ಅಲ್ಲು ಅರ್ಜುನ್ (allu arjun) ಈಗ ಪುಷ್ಪಾ2 (pushpa2) ಚಿತ್ರದ ಗುಂಗಿನಲ್ಲಿದ್ದಾರೆ. ಸದ್ಯಕ್ಕೆ ನವೆಂಬರ್ ತಿಂಗಳಿನಲ್ಲಿ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ಆದರೆ, ಅಷ್ಟರೊಳಗೆ ಕೊಟ್ಟ ಮಾತಿನಂತೆ ನಿರ್ದೇಶಕ (director sukumaran) ಸುಕುಮಾರ್ ಕೆಲಸ ಮುಗಿಸುತ್ತಾರೆಂಬ ಗಟ್ಟಿ ನಂಬಿಕೆ ಅಲ್ಲುಗಿದ್ದಂತಿಲ್ಲ. ಈ ಬಗ್ಗೆ ಒಳಗೊಳಗೇ ಕಿತ್ತಾಟಗಳು ನಡೆದು, ಪುಷ್ಪಾ ಸರಣಿಗಾಗಿ ಬಿಟ್ಟಿದ್ದ ಸ್ವಂತ ಜುಟ್ಟನ್ನೇ ಕಿತ್ತೆಸೆಯೋ ಮಟ್ಟಕ್ಕೆ ಅಲ್ಲು ರೊಚ್ಚಿಗೆದ್ದಿದ್ದರೆಂಬ ಬಗ್ಗೆಯೂ ಗುಲ್ಲೆದ್ದಿತ್ತು. ಇದೆಲ್ಲದರ ನಡುವೆ ರಾಜಕೀಯ ಬೆರೆತ ವಿವಾದವೊಂದು ಅಲ್ಲುಗೆ ತಲೆನೋವಾಗಿ ಪರಿಣಮಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಲು ವೈಎಸ್ ಆರ್ ಸಿಪಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ್ದೇ ಕಾನೂನು ಹೋರಾಟ ನಡೆಸುವಂತೆ ಮಾಡಿದೆ. ಈ ವಿವಾದದಿಂದ ಬಚಾವಾಗುವ ಸಲುವಾಗಿ ಈಗ ಅಲ್ಲು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಇದೆಲ್ಲದಕ್ಕೆ ಕಾರಣವಾದದ್ದು ಈ ವರ್ಷ ನಡೆದಿದ್ದ ಆಂಧ್ರ ವಿಧಾನಸಭಾ ಚುನಾವಣೆ. ವೈ ಎಸ್ ಆರ್ ಸಿ ಪಿ ಪಕ್ಷದಿಂದ ಈ ಬಾರಿ (shilpa ravichandra reddy) ಶಿಲ್ಪಾ ರವಿಚಂದ್ರಾ ರೆಡ್ಡಿ ಕಣಕ್ಕಿಳಿದಿದ್ದರು. ಸ್ನೇಹಕ್ಕೆ ಕಟ್ಟು ಬಿದ್ದಿದ್ದ ಅಲ್ಲು ಅರ್ಜುನ್ ಶಿಲ್ಪಾ ರವಿಚಂದ್ರಾ ರೆಡ್ಡಿ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು. ಅಲ್ಲು ಆಗಮನದಿಂದಾಗಿ ಪ್ರಚಾರ ಸಭೆಗಳಿಗೆ ಹೊಸಾ ಆವೇಗ ಬಂದಂತಾಗಿತ್ತು. ಇದು ಸಹಜವಾಗಿಯೇ (pawan kalyan) ಪವನ್ ಕಲ್ಯಾಣ್ ಸೇರಿದಂತೆ ವಿರೋಧಿ ಬಣಗಳಿಗೆ ನುಂಗಲಾರದ ತುತ್ತಿನಂತಾಗಿತ್ತು. ಇದೇ ಹಂತದಲ್ಲಿ ಶಿಲ್ಪ ರವಿಚಂದ್ರಾರೆಡ್ಡಿ ಮನೆಯಲ್ಲಿ ನಡೆದಿದ್ದ ಪೂರ್ವಭಾವಿ ಸಭೆಯಲ್ಲಿ ಅಲ್ಲು ಅರ್ಜುನ್ ಭಾಗಿಯಾಗಿದ್ದ ಬಗ್ಗೆಯೂ ಚರ್ಚೆಗಳು ನಡೆದಿದ್ದವು. ಈ ಬಗ್ಗೆ ರಾಜಕೀಯ ವಿರೋಧಿ ಬಣ ದೊಡ್ಡ ಮಟ್ಟದಲ್ಲಿಯೇ ಹುಯಿಲೆಬ್ಬಿಸಿದ್ದವು. ಕಡೆಗೂ ಚುನಾವಣಾ ಆಯೋಗ ನೀತಿ ಸಂಹಿತೆ ಉಲ್ಲಂಘನೆಯಾಗಿದೆಯೆಂದು ದೂರು ದಾಖಲಿಸಿಕೊಂಡಿತ್ತು.
ಸದರಿ ಸಭೆಗೆ ಪೂರ್ವಾನುಮತಿ ಪಡೆದಿರಲಿಲ್ಲ ಎಂಬುದೂ ಸೇರಿದಂತೆ ನಾನಾ ಆರೋಪ ಮಾಡಲಾಗಿತ್ತು. ಈ ಸಂಬಂಧವಾಗಿ ಚುನಾವಣಾ ಆಯೋಗ ಅಲ್ಲು ಅರ್ಜುನ್ ಮತ್ತು ರವಿ ಮೇಲೆ ದೂರು ದಾಖಲಿಸಿಕೊಂಡಿತ್ತು. ಈ ಸಂಬಂಧವಾಗಿ ಸ್ಪಷ್ಟೀಕರಣ ನೀಡಿದ್ದ ಅಲ್ಲು, ಸ್ನೇಹಕ್ಕೆ ಕಟ್ಟುಬಿದ್ದು ರವಿ ಪರವಾಗಿ ಪ್ರಚಾರ ನಡೆಸಿದ್ದಾಗಿ ಹೇಳಿ, ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂಬುದನ್ನೂ ಒತ್ತಿ ಹೇಳಿದ್ದರು. ಆದರೂ ಕೂಡಾ ವಿವಾದವೆಂಬುದು ಯಥಾಪ್ರಕಾರವಾಗಿ ಮುಂದುವರೆದಿತ್ತು. ಇದೀಗ ಈ ದೂರನ್ನು ವಜಾಗೊಳಿಸುವಂತೆ ಕೋರಿ ಅಲ್ಲು ಅರ್ಜುನ್ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಬಗ್ಗೆ ನಡೆಯಲಿರೋ ವಿಚಾರಣೆಯ ಮೂಲಕ ಆಂಧ್ರ ರಾಜಕೀಯ ಮತ್ತು ಸಿನಿಮಾ ರಂಗದಲ್ಲಿ ನಡೆಯುತ್ತಿರುವ ಶೀತಲ ಸಮರ ನಿರ್ಣಾಯಕ ಘಟ್ಟ ತಲುಪಲಿದೆ.