ರೇಣುಕಾಸ್ವಾಮಿ (renukaswamy murder case) ಕೊಲೆ ಕೇಸು ದಿನಕ್ಕೊಂದೊಂದು ಟ್ವಿಸ್ಟು ಪಡೆದುಕೊಳ್ಳುತ್ತಿದೆ. ದರ್ಶನ್ (darshan) ಎಂಬ ಸ್ಟಾರ್ ನಟನೊಬ್ಬನ ಅನಾಹುತಕಾರಿ ಮುಖಗಳ ಭಯಾನಕ ದರ್ಶನವೂ ಆಗುತ್ತಿದೆ. ಈ ನಡುವೆ ರೇಣುಕಾ ಸ್ವಾಮಿಯಂತೆ ಇನ್ನೂ ಅದೆಷ್ಟು ಮಂದಿಯನ್ನು ಈ ಗ್ಯಾಂಗು ಬಡಿದು ಮೋರಿಗೆಸೆದಿರಬಹುದು ಎಂಬಂತೆ ಸಾರ್ವಜನಿಕ ವಲಯದಲ್ಲಿಯೇ ಚರ್ಚೆಗಳಾಗುತ್ತಿವೆ. ಅಂಥಾ ಒಂದೊಂದೇ ಕೇಸುಗಳು ಹೊರಬಂದರೆ, ದರ್ಶನ್ ಕತ್ತಿಗೆ ಸುತ್ತಿಕೊಂಡಿರೋ ಕುಣಿಕೆ ಮತ್ತಷ್ಟು ಬಿಗಿಯಾಗುತ್ತೆಂಬ ದಿಕ್ಕಿನಲ್ಲಿಯೂ ಚರ್ಚೆಗಳು ನಡೆಯುತ್ತಿವೆ. ಇದೆಲ್ಲದರ ನಡುವೆ ಸಿನಿಮಾ ವಲಯದಲ್ಲಿ ಥಟ್ಟನೆ ನೆನಪಾದವನು ಮಲ್ಲಿ ಅಲಿಯಾಸ್ ಮಲ್ಲಿಕಾರ್ಜುನ ಸಂಕನಗೌಡರ್. ಬಹುಶಃ ದರ್ಶನ್ ಪ್ರಭೆಯಲ್ಲಿ ಮಲ್ಲಿಯ ಕೈಗೆ ಕೋಟಿ ಕೋಟಿ ಕೊಟ್ಟ ಕಳಕೊಂಡವರಿಗೆ ಬಿಟ್ಟರೆ ಮಿಕ್ಕವರಿಗೆಲ್ಲ ಮಲ್ಲಿ ಮರೆತೇ ಹೋಗಿದ್ದ. ಯಾವಾಗ ದಾಸನ ಕ್ರೂರ ಮುಖದದರ್ಶನವಾಯ್ತೋ ಆಗ ಈ (darshan manager malli) ಮ್ಯಾನೇಜರ್ ಮಲ್ಲಿಯ ದೇಹ ಅದ್ಯಾವ ಮೋರಿಯಲ್ಲಿ ಕೊಳೆತು ಜೀರ್ಣವಾಗಿದೆಯೋ ಅಂತೊಂದು ಅನುಮಾನ ಮೂಡಿದ್ದು ಸಹಜವೇ!
ಪವಿತ್ರಾಳಿಗೆ ಮೆಸೇಜು ಬಿಟ್ಟ ರೇಣುಕಾಸ್ವಾಮಿಯನ್ನು ಆ ಪರಿಯಾಗಿ ಹಿಂಸಿಸಿ ಕೊಂದಿತ್ತಲ್ಲಾ ಡಿ ಗ್ಯಾಂಗು? ನಂಬಿಕೆ ದ್ರೋಹ ಮಾಡಿ ಕೋಟಿ ಕೋಟಿ ವಂಚಿಸಿದ್ದ ಮಲ್ಲಿಯನ್ನು ಸುಮ್ಮನೆ ಬಿಟ್ಟಿರಲು ಸಾಧ್ಯವೇ? ಹೀಗೊಂದು ಅನುಮಾನ ಹೊಗೆಯಾಡಿ, ಕೆಲ ಮೀಡಿಯಾಗಳಲ್ಲಿ ಶರಂಪರ ಚರ್ಚೆಗಳು ನಡೆಯುತ್ತಿವೆ. ಕೆಲ ಮಂದಿ ಮಲ್ಲಿಯ ಕೇಸು ದರ್ಶನ್ ಪಾಲಿಗೆ ಮತ್ತೊಂದು ಕಂಟಕವಾಗುತ್ತದೆಂದೂ ಹೇಳಲಾರಂಭಿಸಿದ್ದಾರೆ. ಅದು ನಿಜವೂ ಹೌದು. ಒಂದು ವೇಳೆ ದರ್ಶನ್ ಗ್ಯಾಂಗಿಗೆ ಮ್ಯಾನೇಜರ್ ಮಲ್ಲಿ ಬಲಿಯಾಗಿದ್ದರೆ ದಾಸನಿಗೆ ಹದಿನಾಲ್ಕು ವರ್ಷ ಜೈಲುವಾಸ ಫಿಕ್ಸಾಗಿ ಬಿಡುತ್ತಿತ್ತು. ಆದರೆ, ಸದ್ಯದ ಮಟ್ಟಿಗೆ ಅದೊಂದು ವಿಚಾರದಲ್ಲಿ ದರ್ಶನ್ ಸೇಫಾಗಿದ್ದಾನೆ. ಯಾಕೆಂದರೆ, ಮಹಾನ್ ಛತ್ರಿ ಆಸಾಮಿ ಮಲ್ಲಿಯಿನ್ನೂ ಬದುಕಿದ್ದಾನೆ!
2018ರ ಜುಲೈ ತಿಂಗಳಿನಲ್ಲಿ ಮ್ಯಾನೇಜರ್ ಮಲ್ಲಿಯ ಅಸಲೀ ಪುರಾಣ ಜಾಹೀರಾಗಿತ್ತು. ಅದಕ್ಕೂ ಒಂದಷ್ಟು ತಿಂಗಳ ಹಿಂದೆಯೇ ದೋಖಾಬಾಜಿಗಳ ಸುಳಿವು ಸಿಕ್ಕಿ, ಅದು ದರ್ಶನ್ ಪಾಳೆಯಕ್ಕೂ ದಾಟಿಕೊಂಡಿತ್ತು. ಆದರೆ, ದರ್ಶನ್ ಆಗಿ, ದಿನಕರ್ ಆಗಲಿ ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ. ಖುದ್ದು ದರ್ಶನ್ ಫೋನು ಮಾಡಿದರೂ ಸ್ವೀಕರಿಸದೆ, ಕಡೇಗೆ ಸ್ವಿಚಾಫ್ ಮಾಡಿಕೊಂಡು ಅಡ್ಡಾಡಲಾರಂಭಿಸಿದ್ದ ಮಲ್ಲಿ ನೋಡ ನೋಡುತ್ತಲೇ ಗಾಯಬ್ ಆಗಿಬಿಟ್ಟಿದ್ದ. ಆ ವಿಚಾರ ತಿಳಿದದ್ದೇ ಮಲ್ಲಿ ಅಲ್ಲಲ್ಲಿ ದರ್ಶನ್ ಹೆಸರಲ್ಲಿ ಪೀಕಿದ್ದ ಕೋಟಿ ಕಾಸಿನ ಕುರುಹುಗಳು ಪಿತಗುಡಲಾರಂಭಿಸಿದ್ದವು. ಆ ನಂತರ ಆತನ ಪತ್ತೆಯಿರಲಿಲ್ಲ. ದರ್ಶನ್ ಮ್ಯಾನೇಜರ್ ಎಂಬ ಕಾರಣಕ್ಕೆ ನಂಬಿ ಅನೇಕರು ಪಿಗ್ಗಿಬಿದ್ದದ್ದರಲ್ಲಾ? ಅವರೆಲ್ಲ ಗಾಬರಿಬಿದ್ದು ದರ್ಶನ್ ಅಂತಃಪುರದತ್ತ ಹರಿದು ಬರಲಾರಂಭಿಸಿದ್ದರು.
