ಸಿನಿಮಾ ಜಗತ್ತು ಆಗಾಗ ಭೂಗತ ಲೋಕದತ್ತ ಹಣಕಿ ಹಾಕೋದು ಮಾಮೂಲು. ಆದರೆ, ಕೆಲ ಮಂದಿ ಭೂಗತದೊಳಗೆ ಪಾತಾಳಗರಡಿ ಹಾಕಿ ಬೆರಗಿನ ಕಥನವನ್ನು ಹೆಕ್ಕಿ ತರುವುದಿದೆ. ಅದರಲ್ಲಿಯೂ ನೆತ್ತರಿಗಂಟಿದ ಪ್ರೇಮ ಕಥಾನಕಗಳ ಬಗೆಗಂತೂ ಪ್ರೇಕ್ಷಕರಲ್ಲಿ ಎಂದಿಗೂ ಬತ್ತದಂಥಾ ಆಸಕ್ತಿಯ ಒರತೆಯಿದೆ. ಇದೀಗ ಸದ್ದು ಮಾಡುತ್ತಿರೋ `ಗನ್ಸ್ ಅಂಡ್ ರೋಸಸ್’ ಚಿತ್ರದ ಟೀಸರ್ ನಲ್ಲಿ ಅಂಥಾದ್ದೊಂದು ಗಾಢ ಕುರುಹುಗಳು ಕಾಣಲಾರಂಭಿಸಿವೆ. ಸದರಿ ಟೀಸರ್ ಬಿಡುಗಡೆಯಾಗಿ ಒಂದಷ್ಟು ದಿನಗಳು ಕಳೆದಿವೆ. ಆದರೆ, ಅದರ ಸುತ್ತ ಪ್ರೇಕ್ಷಕರ ನಡುವೆ ಒಂದಷ್ಟು ಚರ್ಚೆಗಳು ಮೂಡಿಕೊಂಡಿವೆ. ಪ್ರೇಕ್ಷಕರ ಕಡೆಯಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಚಿತ್ರ ಡಿಸೆಂಬರ್ ೨೭ರಂದು ಬಿಡುಗಡೆಗೊಳ್ಳಲಿದೆ.
ಇದು ಹೇಳಿಕೇಳಿ ಪ್ಯಾನಿಂಡಿಯಾ ಸಿನಿಮಾಗಳ ಕಾಲಮಾನ. ಈ ರೇಸಿನಲ್ಲಿರುವ `ಗನ್ಸ್ ಅಂಡ್ ರೋಸಸ್’ ಕನ್ನಡ ಸೇರಿದಂತೆ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ. ಈ ಸಿನಿಮಾ ಮೂಲಕ ಅರ್ಜುನ್ ನಾಯಕ ನಟನಾಗಿ ಪ್ಯಾನಿಂಡಿಯಾ ಮಟ್ಟದಲ್ಲಿ ಲಗ್ಗೆಯಿಡಲು ಸಜ್ಜಾಗಿದ್ದಾರೆ. ಈತ ಕಥೆಗಾರರಾಗಿ, ಸಂಭಾಷಣಾಕಾರರಾಗಿ ಹಾಗೂ ನಟನಾಗಿ ಹೆಸರು ಮಾಡಿರುವ ಅಜಯ್ ಕುಮಾರ್ ಪುತ್ರ. ಹೊಸಾ ಹೀರೋನನ್ನಿಟ್ಟುಕೊಂಡು ಪ್ಯಾನಿಂಡಿಯಾ ಸಿನಿಮಾ ಮಾಡೋದೆಂದರೆ, ಅದೊಂದು ಸಾಹಸ. ಈ ಸಿನಿಮಾ ವಿಚಾರದಲ್ಲಿ ಅದು ಸಾಧ್ಯವಾದದ್ದು ಅರ್ಜುನನ ನಟನೆಯ ಕಸುವಿನಿಂದ ಅನ್ನೋದು ಚಿತ್ರತಂಡದ ಅಭಿಪ್ರಾಯ.
