ಗೌರೀಶಂಕರ್ ನಾಯಕನಾಗಿ ನಟಿಸಿರುವ (kerebete movie) ಕೆರೆಬೇಟೆ ಚಿತ್ರ ಇದೇ ತಿಂಗಳ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಅದ್ಯಾವ ಬಗೆಯ ಅಲೆಯ ಅಬ್ಬರವಿರುವ ಕಾಲಮಾನದಲ್ಲಿಯೂ, ನೆಲದ ಘಮಲಿನ ಕಥೆಗಾಗಿ ಧ್ಯಾನಿಸುವ ಪ್ರೇಕ್ಷಕರದ್ದೊಂದು ದೊಡ್ಡ ದಂಡೇ ಕನ್ನಡದಲ್ಲಿದೆ. ಗ್ರಾಮೀಣ ಪ್ರದೇಶ, ಅಲ್ಲಿನ ಆಚಾರ ವಿಚಾರಗಳೊಂದಿಗೆ ಮಿಳಿತವಾಗಿರುವ ಕಥೆಗಳನ್ನು ಕಣ್ತುಂಬಿಕೊಳ್ಳಲು ಅವರೆಲ್ಲರೂ ಸದಾ ಕಾತರಗೊಂಡಿರುತ್ತಾರೆ. ಆ ವರ್ಗವೂ ಸೇರಿದಂತೆ, ಎಲ್ಲ ಅಭಿರುಚಿಯ ಪ್ರೇಕ್ಷಕರನ್ನೂ ಸೆಳೆದುಕೊಳ್ಳುವ ಛಾತಿ ಹೊಂದಿರುವ ಚಿತ್ರ ಕೆರೆಬೇಟೆ. ಈಗಾಗಲೇ ಹಾಗೊಂದು ಸೂಚನೆ ನಿಖರವಾಗಿ ಸಿಕ್ಕಿದಂತಿದೆ. ಇದೀಗ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಈ ಘಳಿಗೆಯಲ್ಲಿ ಚೆಂದದ ಟೈಟಲ್ ಸಾಂಗ್ ಒಂದನ್ನು ಚಿತ್ರತಂಡ ಅನಾವರಣಗೊಳಿಸಿದೆ!
ಈಗಿನ ದಿನಮಾನದಲ್ಲಿ ಸಿನಿಮಾ ರೂಪಿಸುವಷ್ಟೇ ಆಸ್ಥೆಯಿಂದ ಪ್ರಚಾರದ ಪಟ್ಟುಗಳನ್ನು ಪ್ರದರ್ಶಿಸುವ ಅನಿವಾರ್ಯತೆ ಇದೆ. ಅದರಲ್ಲಿ ಅತ್ಯಂತ ಸಹಜವಾಗಿ, ಕ್ರಿಯಾಶೀಲತೆಯಿಂದ ಪ್ರೇಕ್ಷಕರನ್ನು ತಲುಪಿಕೊಳ್ಳೋದೊಂದು ಸಾಹಸ. ಈ ನಿಟ್ಟಿನಲ್ಲಿ ಕೆರೆಬೇಟೆ ತಂಡದ ನಡೆ ಎಲ್ಲೆಡೆಯೂ ಪ್ರಶಂಸೆಗೆ ಪಾತ್ರವಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ಅಂಟಿಕೆ ಪಿಂಟಿಗೆ ಶೈಲಿಯಲ್ಲಿ ಮನೆ ಮನೆಗೆ ತೆರಳಿ ಆಶೀರ್ವಾದ ಪಡೆಯುವ ಮೂಲಕ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡ ಅಚ್ಚರಿ ಮೂಡಿಸಿತ್ತು. ಇದೀಗ ಮಲೆನಾಡಿನ ಹೆಬ್ಬಾಗಿಲೆಂದೇ ಕರೆಸಿಕೊಳ್ಳುವ ಶಿವಮೊಗ್ಗ ನಗರದಲ್ಲಿ, ಅರ್ಥಪೂರ್ಣವಾದ ಕಾರ್ಯಕ್ರಮಗಳ ಮೂಲಕ ಟೈಟಲ್ ಸಾಂಗ್ ಅನ್ನು ಲೋಕಾರ್ಪಣೆಗೊಳಿಸಲಾಗಿದೆ.
