ಒಂದೇ ಒಂದು ಸಿನಿಮಾದಿಂದ ದೊಡ್ಡ ಮಟ್ಟದ ಗೆಲುವಿನೊಂದಿಗೆ ಪುಟಿದೆದ್ದ ಒಂದಷ್ಟು ನಟಿಯರಿದ್ದಾರೆ. (rashmika mandanna) ರಶ್ಮಿಕಾ ಮಂದಣ್ಣ, (sreeleela) ಶ್ರೀಲೀಲಾಳಂಥಾ ನಟಿಯರನ್ನು ಆ ಸಾಲಿನಲ್ಲಿ ನಿಸ್ಸಂದೇಹವಾಗಿ ಹೆಸರಿಸಬಹುದು. ಇವರಿಬ್ಬರೂ ಕೂಡಾ ಕನ್ನಡದಲ್ಲಿ ಒಂದೊಂದು ಸಿನಿಮಾ ಮಾಡಿ ಪಡೆದುಕೊಂಡ ಖ್ಯಾತಿ, ಇದೀಗ ತೆಲುಗು ನಾಡಿನಲ್ಲಿ ಮಿಂಚುತ್ತಿರುವ ರೀತಿ ಎಂಥವರನ್ನೂ ಅವಾಕ್ಕಾಗಿಸುವಂತಿದೆ. ಆದರೆ, ಅಂಥಾ ಎಲ್ಲ ಮಲಕ್ಷಣಗಳನ್ನು ಹೊಂದಿದ್ದರೂ ವೃತ್ತಿ ಬದುಕು ಆರಕ್ಕೇರದೆ ಮೂರಕ್ಕಿಳಿಯದೆ ಮುಂದುವರೆಯುತ್ತಿರುವ ಒಂದಷ್ಟು ನಟಿಯರೂ ಇದ್ದಾರೆ. ಆ ಯಾದಿಯಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುವಾಕೆ (nishvika naidu) ನಿಶ್ವಿಕಾ ನಾಯ್ಡು!
ಹಾಗೆ ನೋಡಿದರೆ, ನಿಶ್ವಿಕಾ ನಾಯ್ಡು ಪ್ರತೀ ಸಿನಿಮಾದಲ್ಲಿಯೂ ತನ್ನದೇ ಆದ ಛಾಪು ಮೂಡಿಸುತ್ತಾ ಬಂದಿದ್ದಾಳೆ. ಈ ಹುಡುಗಿ ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳುತ್ತಾಳೆ ಎಂಬಂಥಾ ಭರವಸೆ ಮೂಡಿಸಿದ್ದ ನಿಶ್ವಿಕಾಗೆ, ಈ ಕ್ಷಣಕ್ಕೂ ಭರಪೂರ ಗೆಲುವೊಂದು ಕೈ ಹಿಡಿದಂತಿಲ್ಲ. ಅದೇನು ದುರಾದೃಷ್ಟವೋ, ಕಾಕತಾಳೀಯವೋ ಗೊತ್ತಿಲ್ಲ; ಎಲ್ಲ ಅರ್ಹತೆಗಳಿದ್ದರೂ ಸಹ ಈಕೆಯ ವೃತ್ತಿ ಬದುಕಿಗೇಕೋ ಮಂಕು ಕವುಚಿಕೊಂಡಂತಿದೆ. ಸದ್ಯದ ಮಟ್ಟಿಗೆ ನಿಶ್ವಿಕಾ ಮುಂದಿರೋ ದೊಡ್ಡ ಮಟ್ಟದ ಹೋಪ್ ನಂತೆ ಕಾಣಿಸುತ್ತಿರುವ ಚಿತ್ರ ಕರಟಕ ದಮನಕ!
ಯೋಗರಾಜ್ ಭಟ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭುದೇವ ಮತ್ತು ಶಿವರಾಜ್ ಕುಮಾರ್ ನಾಯಕರಾಗಿ ನಟಿಸಿದ್ದಾರೆ. ನಿಶ್ವಿಕಾ ನಾಯಕಿಯರಲ್ಲೊಬ್ಬಳಾಗಿ ಮಿಂಚಿದ್ದಾಳೆ. ಯೋಗರಾಜ್ ಭಟ್ ಕೂಡಾ ತಮ್ಮ ಟಿಪಿಕಲ್ ಶೈಲಿಯಾಚೆ ಹೊರಳಿಕೊಂಡಂತೆ ಕಾಣಿಸುತ್ತಿರೋ ಈ ಚಿತ್ರ ನಿಶ್ವಿಕಾ ಪಾಲಿಗೊಂದು ಬ್ರೇಕ್ ಕೊಡೋ ಸಾಧ್ಯತೆಗಳಿವೆ. ಖುದ್ದು ನಿಶ್ವಿಕಾಗೂ ಅಂಥಾದ್ದೊಂದು ನಿರೀಕ್ಷೆ ಇರುವುದು ಸುಳ್ಳೇನಲ್ಲ. 2018ರಲ್ಲಿ ಅಮ್ಮ ಐ ಲವ್ ಯೂ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಿಶ್ವಿಕಾ, ಆ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾಳೆ. ಒಂದು ದೊಡ್ಡ ಬ್ರೇಕ್ ಗಾಗಿ ಹಂಬಲಿಸಿದ್ದಾಳೆ. ಅದು ಕರಟಕ ದಮನಕನ ಮೂಲಕ ಸಾಧ್ಯವಾಗಬಹುದಾ ಅನ್ನೋದು ಸದ್ಯದ ಕುತೂಹಲ!