ಮಠ ಗುರುಪ್ರಸಾದ್ (mata guruprasad) ನಿರ್ದೇಶನದ (ranganayaka movie) ರಂಗನಾಯಕ ಚಿತ್ರ ನಿರೀಕ್ಷೆಯಂತೆಯೇ ನಿತ್ರಾಣಗೊಂಡು, ಬಿಡುಗಡೆಯಾಗಿ ವಾರ ಕಳೆಯೋ ಮುನ್ನವೇ ಮಗುಚಿಕೊಂಡಿದೆ. ತೀರಾ ನೀಲಿಚಿತ್ರದ ಆಡಿಯೋ ವರ್ಷನ್ನಿನಂತಿರುವ ಕೀಳು ಮಟ್ಟದ ಡೈಲಾಗುಗಳು, ಅದನ್ನು ಅಸಹ್ಯ ಬರಿಸುವ ಆಂಗಿಕ ಅಭಿನಯದ ಮೂಲಕ ಒದರಿಕೊಂಡಿದ್ದ ನವರಸನಾಯಕನ ದುಃಸ್ಥಿತಿಗಳೆಲ್ಲವೂ ರಂಗನಾಯಕ ಸಿನಿಮಾ ಮಂದಿರಗಳ ಹೆಬ್ಬಾಗಿಲಲ್ಲೇ ಕುಸಿದು ಬೀಳೋದು ಗ್ಯಾರೆಂಟಿ ಎಂಬುದರ ಸೂಚನೆಯಂತೆ ಕಂಡಿದ್ದವು. ಸದಾ ಕಾಲವೂ ಭಕ್ತಿಯ ಪರಮೋಚ್ಛ ಸ್ಥಿತಿಯಲ್ಲಿರೋ ಜಗ್ಗೇಶಿಯ ಬಾಯಿಂದ ಹೊರಬಿದ್ದಿದ್ದ ಸಂಭಾಷಣೆಯ ತುಣುಕುಗಳೇ ಒಂದಿಡೀ ಸಿನಿಮಾ ಮೂಡಿ ಬಂದಿರಬಹುದಾದ ರೀತಿಯನ್ನು ಸಾರಿ ಹೇಳುವಂತಿದ್ದವು. ಅತ್ತ ಈ ಬಗ್ಗೆ ಟ್ರೋಲುಗಳಾದರೂ (navarasa nayaka jaggesh) ಜಗ್ಗೇಶ್ ಅದನ್ನೆಲ್ಲ ಸಂಭ್ರಮಿಸಿದಂತಿದ್ದರು. ಗಡ್ಡದ ಗುರು ಬಾಯಿಗೆ ಬಂದಂತೆ ಒದರುತ್ತಿದ್ದರೂ ಆತನ ಮಗ್ಗುಲಲ್ಲಿ ನಿಂತು ಮೈಕುಲುಕಿಸಿ ನಕ್ಕಿದ್ದರು. ಒಟ್ಟಾರೆಯಾಗಿ, ರಂಗನಾಯಕ ಚಿತ್ರ ದಾಖಲೆ ಬರೆಯುತ್ತದೆ ಎಂಬಂಥಾ ಭ್ರಮೆ ನವರಸನಾಯಕನನ್ನು ಅಪಾದಮಸ್ತಕ ಕವುಚಿಕೊಂಡಿತ್ತು!