ಒಂದು ಮೂಲದ ಪ್ರಕಾರ ಹಾಗೆ ಬಂದ ಅನೇಕರಿಗೆ ದಿನಕರ್ ಆಗಿರುವ ಅನಾಹುತವನ್ನ ಮನವರಿಕೆ ಮಾಡಿಕೊಟ್ಟಿದ್ದಾರೆ. ತಮಗೂ ಆದ ಮೋಸದ ಬಗ್ಗೆ ತಿಳಿ ಹೇಳಿದ್ದಾರೆ. ಇನ್ನೂ ಕೆಲ ಮಂದಿ ದಿನಕರ್ ರನ್ನು ದಾಟಿ, ಕಾಸು ಸಿಗಬಹುದೆಂಬ ಆಸೆಯಿಂದ ದರ್ಶನ್ ನನ್ನು ಸಂಪರ್ಕಿಸಿದ್ದೂ ಇದೆ. ಹಾಗೆ ಎದುರುನಿಂತ ಒಂದಷ್ಟು ನಸೀಬುಗೇಡಿಗಳಿಗೆ ದರ್ಶನ್ ಆವಾಜು ಬಿಟ್ಟು ಕಳಿಸಿದ್ದನೆಂಬ ಮಾತೂ ಇದೆ. ಹಾಗೆ 2018ರ ಮಧ್ಯಭಾಗದಲ್ಲಿ ನಾಪತ್ತೆಯಾಗಿದ್ದ ಮಲ್ಲಿ ಯಾರೆಂದರೆ ಯಾರಿಗೂ ಸಿಕ್ಕಿಲ್ಲ. ಮೂಲತಃ ಗುಲ್ಬರ್ಗದವನಾದ ಈತ ಹುಟ್ಟೂರಿನಲ್ಲಿಯೂ ಸುಳಿದಿರಲಿಲ್ಲ. ಹೇಳಿಕೇಳಿ ಉತ್ತರ ಕರ್ನಾಟಕದಲ್ಲಿಯೂ ದರ್ಶನ್ ಗೆ ಫ್ಯಾನ್ ಬೇಸ್ ಇದೆ. ಆ ಭಾಗದಲ್ಲಿ ಸುಮ್ಮನೆ ಕಾಣಿಸಿಕೊಂಡರೂ ಮಲ್ಲಿಯನ್ನು ಮೂಟೆಗಟ್ಟಿ ಟೆಂಪೋಗೆ ತುಂಬಿ ದರ್ಶನ್ ಮುಂದೆ ತಂದು ಬಿಡೋ ಸಾಧ್ಯತೆಗಳೂ ಇದ್ದವು!
ಇಂಥಾ ಅನಾಹುಗಳನ್ನರಿತಿದ್ದ ಚಾಲಾಕಿ ಮಲ್ಲಿ ಆ ಕಾಲದಲ್ಲಿಯೇ ಕರ್ನಾಟಕ ತೊರೆದು ಹೋಗಿದ್ದನೆಂಬ ಮಾತಿದೆ. ಒಂದು ಹಂತದಲ್ಲಿ ಯಾಮಾರಿಸಿದ ಕಾಸಲ್ಲಿ ವಿದೇಶಕ್ಕೆ ತೆರಳಿ ಸೆಟಲ್ ಆಗಿದ್ದಾನೆಂಬ ರೂಮರೂ ಹರಿದಾಡಿತ್ತು. ಇಂಥಾ ಮಲ್ಲಿ ತಿಂಗಳ ಹಿಂದೆ ಕರ್ನಾಟಕಕ್ಕೆ ಬಂದು ಹೋಗಿದ್ದಾನೆ. ತನ್ನ ಕುಟುಂಬದ ಕೆಲವರೊಂದಿಗೆ ದಕ್ಷಿಣ ಕನ್ನಡ, ಉತ್ತರ ಕನ್ನಡದ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾನೆ. ಹೀಗೆ ತಿರ್ಪೆ ಕಾಸಲ್ಲಿ ಲಕ್ಷಣವಾಗಿ ತೀರ್ಥ ಯಾತ್ರೆ ಮುಗಿಸಿಕೊಂಡ ಮಲ್ಲಿ ಮತ್ತೆ ಪರರಾಜ್ಯದಲ್ಲಿರೋ ಬಿಲ ಸೇರಿಕೊಂಡಿದ್ದಾನೆ. ಸದ್ಯಕ್ಕೀತ ಕಲ್ಕತ್ತಾದಲ್ಲಿರುವ ಮಾಹಿತಿ ಹರಿದಾಡಿದರೂ ಕೂಡಾ, ಅದರಲ್ಲಿಯೂ ಮಲ್ಲಿ ಹಾದಿತಪ್ಪಿಸುವ ಚಾಣಾಕ್ಷತನ ತೋರಿಸಿರುತ್ತಾನೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಉತ್ತರ ಭಾರತವೋ, ದಕ್ಷಿಣ ಭಾರತವೋ… ಅಂತೂ ಮಲ್ಲಿ ದೇಶದೊಳಗೇ ಇದ್ದಾನೆ. ಸೇಫಾಗಿಯೂ ಬದುಕುತ್ತಿದ್ದಾನೆ!
