ಕಾಲೇಜು ಕಥಾನಕದ ಸಿನಿಮಾವೆಂಬ ಸುಳಿವು ಸಿಕ್ಕರೂ ಸಾಕು; ಅಂಥಾ ಸಿನಿಮಾಗಳ ಬಗ್ಗೆ ತಾನೇ ತಾನಾಗಿ ಪ್ರೇಕ್ಷಕರ ಚಿತ್ತ ಕೀಲಿಸಿಕೊಳ್ಳುತ್ತೆ. ಆ ಕಾರಣದಿಂದಲೇ ಹಂತ ಹಂತವಾಗಿ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿರುವ ಚಿತ್ರ (vidyarthi vidyarthiniyare movie) `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’. ಅರುಣ್ ಅಮುಕ್ತ ನಿರ್ದೇಶನದ (arun amuktha) ಈ ಸಿನಿಮಾವೀಗ ಬಿಡುಗಡೆಯತ್ತ ಮುಖ ಮಾಡಿ ನಿಂತಿದೆ. ಈ ಹೊತ್ತಿನಲ್ಲಿ ಬ್ಯಾಡ್ ಬಾಯ್ಸ್ ಎಂಬ ಶೀರ್ಷಿಕೆಯಡಿಯಲ್ಲಿ ಹೊಸತನ ಹೊಂದಿರೋ ಹಾಡೊಂದನ್ನು ಬಿಡುಗಡೆಗೊಳಿಸಲಾಗಿದೆ. ತಾಂತ್ರಿಕವಾಗಿಯೂ ಹೊಸತನದಿಂದ ಕೂಡಿರುವ ಈ ಹಾಡೀಗ ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ. ಅದಕ್ಕೆ ಸಿಗುತ್ತಿರುವ ಭರಪೂರ ಮೆಚ್ಚುಗೆಗಳನ್ನು ಕಂಡು ಒಂದಿಡೀ ಚಿತ್ರತಂಡ ಖುಷಿಗೊಂಡಿದೆ.
ಈ ಹಾಡಿಗೆ ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಭರ್ಜರಿ ಚೇತನ್ ಕುಮಾರ್ ಸಾಹಿತ್ಯ ಒದಗಿಸಿರುವ ಈ ಹಾಡು, ವಿಜೇತ್ ಕೃಷ್ಣ, ಕೀರ್ತನಾ ಚಂದ್ರು ಮತ್ತು ಸುನೈನಾ ಕಂಠಸಿರಿಯಲ್ಲಿ ಮೂಡಿ ಬಂದಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಕಥೆ ಮತ್ತು ಆಂತರ್ಯಕ್ಕೆ ತಕ್ಕುದಾಗಿ ಮೂಡಿ ಬಂದಿರುವ ಈ ಹಾಡು, ಒಂದೇ ಸಲಕ್ಕೆ ಯುವ ಸಮುದಾಯವನ್ನು ಆವರಿಸಿಕೊಳ್ಳುವಂತಿದೆ. ತಾಂತ್ರಿಕವಾಗಿಯೂ ಹೊಸತನಗಳನ್ನು ಅಡಕವಾಗಿಸಿಕೊಂಡಿರುವ ಈ ಹಾಡು, ಭಾರತೀಯ ಚಿತ್ರರಂಗದಲ್ಲಿಯೇ ಮೊಟ್ಟ ಮೊದಲ ಬಾರಿ ಎಐ ಆನಿಮೇಷನ್ ಮಾಡಿದ ಹಾಡಾಗಿಯೂ ದಾಖಲೆ ಬರೆದಿದೆ.
ವ್ಯಾಪಕ ಮೆಚ್ಚುಗೆ ಗಳಿಸಿಕೊಳ್ಳುತ್ತಿರುವ ಈ ಹಾಡಿನಲ್ಲಿ ಮನೋಜ್ ವಿವಾನ್, ಮನಸ್ವಿ, ಭಾವನಾ ಅಪ್ಪು, ಅಮರ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.