ಇದೀಗ ಎಲ್ಲವೂ ಖುಲ್ಲಂಖುಲ್ಲ ಬದಲಾಗಿ ಬಿಟ್ಟಿದೆ. ವರ್ತೂರ್ ಸಂತೋಷನ ವಿಚಾರದಲ್ಲಿ ಬಾಯಿಗೆ ಬಂದಂತೆ ಮಾತಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಗುಮ್ಮಿಸಿಕೊಂಡಿದ್ದ ಜಗ್ಗಣ್ಣ, ರಂಗನಾಯಕ ಸಿನಿಮಾದ ಸಂಭಾಷಣೆಯ ದಿಕ್ಕಿನಿಂದ ತೂರಿ ಬರುತ್ತಿರುವ ವಿರೋಧಾಭಾಸಗಳನ್ನು ಕಂಡು ಅಕ್ಷರಶಃ ಕಂಗಾಲಾಗಿದ್ದಾರೆ. ತಮ್ಮ ಹುಟ್ಟುಹಬ್ಬದ ನಿಮಿತ್ತವಾಗಿ ಗುರುರಾಯರ ಸನ್ನಿಧಾನಕ್ಕೆ ತೆರಳಿದ್ದ ಜಗ್ಗೇಶ್, ಅಲ್ಲಿಂದಲೇ ವೀಡಿಯೋವೊಂದನ್ನು ಹರಿಯಬಿಟ್ಟು ಮತ್ತೊಂದು ಸುತ್ತಿನ ಯಡವಟ್ಟು ಮಾಡಿಕೊಂಡಿದ್ದಾರೆ. ಕಡೇ ಕ್ಷಣಗಳವರೆಗೂ ಆಟದ ಭಾಗವಾಗಿದ್ದ ಅವರು, ಇದೀಗ ಏಕಾಏಕಿ ಅಂಗಣದಿಂದಲೇ ಹೊರನೆಗೆದಿದ್ದಾರೆ. ಹಾಗೆ ಹಾರುವ ಭರದಲ್ಲಿ ಉಳಿದುಕೊಂಡಿದ್ದೊಂದು ಪುಟಗೋಸಿಯೂ ಉಡುದಾರದಿಂದ ಉಣುಚಿಕೊಂಡಂತಾಗಿದೆ!
ಜೂಲು ಗಡ್ಡಕ್ಕೆ ಸೋಲಿನ ಮುಸುರೆ!
ಒಂದು ಸಿನಿಮಾ ಅಂತ ಬಂದಾಗ ಸೋಲು ಗೆಲುವೆರಡನ್ನೂ ಅದರ ಭಾಗವಾಗಿರುವವರು ಸಮಾನವಾಗಿ ಹಂಚಿಕೊಳ್ಳಬೇಕಾಗುತ್ತದೆ. ಅದು ಟೀಂ ವರ್ಕ್ ಒಂದರ ಅಸಲೀ ಸ್ವಾದ. ಆದರೆ, ಈ ಜಗ್ಗೇಶ್ ಮಾತ್ರ ಸೋಲಿನ ಮುಸುರೆಯನ್ನೆಲ್ಲ ಸಲೀಸಾಗಿ ಜೂಲು ಗಡ್ಡಕ್ಕೊರೆಸಿ ಎಸ್ಕೇಪಾಗಲು ಹವಣಿಸಿದ್ದಾರೆ. ರಂಗನಾಯಕ ಜನುಮದಲ್ಯಾವತ್ತೂ ಎದ್ದೇಳಲಾರದಂತೆ ನೆಲಕ್ಕುರುಳಿರೋದರ ಹಿಂದೆ ನಿರ್ದೇಶಕ ಗುರುಪ್ರಸಾದನ ಪಾಲಿದೆ ಅನ್ನೋದು ಸತ್ಯ. ಹಾಗಂತ ಸೋಲಿನ ಬಾಬತ್ತನ್ನೆಲ್ಲ ಮೂಟೆ ಕಟ್ಟಿ ಆತನ ಹೆಗಲಿಗೇರಿಸೋದು ಸರಿಯಲ್ಲ. ಯಾಕೆಂದರೆ, ಅದರಲ್ಲಿ ಖಂಡಿತವಾಗಿಯೂ ಈಗ ದುರಂತನಾಯಕನಂತೆ ಪೋಸು ಕೊಡುತ್ತಿರುವ ಜಗ್ಗೇಶ್ ಪಾಲೂ ಇದೆ. ಓರ್ವ ನಾಯಕ ನಟನಾಗಿ ಅವರು ಒಂದಿಡೀ ಕಥೆಯನ್ನ ಕೇಳಿರುತ್ತಾರೆ. ಹೇಳಿಕೇಳಿ ಕಥೆಗೆ ಕಾಗೆ ಹಾರಿಸಿ, ಬಿಬಿ ಬಿಡಿ ದೃಷ್ಯಗಳನ್ನ ಪೋಣಿಸಿ, ಅದನ್ನು ಸಂಭಾಷಣೆಗಳಿಂದಲೇ ಸಿಂಗರಿಸೋದರಲ್ಲಿ ಗಡ್ಡದ ಗುರು ನಿಸ್ಸೀಮ. ರಂಗನಾಯಕನ ವಿಚಾರದಲ್ಲಿ ಆ ಡೈಲಾಗುಗಳನ್ನೆಲ್ಲ ಆರಂಭಿಕವಾಗಿ ಜಗ್ಗೇಶ್ ಕೇಳಿಸಿಕೊಂಡಿರುತ್ತಾರೆ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ.
