ದಕ್ಷಿಣ ಭಾರತೀಯ ಚಿತ್ರರಂಗದ ದಿಕ್ಕಿನಿಂದೀಗ ಹೊಸ ಗಾಳಿ ಬೀಸುತ್ತಿದೆ. ಆದರೆ, ಅದು (bollywood stars) ಬಾಲಿವುಡ್ಡಿನ ಸ್ಟಾರ್ ನಟರ ಪಾಲಿಗೆ ಅಕ್ಷರಶಃ ಬಿರುಗಾಳಿಯಂತೆ ಭಾಸವಾಗುತ್ತಿದೆ. ಯಾಕೆಂದರೆ, ಒಂದು ಕಾಲದಲ್ಲಿ ಈಗ ದಕ್ಷಿಣದ (south film industry) ಮುಂದೆ ಮಂಕೆದ್ದು ಕೂತಿರುವ ಸ್ಟಾರುಗಳೇ ದಕ್ಷಿಣ ಭಾರತೀಯ ಚಿತ್ರರಂಗವನ್ನು ಅಸಡ್ಡೆಯಿಂದ ಕಾಣುತ್ತಿದ್ದರು. ಖಾಸಗೀ ವಲಯದಲ್ಲಿ ಈ ಬಗ್ಗೆ ಲೇವಡಿಯ ಮಾತುಗಳು ಹರಿದಾಡುತ್ತಿದ್ದವು. ಬಹುಶಃ ಹಾಗೊಂದು ತಿಮಿರು (bollywood) ಬಾಲಿವುಡ್ ಮಂದಿಯ ನೆತ್ತಿಗೇರಿದ್ದ ಘಳಿಗೆಯಲ್ಲಿ, ದಕ್ಷಿಣದಿಂದ ಇಂಥಾದ್ದೊಂದು ಬಿರುಗಾಳಿ ಬೀಸಿ ಬರಬಹುದೆಂಬ ಸಣ್ಣ ಅಂದಾಜೂ ಇರಲಿಕ್ಕಿಲ್ಲ. ಇದೀಗ ಎಲ್ಲವನ್ನೂ ಮೀರಿದ್ದೊಂದು ಪಲ್ಲಟ ದಕ್ಷಿಣ ಭಾರತೀಯ ಚಿತ್ರರಂಗ, ಅದರಲ್ಲಿಯೂ ವಿಶೇಷವಾಗಿ ತೆಲುಗಿನ ದಿಕ್ಕಿಂದ ನಡೆಯುತ್ತಿದೆ. ಇಲ್ಲಿನ ಹೀರೋಗಳು ವರ್ಷಕ್ಕೊಬ್ಬರಂತೆ ಹಿಂದಿ ಮಾರುಕಟ್ಟೆಯನ್ನು ಕಬ್ಜಾ ಮಾಡಿಕೊಳ್ಳುತ್ತಿದ್ದಾರೆ.
ಈಗೊಂದಷ್ಟು ವರ್ಷಗಳ ಹಿಂದಿನವರೆಗೂ ತೆಲುಗು ಚಿತ್ರರಂಗದ ಬಗ್ಗೆ ಬಾಲಿವುಡ್ ಮಂದಿ ಮಾಮೂಲು ತಾತ್ಸಾರ ಹೊಂದಿದ್ದರು. ಯಾವಾಗ ಬಾಹುಬಲಿ ಚಿತ್ರ ತೆರೆಗಂಡಿತೋ, ಆ ಕ್ಷಣದಿಂದಲೇ ಒಂದು ಕಂಪನ ಬಾಲಿವುಡ್ಡಿನ ತುಂಬೆಲ್ಲ ಸಂಚಲನ ಸೃಷ್ಟಿಸಿತ್ತು. ಅದುವರೆಗೆ ದಕ್ಷಿಣದ ಸಿನಿಮಾ ಮಂದಿ ಬಾಲಿವುಡ್ ಸಿನಿಮಾವೊಂದು ಬಿಡುಗಡೆಯಾದರೆ, ಹೀಗೆಯೇ ಕಂಪಿಸುತ್ತಿದ್ದರು. ಅಂಥಾದ್ದೊಂದು ಭಯ ಬಾಹುಬಲಿಯ ಮೂಲಕ ಬಾಲಿವುಡ್ಡಿಗೇ ರವಾನೆಯಾಗಿ ಬಿಟ್ಟಿದೆ. ಬಾಹುಬಲಿ೨ ಬಾಲಿವುಡ್ಡಿನಲ್ಲಿ ಅಂಥಾದ್ದೇ ವಾತಾವರಣ ಸೃಷ್ಟಿಸಿದ್ದದ್ದು ಸತ್ಯ. ಆ ಬಳಿಕ ತೆರೆಗಂಡ ಪ್ರಭಾಸ್ ಚಿತ್ರಗಳು ನೆಗೆಟಿವ್ ಅಂಶಗಳಾಚೆಗೂ ಬಾಲಿವುಡ್ ಮಾರುಕಟ್ಟೆಯಲ್ಲಿ ಕಮಾಲ್ ಮಾಡಿದ್ದವು.
