಡು ಮಾತಿಲ್ಲ. ಈಗ ಮ್ಯಾಕ್ಸ್ ಮಾಡುತ್ತಿರೋ ಬಿಡುಗಡೆಪೂರ್ವ ಬ್ಯುಸಿನೆಸ್ಸು ಮತ್ತು ಪ್ಯಾನಿಂಡಿಯಾ ಮಟ್ಟದಲ್ಲಿ ಹಬ್ಬಿಕೊಂಡಿರೋ ಕ್ರೇಜ್ ನೋಡಿದರೆ ಇದುವರೆಗಿನ ಕಾಯುವಿಕೆಯೆಲ್ಲ ಮಹಾ ಗೆಲುವಿನ ಮೂಲಕ ಸಾರ್ಥಕ್ಯ ಕಾಣುವ ಸಾಧ್ಯತೆಗಳು ಢಾಳಾಗಿ ಗೋಚರಿಸುತ್ತಿವೆ!
ಸುದೀಪ್ ಥರದ ನಟರ ಸಿನಿಮಾಗಳು ವರ್ಷಕ್ಕೊಂದಾದರೂ ಬಂದರೆ ಮಾತ್ರವೇ ಕನ್ನಡ ಚಿತ್ರರಂಗ ಬರಖತ್ತಾಗಲು ಸಾಧ್ಯ. ಈಗಂತೂ ಬಘೀರ ಮತ್ತು ಭೈರತಿ ರಣಗಲ್ ಚಿತ್ರಗಳ ಗೆಲುವಿನ ಮೂಲಕ ಚಿತ್ರರಂಗ ತುಸು ಚೇತರಿಸಿಕೊಂಡಿದೆ. ಮ್ಯಾಕ್ಸ್ ಮತ್ತೊಂದು ದಿಕ್ಕಿನಲ್ಲಿ ಆಕ್ಸಿಜನ್ನಾಗುವ ಸಾಧ್ಯತೆಗಳಿದ್ದಾವೆ. ಧ್ರುವ ಸರ್ಜಾನ ಮಾರ್ಟಿನ್ ಎಂಬೋ ಬೂಸಾ ಚಿತ್ರವೊಂದು ಎಲ್ಲವನ್ನೂ ಹಾಳುಗೆಡವಿತ್ತು. ಕ್ಲೀನ್ ಶೇವ್ ಮಾಡಿದ್ದ ನಿರ್ಮಾಪಕನ ಬುಡುಡೆಯನ್ನು ನಿರ್ದೇಶಕ ಅರ್ಜುನ ಮತ್ತೊಂದು ಸಾರಿ ಕ್ಲೀನ್ ಶೇವ್ ಮಾಡಿದ್ದೇ ಮಾರ್ಟಿನ್ ಚಿತ್ರದ ಮಹಾ ಸಾಧನೆ. ಇದರಿಂದ ಪ್ಯಾನಿಂಡಿಯಾ ಮಟ್ಟದಲ್ಲಿ ಕನ್ನಡ ಚಿತ್ರರಂಗದ ಮಾನ ಹರಾಜಾಗಿದೆ. ಅಂಥಾದ್ದೊಂದು ಹಿನ್ನಡೆಯನ್ನು ಮ್ಯಾಕ್ಸ್ ಮರೆಸುವಂತಾದರೆ, ಅದಕ್ಕಿಂತಲೂ ಖುಷಿಯ ವಿಚಾರ ಮತ್ತೇನಿಲ್ಲ. ಇದರ ಜೊತೆ ಜೊತೆಗೇ ಸುದೀಪ್ ಅಭಿಮಾನಿಗಳ ಮನದಿಂಗಿತಕ್ಕೆ ಕಿವಿಯಾಗೋ ದರ್ದೂ ಇದೆ. ಕಿಚ್ಚ ನೀಟಾಗಿ ವರ್ಷಕ್ಕೊಮದು ಸಿನಿಮಾದಲ್ಲಿ ನಟಿಸಿ, ಬಿಡುಗಡೆಗೊಳಿಸಲೆಂಬುದು ಅಭಿಮಾನಿಗಳ ಒತ್ತಾಸೆಯಾಗಿರುವಂತಿದೆ. ಮುಂದಿನ ವರ್ಷದಿಂದಾದರೂ ಅದು ಸಾಧ್ಯವಾಗಬಹುದಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ!