ಪ್ರಭಾಸ್ ವೃತ್ತಿ ಬದುಕಿನಲ್ಲಿ ಹೀಗೇಕಾಗುತ್ತಿದೆ? ಇಂಥಾದ್ದೊಂದು ಪ್ರಶ್ನೆ ಆತನನ್ನು ಆರಾಧಿಸುವ, ಅಭಿಮಾನದಾಚೆಗೂ ಮೆಚ್ಚಿಕೊಳ್ಳುವ ಅನೇಕರಲ್ಲಿ ಮೂಡಿಕೊಂಡಿದೆ. ಬಹುಶಃ (bahubali movie) ಬಾಹುಬಲಿಯ ಮೂಲಕ ದೊಡ್ಡ ಮಟ್ಟದ್ದೊಂದು ಕ್ರೇಜ್, ಊರು ತುಂಬಾ ಅಭಿಮಾನಿ ಬಳಗದ ಬೇಸ್ ಇಲ್ಲದೇ ಹೋಗಿದ್ದಿದ್ದರೆ (prabhas) ಪ್ರಭಾಸ್ ಮೇಲೇಳಲಾರದಂತೆ ಕುಸಿದು ಬಿಡುತ್ತಿದ್ದನೇನೋ. ಅಂಥಾ ಸೋಲು, ಖಾಯಿಲೆಯ ರೂಮರ್ ಮತ್ತು ಎದ್ದೇಳಲು ಪ್ರಯತ್ನಿಸಿದಾಗೆಲ್ಲ ಧುತ್ತನೆದುರಾಗೋ ಹಿನ್ನಡೆ… ಇಂಥವೆಲ್ಲ ಆಘಾತಗಳು ಸದ್ಯ ಪ್ರಭಾಸನ ವೈತ್ತಿ ಬದುಕನ್ನು ಹೈರಾಣು ಮಾಡಿ ಹಾಕಿವೆ. ಆದಿಪುರುಷ್ ಚಿತ್ರದ ಹೀನಾಯ ಸೋಲನ್ನು ಸಲಾರ್ ಮೂಲಕವೂ ನೀಗಿಕೊಳ್ಳಲಾಗಿಲ್ಲ. ಕಲ್ಕಿಯಾಗಿಯಾದರೂ ಮೈಕೊಡವಿಕೊಂಡು ಮತ್ತೆ ಮೆರೆಯಬಹುದೆಂಬ ಆಸೆಗೂ ಪದೇ ಪದೆ ಮುಂದಕ್ಕೆ ಹೋಗುತ್ತಿರೋ ರಿಲೀಸ್ ಡೇಟು ತಣ್ಣೀರೆರಚಿದೆ.
ಸಾಮಾನ್ಯವಾಗಿ ಯಾವ ಸ್ಟಾರ್ ನಟರ ಅಭಿಮಾನಿಗಳಾದರೂ ಹೀಗೆ ಅಡಿಗಡಿಗೆ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗೋದನ್ನು ಸಹಿಸುವುದಿಲ್ಲ. ಆದರೆ, ಪ್ರಭಾಸ್ ಅಭಿಮಾನಿಗಳನ್ನು ಮಾತ್ರ ಅದು ವರ್ಷಾಂತರಗಳಿಂದಲೂ ಶಾಪವೆಂಬಂತೆ ಸುತ್ತಿಕೊಳ್ಳುತ್ತಾ ಬಂದಿದೆ. ಬಾಹುಬಲಿಗಾಗಿ ಕಾದರೂ ಕೂಡಾ ಸಂತೃಪ್ತಗೊಳಿಸುವ ಗೆಲುವು ದಕ್ಕಿತ್ತು. ಆದರೆ, ಅದರಾಚೆಗೆ ಆ ಯಶವನ್ನು ಸರಿಗಟ್ಟೋದಿರಲಿ, ಅದರ ಹತ್ತಿರ ಸುಳಿಯಲೂ ಪ್ರಭಾಸನಿಗೆ ಸಾಧ್ಯವಾಗಿಲ್ಲ. ಆ ಎಲ್ಲ ನಿರಾಸೆ, ವ್ಯಾಕುಲಗಳನ್ನೂ ಬಿಡುಗಡೆಗೆ ಸಜ್ಜಾಗಿರುವ ಕಲ್ಕಿ ಚಿತ್ರ ನೀಗಿಸುತ್ತದೆ ಅಂತೊಂದು ಗಾಢ ನಂಬಿಕೆ ಅಭಿಮಾನಿಗಳಲ್ಲಿತ್ತು. ಆದರೀಗ ಅದೂ ಕೂಡಾ ಮರೀಚಿಕೆಯೇನೋ ಅನ್ನಿಸಲಾರಂಭಿಸಿದೆ!
