ಹಿಂಗಾರಿನ ಮುಕ್ತಾಯ ಘಟ್ಟದಲ್ಲಿ ಜಿಬುರು ಮಳೆ ಹನಿಯುವುದು ಮಾಮೂಲು. ಥಂಡಿ, ಧಗೆ, ಚಳಿಯ ಮಿಶ್ರ ವಾತಾವರಣದಲ್ಲಿ ನಾನಾ ವೆರೈಟಿಯ ಜ್ವರಗಳು, ಸಾಂಕ್ರಾಮಿಕಗಳೂ ವಾಡಿಕೆಯಂತೆ ಹಬ್ಬಿಕೊಳ್ಳುತ್ತವೆ. ಆದರೆ, ಈಗೊಂದು ಹತ್ತು ವರ್ಷದಿಂದೀಚೆಗೆ ಮತ್ತೊಂದು ಖಾಯಂ ಕಾಯಿಲೆ ಕರ್ನಾಟಕಕ್ಕೆ ಅಮರಿಕೊಂಡಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ಆಸುಪಾಸಿನಲ್ಲಿ ಆ ಕಾಯಿಲೆ ಶುರುವಾದರೆ, ಮುಗಿಯುವುದು ಹೊಸಾ ವರ್ಷ ಕಣ್ತೆರೆದ ನಂತರವೇ. ಅಂಥಾ ರೋಗದ ಮಂದಿಯನ್ನು ಬಿಡದಿ ಭಾಗದ ಗೋಡೌನೊಂದರಲ್ಲಿ ಕೂಡಿ ಹಾಕಲಾಗುತ್ತೆ. ವಾರವಿಡೀ ಆ ಮಂದಿ ಮನೆ ತುಂಬಾ ವಾಂತಿ, ಕಕ್ಕ ಮಾಡಿಕೊಂಡು ಅದರ ಮೇಲೇ ಉರುಳ್ಯಾಡಿ ರಂಪ ಮಾಡಿಕೊಂಡಿರುತ್ತವೆ. ವಾರದ ಕೊನೇಯಲ್ಲಿ ಖ್ಯಾತ ನಟ ಕಂ ಸಕಲಕಲಾ ವಲ್ಲಭನೊಬ್ಬನ ಎಂಟ್ರಿಯಾಗುತ್ತೆ. ಆತ ವಾರವೊಂದರ ಹಡಬೇ ವೃತ್ತಾಂತದ ಮೂಲಕ್ಕೇ ಕೈ ಹಾಕಿ ಮುಲುಕಲಾರಂಭಿಸುತ್ತಾನೆ. ಒಮ್ಮೊಮ್ಮೆ ಗಾಯಕ್ಕೆ ಮುಲಾಮು ಹಚ್ಚಿ, ನಾಜೂಕಿನಿಂದಲೇ ವಾರವೊಂದರ ಹೇಸಿಗೆಗಳನ್ನೆಲ್ಲ ಜಸ್ಟ್ ಮಾತ್ ಮಾತಲ್ಲಿ ಗುಡಿಸಿ, ಸಾರಿಸಿ ಗಾಯಬ್ ಆಗಿ ಬಿಡುತ್ತಾನೆ. ಅಂದಹಾಗೆ, ಆ ಗೋಡಾನಿನ ಹೆಸರು ಬಿಗ್ ಬಾಸ್ ಮನೆ ಮತ್ತು ಪ್ರಖ್ಯಾತ ಸಕಲಕಲಾ ವಲ್ಲಭ (kiccha sudeepa) ಕಿಚ್ಚಾ ಸುದೀಪ!
ನಿಜ, ಕಿಚ್ಚಾ ಸುದೀಪ್ (kiccha sudeep) ಹೆಚ್ಚಿನ ಸಂದರ್ಭಗಳಲ್ಲಿ ಅತ್ಯಂತ ಪ್ರಜ್ಞಾವಂತಿಕೆಯಿಂದ ನಡೆದುಕೊಳ್ಳುತ್ತಾರೆ. ಘನತೆ ಮುಕ್ಕಾಗದಂತೆ ಮಾತಾಡುತ್ತಾರೆ. ಆದರೆ, ಬರಬರುತ್ತಾ ಆತನ ನಡವಳಿಕೆಗಳಲ್ಲಿ ಇದುವರೆಗೂ ತಡೆಹಿಡಿದಂತಿದ್ದ ನಾಜೂಕಯ್ಯ ಅಪ್ರಜ್ಞಾಪೂರ್ವಕವಾಗಿ ಹಣಕಿ ಹಾಕಲಾರಂಭಿಸಿದ್ದಾನೆ. ಬೇಸ್ ವಾಯ್ಸಿನ ಭರಾಟೆಯಲ್ಲಿ ತನ್ನ ವಿರುದ್ಧ ಏಳೋ ಪ್ರಶ್ನೆಗಳನ್ನು ಹತ್ತಿಕ್ಕುವ ಅತಿ ಬುದ್ಧಿವಂತಿಕೆಯೂ ಯಥೇಚ್ಚವಾಗಿ ಪ್ರದರ್ಶನಗೊಳ್ಳಲಾರಂಭಿಸಿದೆ. ಇತ್ತೀಚೆಗೆ ಸಾಹೇಬರು ಪ್ರೆಸ್ ಮೀಟುಗಳನ್ನು ಎದುರಿಸುವ ರೀತಿಯೂ ಬದಲಾಗಿ ಬಿಟ್ಟಿದೆ. ಅದಕ್ಕೆ ರಮ್ಮಿ ಆಟದ ಬಗ್ಗೆ ತೂರಿಬಂದ ಪ್ರಶ್ನೆಗೆ ಕಿಚ್ಚನ ಕಡೆಯಿಂದ ಸಿಕ್ಕ ದುರಹಂಕಾರದ ಉತ್ತರಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲವೇನೋ…
ಪ್ರತೀ ಸಾರಿಯೂ (bigboss season11) ಬಿಗ್ ಬಾಸ್ ಸ್ಪರ್ಧಿಗಳಾಗುವವರ ಬಗ್ಗೆ ತಕರಾರುಗಳೇಳುತ್ತವೆ. ಆದರೆ ಕಿಚ್ಚ ಯಾವತ್ತೂ ಆ ಬಗ್ಗೆ ನೇರಾನೇರ ಉತ್ತರ ಕೊಟ್ಟವರಲ್ಲ. ಬಂದು ಹೋದವರೆಲ್ಲ ಮಹಾತ್ಮರೇ ಎಂಬಂಥಾ ಗಾಢ ಭಂಡತನವೊಂದು ಅವರ ಮುಖದಲ್ಲಿ ಸದಾ ಹೊಳೆಯುತ್ತಿರುತ್ತದೆ. ಬರಬರುತ್ತಾ ಜೈಲಿಗೆ ಹೋಗಬಹುದಾದ ಆಸಾಮಿಗಳು, ಜೈಲಿಂದ ಬಂದವರೇ ಬಿಗ್ ಬಾಸ್ ಕ್ಯಾಂಡಿಡೇಟುಗಳು ಎಂಬಂತಾಗಿತ್ತು. ಈ ಬಾರಿ ಅದು ನೂರಕ್ಕೆ ನೂರರಷ್ಟು ಋಜುವಾತಾಗಿದೆ; ವಂಚನೆ ಕೇಸಲ್ಲಿ ಜೈಲುಪಾಲಾಗಿದ್ದ ಚೈತ್ರಾ ಕುಂದಾಪುರ ಎಂಬಾಕೆ ಬಿಗ್ ಬಾಸ್ ಮನೆ ಸೇರಿಕೊಳ್ಳುವ ಮೂಲಕ. ಈಕೆಯನ್ನು ಅದ್ಯಾವ ಮಾನದಂಡದ ಮೇಲೆ ಆರಿಸಿಕೊಂಡಿದ್ದಾರೋ ಕಿಚ್ಚನಿಗೆ ಮಾತ್ರವೇ ಗೊತ್ತಿರಲು ಸಾಧ್ಯ. ಬಾಯಿ ಬಿಟ್ಟರೆ ಹಿಂದುತ್ವ ಅಂತೆಲ್ಲ ಗಂಟಲು ಹರಿದುಕೊಳ್ಳುತ್ತಿದ್ದಾಕೆ ಚೈತ್ರಾ. ಬಾಬು ಪೂಜಾರಿ ಎಂಬಾತನಿಗೆ ಬಿಜೆಪಿ ಟಿಕೆಟು ಕೊಡಿಸೋ ನೆಪದಲ್ಲಿ ಕೋಟಿ ಕೋಟಿ ಕಿತ್ತದ್ದಷ್ಟೇ ಈಕೆಯ ಸಾಧನೆ.
