ಗೌರಿಶಂಕರ್ (gowrishankar) ನಾಯಕನಾಗಿ ನಟಿಸಿರುವ ಕೆರೆಬೇಟೆ ಚಿತ್ರ ತೆರೆಗಾಣಲು ದಿನವೊಂದು ಬಾಕಿ ಉಳಿದುಕೊಂಡಿದೆ. ಈಗಾಗಲೇ ಇದರ ಪ್ರೀಮಿಯರ್ ಶೋ ಕೂಡಾ ನಡೆದಿದೆ. ಸಿನಿಮಾ ನೋಡಿದ ಮಂದಿಯೆಲ್ಲ ಥ್ರಿಲ್ ಆಗಿದ್ದಾರೆ. ನಟನೆ ನಿರ್ದೇಶನ ಸೇರಿದಂತೆ ಎಲ್ಲವನ್ನೂ ಮೆಚ್ಚಿಕೊಂಡು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ನಿರ್ದೇಶಕ (director rajguru) ರಾಜ್ ಗುರು ಕಸುವನ್ನು ಸರ್ವರೂ ಕೊಂಡಾಡುತ್ತಿದ್ದಾರೆ. ಇದು ಈ ನಿರ್ದೇಶಕನ ಚೊಚ್ಚಲ ಸಿನಿಮಾ ಎಂದರೆ ನಂಬಲಾಗೋದಿಲ್ಲ ಎಂಬಂಥಾ ಅಚ್ಚರಿ ಪ್ರೀಮಿಯರ್ ಶೋ ಮುಗಿದಾದ ನಂತರದಲ್ಲಿ ಹಬ್ಬಿಕೊಂಡಿದೆ. ಇದು ರಾಜ್ ಗುರು ಪಾಲಿಗೆ ಅಕ್ಷರಶಃ ಬಹುಕಾಲದಿಂದ ಸಾಕಿಕೊಂಡಿದ್ದ ಕನಸು, ಅದಕ್ಕಾಗಿ ನಡೆಸಿದ್ದ ಸರ್ಕಸ್ಸು, ಆ ಹಾದಿಯಲ್ಲೆದುರಾದ ನೋವು, ನಿರಾಸೆ, ಅವಮಾನಗಳೆಲ್ಲವೂ ಸಾರ್ಥಕ್ಯ ಕಂಡಂಥಾ ಮಹತ್ವದ ಘಟ್ಟ!
ರಾಜ್ ಗುರು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬದವರು. ಶಿರಸಿಯಲ್ಲಿ ಪತ್ರಿಕೋದ್ಯಮ ಪದವಿ ಪಡೆದುಕೊಂಡಿದ್ದ ಅವರು ಒಂದಷ್ಟು ಕಾಲ ಕಾರವಾರದ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡಿದ ಅನುಭವವನ್ನೂ ಹೊಂದಿದ್ದಾರೆ. ಶಾಲಾ ಕಾಲೇಜು ದಿನಗಳಲ್ಲಿಯೇ ಅತೀವ ಸಿನಿಮಾ ಪ್ರೀತಿ ಹೊಂದಿದ್ದ ರಾಜ್ ಗುರು, ಪತ್ರಿಕೋದ್ಯಮದ ತೆಕ್ಕೆಗೆ ಬಿದ್ದ ನಂತರ ಬಲವಾಗಿಯೇ ಸಿನಿಮಾವನ್ನು ಧ್ಯಾನಿಸಲಾರಂಭಿಸಿದ್ದರು. ಅದರ ಫಲವಾಗಿ 2008ರ ಸುಮಾರಿಗೆ ಬೆಂಗಳೂರಿಗೆ ಬಂದಿಳಿದ ಅವರು, ಸಾಮಾನ್ಯ ಹುಡುಗನೋರ್ವ ಗಾಂಧಿನಗರದ ಆಸುಪಾಸಲ್ಲಿ ಪಡುವ ಪಡಿಪಾಟಲುಗಳನ್ನೆಲ್ಲ ಕಂಡುಂಡಿದ್ದರು. ಕಡೆಗೂ ಹೇಗೋ ಮಾಡಿ ಚಿತ್ರರಂಗಕ್ಕೆ ಅಡಿಯಿರಿಸಿದ ಅವರಿಗೆ ನಿರ್ದೇಶಕ ಎ ಆರ್ ಬಾಬು ಅವಕಾಶ ಕಲ್ಪಿಸಿದ್ದರು.