ಅರ್ಜುನ್ ಗಿಲ್ಲಿ ಸವಾಲಿನ ಪಾತ್ರವೇ ಸಿಕ್ಕಿದೆ. ಅದರಲ್ಲವರು ಸಿನಿಮಾ ಬಿಡುಗಡೆಗೂ ಮುನ್ನವೇ ಗೆದ್ದಿದ್ದಾರೆ. ಯಾಕೆಂದರೆ, ಪರಭಾಷಾ ಚಿತ್ರರಂಗದ ಮಂದಿಯೇ ಈತನ ನಟನೆಯ ಕಸುವು ಕಂಡು ಬೆರಗಾಗಿದ್ದಾರಂತೆ. ಬೇರೆ ಬೇರೆ ಭಾಷೆಗಳ ವಿತರಕರು ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಅವರೆಲ್ಲರೂ ಅರ್ಜುನ್ ನಟನೆಯನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ. ಎಲ್ಲ ಭಾಷೆಗಳಿಗೂ ಪಕ್ಕಾ ಸೂಟ್ ಆಗುವಂಥಾ ಅರ್ಜುನ್ ಸ್ಪೆಷಾಲಿಟಿ ಕಂಡು ಅಚ್ಚರಿ ವ್ಯಕ್ತ ಪಡಿಸಿದ್ದಾರಂತೆ. ನಟನೆ, ಆಕ್ಷನ್ ಸೀನುಗಳು ಮತ್ತು ಡ್ಯಾನ್ಸ್ ನಲ್ಲಿ ಅರ್ಜುನ್ ಅಕ್ಷರಶಃ ಪಳಗಿದ ನಟನಂತೆ ಕಾಣಿಸಿಕೊಂಡಿದ್ದಾರೆಂದು ಪರಭಾಷಿಕರೇ ಕೊಂಡಾಡಿದ್ದಾರಂತೆ. ಇಂಥಾ ಮೆಚ್ಚುಗೆಯ ಮಾತುಗಳಿಂದ ಬಿಡುಗಡೆಯ ಹೊಸ್ತಿಲಲ್ಲಿರುವ ಚಿತ್ರತಂಡಕ್ಕೆ ಮತ್ತಷ್ಟು ಹುರುಪು ಮೂಡಿಕೊಂಡಿದೆ.
ದ್ರೋಣ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಎಚ್ ಆರ್ ನಟರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೆಚ್.ಎಸ್ ಶ್ರೀನಿವಾಸ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪೊಲೀಸ್ ಸ್ಟೋರಿಯಿಂದ ಮೊದಲ್ಗೊಂಡು ಇಪ್ಪತೈದು ವರ್ಷದಿಂದೀಚೆಗೆ ನಿರ್ದೇಶನ ವಿಭಾಗದಲ್ಲಿ ಸಕ್ರಿಯರಾಗಿರುವವರು ಹೆ.ಎಸ್ ಶ್ರೀನಿವಾಸ ಕುಮಾರ್. ಇಷ್ಟೂ ವರ್ಷಗಳ ಅನುಭವವನ್ನು ಒಟ್ಟುಗೂಡಿಸಿಕೊಂಡು ಅವರು ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತೆಲುಗು ಚಿತ್ರಗಳಲ್ಲಿ ನಟಿಸಿರುವ ಯಶ್ವಿಕಾ ನಿಷ್ಕಲಾ ಅರ್ಜುನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶಶಿಕುಮಾರ್ ಸಂಗೀತ ನಿರ್ದೇಶನ, ಜನಾರ್ದನ ಬಾಬು ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವಥ್, ಅವಿನಾಶ್, ಕಿಶೋರ್ ಮುಂತಾದವರ ತಾರಾಗಣವಿದೆ. ಈಗಾಗಲೇ ಲಹರಿ ಮ್ಯೂಸಿಕ್ ಮೂಲಕ ಒಂದು ಲಿರಿಕಲ್ ಸಾಂಗ್ ಬಿಡುಗಡೆಗೊಂಡಿದೆ. ಉಳಿದ ಹಾಡುಗಳು ಹಂತ ಹಂತವಾಗಿ ಬಿಡುಗಡೆಗೊಳ್ಳಲಿವೆ.