ಗೌರಿಶಂಕರ್ (gowrishankar srg) ನಾಯಕನಾಗಿ ನಟಿಸಿರುವ ಕೆರೆಬೇಟೆ (kerebete movie) ಚಿತ್ರ ಇದೇ ತಿಂಗಳ 15ರಂದು ತೆರೆಗಾಣಲಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಟ್ರೈಲರ್ ಮೂಲಕ ಕೆರೆಬೇಟೆಯ ಸುತ್ತಾ ಹತ್ತಾರು ದಿಕ್ಕುಗಳ ಕೌತುಕ ಮೂಡಿಕೊಂಡಿದೆ. ಸಾಮಾನ್ಯವಾಗಿ ಕನ್ನಡ ಪ್ರೇಕ್ಷಕರು ಮಣ್ಣಿನ ಘಮಲಿನ ಕಥೆಗಾಗಿ ಸದಾ ಹಾತೊರೆಯುತ್ತಾರೆ. ಇತ್ತೀಚೆಗಂತೂ ಮಾಸ್ ಭ್ರಮೆ ಕವಿಚಿಕೊಂಡಿರೋದರಿಂದ, ಆ ಸಿದ್ಧಸೂತ್ರದಾಚೆಯ ಸಿನಿಮಾವೊಂದನ್ನು ಕಣ್ತುಂಬಿಕೊಳ್ಳುವ ತವಕ ಬಹುತೇಕ ಪ್ರೇಕ್ಷಕರಲ್ಲಿತ್ತು. ಅಂಥವರನ್ನೆಲ್ಲ ಕೆರೆಬೇಟೆ ಟ್ರೈಲರ್ ಸಾರಾಸಗಟಾಗಿ ಸೆಳೆದುಕೊಂಡಿದೆ. ಇದೇ ಹೊತ್ತಿನಲ್ಲಿ (kiccha sudeep) ಕಿಚ್ಚಾ ಸುದೀಪ್ ಕೂಡಾ ಈ ಟ್ರೈಲರ್ ಅನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ತಮ್ಮ ಸಿನಿಮಾ ಮುಂತಾದ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದರೂ ಕೂಡಾ ಹೊಸಾ ಪ್ರಯತ್ನಗಳನ್ನು ಬೆನ್ತಟ್ಟಿ ಪ್ರೋತ್ಸಾಹಿಸುತ್ತಾ ಬಂದವರು ಕಿಚ್ಚಾ ಸುದೀಪ್. ಅದರ ಭಾಗವಾಗಿಯೇ ಅವರು ಕೆಲ ದಿನಗಳಿಂದ ಟ್ರೆಂಡಿಂಗ್ ನಲ್ಲಿರುವ, ಚರ್ಚೆಗೆ ಗ್ರಾಸವಾಗಿರುವ ಕೆರೆಬೇಟೆ ಟ್ರೈಲರ್ ಅನ್ನು ವೀಕ್ಷಿಸಿದ್ದಾರೆ. ಈ ಟ್ರೈಲರ್ ನೋಡಿದಾಕ್ಷಣವೇ ಈ ಸಿನಿಮಾದಲ್ಲೋನೋ ಇದೆ ಎಂಬ ಭಾವ ಮೂಡಿಕೊಳ್ಳುತ್ತೆ. ಒಂದು ಟ್ರೈಲರ್ ಮೂಲಕ ಇಂಥಾದ್ದೊಂದು ಕುತೂಹಲ ಹುಟ್ಟುಹಾಕೋದು ಮೆಚ್ಚುವಂಥಾ ಕೆಲಸ. ಅದರಲ್ಲಿಯೂ ಇದೊಂದು ಕಂಟೆಂಟ್ ಓರಿಯಂಟೆಡ್ ಸಿನಿಮಾವಾಗಿಯೂ ಗಮನ ಸೆಳೆಯುತ್ತದೆ ಎಂದಿರುಇವ ಸುದೀಪ್, ನಾಯಕನಾಗಿ ನಟಿಸಿರುವ ಗೌರಿಶಂಕರ್ ಪಾತ್ರವನ್ನು, ನಿರ್ದೇಶನವನ್ನೂ ಮೆಚ್ಚಿಕೊಂಡಿದ್ದಾರೆ. ಒಂದಿಡೀ ತಂಡಕ್ಕೆ ಶುಭವಾಗಲೆಂದು ಮನದುಂಬಿ ಹಾರೈಸಿದ್ದಾರೆ.
ಕಿಚ್ಚನ ಈ ಮೆಚ್ಚುಗೆ ಮತ್ತು ಬೆಂಬಲಗಳಿಂದ ಕೆರೆಬೇಟೆ ಚಿತ್ರತಂಡಕ್ಕೆ ಮತ್ತಷ್ಟು ಉತ್ಸಾಹ ಬಂದಂತಾಗಿದೆ. ಚೊಚ್ಚಲ ಹೆಜ್ಜೆಯಲ್ಲಿಯೇ ನಿರ್ದೇಶಕ ರಾಜ್ ಗುರು ಅವರಿಗೂ ಬಲ ಬಂದಂತಾಗಿದೆ. ಕಿಚ್ಚ ಕೆರೆಬೇಟೆಯ ಬಗ್ಗೆ ಆಡಿರುವ ಒಳ್ಳೆ ಮಾತುಗಳೆಲ್ಲವೂ ಈ ಸಿನಿಮಾ ಸುತ್ತ ಹಬ್ಬಿಕೊಂಡಿರುವ ನಿರೀಕ್ಷೆಗಳನ್ನು ನಿಗಿನಿಗಿಸುವಂತೆ ಮಾಡಿದೆ. ಈ ಹಿಂದೆ ರಾಜಹಂಸದಂಥಾ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಗೌರಿಶಂಕರ್ ಇಲ್ಲಿ ಪಕ್ಕಾ ಮಲೆನಾಡು ಫ್ಲೇವರಿನ ರಗಡ್ ಪಾತ್ರವಾಗಿದ್ದಾರೆ. ಅದರ ಚಹರೆಗಳೆಲ್ಲವೂ ಟ್ರೈಲರ್ ನಲ್ಲಿ ಕಾಣಿಸಿದೆ. ಇನ್ನುಳಿದಂತೆ ಬಿಂದು ಶಿವರಾಮ್ ನಾಯಕಿಯಾಗಿ, ಮಲೆನಾಡು ಹುಡುಗಿಯ ಪಾತ್ರದಲ್ಲಿ ಸಾಥ್ ಕೊಟ್ಟಿದ್ದಾರೆ.
ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.