ಕೆರೆಬೇಟೆ (kerebete movie) ಚಿತ್ರ ಬಿಡುಗಡೆಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಬಿಡುಗಡೆಯ ಈ ಕಡೇ ಕ್ಷಣಗಳಲ್ಲಿ ಅಷ್ಟದಿಕ್ಕುಗಳಿಂದಲೂ ಸಕಾರಾತ್ಮಕ ವಾತಾವರಣ ಪಡಿಮೂಡಿಕೊಂಡಿದೆ. ಯಾವುದೇ ಸಿನಿಮಾವಾಗಿದ್ದರೂ ಒಬ್ಬರನ್ನೊಬ್ಬರು ಮೀರಿಸುವಂಥಾ ಕಲಾವಿದರ ತಾರಾಬಳಗವಿದ್ದರೆ ಪ್ರೇಕ್ಷಕರೆಲ್ಲ ಅನಾಯಾಸವಾಗಿ ಆಕರ್ಷಿತರಾಗುತ್ತಾರೆ. ಈ ನಿಟ್ಟಿನಲ್ಲಿ ನೋಡಹೋದರೆ ಕೆರೆಬೇಟೆ ಚಿತ್ರದ ಆಕರ್ಷಣೆ ತುಸು ಹೆಚ್ಚೇ ಇದೆ. ಯಾಕೆಂದರೆ, ಇಲ್ಲಿ ಹೊಸಬರ ಜೊತೆಗೆ, ಈಗಾಗಲೇ ಪ್ರಸಿದ್ಧಿ ಪಡೆದುಕೊಂಡಿರುವ ನಟನಟಿಯರದ್ದೊಂದು ದಂಡೇ ಇದೆ. ಅತ್ತ (gopal deshapande) ಗೋಪಾಲ್ ದೇಶಪಾಂಡೆ, ಇತ್ತ (sampath maithreya) ಸಂಪತ್ ಮೈತ್ರೇಯರಂಥಾ ರಂಗಭೂಮಿ ಕಲಾವಿದರಿಂದ ಕೆರೆಬೇಟೆ ಕಳೆಗಟ್ಟಿಕೊಂಡಿದೆ.
ಸಂಪತ್ ಮೈತ್ರೇಯ ಕನ್ನಡದ ಅಪರೂಪದ ನಟ. ಸಾಮಾನ್ಯವಾಗಿ ರಂಗಭೂಮಿಯಿಂದ ಬಂದವರಲ್ಲಿ ಅನೇಕರು, ಒಮ್ಮೆ ಪ್ರಸಿದ್ಧಿ ಸಿಕ್ಕರೆ ಮತ್ತೆ ಅದರತ್ತ ಹೊರಳಿಯೂ ನೋಡುವುದಿಲ್ಲ. ಆದರೆ ರಂಗಭೂಮಿಯ ಸಾಹಚರ್ಯಕ್ಕಿಂತಲೂ ಮಿಗಿಲಾದ ಸಂಪತ್ತು ಬೇರೊಂದಿಲ್ಲ ಅಂದುಕೊಂಡಿರುವವರು ಸಂಪತ್ ಮೈತ್ರೇಯ. ಅತ್ತ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದುಕೊಂಡೇ ಇತ್ತ ಅಪರೂಪದ ಸಿನಿಮಾ ಪಾತ್ರಗಳನ್ನೂ ನಿರ್ವಹಿಸುತ್ತಾ ಸಂಪತ್ ಸಾಗುತ್ತಿದ್ದಾರೆ. ಇದೀಗ ಕೆರೆಬೇಟೆಯ ಮೂಲಕ ಖಡಕ್ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಅವರು ಅಣಿಯಾಗಿದ್ದಾರೆ.
ನಿರ್ದೇಶಕ ರಾಜ್ ಗುರು ಕೆರೆಬೇಟೆಯ ಸರ್ಕಲ್ ಇನ್ಸ್ ಪೆಕ್ಟರ್ ಪಾತ್ರಕ್ಕೆ ಆರಂಭದಲ್ಲಿಯೇ ಸಂಪತ್ ಮೈತ್ರೇಯ ಅವರನ್ನು ನಿಗಧಿಗೊಳಿಸಿದ್ದರಂತೆ. ನಂತರ ಈ ಕಥೆ ಮತ್ತು ಪಾತ್ರದ ಬಗ್ಗೆ ಹೇಳಿದಾಗ ಖುಷಿಗೊಂಡಿರುವ ಸಂಪತ್ ತಕ್ಷಣವೇ ಒಪ್ಪಿಗೆ ಸೂಚಿಸಿದ್ದಾರೆ. ಸಾಮಾನ್ಯವಾಗಿ, ಪೊಲೀಸ್ ಅಧಿಕಾರಿಯ ಪಾತ್ರ ಅಂದಾಕ್ಷಣ ಅಂದಾಜೊಂದು ತಂತಾನೇ ಮೂಡಿಕೊಳ್ಳುತ್ತದೆ. ಆದರೆ, ಅದೆಲ್ಲವನ್ನೂ ಮೀರಿದ ಅಂಶಗಳೊಂದಿಗೆ ಈ ಪಾತ್ರ ಮೂಡಿ ಬಂದಿದೆಯಂತೆ. ಯಾವುದೇ ಸಿನಿಮಾ ಒಪ್ಪಿಕೊಳ್ಳುವ ಮುನ್ನ ತನ್ನ ಪಾತ್ರ ಮಾತ್ರವಲ್ಲದೇ ಒಂದಿಡೀ ಕಥೆಯನ್ನೂ ಸಂಪತ್ ಗಂಭೀರವಾಗಿ ಪರಿಗಣಿಸುತ್ತಾರೆ. ಈ ವಿಚಾರದಲ್ಲಿ ಆರಂಭಿಕವಾಗಿ ಕೇಳಿದ ಕಥೆ ಮೈ ಕೈ ತುಂಬಿಕೊಂಡು ಸಿದ್ಧಗೊಂಡಿರುವ ರೀತಿ ಕಂಡು ಸಂಪತ್ ಖುಷಿಗೊಂಡಿದ್ದಾರೆ.
ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.