ಬೇರೆ ದೇಶದಿಂದ ಬಂದು ಬಾಲಿವುಡ್ ನಲ್ಲಿ ನೆಲೆಗೊಂಡಿರುವಾಕೆ ಜಾಕ್ವೆಲಿನ್ ಫರ್ನಾಂಡಿಸ್. ಬಹುಶಃ ಮೂಲತಃ ಬಾಲಿವುಡ್ಡಿನ ನಟಿಯರನ್ನೇ ಮೀರಿಸುವಂತೆ ಮಿಂಚಿಬಿಟ್ಟಿದ್ದ ಈಕೆಯ ಮೇಲೆ ಇದೀಗ ನಾನಾ ಆರೋಪಗಳು ಕೇಳಿ ಬರಲಾರಂಭಿಸಿವೆ. ಈ ಬಾಲಿವುಡ್ ನಟಿಯರ ಐಷಾರಾಮಿ ಬದುಕಿನ ಬಗ್ಗೆ ನಾನಾ ಗುಮಾನಿಗಳಿವೆ. ಅದರ ಕುರಿತಾಗಿ ರಂಗುರಂಗಾದ ಕಥೆಗಳೂ ಕೂಡಾ ಹಬ್ಬಿಕೊಂಡಿವೆ. ಹೇಳಿಕೇಳಿ ಜಾಕ್ವೆಲಿನ್ ಸ್ಥಿತಿವಂತ ಕುಟುಂಬದಿಂದಲೇ ಬಂದಿರುವ ನಟಿ. ಆದರೆ, ಆಕೆಯೂ ಕೂಡಾ ಕಾಸಿಗಾಗಿ ಮಿಕಗಳನ್ನು ತಡವಿಕೊಳ್ಳುವ ಮಾಮೂಲಿ ವರಸೆ ಪ್ರದರ್ಶಿಸಿದ್ದಳೆಂಬ ಸತ್ಯ ಈಚೆಗಷ್ಟೇ ಜಾಹೀರಾಗಿತ್ತು. ಇನ್ನೂರು ಕೋಟಿ ವಂಚನೆ ಕೇಸಿನಲ್ಲಿ ಸುಕೇಶ್ ಚಂದ್ರಶೇಖರ್ ತಗುಲಿಕೊಂಡಿದ್ದಾನಲ್ಲಾ? ಆ ಕೇಸಿನಲ್ಲಿ ಜಾಕ್ವೆಲಿನ್ ಹೆಸರೂ ನಿಖರವಾಗಿ ಕೇಳಿ ಬಂದಿದೆ.
ಕೋಟಿ ಕೋಟಿ ಮುಂಡಾಯಿಸಿರುರುವ ವಂಚಕ ಸುಕೇಶ ಇದೀಗ ಜೈಲು ಹಕ್ಕಿಯಾಗಿದ್ದಾನೆ. ಈತ ನಡೆಸಿರುವ ಇನ್ನೂರು ಕೋಟಿ ಕಾಸಿನ ಸುತ್ತ ಇದೀಗ ತನಿಖೆ ಬಿರುಸುಗೊಂಡಿದೆ. ಸುಕೇಶ್ ಚಂದ್ರಶೇಖರ್ ಓರ್ವ ವೃತ್ತಿಪರ ವಂಚಕ. ಕಂಡೋರಿಗೆಲ್ಲ ಕೋಟಿ ಕೋಟಿ ಮುಂಡಾಯಿಸಿದ ಕಾಸಲ್ಲಿ ಈತ ನಡೆಸಿರುವ ವೈಭೋಗದ ಜೀವನ ಖುದ್ದು ಅಧಿಕಾರಿಗಳನ್ನೇ ಅವಾಕ್ಕಾಗಿಸಿ ಬಿಟ್ಟಿದೆ. ಇದುವೇ ಬಾಲಿವುಡ್ಡಿನ ಕೆಲ ನಟಿಯರ ಕರಾಳ ಖಾಸಗಿ ಬದುಕಿನ ಕಿಸುರನ್ನೂ ಬಟಾಬಯಲಾಗಿಸಿದೆ. ಹೆಣ್ಣುಮಕ್ಕಳ ಖಯಾಲಿ ಹೊಂದಿರುವ ಸುಕೇಶ ಜಾಕ್ವೆಲಿನ್ ಳಂಥಾ ಹೀರೋಯಿನ್ನುಗಳನ್ನೇ ಬಲೆಗೆ ಕೆಡವಿಕೊಂಡಿದ್ದ. ನೋರಾ ಫತೇಹಿ ಕೂಡಾ ಈತನ ವಂಚನೆಯ ಕಾಸು ತಿಂದು ಕೊಬ್ಬಿದ್ದಾಳೆಂಬ ಸಂಶಯ ಅಧಿಕಾರಿಗಳಲ್ಲಿದೆ.