ಮಳಿ ಆತು ಬೆಳಿ ಆತು ಬ್ಯಾಸಗೀನು ಬ್ಯಾಸರಾತು ಎಂಬ ಈ ಶೀರ್ಷಿಕೆ ಗೀತೆ ಮಲೆನಾಡಿನ ಬದುಕಿನ ಜೀವಂತಿಕೆಯನ್ನು ಹೊಸೆದುಕೊಂಡೇ ಹುಟ್ಟಿದಂತೆ ಭಾಸವಾಗುತ್ತದೆ. ಈಗ ಯಾವ ಸ್ಥಿತ್ಯಂತರಗಳಿಗೆ ಒಡ್ಡಿಕೊಂಡಿದ್ದರೂ ಕೂಡಾ, ಮಲೆನಾಡು ಭಾಗದ ಮೂಲ ಆಚರಣೆಗಳಿಗೆ ಮತ್ಯಾವ ಭಾಗದಲ್ಲೂ ಕಾಣಿಸಲಾರದಂಥಾ ಆಧ್ರ್ರ ಸೆಳೆತವಿದೆ. ಅಂಥಾ ಜೀವನ ಕ್ರಮ, ಭಾಷಾ ಶೈಲಿಯೊಂದಿಗೆ ಮೂಡಿ ಬಂದಿರುವ ಈ ಹಾಡು ಮಲೆನಾಡಿಗರನ್ನಂತೂ ಒಂದೇ ಏಟಿಗೆ ಸೆಳೆದು ಬಿಡುತ್ತದೆ. ಹಾಗಂತ, ಮಲೆನಾಡಿಗರಿಗೆ ಮಾತ್ರವೇ ಇಷ್ಟವಾಗುತ್ತೆ ಅಂದುಕೊಳ್ಳುವಂತಿಲ್ಲ; ಸಾಹಿತ್ಯ, ಸಂಗೀತಗಳ ಒಡ್ಡೋಲಗದಲ್ಲಿ ಎಲ್ಲರನ್ನೂ ಸಲೀಸಾಗಿ ಸೆಳೆದುಕೊಂಡು, ಗುಂಗಿನ ತಿರುಗಣಿಗೆ ಪಕ್ಕಾಗುವಂತೆ ಮಾಡಬಲ್ಲ ಶಕ್ತಿ ಈ ಹಾಡಿಗಿದೆ.
ಆರಂಭಿಕವಾಗಿ ಶಿವಮೊಗ್ಗದ ನಗರದಾದ್ಯಂತ ಕುದುರೆ ಗಾಡಿ ಹಾಗೂ ಬೈಕ್ ರ್ಯಾಲಿಯನ್ನು ಸಾಂಕೇತಿಕವಾಗಿ ನಡೆಸಲಾಯ್ತು. ವಿಶೇಷವೆಂದರೆ ರಿಯಲ್ ಕೆರೆಬೇಟೆ ಪಟುಗಳೇ, ಆ ಉಡುಗೆ ತೊಡುಗೆಗಳೊಂದಿಗೆ ಪ್ರತೀ ಜಿಲ್ಲೆಗಳಿಗೂ ಪ್ರಚಾರ ಕಾರ್ಯಕ್ಕೆ ಹೊರಟು ನಿಂತಿದ್ದಾರೆ. ಆ ಕಾರ್ಯಕ್ಕೂ ಈ ಸಂದರ್ಭದಲ್ಲಿಯೇ ಚಾಲನೆ ಸಿಕ್ಕಿದೆ. ಇದಲ್ಲದೇ ಮಲೆನಾಡು ಭಾಗದ ಕಹಳೆ, ಕೋಲಾಟದಂಥಾ ಕಲೆಗಳೂ ಕೂಡಾ ಈ ಸಂದರ್ಭದಲ್ಲಿ ಮೇಳೈಸಿವೆ. ನಂತರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಅಚ್ಚುಕಟ್ಟಾದ ಕಾರ್ಯಕ್ರಮದಲ್ಲಿ ಬಿ ವೈ ರಾಘವೇಂದ್ರ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಶೀರ್ಷಿಕೆ ಗೀತೆ ಬಿಡುಗಡೆಗೊಂಡಿದೆ.
ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಈ ಹಾಡನ್ನು ಬರೆದಿದ್ದಾರೆ. ಗಗನ್ ಬಡೇರಿಯಾ ಸಂಗೀತ ಹಾಗೂ ಕರಿಬಸವ ಗಾಯನದೊಂದಿಗೆ ಈ ಹಾಡು ಮೂಡಿಬಂದಿದೆ. ಈಗಾಗಲೇ ಫಸ್ಟ್ ಲುಕ್, ಮೋಷನ್ ಪೋಸ್ಟರ್, ಮಲೆನಾಡು ಗೊಂಬೆಯಂಥಾ ವೀಡಿಯೋಈ ಸಾಂಗ್ ಮೂಲಕ ಕೆರೆಬೇಟೆ ಪ್ರೇಕ್ಷಕರನ್ನು ತಲುಪಿಕೊಂಡಿತ್ತು. ಇನ್ನೇನು ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಈ ಹೊತ್ತಿನಲ್ಲಿ ಲಾಂಚ್ ಆಗಿರುವ ಈ ಟೈಟ್ ಸಾಂಗ್ ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಗೌರಿಶಂಕರ್ ಸಹೋದರ ಜೈಶಂಕರ್ ಪಟೇಲ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಬಿಂದು ಶಿವರಾಮ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ.