ಒಂದು ಕಾಲಕ್ಕೆ ಭಾರತೀಯ ಚಿತ್ರರಂಗವೆಂದರೆ ಕೇವಲ ಬಾಲಿವುಡ್ ಮಾತ್ರ ಎಂಬಂಥಾ ವಾತಾವರಣವಿತ್ತು. (bollywood) ಬಾಲಿವುಡ್ಡಿನಲ್ಲಿ ಮಿಂಚುವ ನಾಯಕರ ಮೆರೆದಾಟದ ಮುಂದೆ, ಇತರೇ ಭಾಷೆಗಳ ನಾಯಕರಿಗೆ ಎರಡನೇ ದರ್ಜೆಯೇ ಖಾಯಂ ಎಂಬಂತಿತ್ತು. ಆದರೀಗ ವಾತಾವರಣ ಬದಲಾಗಿದೆ. ದಕ್ಷಿಣದಿಂದ ಬೀಸುತ್ತಿರುವ ಹೊಸತನದ ಬಿರುಗಾಳಿಯ ಮುಂದೆ ಬಾಲಿವುಡ್ ಖಾನುಗಳೆಲ್ಲ ಕಂಗಾಲಾಗಿದ್ದಾರೆ. ದಕ್ಷಿಣದ ದಿಕ್ಕಿಂದ ಅದ್ಯಾವ ಕ್ಷಣದಲ್ಲಿ ಮತ್ಯಾವ ಬಿರುಗಾಳಿ ಬೀಸಲಿದೆಯೋ ಎಂಬಂತೆ ಬಾಲಿವುಡ್ ಮಂದಿ ನೆಮ್ಮದಿ ಕೆಡಿಸಿಕೊಂಡಿದ್ದಾರೆ. ಹಾಗೆ, ದಕ್ಷಿಣ ಭಾರತೀಯ ಚಿತ್ರರಂಗದ ಖದರ್ ಅನ್ನು ಬಾಲಿವುಡ್ಡಿಗೆ ಪರಿಚಯಿಸಿದ ಖ್ಯಾತಿಯಲ್ಲಿ ಕೆಜಿಎಫ್ (kgf kannada movie) ಮೂಲಕ ಕನ್ನಡದ ಪಾಲೂ ಇದ್ದೇ ಇದೆ!
ಅತ್ತ ಬಾಲಿವುಡ್ಡಿನಲ್ಲಿ ಅಪರೂಪಕ್ಕೊಲಿಯೋ ಸಾಧಾರಣ ಗೆಲುವಿಗೂ ಸಂಭ್ರಮಿಸುವ ವಾತಾವರಣವಿದೆ. ಅದೇ ಹೊತ್ತಿನಲ್ಲಿ ದಕ್ಷಿಣದ ಚಿತ್ರಗಳು ತಮ್ಮ ಖದರ್ ನಿಂದಲೇ ದೇಶ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಸದ್ಯದ ಮಟ್ಟಿಗೆ ಅಂಥಾದ್ದೊಂದು ಸಂಚಲನ ಹುಟ್ಟುಹಾಕಿರುವ ಚಿತ್ರ ತೆಲುಗಿನ ಗಾಮಿ. ನಟನಾಗಿ, ನಿರ್ದೇಶಕನಾಗಿಯೂ ಸೈ ಅನ್ನಿಸಿಕೊಂಡಿರುವ ವಿಶ್ವಕ್ ಸೇನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ಗಾಮಿ. ಈ ವಾರ ಬಿಡುಗಡೆಗೊಳ್ಳುತ್ತಿರುವ ಸದರಿ ಚಿತ್ರದ ಟ್ರೈಲರ್ ಕಂಡು ಬಹುತೇಕರು ಥ್ರಿಲ್ ಆಗಿದ್ದಾರೆ. ಅಘೋರಿ ಜಗತ್ತಿನ ಸುತ್ತಮುತ್ತ ನಾನಾ ನಿಗೂಢಗಳನ್ನು ಕಾಣಿಸಿರುವ ಈ ಟ್ರೈಲರ್ ಗಾಮಿಯ ಅಭೂತಪೂರ್ವ ಗೆಲುವಿನ ಮುನ್ಸೂಚನೆ ಕೊಟ್ಟುಬಿಟ್ಟಿದೆ.
ಬಂಗಾರು ಬಾಬು ಎಂಬ ಸಿನಿಮಾ ಮೂಲಕ ನಟನಾಗಿ ಚಿತ್ರರಂಗಕ್ಕೆ ಆಗಮಿಸಿದ್ದವರು ವಿಶ್ವಕ್ ಸೇನ್. ಆ ನಂತರದಲ್ಲಿ ನಿರ್ದೇಶಕರಾಗಿಯೂ ಹವಾ ಸೃಷ್ಟಿಸಿದ್ದ ವಿಶ್ವಕ್ ಇದೀಗ ಗಾಮಿ ಮೂಲಕ ಮತ್ತೆ ನಟನಾಗಿ ಕಾಣಿಸಿಕೊಂಡಿದ್ದಾರೆ. ವಿದ್ಯಾಧರ್ ನಿರ್ದೇಶನದ ಈ ಸಿನಿಮಾವನ್ನು ಐದು ವರ್ಷಗಳ ಕಾಲ ಶ್ರಮ ವಹಿಸಿ ರೂಪಿಸಲಾಗಿದೆ. ಹಾಗಂತ, ಏನೋ ಎಡವಟ್ಟುಗಳು ನಡೆದು ಇಒಒಷ್ಟು ತಡವಾಗಿದೆ ಅಂದಕೊಳ್ಳುವಂತಿಲ್ಲ. ವಿಶೇಷವಾದ ಕಥೆಗೆ ದೃಷ್ಯ ರೂಪ ಕೊಡಲು ಇಷ್ಟು ಸಮಯ ತೆಗೆದುಕೊಂಡಿದೆಯಷ್ಟೆ. ಈ ಟ್ರೈಲರ್ ನೋಡಿದವರೆಲ್ಲ ಹಾಲಿವುಡ್ ಚಿತ್ರಗಳ ಮೂಡಿಗೆ ಜಾರಿದ್ದಾರೆ. ಘಟಾನುಘಟಿ ನಟರೇ ಬೆರಗಾಗಿ ಈ ಟ್ರೈಲರ್ ಅನ್ನು ಹಾಡಿ ಹೊಗಳುತ್ತಿದ್ದಾರೆ. ಈ ಟ್ರೈಲರ್ ಗೆ ಸರಿಸಮನಾಗಿದ್ದರೆ ಖಂಡಿತವಾಗಿಯೂ ಗಾಮಿ ಪ್ಯಾನಿಂಡಿಯಾ ಮಟ್ಟದಲ್ಲಿ ಸದ್ದು ಮಾಡೋದು ಗ್ಯಾರೆಂಟಿ!