ಒಬ್ಬ ಪ್ರಭಾಸ್ ಹೀಗೆ ಬಾಲಿವುಡ್ ಮಾರುಕಟ್ಟೆಯಲ್ಲಿ ಸಂಚಕಲನ ಸೃಷ್ಟಿಸುತ್ತಲೇ, ಅದು ತೆಲುಗು ಚಿತ್ರಂಗದ ಇತರೇ ನಾಯಕರಿಗೂ ಪ್ರವಹಿಸಿದಂತಾಗಿದೆ. ಅದರ ಫಲವಾಗಿಯೇ ತೆಲುಗಿನಲ್ಲೇ ಗಿರಕಿ ಹೊಡೆಯುತ್ತಿದ್ದ ಅಲ್ಲು ಅರ್ಜುನ್ ವೃತ್ತಿಬದುಕು ಏಕಾಏಕಿ ಮತ್ತೊಂದು ಹಂತಕ್ಕೇರಿದೆ. ಪುಷ್ಪಾ ಚಿತ್ರ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಿ, ಬಾಲಿವುಡ್ಡಿಗೆ ಅಕ್ಷರಶಃ ಶಾಕ್ ಕೊಟ್ಟಿದೆ. ಇದೀಗ ಪುಷ್ಪಾ೨ ದೊಡ್ಡ ಮಟ್ಟದ ಹೈಪುಗಳೊಂದಿಗೆ ಬಿಡುಗಡೆಗೆ ತಯಾರಾಗಿದೆ. ಈಗಾಗಲೇ ಪುಷ್ಪರಾಜ್ ಗೆ ಬಾಲಿವುಡ್ಡಲ್ಲೊಂದು ಕಟ್ಟುಮಸ್ತಾದ ಮಾರುಕಟ್ಟೆ ಸೃಷ್ಟಿಯಾಗಿದೆ. ಹಾಗೆ ನೋಡಿದರೆ, ನಿರ್ದೇಶಕ ಸುಕುಮಾರನ ಸೋಂಭೇರಿತನದಿಂದಾಗಿ ಈ ಚಿತ್ರದ ಬಿಡುಗಡೆ ದಿನಾಂಕ ಪದೇ ಪದೆ ಮುಂದಕ್ಕೆ ಹೋಗುತ್ತಿದೆ. ಅದರ ನಿಖರವಾದ ಬಿಡುಗಡೆ ದಿನಾಂಕ ಅನೌನ್ಸ್ ಆದಾಕ್ಷಣ ಬಾಲಿವುಡ್ ಚಿತ್ರಗಳೂ ಒಂದು ಹೆಜ್ಜೆ ಹಿಂದೆ ಸರಿದು ಕಾಯುವಂಥಾ ವಾತಾವರಣ ನಿರ್ಮಾಣಗೊಂಡಿದೆ.
ಹೀಗೆ ಬಾಲಿವುಡ್ ಮಾರುಕಟ್ಟೆಗೆ ಲಗ್ಗೆಯಿಟ್ಟ ಮೂರನೇ ತೆಲುಗು ಸ್ಟಾರ್ ಜ್ಯೂನಿಯರ್ ಎನ್ಟಿಆರ್. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರದ ಮೂಲಕ ಜ್ಯೂ ಎನ್ಟಿಆರ್ ಕೂಡಾ ಬಾಲಿವುಡ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ದೇವರಾ ಚಿತ್ರಕ್ಕೂ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಗೆಲುವು ಸಿಕ್ಕಿದೆ. ಹೀಗೆ ಒಬ್ಬೊಬ್ಬರಾಗಿ ತೆಲುಗು ಹೀರೋಗಳು ಹಿಂದಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ. ಇತ್ತ ಕನ್ನಡದ ಯಶ್ ಕೂಡಾ ಈಗಾಗಲೇ ಹಿಂದಿ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ತಮಿಳಿಗಂತೂ ಅಲ್ಲಿ ಭದ್ರ ನೆಲೆ ಇದ್ದೇ ಇದೆ. ಹೀಗೆ ದಕ್ಷಿಣ ಭಾರತೀಯ ಚಿತ್ರರಂಗ ಹಿಂದಿ ಮಾರುಕಟ್ಟೆಯತ್ತ ಹಂತ ಹಂತವಾಗಿ ದಂಡೆತ್ತಿತ್ತಿ ಹೋಗುತ್ತಿದೆ. ಈ ಹೊತ್ತಿನಲ್ಲಿ ಬಾಲಿವುಡ್ ಸ್ಟಾರ್ ನಟರು ಅಕ್ಷರಶಃ ಮಂಕುಬಡಿದಂತಾಗಿದ್ದಾರೆ. ಸ್ತ್ರೀಯಂಥಾ ಭಿನ್ನ ಜಾಡಿನ ಚಿತ್ರ ಗೆದ್ದಿರೋದು ನಿಜ. ಹಾಗಂತ, ಅದೊಂದು ಗೆಲುವಿನಿಂದ ಸೊರಗಿದ ಬಾಲಿವುಡ್ ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಮುಂದಿನ ದಿನಗಳಲ್ಲಿ ದಕ್ಷಿಣದ ದಿಕ್ಕಿಂದ ಬಾಲಿವುಡ್ಡಿನತ್ತ ಬಿರುಗಾಳಿ ಬೀಸಲಿದೆ!