ಹೀಗೆ ಪ್ರಸಿದ್ಧ ನಟಿಯರನ್ನು ಕೆಡವಿಕೊಂಡಿದ್ದ ಸುಕೇಶನಿಗೆ ಜಾಕ್ವೆಲಿನ್ ಫರ್ನಾಂಡಿಸಿ ಮೇಲೆ ಬೇರೆಯದ್ದೇ ಸೆಂಟಿಮೆಂಟಿತ್ತು. ವಂಚಿಸಿದ ಕಾಸಲ್ಲೀತ ಬಹುಪಾಲನ್ನು ಆಕೆಗಾಗಿ ಸುರಿದಿದ್ದ. ಇದೇ ಹೊತ್ತಿನಲ್ಲಿ ಜಾಕ್ವೆಲಿನ್ ಶ್ರೀಲಂಕಾದಲ್ಲಿ ಕೋಟಿ ಕಿಮ್ಮತ್ತಿನ ದ್ವೀಪವೊಂದರ ಮಾಲಕಿಯಾಗಿರುವ ವಿಚಾರ ಬಯಲಾಗಿದೆ. ಇದು ಗೊತ್ತಾದಾಕ್ಷಣವೇ ಅದಕ್ಕೆ ಕಾಸು ಕೊಟ್ಟಿದ್ದ ಸುಕೇಶ ಅಂತಲೇ ಎಲ್ಲರೂ ಅಂದುಕೊಂಡಿದ್ದರಲ್ಲಿ ಅಚ್ಚರಿಯೇನಿಲ್ಲ. ಆದರೆ ಸುಕೇಶ ಪರಿಚಯವಾಗೋ ಮುನ್ನವೇ ಜಾಕ್ವೆಲಿನ್ ಆ ದ್ವೀಪವನ್ನು ಖರೀದಿಸಿದ್ದಳಂತೆ. ಹಾಗಂತ ಇಡಿ ಕಣ್ಣಿನಿಂದ ಜಾಕ್ವೆಲಿನ್ ಸದ್ಯಕ್ಕೆ ಪಾರಾಗುವಂತಿಲ್ಲ. ಯಾಕೆಂದರೆ, ಇಡಿ ಅಧಿಕಾರಿಗಳ ಮುಂದೆ ಜಾಕ್ವೆಲಿನ್ ಮೋಹಕ್ಕಾಗಿ ಕದ್ದ ಕಾಸು ಸುರಿದ ಕಥೆಯನ್ನು ಖುದ್ದು ಸುಕೇಶ ಹೇಳಿಕೊಂಡಿದ್ದಾನಂತೆ. ದ್ವೀಪ ಖರೀದಿಗೆ ಜಾಕ್ವೆಲಿನ್ ಬಳಸಿದ್ದು ಯಾವ ಕಾಸೋ ಗೊತ್ತಿಲ್ಲ; ಆದರೆ ಆಕೆ ಸುಕೇಶನಿಂದ ಪೀಕಿದ ಕಾಸಲ್ಲಿ ದುಂಡಗಾಗಿರೋದಂತೂ ಸತ್ಯ!