ಮಾತೆತ್ತಿದ್ದರೆ ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚೋದು ಈಕೆಯ ಮಾಮೂಲು ಖಯಾಲಿ. ಧರ್ಮರಕ್ಷಕಿಯಂತೆ ಪೋಸು ಕೊಡುತ್ತಾ, ಆ ಪ್ರಭೆಯಲ್ಲಿ ಕಾಸೆತ್ತೋ ದಂಧೆಗಿಳಿದಿದ್ದಳೆಂಬ ಆರೋಪ ಚೈತ್ರಾ ಮೇಲಿದೆ. ಈಕೆ ಅದೆಂಥಾ ಕೆಲಸ ಮಾಡಿದ್ದಾಳೆಂದರೆ, ಅಸಲೀ ಹಿಂದೂತ್ವದ ಪ್ರತಿಪಾದಕರೇ ಚೈತ್ರಾಳ ಹೆಸರೆತ್ತಿದರೆ ಕೆಂಡ ಕಾರುತ್ತಾರೆ. ಇಂಥವಳನ್ನು ಬಿಗ್ ಬಾಸ್ ಶೋಗೆ ಕರೆದುಕೊಂಡಿರೋ ಆಯೋಜಕರು ಈ ಸಮಾಜಕ್ಕೆ ಯಾವ ರೀತಿಯ ಸಂದೇಶ ರವಾನಿಸುತ್ತಾರೆ? ಈವತ್ತಿಗೆ ಅಸಲೀ ಪ್ರತಿಭೆ ಹೊಂದಿರುವ ಅನೇಕರು ಬಿಗ್ ಬಾಸ್ ಶೋನಲ್ಲಿ ಒಂದು ಅವಕಾಶ ಸಿಗಲೆಂಬಂತೆ ಕಾದು ಕೂತಿರೋದು ಸತ್ಯ. ಇಂಥಾ ತಲೆತಿರುಕ ಆಸಾಮಿಗಳನ್ನು ಒಳಬಿಟ್ಟುಕೊಂಡಾಗ ಪ್ರತಿಭಾವಂತರ ಮನಃಸ್ಥಿತಿ ಹೇಗಾಗಬೇಡ? ಪ್ರತಿಭೆ ಹೊಂದಿರುವವರೆಲ್ಲ ಧಗಾ ದಗಲುಬಾಜಿ ನಡೆಸಿ ಒಂದು ರೌಡು ಜೈಲಿಗೆ ಹೋಗಿ ಬರೋದಷ್ಟೇ ಈ ಶೋಗೆ ಬೇಕಾದ ಅರ್ಹತೆ ಅನ್ನಿಸೋದಿಲ್ಲವೇ?
ಖಂಡಿತವಾಗಿಯೂ ಇಂಥಾ ಪ್ರಶ್ನೆಗಳಿಗೆ ನಾಜೂಕಯ್ಯ ಕಿಚ್ಚ ಉತ್ತರಿಸೋದಿಲ್ಲ. ರಮ್ಮಿ ಎಂಬೋ ಆನ್ ಲೈನ್ ಗೇಮ್ ಬಿಗ್ ಬಾಸ್ ಸಂಗ ಮಾಡಿದೆಯಲ್ಲಾ? ಈ ಬಗ್ಗೆ ಎದ್ದ ಪ್ರಶ್ನೆಗೆ ಕಿಚ್ಚ ನಾಜೂಕಿನ ಉತ್ತರ ಕೊಟ್ಟಿದ್ದಾರೆ. ಇದರ ಬಗ್ಗೆ ಆಳೋ ಸರ್ಕಾರವನ್ನು ಕೇಳಬೇಕು ಅಂತೆಲ್ಲ ಮೇಧಾವಿಯಂತೆ ಮಾತಾಡಿದ್ದಾರೆ. ಎಲ್ಲವನ್ನೂ ಆಳೋ ಸರ್ಕಾರಗಳೇ ಮಾಡೋದಾದರೆ ಕಿಚ್ಚನಂಥಾ ಹೀರೋಗಳಿಗೇನು ಕೀಳೋ ಕೆಲಸವೇ? ಓರ್ವ ಹೀರೋ ಆಗಿ ಕಿಚ್ಚನಿಗೆ ಸಾಮಾಜಿಕ ಕಳಕಳಿ ಇಲ್ಲವೇ? ರಮ್ಮಿ ಸರ್ಕಲ್ಲಿನಂಥಾ ಆನ್ ಲೈನ್ ಜೂಜಿನ ದೆಸೆಯಿಂದ ಈವತ್ತು ಅನೇಕರ ಸಂಸಾರ ಬೀದಿಗೆ ಬಂದಿದೆ. ಮತ್ತೆ ಕೆಲ ಮಂದಿ ಸಾಲದ ಶೂಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂಥಾ ಸಾವುಗಳ ಸೂತಕ ಸೋಕದ ವ್ಯಕ್ತಿತ್ವವೊಂದು ಅದು ಹೇಗೆ ಹೀರೋ ಆಗಿ ಮೆರೆಯಲು ಸಾಧ್ಯ? ಕಿಚ್ಚನ ಬಗ್ಗೆ ಒಂದು ಘಟ್ಟದಲ್ಲಿ ಗೌರವ ಹೊಂದಿದ್ದವರಿಗೆಲ್ಲ ಈಗ ಭ್ರಮನಿರಸನವಾಗಿದೆ. ಯಾಕೆಂದರೆ, ಆತನ ವ್ಯಕ್ತಿತ್ವವೀಗ ಕಾಸಿನಾಸೆಯ ಕೊಚ್ಚೆಯಲ್ಲಿದೆ. ಮಿಸ್ಟರ್ ಸುದೀಪ್… ನಿಮ್ಮ ಸೀಮೆಗಿಲ್ಲದ ಬೇಸ್ ವಾಯ್ಸಿನಿಂದ ಸತ್ಯವನ್ನು ಹತ್ತಿಕ್ಕಲಾಗೋದಿಲ್ಲ!