ವರ್ಷಗಳ ಹಿಂದೆ ಹೊಸಾ ಬಗೆಯಲ್ಲಿ ಪ್ರೇಕ್ಷಕರನ್ನು ಸೆಖಳೆದಿದ್ದ ಚಿತ್ರ (gantumoote) `ಗಂಟಮೂಟೆ’. ಆ ಸಿನಿಮಾವನ್ನು ನಿರ್ದೇಶನ ಮಾಡಿದ್ದ (roopa rao) ರೂಪಾ ರಾವ್ ನಿರ್ಮಾಣ ಮಾಡಿರುವ, ಅದರ ಭಾಗವಾಗಿದ್ದ (sahadev kelavadi) ಸಹದೇವ್ ಕೆಲವಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ `ಕೆಂಡ’ ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಅಷ್ಟಕ್ಕೂ ಒಂದು ಸಿನಿಮಾ ಯಾವ್ಯಾವ ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆಯಬಹುದೋ ಆ ಹಾದಿಯಲ್ಲಿಲ್ಲ ಕೆಂಡ (kenda movie) ಈಗಾಗಲೇ ಕುತೂಹಲ ಮೂಡಿಸಿದೆ. ಹೊಸತನದ ಕಥೆ, ತಾಂತ್ರಿಕತೆಗಳ ಮೂಲಕ ರೂಪುಗೊಂಡಿರುವ ಕೆಂಡದ ಲಿರಿಕಲ್ ವೀಡಿಯೋ ಸಾಂಗ್ ಅಚ್ಚುಕಟ್ಟಾದ ಕಾರ್ಯಕ್ರಮದ ಮೂಲಕ ಬಿಡುಗಡೆಗೊಂಡಿದೆ.
ಜಯಂತ್ ಕಾಯ್ಕಿಣಿ ಪುತ್ರ ರಿತ್ವಿಕ್ ಕಾಯ್ಕಿಣಿ ಕೆಂಡದ ಮೂಲಕ ಸಂಗೀತ ನಿರ್ದೇಶಕರಾಗಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಈ ಹಿಂದೆಯೇ ಜಾಹೀರು ಮಾಡಿತ್ತು. ಜಯಂತ್ ಕಾಯ್ಕಿಣಿಯವರ ಸಮ್ಮೊಹಕ ಹಾಡುಗಳನ್ನು ಎದೆಗಿಳಿಸಿಕೊಂಡು ಮರುಳಾದವರೆಲ್ಲ, ಅವರ ಮಗ ಸಂಗೀತ ನಿರ್ದೇಶಕನಾಗಿ ಆಗಮಿಸುವ ವಿಚಾರ ತಿಳಿದಾಗ ಥ್ರಿಲ್ ಆದದ್ದು ಸುಳ್ಳಲ್ಲ. ಆ ನಿರೀಕ್ಷೆಗಳನ್ನೆಲ್ಲ ನಿಜವಾಗಿಸುವಂತೆ ರಿತ್ವಿಕ್ ಸಂಗೀತ ಸಂಯೋಜನೆ ಮಾಡಿರುವ ಮೊದಲ ಹಾಡು ಬಿಡುಗಡೆಗೊಂಡಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ರಿತ್ವಿಕ್ ಸಂಗೀತ ನೀಡಿರುವ ಈ ಹಾಡು ಮೆಲ್ಲಗೆ ಎದೆಗಿಳಿದು, ಬಹುಕಾಲ ಕಾಡಬಲ್ಲ ಗುಣದೊಂದಿಗೆ ಚೆಂದಗೆ ಮೂಡಿ ಬಂದಿದೆ.
ತಾಜಾ ತಾಜ ಸುದ್ದಿ ಎಂಬ ಈ ಲಿರಿಕಲ್ ವೀಡಿಯೋ ಸಾಂಗ್ ಅರ್ಥವತ್ತಾದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದೆ. ಈ ಸಂದರ್ಭದಲ್ಲಿ ಡಿ ಬೀಟ್ಸ್ ನ ರೂಪಾ ರಾವ್, ಸಹದೇವ್ ಕೆಲವಡಿ, ಹರಿಕೃಷ್ಣ, ಶೈಲಜಾ ನಾಗ್, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಕೆಂಡದ ಹಾಡುಗಳ ಸುತ್ತಾ ಒಂದಷ್ಟು ವಿಚಾಶರಗಳನ್ನು ಹಂಚಿಕೊಂಡಿದ್ದಾರೆ. ಖುದ್ದು ಹರಿಕೃಷ್ಣ ಓರ್ವ ಯಶಸ್ವೀ ಸಂಗೀತ ನಿರ್ದೇಶಕರಾಗಿ ರಿತ್ವಿಕ್ ಕಸುಬುದಾರಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಯೋಗರಾಜ ಭಟ್ ಸಿನಿಮಾ ಜಗತ್ತೊಳಗೆ ಬದುಕುವ ವಿಚಾರಗಳನ್ನು ಬಿಚ್ಚಿಟ್ಟರೆ, ಜಯಂತ್ ಕಾಯ್ಕಿಣಿ ಈ ಕಾರ್ಯಕ್ರಮದ ಭೂಮಿಕೆಯಲ್ಲಿ ಬದುಕಿಗೆ ಹತ್ತಿರಾದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಒಟ್ಟಾರೆಯಾಗಿ ಕೆಂಡ ಈ ಲಿರಿಕಲ್ ವೀಡಿಯೋ ಸಾಂಗ್ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿಬಿಟ್ಟಿದೆ. ಬೆಂಗಳೂರಿನಂಥ ಮಹಾನಗರಿಯಲ್ಲಿ ನಿರಾಸೆಗೊಳಗಾದ ಯುವ ಸಮೂಹ. ರಾಜಕೀಯ, ಅಪರಾಧ ಸೇರಿದಂತೆ ಒಂದಷ್ಟು ಸಾಮಾಜಿಕ ಅಂಶಗಳು ಚಿತ್ರದಲ್ಲಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಥಾನಾಯಕ ಹೇಗೆ ಈ ವ್ಯವಸ್ಥೆಯ ಚಕ್ರವ್ಯೂಹಕ್ಕೆ ಸಿಲುಕುತ್ತಾನೆ. ಆತನನ್ನು ಪಟ್ಟಭದ್ರರು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ. ಆ ಕ್ಷಣದೊಂದು ನಿರ್ಧಾರ ಆತನ ಬದುಕನ್ನು ಯಾವ ದಿಕ್ಕಿನತ್ತ ಮುನ್ನಡೆಸುತ್ತೆ ಎಂಬಂತಹ ಸನ್ನಿವೇಶಗಳನ್ನು ತೋರಿಸಲಾಗುತ್ತಿದೆ. ಒಟ್ಟಾರೆಯಾಗಿ ಈ ದಿನಮಾನದ ಮಟ್ಟಿಗೆ ವಿಭಿನ್ನ ಚಿತ್ರವಾಗಲಿದೆಯಂತೆ. ಬಿ.ವಿ.ಭರತ್, ಪ್ರಣವ್ ಶ್ರೀಧರ್, ವಿನೋದ್ರವೀಂದ್ರನ್, ಗೋಪಾಲ್ ಕೃಷ್ಣ ದೇಶಪಾಂಡೆ ಕೆಂಡದ ಮುಖ್ಯಭೂಮಿಕೆಯಲ್ಲಿದ್ದಾರೆ. ಬಹುತೇಕ ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಶಬ್ಧ ಸಂಯೋಜನೆ ಮಾಡಿದ್ದಾರೆ.