ಹೊಸಾ ವರ್ಷ ಆರಂಭವಾದ ಬಳಿಕ ಕನ್ನಡ ಚಿತ್ರರಂಗದಲ್ಲಿ ದಂಡಿ ದಂಡಿ ಸಿನಿಮಾಗಳು ಬಿಡುಗಡೆಗೊಳ್ಳುತ್ತಿವೆ. ಇದರಲ್ಲಿ ಕಾಳು, ಜೊಳ್ಳು ಸೇರಿದಂತೆ ಎಲ್ಲ ವೆರೈಟಿಯ ಸಿನಿಮಾಗಳೂ ಧಾರಾಕಾರವಾಗಿಯೇ ಹರಿದು ಬರುತ್ತಿದ್ದಾರೆ. ಆದರೆ, ನೋಡುಗರಿಂದ ಒಳ್ಳೆ ಅಭಿಪ್ರಾಯ ಪಡೆದುಕೊಂಡ ಸಿನಿಮಾಗಳು ಕೂಡಾ ಥಿಯೇಟರು ಸಿಗದೆ ಉಸಿರು ಚೆಲ್ಲುತ್ತವೆ. ಮತ್ತೆ ಕೆಲವೊಂದಿಷ್ಟು ಸಿನಿಮಾಗಳು ಚೆಂದಗಿದ್ದರೂ ಕಲೆಕ್ಷನ್ನಿಲ್ಲದೆ ಕಂಗಾಲಾಗಿ ನಿಂತಿವೆ. ಜನ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಆಗಮಿಸುವ ದೊಡ್ಡ ಮನಸು ಮಾಡುತ್ತಿಲ್ಲ ಎಂಬಂಥಾ ಅಳಲು ಸಿನಿಮಾ ಮಂದಿಯದ್ದು. ಸದ್ಯ ಇಂಥಾ ವಾತಾವರಣ ನಮ್ಮ ರಾಜ್ಯದಲ್ಲಿ ಮಡುಗಟ್ಟಿಕೊಂಡಿದೆ. ಇದೇ ಹೊತ್ತಿನಲ್ಲಿ ಮಲೆಯಾಳಂ ಸಿನಿಮಾವೊಂದು ನಮ್ಮ ನೆಲದಲ್ಲಿ ದಾಖಲೆ ಮಟ್ಟದ ಕಲೆಕ್ಷನ್ನು ನಡೆಸಿದೆ ಅಂದರೆ ಅಚ್ಚರಿಯಾಗದೆ ಮತ್ತೇನಾಗಲು ಸಾಧ್ಯ?
ಚಿದಂಬರಮ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಮಲೆಯಾಳಂ ಚಿತ್ರ ಆ ಭಾಷೆಯಲ್ಲಿ ದೊಡ್ಡ ಮಟ್ಟದ ಹಿಟ್ ಆಗಿ ದಾಖಲಾಗಿದೆ. ಕಥೆಯೊಳಗೇ ಕನೆಕ್ಷನ್ನುಗಳಿರೋದರಿಂದಾಗಿ, ತಮಿಳುನಾಡಿನಲ್ಲಿಯೂ ಭರ್ಜರಿ ಮಪ್ರದರ್ಶನ ಕಾಣುತ್ತಿದೆ. ಯುವಕರ ಗುಂಪೊಂದರ ರೋಚಕ ಅನ್ವೇಷಣೆಯ ಕಥೆ ಹೊಂದಿರುವ ಈ ಸಿನಿಮಾವನ್ನು ಪ್ರೇಕ್ಷಕರು ಅಕ್ಷರಶಃ ಸಂಭ್ರಮಿಸುತ್ತಿದ್ದಾರೆ. ಯಾಕೆಂದರೆ, ಒಂದರೆಕ್ಷಣವೂ ಕುತೂಹಲ ಮುಕ್ಕಾಗದಂತೆ ಈ ಸಿನಿಮಾವನ್ನು ರೂಪಿಸಲಾಗಿದೆ. ಇಂಥಾದ್ದೊಂದು ಸಿನಿಮಾ ಕರ್ನಾಟಕದಲ್ಲಿಯೂ ಸದ್ದಿಲ್ಲದೆ ದಾಖಲೆ ಬರೆದಿದೆ. ಸಿನಿಮಾ ತಂಡವೇ ಹೇಳಿಕೊಂಡಿರುವ ಪ್ರಕಾರವಾಗಿ ನೋಡೋದಾದರೆ, ಮಂಜುಮ್ಮೆಲ್ ಬಾಯ್ಸ್ ಕರ್ನಾಟಕದಲ್ಲಿ ಸಲೀಸಾಗಿಯೇ ಹತ್ತು ಕೋಟಿಯಷ್ಟನ್ನು ಬಾಚಿಕೊಂಡಿದ್ದಾರೆ!
ಇದು ಹೇಗೆ ಸಾಧ್ಯವಾಯ್ತು? ಇತ್ತೀಚೆಗೆ ಬಿಡುಗಡೆ ಕಂಡಿರುವ ಕನ್ನಡ ಸಿನಿಮಾಗಳೇ ನಾನಾ ಸವಾಲುಗಳಿಗೆ ಎದೆಯೊಡ್ಡುತ್ತಾ ಹೈರಾಣುಗೊಂಡಿವೆ. ಥಿಯೇಟರ್ ಸಮಸ್ಯೆ, ಪ್ರೇಕ್ಷಕರ ನಿರಾಸಕ್ತಿ ಅಂತೆಲ್ಲ ನಾನಾ ನಮೂನೆಯ ಪ್ರಹಾರಗಳು ಕನ್ನಡ ಸಿನಿಮಾಗಳ ಮೇಲಾಗುತ್ತಿವೆ. ಇಂಥಾ ಘಳಿಗೆಯಲ್ಲಿಯೇ ಮಲೆಯಾಳದ ಚಿತ್ರವೊಂದು ದಾಖಲೆ ಬರೆಯುತ್ತದೆಂದರೆ, ಇದು ನಿಜಕ್ಕೂ ತಲೆ ಕೆಡಿಸಿಕೊಳ್ಳಬೇಕಾದ ವಿಚಾರವೇ. ಅಂದಹಾಗೆ, ಮಂಜುಮ್ಮೆಲ್ ಬಾಯ್ಸ್ ಕರ್ನಾಟಕದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅದರ ಈವರೆಗಿನ ಗಳಿಕೆ ನೂರು ಕೋಟಿ ಮೀರಿ ಮುಂದುವರೆಯುತ್ತಿದೆ!