ಕೀರ್ತಿ ಶನಿ ನೆತ್ತಿಯೇರಿ ಕುಳಿತಾಗ ಎಂಥೆಂಥಾ ಘಟಾನುಘಟಿಗಳೆಲ್ಲ ಹಾಳಾಗಿ ಹೋದದ್ದಿದೆ. ಅದರಲ್ಲಿಯೂ ಈ ಸಿನಿಮಾ ಎಂಬ ಭ್ರಾಮಕ ಜಗತ್ತಿನಲ್ಲಿ ಸಿಕ್ಕ ಗೆಲುವನ್ನು ಸಂಭಾಳಿಸೋದೇ ಒಂದು ಸಾಹಸ. (kannada film industry) ಕನ್ನಡದ ಮಟ್ಟಿಗೆ ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಥರದ ಕೆಲವೇ ಕೆಲ ನಟರಿಗಷ್ಟೇ ಅಂಥಾದ್ದೊಂದು ಸಮಚಿತ್ತ ದಕ್ಕಿದೆ. ಅದರಾಚೆಗೆ ಗೆಲುವು ಕಾಣುತ್ತಲೇ ಹೀನಾಮಾನ ಮೆರೆದು ಗಟಾರ ಸೇರಿದ ನಟರಿಗೂ ಇಲ್ಲ ಬರವಿಲ್ಲ. ಹಾಗಿರುವಾಗ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿರುವ, ಬಾಕ್ಸಾಫೀಸ್ ಸುಲ್ತಾನ ಅನ್ನಿಸಿಕೊಂಡಿರುವ ದರ್ಶನ್ ಹಾಳಾಗದೆ ಇನ್ನೇನಾಗಿಯಾನು? ಸಿನಿಮಾ ರಂಗದಲ್ಲಿ ಒಂದು ಹಂತ ತಲುಪಿದ ಬಳಿಕ ಓರ್ವ ನಟನ ಸುತ್ತಾ ಎಂಥವರಿದ್ದಾರೆಂಬುದರ ಮೇಲೆ ಆತನ ವ್ಯಕ್ತಿತ್ವ, ಭವಿಷ್ಯ ನಿರ್ಧಾರವಾಗುತ್ತೆ. ದುರಂತವೆಂದರೆ, ದುರಹಂಕಾರಿ ದರ್ಶನ್ ವಲಯದಲ್ಲಿ ಗುಡ್ಡೆಬಿದ್ದಿದ್ದದ್ದು ಹಣವಂತ ಪೊರ್ಕಿಗಳು ಮತ್ತು ಅಪ್ಪಟ ಸೈಕೋಗಳ ಪಟಾಲಮ್ಮು!
ಹಾಗೆ ನೋಡಿದರೆ, ಆರಂಭದ ದಿನಗಳಲ್ಲಿ ದರ್ಶನ್ ಸುತ್ತ ತಲೆ ನೆಟ್ಟಗಿರುವ ಆಸಾಮಿಗಳಿದ್ದದ್ದು ಸತ್ಯ. ಬರಬರುತ್ತಾ ಎಣ್ಣೆ ಏಟಲ್ಲಿ ಸಿಕ್ಕವರನ್ನೆಲ್ಲ ಸ್ಲಂ ಸಂಸ್ಕøತದಲ್ಲಿ ನಿಂಧಿಸುತ್ತಾ, ಕೈಗೆ ಸಿಕ್ಕವರನ್ನು ಸಾಯುವಂತೆ ಬಡಿಯಲಾರಂಭಿಸಿದನಲ್ಲಾ ದರ್ಶನ್? ಈ ಅಟಾಟೋಪ ನೋಡಿ ಸುಸ್ತಾದ ಒಂದಷ್ಟು ಮಂದಿ ಯಾವತ್ತೋ ಕಳಚಿಕೊಂಡಿದ್ದಾರೆ. ದರ್ಶನ್ ಯಾವ ಹಂತ ತಲುಪಿಕೊಂಡನೆಂದರೆ, ಬುದ್ಧಿ ಹೇಳೋ ಧೈರ್ಯ ಮಾಡುವವರ್ಯಾರೂ ಇರಲಿಲ್ಲ. ಅಕಸ್ಮಾತು ಯಾವನಾದರೂ ತಿಳಿಹೇಳಲು ಮುಂದಾದರೆ ಅದನ್ನು ಕೇಳಿಸಿಕೊಳ್ಳುವ ಸೈರಣೆಯೂ ಆತನಿಗಿರಲಿಲ್ಲ. ಕೊನೆ ಕೊನೆಗೆ ಹಣವಂತ ಪುಂಡರು, ದಗಲ್ಬಾಜಿಗಳು, ವಿಕೃತ ಕ್ರಿಮಿಗಳು ಮತ್ತು ಗಾಂಜಾ ಏಟಿನ ಸೈಕೋಗಳಷ್ಟೇ ದರ್ಶನ್ ಅಂತಃಪುರದಲ್ಲಿ ಉಳಿದುಕೊಂಡಿದ್ದರು.
ಅಂಥಾದ್ದೊಂದು ಸೈಕೋ ಸಂತಾನವನ್ನೀಗ ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ. ಆತ ಧನರಾಜ್ ಅಲಿಯಾಸ್ ನಾಯಿ ರಾಜು. ಮೊನ್ನೆ ದಿನ ದರ್ಶನ್ ಗ್ಯಾಂಗು ಪಟ್ಟಣಗೆರೆ ಶೆಡ್ಡಿನಲ್ಲಿ ರೇಣುಕಾ ಸ್ವಾಮಿಯನ್ನು ಸಾಯಬಡಿದಿದ್ದರಲ್ಲಾ? ಹಾಗೆ ದರ್ಶನ್ ಗ್ಯಾಂಗಿನ ಪ್ರಹಾರದಿಂದ ರೇಣುಕನ ಪೀಚು ದೇಹ ಪ್ರಜ್ಞೆ ತಪ್ಪಿತ್ತು. ಆ ಹಂತದಲ್ಲಿ ದರ್ಶನ್ ಗ್ಯಾಂಗಿನ ಮಂದಿ ಕರೆ ಮಾಡಿದ್ದು ಇದೇ ನಾಯಿ ರಾಜನನ್ನು. ಆತ ಮೆಗ್ಗರ್ ಮೂಲಕ ವಿದ್ಯುತ್ ಶಾಕ್ ಕೊಡೋದ್ರಲ್ಲಿ ಪಂಟರ್. ಈಗ ದರ್ಶನ್ ಜೊತೆ ತಗುಲಿಕೊಂಡಿರೋ ವಿನಯ್ ನ ಅತ್ಯಾಪ್ತ ನಾಯಿ ರಾಜ. ಈತ ಬಂದವನೇ ನೆಲಕ್ಕೊರಗಿದ್ದ ರೇಣುಕಾಸ್ವಾಮಿಗೆ ಶಾಕ್ ಕೊಟ್ಟು ಎಬ್ಬಿಸಿದ್ದನಂತೆ. ಹಾಗೆ ನಿತ್ರಾಣವಾಗಿದ್ದ ರೇಣುಕನ ಮೇಲೆ ದರ್ಶನನ ಸೈಕೋ ಗ್ಯಾಂಗು ಮತ್ತೆ ಬಡಿದು ಕೊಂದು ಕೆಡವಿತೆಂಬುದು ಪೊಲೀಸರು ಕಲೆ ಹಾಕಿರುವ ಮಾಹಿತಿ.
ಈ ನಾಯಿ ರಾಜ ರಾಜರಾಜೇಶ್ವರಿ ನಗರದಲ್ಲಿಯೇ ವಾಸವಿದ್ದಾನೆ. ಆರೋಪಿ ವಿನಯ್ ಅತ್ಯಾಪ್ತನಾದ ಈತ ಆರಂಭದಲ್ಲಿ ಡಾಗ್ ಬ್ರೀಡಿಂಗ್ ನಡೆಸುತ್ತಿದ್ದ. ಈ ಹಂನವಂತರ ಮಕ್ಕಳಿಗೆ ಸಾವಿರಗಟ್ಟಲೆ ಕೊಟ್ಟು ನಾಯಿ ಮರಿ ಸಾಕೋ ಖಯಾಲಿ ಇರುತ್ತದಲ್ಲಾ? ಅಂಥಾದ್ದೇ ಶೋಕಿ ಹೊಂದಿದ್ದ ವಿನಯನ ಸಂಪರ್ಕಕ್ಕೆ ಬಂದಿದ್ದ. ಅಲ್ಲಿಂದ ದರ್ಶನ್ ಪಾಳೆಯಕ್ಕೂ ದಾಟಿಕೊಂಡಿದ್ದ ನಾಯಿರಾಜನಿಗೆ, ದರ್ಶನ್ ಮನೆಯ ನಾಯಿಗಳ ದೇಖಾರೇಖಿ ನೋಡಿಕೊಳ್ಳೋ ಕೆಲಸ ಸಿಕ್ಕಿತ್ತು. ಹೀಗೆ ಹಗಲು ಹೊತ್ತು ದರ್ಶನ್ ಮನೆ ನಾಯಿಗಳನ್ನ ನೋಡಿಕೊಳ್ಳುತ್ತಿದ್ದ ಧನರಾಜ್, ರಾತ್ರಿಯಾಗುತ್ತಲೇ ವಿನಯ್ ಗ್ಯಾಂಗು ಸೇರಿಕೊಳ್ಳುತ್ತಿದ್ದ. ಅಲ್ಲಿ ವಿನಯ್ ತನ್ನ ವ್ಯವಹಾರ ಸಂಬಂಧಿತವಾದ ದುಶ್ಮನ್ ಗಳನ್ನು ಇದೇ ಶೆಡ್ಡಿಗೆ ಎತ್ತಾಕಿಕೊಂಡು ಬರುತ್ತಿದ್ದ. ಅಲ್ಲಿಯೂ ರೇಣುಕಾ ಸ್ವಾಮಿಗಾದಂಥಾದ್ದೇ ಪ್ರಹಾರ ನಡೆಯುತ್ತಿತ್ತು. ಒದೆ ತಿಂದು ಪ್ರಜ್ಞೆಇದವರನ್ನು ಮೆಗ್ಗರ್ ಮೂಲಕ ಎಬ್ಬಿಸೋ ಕಸುಬನ್ನು ನಾಯಿ ರಾಜ ಮಾಡುತ್ತಿದ್ದ. ಹೀರೋ ಒಬ್ಬನ ಸುತ್ತ ಇಂಥಾ ಕ್ಷುದ್ರ ಜೀವಿಗಳೇ ತುಂಬಿದ್ದರೆ ಅನಾಹುತವಲ್ಲದೇ ಬೇರೇನು ಘಟಿಸಲು ಸಾಧ್ಯ?