ಯುವ ಮನಸುಗಳು ಸಾರಥ್ಯ ವಹಿಸಿದ ಚಿತ್ರಗಳ ಬಗ್ಗೆ ಪ್ರೇಕ್ಷಕರು ತಂತಾನೇ ಆಕರ್ಷಿತರಾಗುತ್ತಾರೆ. ಆ ಹುರುಪಿನ ಕುಲುಮೆಯಲ್ಲಿ ಹೊಸತೇನೋ ರೂಪುಗೊಳ್ಳುತ್ತದೆಂಬ ಗಾಢ ನಂಬಿಕೆ ಅದಕ್ಕೆ ಕಾರಣ. ಹೆಚ್ಚೂಕಮ್ಮಿ ಅಂಥಾ ಭರವಸೆ ಕಾಲ ಕಾಲಕ್ಕೆ ಹುಸಿಯಾಗದೆ, ಮತ್ತಷ್ಟು ಹೊಳಪುಗಟ್ಟಿಕೊಂಡು ಸಾಗಿ ಬಂದಿದೆ. ಆ ಹಾದಿಯಲ್ಲೇ ರೂಪುಗೊಳ್ಳುತ್ತಿರುವ ಚಿತ್ರ `(vidyarthi vidyarthiniyare movie) ವಿದ್ಯಾರ್ಥಿ ವಿದ್ಯಾರ್ಥಿನಿಯರೇ’. ಚಂದನ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಅರುಣ್ ಅಮುಕ್ತ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗಷ್ಟೇ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದ್ದ ಚಿತ್ರತಂಡವೀಗ ಚಂದನ್ ಶೆಟ್ಟಿಯ ವಿಆರ್ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆ.
ವಿಶೆಷವೆಂದರೆ, ಇದನ್ನು ಖುದ್ದು (chandan shetty) ಚಂದನ್ ಶೆಟ್ಟಿ ಮಡದಿ ನಿವೇದಿತಾ ಗೌಡ ಬಿಡುಗಡೆಗೊಳಿಸಿ, ಈ ಮೂಲಕ ಸರ್ವರಿಗೂ ಶಿವರಾತ್ರಿಯ ಶುಭಾಶಯ ಹೇಳಿದ್ದಾರೆ. ಈ ಚಿತ್ರದಲ್ಲಿ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆಂಬ ಮಾಹಿತಿ ಆರಂಭದಲ್ಲಿಯೇ ಹೊರಬಿದ್ದಿತ್ತು. ಆದರೆ, ಅವರ ಪಾತ್ರದ ಬಗ್ಗೆಯಾಗಲಿ, ಗೆಟಪ್ಪಿನ ಬಗ್ಗೆಯಾಗಲಿ ಚಿತ್ರತಂಡ ಯಾವ ಮಾಹಿತಿಯನ್ನೂ ಹಂಚಿಕೊಂಡಿರಲಿಲ್ಲ. ಈ ಬಗ್ಗೆ ಕುತೂಹಲವಿಟ್ಟುಕೊಂಡವರೆಲ್ಲ ಖುಷಿಗೊಳ್ಳುವಂತೆ ಇದೀಗ ಚಂದನ್ ಶೆಟ್ಟಿಯ ಪಾತ್ರ ಪ್ರತ್ಯಕ್ಷವಾಗಿದೆ. ಆರಂಭದಿಂದ ಇಲ್ಲಿಯವರೆಗೂ ನಿರ್ದೇಶಕ ಅರುಣ್ ಅಮುಕ್ತ ಅತ್ಯಂತ ಕ್ರಿಯಾಶೀಲವಾಗಿಯೇ ಈ ಸಿನಿಮಾದತ್ತ ಪ್ರೇಕ್ಷಕರನ್ನು ಸೆಳೆಯುತ್ತಾ ಬಂದಿದ್ದಾರೆ. ಈ ವಿಆರ್ ಪೋಸ್ಟರ್ ಮೋಷನ್ ಪೋಸ್ಟರ್ ಅನ್ನೂ ಕೂಡಾ ಅದೇ ಧಾಟಿಯಲ್ಲಿ ಸಿದ್ಧಗೊಳಿಸಿದ್ದಾರೆ.
ಕಳೆದ ಬಾರಿ ಬಿಡುಗಡೆಗೊಂಡಿದ್ದ ಮೋಷನ್ ಪೋಸ್ಟರಿನಲ್ಲಿ ನಾಲಕ್ಕು ಪಾತ್ರಗಳು ಕಾಣಿಸಿದ್ದವು. ಇದೀಗ ಚಂದನ್ ಶೆಟ್ಟಿ ಕೈಯಲ್ಲಿ ವಿಆರ್ ಹಿಡಿದುಕೊಂಡು ಕಾಣಿಸಿಕೊಂಡಿದ್ದಾರೆ. ಈ ಮೂಲಕ ಈ ಸಿನಿಮಾದಲ್ಲಿ ಸೈಬರ್ ಫಂಕ್ ಕಥೆ ಇದ್ದಿರಬಹುದಾ ಅಂತೊಂದು ಕುತೂಹಲ ಸಹಜವಾಗಿಯೇ ಕಾಡಲಾರಂಭಿಸಿದೆ. ಸುಬ್ರಮಣ್ಯ ಕುಕ್ಕೆ ಮತ್ತು ಶಿವಲಿಂಗೇಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಮಾಡಲಿದ್ದಾರೆ.