ಕಲ್ಕಿ ಚಿತ್ರ ಕಳೆದ ವರ್ಷವೇ ಬಿಡುಗಡೆಗೊಳ್ಳುತ್ತದೆಂದು ನಿರೀಕ್ಷಿಸಲಾಗಿತ್ತು. ಚಿತ್ರತಂಡ ಕೂಡಾ ಅದನ್ನು ಅನುಮೋದಿಸುವಂಥಾ ಸುದ್ದಿಗಳನ್ನೇ ಜಾಹೀರು ಮಾಡುತ್ತಾ ಸಾಗಿ ಬಂದಿತ್ತು. ಈ ಸಂಕ್ರಾಂತಿಗಂತೂ ಕಲ್ಕಿ ತೆರೆಗಾಣೋದು ಪಕ್ಕಾ ಎಂಬಂತೆಯೇ ಬಿಂಬಿಸಲಾಗಿತ್ತು. ಕಡೇ ಕ್ಷಣಗಳಲ್ಲಿ ಅದು ಪೋಸ್ಟ್ ಫೋನ್ ಆಗಿತ್ತು. ಅದರ ಬೆನ್ನಿಗೇ ಮೇ ತಿಂಗಳ ಒಂಬತ್ತರಂದು ಬಿಡುಗಡೆಗೊಳ್ಳುವ ಭರವಸೆಯನ್ನೂ ಕೊಡಲಾಗಿತ್ತು. ಅಭಿಮಾನಿ ಬಳಗ ಹಳೇ ಕಹಿಗಳನ್ನೆಲ್ಲ ಮರೆತು ಆ ದಿನಾಂಕಕ್ಕಾಗಿ ಎದುರು ನೋಡುತ್ತಿರುವಾಗಲೇ ಆ ದಿನಾಂಕವೂ ಮುಂದಕ್ಕೆ ಎಗರಿಕೊಂಡಿರುವ ಸುದ್ದಿಯೊಂದು ಜಾಹೀರಾಗಿದೆ. ಈಗಿರುವ ವಾತಾವರಣವನ್ನು ಆಧರಿಸಿ ಹೇಳೋದಾದರೆ, ಈ ವರ್ಷದ ಕಡೇಯ ಹೊತ್ತಿಗೆ ಕಲ್ಕಿ ತೆರೆಗಾಣಬಹುದು. ಆದರೆ, ಅದಕ್ಕೂ ಗ್ಯಾರೆಂಟಿಯೇನಿಲ್ಲ. ಅಲ್ಲಿಗೆ ಅಭಿಮಾನಿಗಳ ತಾಳ್ಮೆಯ ಕತ್ತಿಗೇ ಕಲ್ಕಿ ಕೈ ಇಟ್ಟಂತಾಗಿದೆ!
ಹಾಗೆ ನೋಡಿದರೆ, ಪ್ರಭಾಸ್ ಸಾಲು ಸಾಲಾಗಿ ಸೋಲು ಕಂಡರೂ ಆತನ ಬೇಡಿಕೆಯೇನೂ ಕಡಿಮೆಯಾಗಿಲ್ಲ. ಈ ಕ್ಷಣಕ್ಕೂ ಬಹು ಕೋಟಿ ಬಜೆಟ್ಟಿನ ಮೂರ್ನಾಲಕ್ಕು ಸಿನಿಮಾಗಳಲ್ಲಿ ಆತ ಬ್ಯುಸಿಯಾಗಿದ್ದಾನೆ. ಈಗೊಂದಷ್ಟು ವರ್ಷದಿಂದೀಚಿಗಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರಭಾಸ್ ನಟನೆಯ ಅಷ್ಟೂ ಸಿನಿಮಾಗಳು ಅಭಿಮಾನಿಗಳಿಗೆ ನಿರಾಸೆ ತಂದೊಡ್ಡುತ್ತಾ ಸಾಗಿವೆ. ಟೀಸರ್, ಟ್ರೈಲರ್, ಬಿಡುಗಡೆಯೂ ಸೇರಿದಂತೆ ಎಲ್ಲ ಬಿಡುಗಡೆ ದಿನಾಂಕಗಳೂ ಏಕಾಏಕಿ ಬದಲಾಗಿವೆ. ಆದಿಪುರುಷ್, ಸಲಾರ್ ಸಂದರ್ಭದಲ್ಲಿಯೂ ಅಭಿಮಾನಿಗಳು ರೊಚ್ಚಿಗೇಳುವಂಥಾ ಸನ್ನಿವೇಶ ಸೃಷ್ಟಿಯಾಗಿತ್ತು. ಇದೀಗ ಕಲ್ಕಿಗೂ ಅದೇ ಖಾಯಿಲೆ ಅಂಟಿಕೊಂಡಿದೆ. ಇದು ಯಥಾಪ್ರಕಾರವಾಗಿ ಮುಂದುವರೆದರೆ, ಪ್ರಭಾಸ್ ನ ಅಸಲೀ ಶಕ್ತಿಯಂತಿರೋ ಅಭಿಮಾನಿ ಬಳಗ ಚದುರುವಂತಾದರೂ ಅಚ್ಚರಿಯೇನಿಲ್ಲ!