ಹೀಗೆ ಇದೀಗ ಮರ್ಡರ್ ಕೇಸಿನ ನೆಪದಲ್ಲಿ ನೆನಪಾಗಿರುವ ಮಲ್ಲಿ ಅಸಾಮಾನ್ಯ ಪ್ರತಿಭೆಯೇ. ಬೇರೆಲ್ಲ ತಕರಾರುಗಳೇನಿದ್ದರೂ, ದರ್ಶನ್ ಥರದ ಸ್ಟಾರ್ ನಟನನ್ನು ಯಾಮಾರಿಸಿ, ಆತನ ಪಟಾಲಮ್ಮಿನ ಕಣ್ಣಿಗೆ ಮಣ್ಣೆರಚಿ ಕೋಟಿ ಕೋಟಿ ಲಫಡಾ ನಡೆಸಿದ ಈತ ವ್ಯವಹಾರ ಚತುರ. ಆರಂಭದ ದಿನಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾಳೆಯದಲ್ಲಿದ್ದವನು ಮಲ್ಲಿ. ಆ ಕಾಲದಲ್ಲಿ ಯಶ್ ಈ ಪರಿಯಾಗಿ ಬೆಳೆದು ನಿಲ್ಲಬಹುದೆಂಬ ಅಂದಾಜು ಮಲ್ಲಿಗೆ ಸಿಕ್ಕಿರಲಿಲ್ಲವೇನೋ. ಭಾರೀ ಮಹತ್ವಾಕಾಂಕ್ಷೆ ಹೊಂದಿದ್ದ ಮಲ್ಲಿ ಮೆತ್ತಗೆ ಓಡೋ ಕುದುರೆ ದರ್ಶನ್ ಪಾಳೆಯಕ್ಕೆ ಎಡತಾಕಲಾರಂಭಿಸಿದ್ದ. ಹಾಗೆ ಬಂದವನು ಹಂತ ಹಂತವಾಗಿ ದರ್ಶನ್ ನಂಬಿಕೆ ಗಳಿಸಿಕೊಂಡಿದೆ. ದರ್ಶನ್ ಯಾವ ರೇಂಜಿಗೆ ಮಲ್ಲಿಯನ್ನ ನಂಬಿದ್ದನೆಂದರೆ, ಆತನ ಎಲ್ಲ ದೇಖಾರೇಖಿಗಳೂ ಮಲ್ಲಿಯ ಸರಹದ್ದಿಗೆ ಬಂದುಬಿಟ್ಟಿದ್ದವು.
ದರ್ಶನ್ ಎಂಬೋ ದೈತ್ಯ ನಟನನ್ನು ಮಲ್ಲಿ ಸಲೀಸಾಗಿಯೇ ಮ್ಯಾನೇಜು ಮಾಡಲಾರಂಭಿಸಿದ್ದ. ಬರಬರುತ್ತಾ ದರ್ಶನ್ ವ್ಯವಹಾರವನ್ನೆಲ್ಲ ಈತನೇ ನೋಡಿಕೊಳ್ಳುತ್ತಿದ್ದ. ಮೆತ್ತಗೆ ದರ್ಶನ್ ಹೆಸರಲ್ಲಿ ಕಾಸು ಗುಂಜಲಾರಂಭಿಸಿದ್ದ ಮಲ್ಲಿ, ವಂಚಕನಾಗಿ ಬದಲಾಗಿ ಬಿಟ್ಟಿದ್ದ. ಕಂಡೋರ ಮುಂದೆ ದೈನೇಸಿಯಂತೆ ನಿಂತು ಕಷ್ಟ ಕಾರ್ಪಣ್ಯಗಳ ಸ್ಕ್ರಿಪ್ಟು ಒದರಲಾರಂಭಿಸಿದ್ದ. ದರ್ಶನ್ ನಂಥಾ ಸ್ಟಾರ್ ನಟನ ಮ್ಯಾನೇಜರಿಗೆ ಇದೆಂಥಾ ಗತಿಯೆಂಬ ಕರುಣೆಯಿಂದಲೋ, ಇವನನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ದರ್ಶನ್ ಸಲೀಸಾಗಿ ಕೈಗೆ ಸಿಗುತ್ತಾನೆಂಬ ದೂರದೃಷ್ಟಿಯಿಂದಲೋ ಗೊತ್ತಿಲ್ಲ; ಚಿತ್ರರಂಗದ ಒಂದಷ್ಟು ಮಂದಿ ಈತನಿಗೆ ಲಕ್ಷಗಟ್ಟಲೆ ಸಹಾಯ ಮಾಡಿದ್ದಾರೆ. ಆ ನಂತರದಲ್ಲಿ ಡಿಸ್ಟ್ರಿಬ್ಯೂಷನ್ನು ಸೇರಿದಂತೆ ಎಲ್ಲದರಲ್ಲಿಯೂ ಮಲ್ಲಿ ದೋಖಾ ಮಾಡಿದ್ದ. ದರ್ಶನ್‍ಗೇ ಕೋಟಿಗಳ ಲೆಕ್ಕದಲ್ಲಿ ಉಂಡೇನಾಮ ತೀಡಿದ್ದ!
ಬಹುಶಃ ದರ್ಶನ್ ತಲೆ ಆ ಕಾಲದಲ್ಲಿ ತುಸು ನೆಟ್ಟಗಿತ್ತೇನೋ. ಅಥವಾ ಇತ್ತೀಚೆಗೆ ಸುತ್ತಾ ಗುಡ್ಡೆಬಿದ್ದಿರುವ ದುಷ್ಟಕೂಟ ಆಗಿನ್ನೂ ಎಂಟ್ರಿ ಕೊಟ್ಟಿರಲಿಲ್ಲವೇನೋ. ಒಂದು ವೇಳೆ ಆ ಕಾಲಕ್ಕೆ ದರ್ಶನ್ ಈಗಿನಂತಿದ್ದಿದ್ದರೆ ಖಂಡಿತವಾಗಿಯೂ ಯಾವುದೋ ಗೋಡೌನಿನಲ್ಲಿ ಮಲ್ಲಿಯ ದೇಹ ನಜ್ಜುಗುಜ್ಜಾಗುತ್ತಿತ್ತು. ಆತನ ದೇಹ ಸುಳಿವೇ ಇಲ್ಲದಂತೆ ಮತ್ಯಾವುದೋ ಮೋರಿಯ ಪಾಲಾಗುತ್ತಿತ್ತೋ ಏನೋ. ಅಂಥಾ ದುರಂತದಿಂದ ಮಲ್ಲಿ ಪಾರಾಗಿದ್ದಾನೆ. ಬಹುಶಃ ಆ ಘಳಿಗೆಯಲ್ಲಿ ದರ್ಶನ್ ತೆಗೆದುಕೊಂಡಿದ್ದ ತುಸು ಮನುಷ್ಯತ್ವದ ನಿರ್ಧಾರ ಖುದ್ದು ಆತನನ್ನೇ ಮತ್ತೊಂದು ಕುಣಿಕೆಯಿಂದ ಪಾರುಗಾಣಿಸಿದೆ. ಆದರೆ, ಘಟಾನುಘಟಿಗಳಿಗೆ ವಂಚಿಸಿ, ಹೊರರಾಜ್ಯದಲ್ಲಿ ಸೇಫಾಗಿರುವ ಮಲ್ಲಿಗೀಗ ಭಯ ಶುರುವಾಗಿದ್ದಿರಬಹುದು. ಪೊಲೀಸರೇನಾದರೂ ಈತ ಬದುಉಕಿರೋದು ನಿಜವಾ ಅನ್ನೋ ಜಾಡು ಹಿಡಿದು ಹೊರಟರೆ, ಕಾಸು ಕೊಟ್ಟು ಕೈಸುಟ್ಟುಕೊಂಡಿರೋ ಸಾಲಗಾರರೂ ಹಿಂಬಾಲಿಸಿ ಹೋಗೋ ಅಪಾಯ ಮಲ್ಲಿಯನ್ನು ಕಂಗೆಡಿಸಿರಬಹುದು!