ರಾಜ್ ಕುಮಾರ್ ಕುಟುಂಬದ ಕುಡಿ (yuva rajkumar) ಯುವ ರಾಜ್ ಕುಮಾರ್ ಮತ್ತೊಂದು ಚಿತ್ರಕ್ಕೆ ತಯಾರಾಗಿದ್ದಾನೆ. ಈತ ನಟಿಸಿದ್ದ ಮೊದಲ ಚಿತ್ರ ಯುವ ಒಂದಷ್ಟು ಮೆಚ್ಚುಗೆ ಗಳಿಸಿದ್ದು ನಿಜ. ಆದರೆ, ಆರಂಭಿಕವಾಗಿ ಸೃಷ್ಟಿಯಾಗಿದ್ದ ಹೈಪುಗಳಿಗೆ ಸರಿ ಸಮನಾದ ಗೆಲುವು ಕಾಣಲಿಲ್ಲ. ಬಹುಶಃ ಯುವ (yuva movie) ಚಿತ್ರೀಕರಣದ ಸಂದರ್ಭದಲ್ಲಿ ಆತ ಬೇರೆ ಹಳವಂಡಗಳಲ್ಲಿ ಕಳೆದು ಹೋಗಿದ್ದದ್ದೂ ಕೂಡಾ ಅದಕ್ಕೆ ಕಾರಣವಿದ್ದಿರಬಹುದು. ಈ ಸೋಲಿನ ಬೆನ್ನಲ್ಲಿಯೇ ಮಡದಿಗೆ ವಿಚ್ಚೇಧನ ಕೊಟ್ಟು, ಆ ಸಂಬಂಧಿತ ವಿವಾದಗಳಿಂದ ಯುವ ಸದ್ದು ಮಾಡಿದ್ದ. ಈತನ ಹೆಸರು ಸಪ್ತಮಿ ಗೌಡ ಜೊತೆ ಕೇಳಿಬಂದು ರಂಪಾಟವಾಗಿದ್ದೂ ನಡೆದಿತ್ತು. ಈಗ ಅದೆಲ್ಲದರಿಂದ ಮೈಕೊಡವಿಕೊಂಡು ಮೇಲೆದ್ದು ಬರೋ ಸೂಚನೆಯೊಂದಿಗೆ ಯುವ ಎಕ್ಕ ಚಿತ್ರದ ನಾಯಕನಾಗಿದ್ದಾನೆ.
ಯುವ ರಾಜ್ ಕುಮಾರ್ ಮೊದಲ ಚಿತ್ರಕ್ಕಾಗಿ ನಡೆಸಿದ್ದ ತಯಾರಿಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಮತ್ತೊಂದು ರಗಡ್ ಪಾತ್ರದೊಂದಿಗೆ ಎಕ್ಕ ಚಿತ್ರದ ಮೂಲಕ ಅವತರಿಸುವ ಸೂಚನೆ ಸಿಕ್ಕಿದೆ. ಬಹುಶಃ ರೋಹಿತ್ ಪದಕಿಯಂಥಾ ಪ್ರತಿಭಾನ್ವಿತ ನಿರ್ದೇಶಕನ ಸಾರಥ್ಯ ಇಲ್ಲದಿದ್ದರೆ ಈ ಸಿನಿಮಾ ಬಗ್ಗೆ ಈ ಪರಿಯಾದ ನಿರೀಕ್ಷೆ ಮೂಡಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ. ರೋಹಿತ್ ಈಗಾಗಲೇ ದಯವಿಟ್ಟು ಗಮನಿಸಿ, ರತ್ನನ್ ಪ್ರಪಂಚದಂಥಾ ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವವರು. ಇದೀಗ ಎಕ್ಕ ಚಿತ್ರದ ಮೊದಲ ಒಂದಷ್ಟು ಸೂಚನೆಗಳ ಮೂಲಕ ಡಿಫರೆಂಟ್ ಜಾನರ್ ನೊಂದಿಗೆ ಮತ್ತೊಂದು ಮೈಲಿಗಲ್ಲು ಮೂಡಿಸಲು ಪದಕಿ ಸಜ್ಜಾಗಿರೋದು ಪಕ್ಕಾ.
ಸಾಮಾನ್ಯವಾಗಿ, ಬರಹಗಾರರ ಬಗ್ಗೆ ಕನ್ನಡ ಚಿತ್ರರಂಗದಲ್ಲೊಂದು ಅಸಡ್ಡೆ ಇದ್ದೇ ಇದೆ. ಬರಹಗಾರರನ್ನು ಚೆಂದಗೆ ನೋಡಿಕೊಂಡರೆ, ಸಾಹಿತ್ಯ ಜಗತ್ತಿನ ಪ್ರತಿಭಾನ್ವಿತರನ್ನು ಒಳಗೊಂಡು ಮುಂದುವರೆದರೆ ಬೇರೊಂದು ದಿಕ್ಕಿನತ್ತ ಹೊರಳ ಬಹುದೆಂಬ ಚರ್ಚೆ ಆಗಾಗ ನಡೆಯುತ್ತಿರುತ್ತದೆ. ಈ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪದಕಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಯಾಕೆಂದರೆ, ಕಥೆಗಾರರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ವಿಕ್ರಮ್ ಹತ್ವಾರ್ ಎಕ್ಕ ಚಿತ್ರದ ಭಾಗವಾಗಿದ್ದಾರೆ. ವಿಕ್ರಮ್ ಹತ್ವಾರ್ ಜೊತೆಗೂಡಿಯೇ ರೋಹಿತ್ ಪದಕಿ ಕಥೆಯನ್ನು ಸಿದ್ಧಗೊಳಿಸಿದ್ದಾರಂತೆ. ಇದು ಕೂಡಾ ಯುವ ಅಭಿನಯದ ಎಕ್ಕ ಚಿತ್ರ ಗಮನ ಸೆಳೆಯುವಲ್ಲಿ ಪ್ರಧಾನ ಪಾತ್ರ ವಹಿಸಿದೆ.