ಪುಷ್ಪಾ2 ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಖುದ್ದು ಅಲ್ಲು (allu arjun) ಅಭಿಮನಿಗಳಿಗೆ ಈ ಸಿನಿಮಾ ಕಡೆಯಿಂದ ಅಡಿಗಡಿಗೆ ನಿರಾಸೆಗಳಾಗಿದ್ದವು. ನಿರ್ದೇಶಕ ಸುಕುಮಾರದ ಧಾಡಸೀ ನಡೆಯಿಂದಾಗಿ ಪ್ರತಿಯೊಂದೂ ನಿಧಾನಗತಿಯತ್ತ ಹೊರಳಿಕೊಂಡಿತ್ತು. ಪದೇ ಪದೆ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದ್ದೂ ನಡೆದಿತ್ತು. ಹೀಗೇ ಆದರೆ ಈ ಚಿತ್ರ ಗೋತಾ ಹೊಡೆಯೋದು ಗ್ಯಾರೆಂಟಿ ಎಂಬಂಥಾ ವಾತಾವರಣವೂ ಒಂದು ಹಂತದಲ್ಲಿ ನಿರ್ಮಾಣಗೊಂಡಿತ್ತು. ಇಂಥಾ ನಕಾರಾತ್ಮಕ ವಾತಾವರಣವೀಗ ಅಕ್ಷರಶಃ ಸಕಾರಾತ್ಮಕ ಪ್ರಭೆಯಲ್ಲಿ ಅಂತರ್ಧಾನ ಹೊಂದಿದಂತೆ ಕಾಣಿಸುತ್ತಿದೆ. ಪ್ರತೀ ದಿನವೂ ಪುಷ್ಪಾ೨ನ ಬ್ಯುಸಿನೆಸ್ ವಿವರಗಳು ಸದ್ದು ಮಾಡುತ್ತಿವೆ. ಇದೇ ಘಳಿಗೆಯಲ್ಲಿ ಅಲ್ಲು ಅರ್ಜುನ್ ಸಂಭಾವನೆ ವಿಚಾರದಲ್ಲಿ ಮಾಡಿರುವ ದಾಖಲೆಯ ಬಗ್ಗೆಯೂ ಅವ್ಯಾಹತವಾಗಿ ಚರ್ಚೆಗಳು ನಡೆಯಲಾರಂಭಿಸಿವೆ.
ಅಲ್ಲು ಅರ್ಜುನ್ ಈ ಸಿನಿಮಾಗಾಗಿ ಭಾರೀ ಮೊತ್ತದ ಸಂಭಾವನೆ ಪಡೆದಿದ್ದಾರೆಂದು ಗುಲ್ಲೆದ್ದಿತ್ತು. ಕೆಲ ತಿಂಗಳ ಹಿಂದಷ್ಟೇ ಸಂಭಾವನೆಯ ಒಟ್ಟಾರೆ ಬಾಬತ್ತು ಮುನ್ನೂರು ಕೋಟಿ ಅಂತೊಂದು ಶಾಕಿಂಗ್ ಸಂಗತಿಯೂ ಜಾಹೀರಾಗಿತ್ತು. ಕಡೆಗೂ ಅಲ್ಲು ಅಷ್ಟೊಂದು ಸಂಭಾವನೆ ಪಡೆದಿರೋದು ಖತರಿಯೆಂಬುದು ಸಾಬೀತಾಗಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿರೋ ಟಾಪ್ ಸ್ಟಾರ್ ಗಳ ಸಂಭಾವನೆಯನ್ನು, ಅಲ್ಲು ಪಡೆದಿರೋ ಮೊತ್ತದೊಂದಿಗೆ ತುಲನೆ ಮಾಡಿ ನೋಡುವ ಪ್ರಕ್ರಿಯೆಗಳೂ ನಡೆಯುತ್ತಿವೆ. ಸೋಶಿಯಲ್ ಮೂಡಿಯಾದಲ್ಲಂತೂ ಈ ವಿಚಾರವೀಗ ಟ್ರೆಂಡಿಂಗಿನಲ್ಲಿದೆ.
ಅಲ್ಲು ಅರ್ಜುನ್ ಸಂಭಾವನೆಯ ವಿಚಾರದಲ್ಲೀಗ ಟಾಪ್ ಸ್ಟಾರುಗಳನ್ನು ಹಿಂದಿಕ್ಕಿದ್ದಾರೆ. ಒಂದಷ್ಟು ಮಂದಿ ಸಟಾರ್ ಗಳು ಈ ಮೊತ್ತದ ಹತ್ತಿರ ಹೋಗೋದೂ ಕಷ್ಟವಿದೆ. ನೂರಾ ಮೂವತ್ತು ಕೋಟಿಯಷ್ಟು ಸಂಭಾವನೆ ಪಡೆಯುತ್ತಿದ್ದ ದಳಪತಿ ವಿಜಯ್ ಲಿಯೋ ಮೂಲಕ ಏಕಾಏಕಿ ಇನ್ನೂರ ಎಪ್ಪತೈದು ಕೋಟಿ ಪಡೆದಿದ್ದರು. ಅದು ಸಂಚಲನವನ್ನೇ ಸೃಷ್ಟಿಸಿತ್ತು. ಇದು ಅತ್ಯಂತ ಹೆಚ್ಚಿನ ಸಂಭಾವನೆ ಅನ್ನಲಾಗಿತ್ತು. ಅಲ್ಲು ಈಗ ಅದನ್ನೂ ಮೀರಿಸಿದ್ದಾರೆ. ಶಾರೂಖ್ ಖಾನ್ ೧೫೦ ರಿಂದ ೨೫೦ ಕೋಟಿ, ರಜನೀಕಾಂತ್ ೧೨೫ ರಿಂದ ೨೭೦, ಅಮೀರ್ ಖಾನ್ ೧೨೦ರಿಂದ ೨೭೫, ಪ್ರಭಾಸ್ ೧೦೦ ರಿಂದ ೨೦೦ ಕೋಟಿಯಷ್ಟು ಸಂಭಾವನೆ ಪಡೆಯುತ್ತಾರೆ. ಇನ್ನು ಟಾಪ್ ಲಿಸ್ಟಿನಲ್ಲಿದ್ದ ಕಮಲ್ ಹಾಸನ್, ಅಜಿತ್ ಮುಂತಾದ ನಟರೂ ಕೂಡಾ ಸಂಭಾವನೆಯ ರೇಸಿನಲ್ಲಿ ಅಲ್ಲುಗಿಂತ ಹಿಂದುಳಿದಿದ್ದಾರೆ!