ರಾಜ್ ಗುರು ಬಿ (rajgur b) ನಿರ್ದೇಶನದಲ್ಲಿ ಮೂಡಿ ಬಂದಿರುವ (kerebete movie) ಕೆರೆಬೇಟೆ ಈ ವಾರದ ಬಹುನಿರೀಕ್ಷಿತ ಚಿತ್ರ. ಆರಂಭದಿಂದಲೂ ಕೂಡಾ ಈ ಸಿನಿಮಾ ಬಗ್ಗೆ ಹಂತ ಹಂತವಾಗಿ ಕುತೂಹಲ ಕಾವುಗಟ್ಟುತ್ತಾ ಬಂದಿತ್ತು. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿ ಅದೆಲ್ಲವೂ ಗಾಢ ನಿರೀಕ್ಷೆಯಾಗಿ ರೂಪಾಂತರಗೊಂಡಿದೆ. ಸದ್ಯ ಹರಳುಗಟ್ಟಿಕೊಂಡಿರುವ ವಾತಾವರಣವೆಲ್ಲವೂ ಈ ಚಿತ್ರಕ್ಕೆ ಪೂರಕವಾಗಿದೆ. ಈ ಸಿನಿಮಾ ಕಥೆಯ ದೃಷ್ಟಿಯಲ್ಲಿ ಮಾತ್ರವಲ್ಲದೇ ಪಾತ್ರ ವರ್ಗದ ವಿಚಾರದಲ್ಲಿಯೂ ಹೊಸತನದ ಆಗರ ಅನ್ನೋದರಲ್ಲಿ ಸಂದೇಹವೇನಿಲ್ಲ. ಇದರ ತಾರಾಗಣ ಎಂಬುದು ಹಳೇ ಬೇರು ಮತ್ತು ಹೊಸಾ ಚಿಗುರಿನ ಸಮಾಗಮವಿದ್ದಂತೆ. ಹೊಸಾ ಚಿಗುರಿನ ವಿಭಾಗದಲ್ಲಿ ಕೆರೆಬೇಟೆಯ ಮೂಲಕ ಅಪ್ಪಟ ರಂಗಭೂಮಿ ಪ್ರತಿಭೆ (raghu rajananda) ರಘು ರಾಜಾನಂದ ಆಗಮಿಸುತ್ತಿದ್ದಾರೆ.
ನಿರ್ದೇಶಕ ರಾಜ್ ಗುರು ತಮ್ಮ ಜೀವಮಾನದ ಕನಸಿನಂಥಾ ಕೆರೆಬೇಟೆಯ ಮೂಲಕ ಒಂದಷ್ಟು ಪ್ರತಿಭೆಗಳು ಬೆಳಕು ಕಾಣಲೆಂಬ ಹಂಬಲ ಹೊಂದಿರುವವರು. ನಾಯಕ ನಟ ಗೌರಿಶಂಕರ್, ನಿರ್ಮಾಪಕ ಜೈಶಂಕರ್ ಕೂಡಾ ಅಂಥಾದ್ದೇ ಮನಃಸ್ಥಿತಿ ಹೊಂದಿರೋದರಿಂದ ಕೆರೆಬೇಟೆಯಲ್ಲಿ ಹೊಸಾ ಕಲಾವಿದರ ದಂಡು ನೆರೆದಿದೆ. ಆದರೆ, ರಘು ರಾಜಾನಂದ ಅವರನ್ನು ಸಿನಿಮಾ ರಂಗಕ್ಕೆ ಹೊಸಬ ಎನ್ನಬಹುದೇ ಹೊರತು, ನಟನೆಗೆ ಹೊಸಬರೆನ್ನುವಂತಿಲ್ಲ. ಯಾಕೆಂದರೆ, ಅವರು ಲಾಗಾಯ್ತಿನಿಂದಲೂ ರಂಗಭೂಮಿಯಲ್ಲಿ ಪಳಗಿಕೊಂಡು ಬಂದಿದ್ದಾರೆ. ಹಾಗೆ ದಕ್ಕಿಸಿಕೊಂಡಿದ್ದ ರಂಗದ ಕಸುವನ್ನೆಲ್ಲ ಒಟ್ಟುಗೂಡಿಸಿಕೊಂಡು ಕೆರೆಬೇಟೆಯ ಖಡಕ್ ಪೊಲೀಸ್ ಪಾತ್ರಕ್ಕೆ ಜೀವ ತುಂಬಿದ್ದಾರಂತೆ.
ರಘು ರಾಜಾನಂದ ಮೂಲತಃ ಹೊಸಕೋಟೆಯವರು. ಶಾಲಾ ಕಾಲೇಜು ದಿನಗಳಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಾ ಬಂದಿದ್ದ ಅವರು `ವಿಜಯರಂಗ’ ಎಂಬ ಕಲಾ ತಂಡದ ಖಾಯಂ ಸದಸ್ಯರೂ ಹೌದು. ಈ ತಂಡದ ಕಡೆಯಿಂದ ದೇಶಾದ್ಯಂತ ಪ್ರದರ್ಶನಗಳನ್ನು ನೀಡಿದ ಖ್ಯಾತಿ ಅವರಿಗಿದೆ. ಹೀಗೆ ರಂಗಭೂಮಿಯಲ್ಲಿ ಪಳಗಿಕೊಂಡು, ಸಿನಿಮಾರಂಗದಲ್ಲಿ ಮಿಂಚಲು ತಾಲೀಮು ನಡೆಸುತ್ತಿದ್ದ ರಘು ಪಾಲಿಗೆ ಕೆರೆಬೇಟೆಯಲ್ಲಿ ಸಬ್ ಇನ್ಸ್‍ಪೆಕ್ಟರ್ ಆಗೋ ಅವಕಾಶ ಕೂಡಿ ಬಂದಿದೆ. ಒಟ್ಟಾರೆ ಸಿನಿಮಾದಲ್ಲಿ ಪ್ರಾಧಾನ್ಯತೆ ಹೊಂದಿರುವ ಈ ಪಾತ್ರದ ಮೂಲಕ ಚಿತ್ರರಂಗಕ್ಕೆ ಭರ್ಜರಿ ಪ್ರವೇಶ ಸಿಗಬಹುದೆಂಬ ನಿರೀಕ್ಷೆ ಅವರಲ್ಲಿದೆ.
ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.