ಚಿನ್ನಾರಿಮುತ್ತ ಚಿತ್ರದ ಮೂಲಕ ಕನ್ನಡದ ಅಷ್ಟೂ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದವರು (viajya raghavendra) ವಿಜಯ ರಾಘವೇಂದ್ರ. ಆ ಸಿನಿಮಾದಲ್ಲಿ ಪುಟ್ಟ ಹುಡುಗನಾಗಿದ್ದ ರಾಘುವಿನ ಅಭಿನಯ ನೋಡಿದವರೆಲ್ಲ ಮೆಚ್ಚಿಕೊಂಡಿದ್ದರು. ಈ ಹುಡುಗ ಮುಂದೆ ಯಶಸ್ವೀ ನಾಯಕ ನಟನಾಗಿ ನೆಲೆ ಕಂಡುಕೊಳ್ಳುತ್ತಾನೆ ಅಂತೆಲ್ಲ ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು. ಹಾಗೆ ಬಾಲನಟನಾಗಿ ಹಿರಿತೆರೆಗೆ ಆಗಮಿಸಿದ್ದ ವಿಜಯ್ ರಾಘವೇಂದ್ರ ನಿರೀಕ್ಷೆಯಂತೆಯೇ ನಾಯಕನಾಗಿ ಅವತರಿಸಿದ್ದರಾದರೂ, ಅವರ ಪ್ರತಿಭೆಗೆ ಸರಿಸಾಟಿಯಾಗಬಲ್ಲಂಥಾ ಪುಷ್ಕಳ ಗೆಲುವು ಇದುವರೆಗೂ ದಕ್ಕಿಲ್ಲ. ಹಾಗಂತ ಓರ್ವ ನಟನಾಗಿ ಆತ ಸೋತಿದ್ದಾರಾ ಅಂದರೆ, ಹಾಗೆ ವಿಶ್ಲೇಷಣೆ ಮಾಡಲು ಸಾಧ್ಯವಾಗೋದಿಲ್ಲ. ಯಾಕೆಂದರೆ, ವಿಜಯ್ ರಾಘವೇಂದ್ರರ ನಟನೆಯ ಕಸುವು ಅದೆಲ್ಲವನ್ನೂ ಮೀರಿದ್ದು!
ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಾ, ಪ್ರಯತ್ನವನ್ನು ಸದಾ ಚಾಲ್ತಿಯಲ್ಲಿಟ್ಟಿರುವ ರಾಘು, ಇತ್ತೀಚಿನ ವರ್ಷಗಳಲ್ಲಿ ಮರ್ಡರ್ ಮಿಸ್ಟರಿ, ಕ್ರೈಂ ಥ್ರಿಲ್ಲರ್ ಜಾನರಿನ ಸಿನಿಮಾಗಳತ್ತ ಸಂಪೂರ್ಣವಾಗಿ ವಾಲಿಕೊಂಡಂತಿದೆ. ಈ ವಾರ ತೆರೆಗಾಣಲಿರುವ ಜೋಗ್ 101 ಟ್ರೈಲರಿನಲ್ಲಿಯೂ ಈ ಮಾತಿಗೆ ಪುರಾವೆಯಾಗಬಲ್ಲಂಥಾ ಕಂಟೆಂಟು ಕಾಣಿಸಿದೆ. ಬಿಡುಗಡೆಯ ಹೊಸ್ತಿಲಲ್ಲಿ ಹೊರಬಂದಿರುವ ಈ ಟ್ರೈಲರ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದ್ದಾವೆ. ಇದರಲ್ಲಿ ನಾಯಕನಾಗಿ ನಟಿಸಿರುವ ರಾಘವೇಂದ್ರರ ಗೆಟಪ್ಪು ಕೂಡಾ ನಿರೀಕ್ಷೆ ಮೂಡಿಸಿದೆ. ವಿಜಯ್ ಕನ್ನಡಿಗ ನಿರ್ದೇಶನದ ಈ ಸಿನಿಮಾ ಮೂಲಕವಾದರೂ ರಾಘುವಿಗೆ ಪುಷ್ಕಳವಾದೊಂದು ಗೆಲುವು ದಕ್ಕೀತೆಂಬ ನಿರೀಕ್ಷೆ ಮತ್ತೆ ಮೊಳೆತುಕೊಂಡಿದೆ.
ವಿಜಯ್ ರಾಘವೇಂದ್ರ ಕನ್ನಡ ಸಿನಿಮಾರಂಗದ ಅಪರೂಪದ ನಟ. ನಟನೆ, ನೃತ್ಯ ಸೇರಿದಂತೆ ಎಲ್ಲದರಲ್ಲಿಯೂ ಪಳಗಿಕೊಂಡಿರುವವರು ವಿರಳ. ಅಂಥಾ ವಿರಳ ನಾಯಕರ ಸಾಲಿನಲ್ಲಿ ರಾಘು ನಿಸ್ಸಂದೇಹವಾಗಿಯೂ ಸೇರಿಕೊಳ್ಳುತ್ತಾರೆ. ಮುಖ್ಯನಾಯಕನಾಗಿ ನೆಲೆಗೊಳ್ಳುವ ಎಲ್ಲ ಅರ್ಹತೆಗಳಿದ್ದರೂ, ಒಂದಷ್ಟು ಅಡೆತಡೆಗಳು ಅವರ ಹೆಜ್ಜೆಗಳಿಗೆ ತೊಡರಿಕೊಳ್ಳುತ್ತಾ ಬಂದಿದೆ. ಆದರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅವರು ಈಗೊಂದಷ್ಟು ವರ್ಷಗಳಿಂದ ಈ ಜಾಡಿನ ಸಿನಿಮಾಗಳತ್ತ ಹೊರಳಿಕೊಂಡಿದ್ದಾರೆ. ಅದರ ಭಾಗವಾಗಿಯೇ ಇದೀಗ ಜೋಗ್ ಚಿತ್ರವೂ ಗೋಚರಿಸುತ್ತಿದೆ. ಚಿನ್ನರಿಮುತ್ತನಿಗೆ ಈ ಸಿನಿಮಾ ಮೂಲಕವಾದರೂ ಭರಪೂರ ಗೆಲುವು ದಕ್ಕಬಹುದೇ?