ಕೇವಲ ಉಡುಗೆ ತೊಡುಗೆ ಮಾತ್ರವಲ್ಲ; ಸೀದಾ ಸಾದಾ ವ್ಯಕ್ತಿತ್ವದ ಮೂಲಕವೂ ಎಲ್ಲರ ಮನಗೆದ್ದಿದ್ದಾಕೆ ಸಾಯಿಪಲ್ಲವಿ. ಈ ಹುಡುಗಿ ತನ್ನದಾಗಿಸಕೊಳ್ಳುತ್ತಿರುವ ಅವಕಾಶಗಳು, ಆಕೆಗೆ ಒಲಿದು ಬರುತ್ತಿರುವ ಅಪರೂಪದ ಪಾತ್ರಗಳನ್ನು ಕಂಡು, ಓರಗೆಯ ನಟಿಯರೇ ಕರುಬುವಂತಾಗಿದೆ. ಇಂಥಾ ಸಾಯಿಪಲ್ಲವಿ ಅತ್ಯಂತ ಪ್ರೌಢಿಮೆಯಿಂದ ಸಾಮಾಜಿಕ ಪಲ್ಲಟಗಳ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳೋದಿದೆ. ಇತ್ತೀಚಿನ ದಿನಗಳಲ್ಲಿ ಅಂಥಾ ಅಭಿಪ್ರಾಯಗಳೇ ಒಂದಷ್ಟು ವಿರೋಧಾಭಾಸದ ಕಿಚ್ಚು ಹೊತ್ತಿಸಿದ್ದೂ ಇದೆ. ಇತ್ತೀಚೆಗಷ್ಟೇ ಅಮರನ್ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮವೊಂದರಲ್ಲಿ ಈಕೆ ಭಾರತೀಯ ಸೈನಿಕರ ಕುರಿತಾಗಿ ಆಡಿದ್ದೊಂದು ಮಾತು ಸಂಚಲನ ಸೃಷ್ಟಿಸಿತ್ತು. ಇದೀಗ ಅದೇ ಚಿತ್ರದ ಭೂಮಿಕೆಯಲ್ಲಿ ಮತ್ತೊಂದು ವಿವಾದದ ಇಕ್ಕಟ್ಟಿಗೆ ದೊಡ್ಡ ಮಟ್ಟದಲ್ಲಿ ಯಶವನ್ನೂ ಕಂಡಿದೆ ಸಾಯಿಪಲ್ಲವಿ ಸಿಲುಕಿದ್ದಾಳೆ!
ಅಮರನ್ ಚಿತ್ರ ಬಿಡುಗಡೆಗೊಂಡು ಅಷ್ಟದಿಕ್ಕುಗಳಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದು ತಮಿಳು ಚಿತ್ರರಂಗದಲ್ಲಿ ಸಾಯಿಪಲ್ಲವಿಗೆ ಸಿಕ್ಕ ಮತ್ತೊಂದು ಮಹಾ ಗೆಲುವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅಮರನ್ ಚಿತ್ರದ ಸಮಾರಂಭದಲ್ಲಿ ಸಾಯಿ ಪಲ್ಲವಿ ಮನದುಂಬಿ ಮಾತಾಡಿದ್ದಾಳೆ. ಈ ಮಾತಿನ ಭರದಲ್ಲಿ ಬಿಟ್ಟು ಹೋದ ಒಂದೆರಡು ತಮಿಳು ಸಿನಿಮಾ ಹೆಸರುಗಳೇ ಇದೀಗ ಆಕೆಯ ವಿರುದ್ಧ ಅಸಹನೆ ಹಬೆಯಾಡುವಂತೆ ಮಾಡಿ ಬಿಟ್ಟಿವೆ. ಅಮರನ್ ಗೆಲುವನ್ನು ಸಂಭ್ರಮಿಸುವಾಗ ತನ್ನ ಈ ಹಿಂದಿನ ಸಿನಿಮಾಗಳಾದ ಮಾರಿ೨ ಹಾಗು ಸೂರ್ಯ ಜೊತೆಗಿನ ಚಿತ್ರಗಳ ಹೆಸರನ್ನು ಸಾಯಿಪಲ್ಲವಿ ಪ್ರಸ್ತಾಪಿಸಿಲ್ಲ. ಇದರ ವಿರುದ್ಧ ಧನುಷ್ ಮತ್ತು ಸೂರ್ಯನ ಅಭಿಮಾನಿಗಳು ಅಸಹನೆ ಹೊರ ಹಾಕುತ್ತಿದ್ದಾರೆ. ಹೊಸಾ ಗೆಲುವಿನ ಸಂದರ್ಭದಲ್ಲಿ ಹಳೇ ಹೆಜ್ಜೆಗಳನ್ನು ಮರೆಯೋದು ತಪ್ಪೆಂಬಂಥಾ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಸಾಯಿಪಲ್ಲವಿ ಅದನ್ನು ಮರೆತಳೋ ಏನೋ ಗೊತ್ತಿಲ್ಲ; ವಿವಾದವಾಗಿರೋದಂತೂ ಸತ್ಯ. ಇದೆಲ್ಲದರಾಚೆ ನೋಡಿದರೆ, ಮೇಜರ್ ಮುಕುಂದನ್ ಜೀವನಾಧಾರಿತ ಅಮರನ್ ಚಿತ್ರದಲ್ಲಿನ ಸಾಯಿಪಲ್ಲವಿಯ ನಟನೆ ಭಾರೀ ಮೆಚ್ಚುಗೆ ಗಳಿಸಿಕೊಂಡಿದೆ. ಮೇಜರ್ ಮುಕುಂದನ್ ಮಡದಿಯ ಪಾತ್ರವನ್ನು ಈಕೆ ಆವಾಹಿಸಿಕೊಂಡ ರೀತಿ ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿ ಬಿಟ್ಟಿದ್ದಾರೆ. ರಾಜ್ ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಸಿನಿಮಾದಲ್ಲಿ ರೆಬೆಕಾ ವರ್ಗೀಸ್ ಆಗಿ ಕಾಣಿಸಿಕೊಂಡಿರೋ ಸಾಯಿಪಲ್ಲವಿ, ತಮಿಳು ಚಿತ್ರರಂಗದಲ್ಲಿ ಮತ್ತೊಂದು ಗೆಲುವಿನ ಮೈಲಿಗಲ್ಲು ನೆಟ್ಟಿದ್ದಾಳೆ. ಇದರ ಜೊತೆ ಜೊತೆಗೇ ಮತ್ತೊಂದಷ್ಟು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾಳೆ.