ಗೌರಿಶಂಕರ್ (gowrishankar srg) ನಾಯಕನಾಗಿ ಅಭಿನಯಿಸಿರುವ `ಕೆರೆಬೇಟೆ’ ಚಿತ್ರ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ಕೆರೆಬೇಟೆಯ ಸುತ್ತ ದೊಡ್ಡ ಮಟ್ಟದಲ್ಲಿಯೇ ಕೌತುಕ ಶುರುವಾಗಿದೆ. ಪ್ರೀಮಿಯರ್ ಶೋ ನೋಡಿದ ಸಿನಿಮಾ ರಂಗದ ಮಂದಿಯ ಕಡೆಯಿಂದ ಬರುತ್ತಿರುವ ಪ್ರಶಂಸೆಗಳಂತೂ ಈ ಸಿನಿಮಾದ ಅಸಲೀ ಆಂತರ್ಯವನ್ನು ಪ್ರೇಕ್ಷಕರ ಮುಂದೆ ತೆರೆದಿಡುತ್ತಿವೆ. ಮಲೆನಾಡು ಸೀಮೆಯ ಕಥಾನಕವನ್ನೊಳಗೊಂಡಿರುವ ಕೆರೆಬೇಟೆ ಪ್ರೇಕ್ಷಕರ ಪಾಲಿಗೆ ಫುಲ್ ಮೀಲ್ಸಿನಂಥಾ ಚಿತ್ರವೆಂಬ ಬಗ್ಗೆ ಖುದ್ದು ಚಿತ್ತಂಡ ಹೇಳಿಕೊಂಡಿದೆ. ಅದರೊಳಗಿರುವ ಪಾತ್ರಗಳು, ಕಲಾವಿದರ ವಿವರಗಳನ್ನು ಕೇಳಿದರೆ ಆ ಮಾತು ಅಕ್ಷರಶಃ ನಿಜವೆನಿಸುತ್ತೆ!
ಸಿನಿಮಾ ಮಾಡುವುದರಲ್ಲಿ ಅನೇಕ ಪ್ರಾಕಾರಗಳಿವೆ; ಶೈಲಿಗಳಿವೆ. ಆದರೆ ಸಿನಿಮಾ ನೋಡುವ ಮಂದಿಯಲ್ಲಿ ಬೇರೆ ಬೇರೆ ಅಭಿರುಚಿಗಳಿದ್ದರೂ, ಅದರ ಪ್ರಧಾನ ಉದ್ದೇಶ ಮನೋರಂಜನೆಯಷ್ಟೆ. ಒಂದು ಘನ ಗಂಭೀರವಾದ ಕಥೆಯನ್ನೂ ಕೂಡಾ ಮನೋರಂಜನೆಯ ಹಾಯಿದೋಣಿಯ ಮೂಲಕ ಪ್ರೇಕ್ಷಕರತ್ತ ಸಮರ್ಥವಾಗಿ ದಾಟಿಸಬಹುದು. ಇಂಥಾ ಸೂಕ್ಷ್ಮವನ್ನು ಮನಗಂಡೇ ಯಾವುದಕ್ಕೂ ಕೊರತೆ ಇಲ್ಲದಂತೆ ನಿರ್ದೇಶಕ ರಾಜ್ ಗುರು ಈ ಸಿನಿಮಾವನ್ನು ರೂಪಸಿದ್ದಾರಂತೆ. ಅದರ ಫಲವಾಗಿಯೇ ಕೆರೆಬೇಟೆಯುದ್ದಕ್ಕೂ ಭರಪೂರ ನಗು ನಿಕ್ಕಿ ಎಂಬಂತಿದೆ.
ಕೆರೆಬೇಟೆಯ ಭೂಮಿಕೆಯಲ್ಲಿ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋಗಳಾದ ಕಾಮಿಡಿ ಕಿಲಾಡಿಗಳು ಮತ್ತು ಮಜಾಭಾರತ ಕಲಾವಿದರ ಸಮಾಗಮವಾಗಿದೆ. ಕಾಮಿಡಿ ಕಿಲಾಡಿ ರಾಕೇಶ್ ಪೂಜಾರಿ ಇಲ್ಲಿ ಕೋದ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಮಜಾ ಭಾರತದ ಕಲಾವಿದ ಚಿಲ್ಲರ್ ಮಂಜು ಹಾಲ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವೆರಡೂ ಕೂಡಾ ಸದಾ ನಾಯಕನ ಸುತ್ತಾ ಸುಳಿದಾಡುವ, ಸಿನಿಮಾದುದ್ದಕ್ಕೂ ಕ್ಯಾರಿಯಾಗುವ ಪಾತ್ರಗಳು. ಇದೀಗ ಈ ಇಬ್ಬರು ಕಲಾವಿದರು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಥರ ಥರದ ಪಾತ್ರಗಳು ಅವರನ್ನು ಅರಸಿಕೊಂಡು ಬರುತ್ತಿವೆ. ಆದರೆ ಕೆರೆಬೇಟೆಯ ಪಾತ್ರ ಮಾತ್ರ ಇಬ್ಬರ ಪಾಲಿಗೂ ವಿಶೇಷವಾಗಿವೆಯಂತೆ. ಒಟ್ಟಾರೆಯಾಗಿ ಈ ಪಾತ್ರಗಳು ಸಹ ಕೆರೆಬೇಟೆಯ ಪ್ರಧಾನ ಆಕರ್ಷಣೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿವೆ!
ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.