ಈಗ ಸುಭಗನಂತೆ ಪೋಸು ಕೊಡುವ ಜಗ್ಗೇಶ್, ಆರಂಭಿಕವಾಗಿ ಕೆಟ್ಟಾಕೊಳಕು ಡೈಲಾಗು ಎದುರಾದಾಗಲೇ ಅದನ್ನ ತಿರಸ್ಕರಿಸಬಹುದಾಗಿತ್ತಲ್ಲಾ? ಅದಕ್ಕೆ ಗುರು ಬಗ್ಗದಿದ್ದರೆ ಕಾಸ್ಟ್ಯೂಮು ಕಳಚಿ ಎದ್ದು ಬರಲು ಯಾವ ಗ್ರಹಗತಿಗಳು ಅಡ್ಡ ನಿಂತಿದ್ದವು? ಹೀಗಿರುವಾಗ ಗರುರಾಯರ ಸನ್ನಿಧಾನದಲ್ಲಿ ಮಡಿ ವಸ್ತ್ರಧಾರಿ ಜಗ್ಗೇಶ್ ಲೈವಿಗೆ ಬಂದು ಪುಂಗಿದರೆ ಅದನ್ನು ಮನಸಾರೆ ಒಪ್ಪಿಕೊಳ್ಳುವ ಮುಠ್ಠಾಳರು ಬಹುಶಃ ಯಾರೂ ಇರಲಿಕ್ಕಿಲ್ಲ. ಹೀಗೆ ಮಂತ್ರಾಲಯದಿಂದಲೇ ಲೈವ್ ದರುಶನ ನೀಡಿರುವ ಜಗ್ಗೇಶ್, ರಂಗನಾಯಕ ನನ್ನ ಸಿನಿಮಾವಲ್ಲ. ಅದು ನಿರ್ದೇಶಕರ ಸಿನಿಮಾ. ತಾನು ನಂಬಿ ಸಿನಿಮಾ ಮಾಡಿದರೆ, ಆ ನಿರ್ದೇಶಕರು ತಮಗೆ ಬೇಕಾದಂತೆ ಸಿನಿಮಾ ಮಾಡಿದ್ದಾರೆ ಎಂಬರ್ಥದಲ್ಲಿ ಮಾತಾಡಿರುವ ಜಗ್ಗೇಶ್, ಇಂತಾದ್ದೊಂದು ಸಿನಿಮಾದಲ್ಲಿ ನಟಿಸಿದ್ದಕ್ಕೆ ಕ್ಷಮೆ ಕೇಳುವ ಧಾಟಿಯಲ್ಲಿ ತಿಪ್ಪೆ ಸಾರಿಸಲು ನೋಡಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲವೇ ಅಲ್ಲ. ಯಾಕೆಂದರೆ, ಒಂದು ವೇಳೆ ಡಬಲ್ ಈ ಸಿನಿಮಾ ಗೆಲುವು ಕಂಡಿದ್ದರೆ ಜಗ್ಗೇಶ್ ಅದರ ವಾರಸೂದಾರಿಕೆ ವಹಿಸಿಕೊಳ್ಳುತ್ತಿದ್ದರು. ಅವರದ್ದೇ ಸ್ಟೈಲಿನಲ್ಲಿ ಸಂಭ್ರಮಿಸಿ, ನೆಗೆಟಿವ್ ಕಮೆಂಟುಗಳನ್ನೆಲ್ಲ ಸಾರಾಸಗಟಾಗಿ ಪಕ್ಕಕ್ಕೆ ಸರಿಸಿ, ಗುರುಪ್ರಸಾದನನ್ನು ಮನಸಾರೆ ಕೊಂಡಾಡುತ್ತಿದ್ದರೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಆದರೀಗ ಸೋಲಿನ ಭಾರವನ್ನೆಲ್ಲ ನಿರ್ದೇಶಕನ ನೆತ್ತಿಗಿಟ್ಟು ಪಾರಾಗುವ ಹವಣಿಕೆಯನ್ನು ಸಿನಿಮಾ ಪ್ರೇಮಿಗಳ್ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ!
ಡಬಲ್ ಮೀನಿಂಗ್ ದಬ್ಬಣ!
ನಿಮಗೆಲ್ಲ ಮರೆತು ಹೋಗಿರಲು ಸಾಧ್ಯವೇ ಇಲ್ಲ; ರಂಗನಾಯಕ ಪತ್ರಿಕಾ ಗೋಷ್ಟಿಯಲ್ಲಿ ಜಗ್ಗಣ್ಣ ಕೆನೆಯುತ್ತಾ ಮಾತಾಡಿದ್ದ ರೀತಿ, ರಂಗನಾಯಕ ಚಿತ್ರದ ಮೇಲಿದ್ದ ಅವರ ಭರವಸೆ, ಈ ಬಾರಿ ಗುರುಪ್ರಸಾದ್ ಕಮಾಲ್ ಮಾಡುತ್ತಾನೆಂಬಂಥಾ ನಂಬಿಕೆ… ಇವೆಲ್ಲವೂ `ಕಿತ್ತೋದ್ ನನ್ಮಗ’ ಎಂಬ ಡೈಲಾಗಿನ ಸಮೇತವಾಗಿ ಖಂಡಿತಾ ನೆನಪಿರುತ್ತೆ. ಡಬಲ್ ಮೀನಿಂಗ್ ಡೈಲಾಗುಗಳಲ್ಲಿಯೇ ಉರುಳಾಡಿಕೊಂಡು ಬಂದಿರುವ ಜಗ್ಗೇಶ್ ಪಾಲಿಗೆ, ರಂಗನಾಯಕನ ವಿಕೃತ ಸಂಭಾಷಣೆ ಮತ್ತೊಂದು ಲೆವೆಲ್ಲಿನದ್ದು ಅನ್ನಿಸಿತ್ತೆಂಬುದು ಸತ್ಯ. ಅದು ಓರ್ವ ನಟನಾಗಿ ಅವರು ಸಂವೇದನೆ ಕಳೆದುಕೊಂಡಿರುವ ಸ್ಪಷ್ಟ ಸೂಚನೆಯೂ ಹೌದು.
ಅತ್ತ ಕನ್ನಡ ಚಿತ್ರರಂಗ ಪ್ಯಾನಿಂಡಿಯಾ ಲೆವೆಲ್ಲಿನಲ್ಲಿ ಸದ್ದು ಮಾಡುತ್ತಿದೆ. ತೀರಾ ಹೊಸಾ ಹುಡುಗರೂ ಕೂಡಾ ಚೆಂದದ ಕಥೆ, ಪ್ರಯೋಗಗಳೊಂದಿಗೆ ಬೆರಗು ಮೂಡಿಸುತ್ತಿದ್ದಾರೆ. ಆದರೆ, ಈ ಗುರುಪ್ರಸಾದ್ ತನ್ನ ತಲೆಯೊಳಗಿರುವ ಕಸ, ಕಡ್ಡಿ, ವಿಕೃತಿಗಳನ್ನೆಲ್ಲ ಪ್ರೇಕ್ಷಕರ ಮುಂದೆ ರಾಚಲು ನಿಂತರೆ ಬರಖತ್ತಾಗಲು ಸಾಧ್ಯವೇ? ಇಂಥಾದ್ದೊಂದು ಕನಿಷ್ಠ ಕಾಮನ್ ಸೆನ್ಸ್ ಇಲ್ಲದ ಜಗ್ಗೇಶ್, ಈಗ ಸೋಲಿಗೆ ಗುರುಪ್ರಸಾದನೊಬ್ಬನೇ ಕಾರಣ ಎಂಬರ್ಥದಲ್ಲಿ ಮಾತಾಡಿದರೆ ಒಪ್ಪಲು ಸಾಧ್ಯವೇ? ಗುರುಪ್ರಸಾದ ಸೃಷ್ಟಿಸಿದ ತೊಪ್ಪೆಯಂಥಾ ಡೈಲಾಗುಗಳಿಗೆ ನವರಸಗಳನ್ನೂ ಬೆರೆಸಿ ಒದರುವ ಮೂಲಕ ಜಗ್ಗೇಶ್ ಬಾಯಿಯನ್ನೇ ಪಾಯಿಖಾನೆಯಂತಾಗಿಸಿಕೊಂಡಿದ್ದಾರೆ. ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ್ಮ ಜಾಲಾಡುತ್ತಲೇ, ಡಬಲ್ ಮೀನಿಂಗ್ ದಬ್ಬಣ ಖುದ್ದು ತನಗೇ ಹೆಟ್ಟಿಕೊಂಡಂತಾಗಿ ಕಂಗಾಲಾಗಿದ್ದಾರೆ. ಅದನ್ನು ಮ್ಯಾನೇಜು ಮಾಡಲು ಹೋಗಿ ಮತ್ತೆ ನಗೆಪಾಟಲಾಗಿದ್ದಾರೆ!
ಬಟ್ಟೆ ಧರಿಸಿಯೂ ಬೆತ್ತಲಾದವರು!
ನಿರ್ದೇಶಕ ಗುರುಪ್ರಸಾದನ ತಲೆಯೀಗ ಅಕ್ಷರಶಃ ವಿಕೃತಿಗಳ ಗುಡಾಣವಾದಂತಿದೆ. ಆ ತೊಟ್ಟಿಯಿಂದ ಹುಟ್ಟಿಕೊಂಡ ಡೈಲಾಗುಗಳು ಬಟ್ಟೆ ಧರಿಸಿಯೂ ಬೆತ್ತಲಾಗುವಂತೆ ಮಾಡಿ ಬಿಟ್ಟಿವೆ. ಈ ಮೂಲಕ ಗುರುಪ್ರಸಾದ ಹೆಣ್ಣಿನ ಬಗ್ಗೆ ತನಗೆಂಥಾ ತುಚ್ಛ ಭಾವವಿದೆ ಅನ್ನೋದನ್ನು ಜಾಹೀರು ಮಾಡಿದ್ದಾನೆ. ಅಂಥಾ ಹೀನಾತಿಹೀನ ಸಂಭಾಷಣೆಯನ್ನು ಯಾವ ವಿರೋಧವೂ ಇಲ್ಲದೆ ಹೇಳುವ ಮೂಲಕ ಜಗ್ಗೇಶ್ ಕೂಡಾ ಅದರ ಪಾಲುದಾರರಾಗಿದ್ದಾರೆ. ಸನ್ನಿ ಲಿಯೋನ್ ಬಗೆಗಿನ ಸಂಭಾಷಣೆಯೊಂದು ಇತ್ತೀಚೆಗೆ ವೈರಲ್ ಆಗಿತ್ತು. ಅದರಾಳದ ವಿಕೃತಿ ಗಮನಿಸಿದವರೆಲ್ಲರೂ ಜಗ್ಗೇಶ್ ಯಾಕೆ ಇಷ್ಟೊಂದು ಕೀಳುಮಟ್ಟಕ್ಕಿಳಿದರು ಅಂತ ಮಮ್ಮಲ ಮರುಗಿದ್ದರು. ಬಹುಶಃ ಆ ಸಂಭಾಷಣೆಯನ್ನು ಸೂಕ್ಷ್ಮವಂತಿಕೆ ಇರುವ ಯಾವ ಕಲಾವಿದನೂ ಹೇಳಲು ಒಪ್ಪಿಕೊಳ್ಳುತ್ತಿರಲಿಲ್ಲವೇನೋ…
ಸನ್ನಿ ಲಿಯೋನ್ ಕನ್ನಡಕ್ಕೆ ಆಗಮಿಸಿದರೆ ಆಕೆಯ ಹೆಸರೇನಿರಬಹುದು ಎಂಬಂರ್ಥದಲ್ಲಿ ಪಾತ್ರವೊಂದು ಪ್ರಶ್ನೆ ಕೇಳುತ್ತೆ. ಅದಕ್ಕೆ ರಂಗನಾಯಕನ ಅವತಾರದ ಜಗ್ಗೇಶ್ ಕೊಡುವ ಉತ್ತರವಿದೆಯಲ್ಲಾ? ಅದನ್ನಿಲ್ಲಿ ಉಲ್ಲೇಖಿಸಲೂ ಅಸಹ್ಯ ಮೂಡಿಕೊಳ್ಳುತ್ತೆ. ನಿಜ, ಸನ್ನಿ ಲಿಯೋನ್ ಒಂದು ಕಾಲದಲ್ಲಿ ರಾಜಾರೋಷವಾಗಿ ಬಟ್ಟೆ ಬಿಚ್ಚಿದ್ದಳು. ನೀಲಿ ಚಿತ್ರಗಳಲ್ಲಿ ನಟಿಸಿದ್ದಳು. ಆ ನಂತರ ಆಕೆಯ ವ್ಯಕ್ತಿತ್ವದಲ್ಲಾದ ಬದಲಾವಣೆ, ಆಕೆಯ ತಾಯ್ತನಗಳು ಮೆಚ್ಚುಗೆಗೆ ಪಾತ್ರವಾಗಿವೆ. ಅದು ಈ ಸಮಾಜದ ಔದಾರ್ಯವೂ ಹೌದು. ಅದೇ ಸಮಾಜದ ಭಾಗವಾದ ಗುರುಪ್ರಸಾದನಿಗಾಗಲಿ, ಜಗ್ಗೇಶ್ ಗಾಗಲಿ ಕಿಂಚಿತ್ತೂ ಸೂಕ್ಷ್ಮತೆ ಇಲ್ಲವೆಂದರೆ ಅದಕ್ಕೇನನ್ನಬೇಕು? ಒಟ್ಟಾರೆಯಾಗಿ, ಸನ್ನಿ ಲಿಯೋನ್ ಬಟ್ಟೆ ಕಳಚಿ ಬೆತ್ತಲಾದರೆ, ಈ ರಂಗನಾಯಕರಿಬ್ಬರು ಬಟ್ಟೆ ಹಾಕಿಯೂ ಬೆತ್ತಲಾಗಿಬಿಟ್ಟಿದ್ದಾರೆ!
ಕಸುವನ್ನೆಲ್ಲ ಕೆಸರಿಗಿಳಿಸಿದ ದುರಂತ!
ಮನಸೆಂಬುದೇ ಗಲೀಜಿನ ಕೊಂಪೆಯಂತಾದರೆ, ಮಾತು, ನಡವಳಿಕೆಗಳಲ್ಲಿಯೂ ಅದೇ ರಾಚಿಕೊಳ್ಳೋದರಲ್ಲಿ ಯಾವ ಅಚ್ಚರಿಯೂ ಇಲ್ಲ. ಸದ್ಯದ ಮಟ್ಟಿಗೆ ಗುರುಪ್ರಸಾದನದ್ದು ಅದೇ ಸ್ಥಿತಿ. ಸಭ್ಯತೆಯ ಪರಿಧಿಯಲ್ಲೇ ನೋಡುಗರೆಲ್ಲ ಉರುಳಾಡಿ ನಗುವಂತೆ ಮಾಡುವ ಛಾತಿ ಗುರುಪ್ರಸಾದನಿಗಿತ್ತು. ಬಹುಶಃ ಅದನ್ನು ಕಾಪಿಟ್ಟುಕೊಂಡು ಬಂದಿದ್ದರೆ ಆತ ನಿರ್ದೇಶಕನಾಗಿ ಒಂದು ಮಟ್ಟಕ್ಕೇರಬಹುದಿತ್ತು. ಆದರೆ, ಅಂಥಾ ಕಸುವನ್ನು ಅಕ್ಷರಶಃ ಡಬಲ್ ಮೀನಿಂಗ್ ಕೆಸರಿಗಿಳಿಸುವ ಮೂಲಕ ಗುರು ಎಡವಟ್ಟು ಮಾಡಿಕೊಳ್ಳುತ್ತಾ ಮುಂದುವರೆಯುತ್ತಿದ್ದಾನೆ. ರಂಗನಾಯಕನಂಥಾ ಗಲೀಜು ಸಂಭಾಷಣೆ ಬರೆಯಲು ಈ ಆಸಾಮಿಯೇ ಆಗಬೇಕಾ? ಆ ಸೌಭಾಗ್ಯಕ್ಕೆ ಈತನ ಸಿನಿಮಾಗಳನ್ನು ಕಾಸು ಕೊಟ್ಟು ನೋಡಬೇಕಾ? ಬೆಂಗಳೂರಿನ ಬೀದಿಗಳಲ್ಲಿ ಒಂದು ರೌಂಡು ಹೊಡೆದರೆ ಇದರಪ್ಪನಂಥಾ ಡೈಲಾಗುಗಳು ಪುಗಸಟ್ಟೆಯಾಗಿಯೇ ಸಿಕ್ಕುಬಿಡೋದಿಲ್ಲವೇ?
ಇನ್ನುಳಿದಂತೆ, ಗುರುವಿನ ವಿಕಾರಗಳನ್ನೆಲ್ಲ ಒಪ್ಪಿಕೊಂಡು, ಜಗ್ಗೇಶ್ ಅದರ ನಾಯಕನಾಗಿದ್ದು ತಪ್ಪೋ ಸರಿಯೋ ಅದು ಅವರಿಗೆ ಬಿಟ್ಟ ವಿಚಾರ. ಆದರೆ, ಅದರ ಸಾಧಕ ಬಾಧಕಗಳಿಗೆ ಸರಿಸಮವಾಗಿ ಹೆಗಲು ಕೊಡುವ ಕರ್ತವ್ಯದಿಂದ ಮಾತ್ರ ಅವರು ನುಣುಚಿಕೊಳ್ಳಲಾಗುವುದಿಲ್ಲ. ಸದ್ಯದ ಮಟ್ಟಿಗೆ ರಾಯರ ಸನ್ನಿಧಾನದಲ್ಲಿ ನಿಂತು ಅವರು ಅದೇ ಕೆಲಸ ಮಾಡಲು ಹವಣಿಸಿದ್ದಾರೆ. ಮತ್ತದೇ ಡಬಲ್ ಮೀನಿಂಗ್ ಉರುಳಿಗೆ ತಾವಾಗಿಯೇ ಸಿಕ್ಕು ನರಳಿದ್ದಾರೆ. ಜಗ್ಗೇಶ್ ಮಾತ್ರವಲ್ಲ; ಯಾವ ನಾಯಕ ನಟನೂ ಕೂಡಾ ಸೋಲಿನ ಭಾರವನ್ನು ನಿರ್ದೇಶಕನ ಹೆಗಲಿಗೆ ವಗಾಯಿಸಿ ಬಚಾವಾಗಲು ಸಾಧ್ಯವಿಲ್ಲ. ಇದರ ಬದಲಾಗಿ, ಡಬಲ್ ಮೀನಿಂಗ್ ಡೈಲಾಗುಗಳನ್ನು ಒದರಿ ಕೆಟ್ಟೆ, ಇನ್ನು ಮುಂದೆ ಅಂಥಾ ತಪ್ಪು ಮಾಡೋದಿಲ್ಲ ಎಂಬಂತೆ ಮಾತಾಡಿದ್ದರೂ ಕೊಂಚ ಮಾನ ಉಳಿಯುತ್ತಿತ್ತು. ಆದರೆ, ಸೋಲಿನ ಮುಸುರೆಯನ್ನು ಜೂಲುಗಡ್ಡಕ್ಕೆ ಬಳಿಯಲು ಹೋಗಿ ಜಗ್ಗೇಶ್ ಮತ್ತೆ ಹೀನಾಯವಾಗಿ ತಗುಲಿಕೊಂಡಿದ್ದಾರೆ!