ಹಂತ ಹಂತವಾಗಿ ಎ ಆರ್ ಬಾಬು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಬಡ್ತಿ ಪಡೆದಿದ್ದ ರಾಜ್ ಗುರು, ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದು ಕೋಮಲ್ ನಾಯಕನಾಗಿ ನಟಿಸಿದ್ದ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದ ಮೂಲಕ. ಆ ನಂತರದಲ್ಲಿ ಪವನ್ ಒಡೆಯರ್ ಸ್ನೇಹ ವಲಯಕ್ಕೆ ಬಂದಿದ್ದ ರಾಜ್ ಗುರು ಗೂಗ್ಲಿ, ಗೋಂವಿಂದಾಯ ನಮಃ ಮುಂತಾದ ಚಿತ್ರಗಳ ಭಾಗವಾಗಿದ್ದರು. ಅಲ್ಲಿಂದೀಚೆಗೆ ರಥಾವರದ ವರೆಗೂ ಹಲವಾರು ಸಿನಿಮಾಗಳಿಗೆ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಹೀಗೆ ನಿರ್ದೇಶಕನಾಗುವ ಕನಸಿಗೆ ಹದಿನಾರು ವರ್ಷಗಳನ್ನು ಮುಡಿಪಾಗಿಟ್ಟಿದ್ದ ರಾಜ್ ಗುರು ಸ್ವತಂತ್ರ ನಿರ್ದೇಶಕನಾಗುವ ನಿರ್ಧಾರಕ್ಕೆ ಬಂದು ಕೆರೆಬೇಟೆಯ ಕಥೆಯನ್ನು ಸಿದ್ಧಗೊಳಿಸಿದ್ದರು. ಅಂದಹಾಗೆ, ಅವರಿಗೆ ಕನ್ನಡದಲ್ಲಿನ ನಿರ್ದೇಶಕರೆಲ್ಲ ಸಾರ್ವಕಾಲಿಕ ಸ್ಫೂರ್ತಿ. ಆದರೆ, ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಶೈಲಿಯ ಮೇಲೆ ಎಂದೂ ತೀರದ ಮೋಹವಿದೆ. ಜನರ ನಡುವಿನ ಕಥೆಯನ್ನು ಚಿತ್ರವಾಗಿಸಿ, ಅವರೇ ಅಚ್ಚರಿಯಾಗುವಂತೆ ರೂಪಿಸುವ ಕಲೆ ವೆಟ್ರಿಮಾರನ್ ಪಾಲಿಗೆ ಸ್ವಂತ. ಇದೇ ಹಾದಿಯಲ್ಲಿ ಹಲವಾರು ಮಾಸ್ಟರ್ ಪೀಸ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ, ದೊಡ್ಡ ಮಟ್ಟದಲ್ಲಿ ಗೆದ್ದಿರುವ ವೆಟ್ರಿ ಮಾರನ್ ರಾಜ್ ಗುರು ಪಾಲಿಗೆ ಮಾದರಿ. ತಾನೂ ಕೂಡಾ ಕನ್ನಡದಲ್ಲಿ ಅವರ ಹಾದಿಯಲ್ಲಿಯೇ ಸಿನಿಮಾಗಳನ್ನು ನಿರ್ದೇಶನ ಮಾಡಬೇಕೆಂಬುದು ರಾಜ್ ಗುರು ಪಾಲಿನ ಜೀವಮಾನದ ಕನಸು.
ರಾಜ್ ಗುರು ಈ ಹದಿನಾರು ವರ್ಷಗಳ ಸುದೀರ್ಘ ಹಾದಿಯಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿದ್ದಾರೆ. ನಿರಾಸೆಗಳನ್ನು ಸಂಧಿಸಿದ್ದಾರೆ. ಬಹುಶಃ ಕೊಂಚ ಧೃತಿಗೆಟ್ಟಿದ್ದರೂ ಅದ್ಯಾವತ್ತೋ ಸಿನಿಮಾರಂಗದಿಂದ ಎಗರಿಕೊಳ್ಳಬೇಕಾಗುತ್ತಿತ್ತು. ತನ್ನ ಪ್ರತಿಭೆಯ ಮೇಲೆ ನಂಬಿಕೆಯಿಟ್ಟು, ಒಳ್ಳೆ ದಿನ ಬಂದೇ ಬರುತ್ತದೆಂಬ ಅಚಲ ಭಾವವೊಂದನ್ನು ಹಸಿಯಾಗಿಟ್ಟುಕೊಂಡು ಸಾಗಿ ಬಂದಿದ್ದರಿಂದಲೇ ಕರೆಬೇಟೆ ಸಾಧ್ಯವಾಗಿದೆ. ತುಂಬಾ ಪ್ರೀತಿಯಿಂದ ಕಥೆ ಸೃಷ್ಟಿಸಿ, ಗೌರಿಶಂಕರ್ ಸೇರಿದಂತೆ ಚಿತ್ರತಂಡದ ಬೆಂಬಲದೊಂದಿಗೆ ಒಂದೊಳ್ಳೆ ಸಿನಿಮಾ ಮಾಡಿರುವ ತೃಪ್ತಿ ರಾಜ್ ಗುರು ಅವರಲ್ಲಿದೆ. ಪ್ರೀಮಿಯರ್ ಶೋ ನೋಡಿದವರೆಲ್ಲರ ಮಾತುಗಳನ್ನಾಧರಿಸಿ ಹೇಳೋದಾದರೆ, ರಾಜ್ ಗುರು ಕನಸು ಕೆರೆಬೇಟೆಯ ಮೂಲಕ ಸಾಕಾರಗೊಂಡಿದೆ. ಪ್ರೇಕ್ಷಕರೆಲ್ಲರ ತುಂಬು ಪ್ರೀತಿ ಸಿಕ್ಕರೆ ಖಂಡಿತವಾಗಿಯೂ ಕೆರೆಬೇಟೆಯ ಮೂಲಕ ಕನ್ನಡದಲ್ಲೋರ್ವ ವೆಟ್ರಿಮಾರನ್ ಉದಯಿಸುತ್ತಾನೆ!