ಪ್ರಚಾರದ ವಿಚಾರದಲ್ಲಿ ಸಾವಿರ ಪಟ್ಟುಗಳನ್ನು ಪ್ರದರ್ಶಿಸಬಹುದು. ಆದರೆ, ಹಾಡಿನ ಮೂಲಕ ಸಿನಿಮಾವೊಂದು ಪ್ರೇಕ್ಷಕರ ಮನಸಿಗೆ ನಾಟಿಕೊಳ್ಳೋದಿದೆಯಲ್ಲಾ? ಅದರ ಸಕಾರಾತ್ಮಕ ಸೆಳೆತವನ್ನು ಮೀರಿಸೋದು ಖಂಡಿತಾ ಕಷ್ಟವಿದೆ. ಹಾಗೆ ಹಾಡುಗಳ ಮೂಲಕ ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಸಿನಿಮಾಗಳು ಗೆದ್ದು ಬೀಗಿದ ಸಾಕಷ್ಟು ಉದಾಹರಣೆಗಳು ಕನ್ನಡದಲ್ಲಿವೆ. `ನಾ ನಿನ್ನ ಬಿಡಲಾರೆ’ ಚಿತ್ರದ ಲಿರಿಕಲ್ ವೀಡಿಯೋ ಸಾಂಗಿನಲ್ಲಿಯೂ ಸದ್ಯ ಅಂಥಾದ್ದೊಂದು ಆಕರ್ಷಣೆಯಿದ್ದಂತೆ ಭಾಸವಾಗುತ್ತಿದೆ. ಅಕಾರಣವಾಗಿ ಗುನುಗಿಸಿಕೊಳ್ಳುವ ಗುಣ ಹೊಂದಿರೋ ಈ ಹಾಡಿಗೆ ಕೇಳುಗರ ಕಡೆಯಿಂದಲೂ ಮೆಚ್ಚುಗೆಗಳು ಮೂಡಿಕೊಳ್ಳುತ್ತಿವೆ. ಹಾಡೊಂದು ಸೃಷ್ಟಿಸಿದ ಈ ಸಕಾರಾತ್ಮಕ ವಾತಾವರಣ ಕಂಡು ಚಿತ್ರತಂಡ ಖುಉಷಿಗೊಂಡಿದೆ. ಈ ಚಿತ್ರ ನವೆಂಬರ್ 29ರಂದು ಬಿಡುಗಡೆಗೊಳ್ಳಲಿದೆ.
ಗುಲ್ಬರ್ಗ ಸೀಮೆಯ ಅಂಬಾಲಿ ಭಾರತಿ ನಾಯಕಿಯಾಗಿ ನಟಿಸಿರುವ ಚಿತ್ರ `ನಾ ನಿನ್ನ ಬಿಡಲಾರೆ’. ತಿಂಗಳುಗಳ ಹಿಂದಷ್ಟೇ ನಟ ಶರಣ್ ಈ ಸಿನಿಮಾದ ಟೀಸರ್ ಅನ್ನು ಬಿಡುಗಡೆಗೊಳಿಸಿದ್ದರು. ಅದಕ್ಕೂ ಕೂಡಾ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಮುದ್ದು ಗೊಂಬೆ ಓ ಮುದ್ದು ಗೊಂಬೆ ಅಂತ ಶುರುವಾಗೋ ಈಮ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ರೊಮ್ಯಾಂಟಿಕ್ ಶೈಲಿಯ ಈ ಹಾಡಿಗೆ ಮನೋಜ್ ಸೌಗಂಧ್ ಸಾಹಿತ್ಯ ಬರೆದಿದ್ದಾರೆ. ಎಂ.ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಸದರಿ ಹಾಡನ್ನು ಅನಿರುದ್ಧ ಶಾಸ್ತ್ರಿ ಮನದುಂಬಿ ಹಾಡಿದ್ದಾರೆ. ಮೆಲೋಡಿಯನ್ನು ಈವತ್ತಿನ ಟ್ರೆಂಡಿಗೆ ತಕ್ಕಂತೆ ಒಗ್ಗಿಸಿಕೊಂಡುಉ ರೂಪುಗೊಂಡಿರುವ ಈ ಹಾಡೀಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ.
ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಅಂಬಾಲಿ ಭಾರತಿ ನಟಿಸಿದ್ದಾರೆ. ಸಾಮಾನ್ಯವಾಗಿ ನಾ ನಿನ್ನ ಬಿಡಲಾರೆ ಅಂದಾಕ್ಷಣ ಅನಂತ್ ನಾಗ್ ಮತ್ತು ಲಕ್ಷ್ನಿ ನಟಿಸಿದ್ದ ಸಿನಿಮಾದಚ ದೃಷ್ಯಗಳು ಕದಲಲಾರಂಭಿಸುತ್ತವೆ. ಕನ್ನಡ ಸಿನಿಮಾ ಪ್ರೇಮಿಗಳನ್ನು ಆ ಪರಿಯಾಗಿ ಆವರಿಸಿಕೊಂಡಿದ್ದ ಹಾರರ್ ಜಾನರಿನ ಚಿತ್ರವಿದು. ಇದೀಗ ಅದೇ ಹೆಸರಿನಲ್ಲಿ ರೂಪುಗೊಂಡಿರುವ ಈ ಸಿನಿಮಾ ಕೂಡಾ ಹಾರರ್ ಕಥನವನ್ನೊಳಗೊಂಡಿದೆ ಅನ್ನೋದು ನಿಜವಾದ ವಿಶೇಷ. ಅದ್ಯದ ಮಟ್ಟಿಗೆ ಈ ಸಿನಿಮಾ ಎಲ್ಲ ರೀತಿಯಿಂದಲೂ ಭಿನ್ನವಾಗಿರುವ ಕಾರಣದಿಂದ ಪ್ರೇಕ್ಷಕರಲ್ಲಿ ಬೆರಗು ಮೂಡಿಸಲಿದೆ ಎಂಬಂಥಾ ವಿಶ್ವಾಸವೊಂದು ಚಿತ್ರತಂಡದಲ್ಲಿದೆ. ಟೀಸರ್ ಅದನ್ನು ನಿಜವಾಗಿಸುವಂತೆ ಮೂಡಿ ಬಂದಿತ್ತು. ಇದೀಗ ಈ ಲಿರಿಕಲ್ ವೀಡಿಯೋ ಸಾಂಗ್ ಮೂಲಕ ನಾ ನಿನ್ನ ಬಿಡಲಾರೆ ಚಿತ್ರದೆಡೆಗಿನ ಕೌತುಕ ಮತ್ತಷ್ಟು ತೀವ್ರಗೊಂಡಿದೆ.
ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವ ಅಂಬಾಲಿ ಭಾರತಿ ಬಯಲು ನಾಡಿನವರು. ರಂಗಭೂಮಿಯ ನಂಟು ಹೊಂದಿದ್ದ ಆಕೆ ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ಆಳವಾದ ಸಿನಿಮಾ ವ್ಯಾಮೋಹ ಹೊಂದಿರುವ ಅಂಬಾಲಿ, ಈ ಚಿತ್ರದ ಮೂಲಕ ನಾಯಕಿಯಾಗಿ ಎಂಟರಿ ಕೊಡುತ್ತಿದ್ದಾರೆ. ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಭಾರತಿ ಬಾಳಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಅವರು ತಮ್ಮ ಮಗಳು ಅಂಬಾಲಿ ಕನಸಿಗೆ ಸಾಥ್ ಕೊಟ್ಟಿದ್ದಾರೆ. ನವೀನ್ ಜಿ.ಎಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪಂಚಿ, ಸೀರುಂಡೆ ರಘು, ಮಹಾಂತೇಶ್, ಕೆ.ಎಸ್ ಶ್ರೀಧರ್, ಶ್ರೀನಿವಾಸ ಪ್ರಭು, ಹರಿಣಿ, ಮಂಜುಳಾ ರೆಡ್ಡಿ, ಲಕ್ಷ್ಮಿ ಸಿದ್ಧಯ್ಯ ಮುಂತಾದವರ ತಾರಾಗಣದೊಂದಿಗೆ ಈ ಚಿತ್ರ ಕಳೆಗಟ್ಟಿಕೊಂಡಿದೆ. ದೀಪಕ್ ಜಿ.ಎಸ್ ಸಂಕಲನ ಮತ್ತು ವೀರೇಶ್ ಎಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ.