ಹೆಚ್ಚಿನ ಬಾರಿ ಪ್ರತಿಭೆ ಮತ್ತು ವಿಕ್ಷಿಪ್ತತೆ ಒಂದರೊಳಗೊಂದು ಮಿಳಿತವಾಗಿರೋದಿದೆ. ಅಂಥಾದ್ದರ ಉತ್ತುಂಗದಂಥಾ ಸ್ಥಿತಿಗೆ ಉದಾಹರಣೆಯಂಥವರು ಬೇರೆ ಬೇರೆ ಭಾಷೆಗಳ ಸಿನಿಮಾ ರಂಗಗಳಲ್ಲಿ ಸಾಕಷ್ಟು ಮಂದಿ ಕಾಣ ಸಿಗುತ್ತಾರೆ. ಆದರೆ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ (director bala) ಬಾಲನಂಥಾ ತಾಜಾ ಉದಾಹರಣೆ ಸಿಗುವುದು ತುಸು ಕಷ್ಟ. ಆತ ಪ್ರಖರ ಪ್ರತಿಭಾವಂತ, ಅಂತರ್ಮುಖಿ, ವಿಕ್ಷಿಪ್ತ ಜೀವಿ… ಬಹುಶಃ ಜೊತೆಯಲ್ಲಿ ಕೆಲಸ ಮಾಡಿದವರೂ ಕೂಡಾ ಬಾಲನ ವ್ಯಕ್ತಿತ್ವದ ಬಗ್ಗೆ ಇದಮಿತಂ ಎಂಬಂಥಾ ವಿವರಣೆ ಕೊಡುವುದು ಕಷ್ಟ. ಆತನೋರ್ವ ಸೈಕೋ ಅಂತೆಲ್ಲ ನಾನಾ ತೆರನಾದ ಅಂತೆಕಂತೆ, ಆರೋಪಗಳ ದಂಡೇ ಇವೆ. ಸದ್ಯ ಅದೆಲ್ಲವನ್ನೂ ಮತ್ತೆ ಗರಿಗೆದರುವಂತೆ ಮಾಡಿರುವುದು ಮಲೆಯಾಳಿ (actress mamita baiju) ಚೆಲುವೆ ಮಮಿತಾ ಬೈಜು ಮಾಡಿರುವ ಆರೋಪ!
ಮಮಿತಾ ಬೈಜು ಮಲೆಯಾಳ ಚಿತ್ರರಂಗದಿಂದ ಬಂದರೂ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಪ್ರಭಾವಳಿ ಹೊಂದಿರುವ ನಟಿ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಮಲೆಯಾಳದ ಪ್ರೇಮಾಲು ಚಿತ್ರದ ನಾಯಕಿಯಾಗಿ ನಟಿಸಿರುವ ಈಕೆ ದೊಡ್ಡ ಮಟ್ಟದಲ್ಲಿಯೇ ಗೆಲುವು ಕಂಡಿದ್ದಾಳೆ. ಬಹುಶಃ ಆಕೆಯ ವೃತ್ತಿ ಬದುಕಿಗೆ ಬಹುದೊಡ್ಡ ತಿರುವು ಕೊಡುವಂತೆ ಆ ಸಿನಿಮಾ ಗೆದ್ದಿದೆ. ಸಾಮಾನ್ಯವಾಗಿ, ಹೀಗೆ ಗೆದ್ದು ನಿಂತಾಗ ಆ ಹಾದಿಯಲ್ಲಿ ಅನುಭವಿಸಿದ್ದ ಅವಮಾನಗಳಿಗೆ ಸೆಡ್ಡು ಹೊಡೆಯುವ ಮನಃಸ್ಥಿತಿ ಮೂಡಿಕೊಳ್ಳುತ್ತೆ. ಇದೇ ರೀತಿ ಪ್ರೇಮಾಲು ಯಶದ ಪ್ರಭೆಯಲ್ಲಿಯೇ ಬಾಲ ನಿರ್ದೇಶನದ ವನಂಗಾನ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ತನಗಾದ ಅವಮಾನ, ಆಘಾತಗಳ ಬಗ್ಗೆ ಮಾತಾಡಿದ್ದಾಳೆ!
ಅಂದಹಾಗೆ, ವರ್ಷಾಂತರಗಳ ನಂತರ ನಿರ್ದೇಶಕ ಬಾಲಾ ಕೈಗೆತ್ತಿಕೊಂಡಿರುವ ಚಿತ್ರ ವನಂಗಾನ್. ಒಂದಷ್ಟು ವರ್ಷಗಳ ಕಾಲ ಶುಷ್ಕ ವಾತಾವರಣದಲ್ಲಿ ಇದ್ದದ್ದರಿಂದಲೋ ಏನೋ; ಈ ಸಿನಿಮಾ ಸಂದರ್ಭದಲ್ಲಿ ಬಾಲನ ವಿಕ್ಷಿಪ್ತ ಮನಃಸ್ಥಿತಿ ಮೇರೆ ಮೀರಿದಂತಿದೆ. ಯಾಕೆಂದರೆ, ಆ ಸಿನಿಮಾ ಆರಂಭವಾದಾಗಿನಿಂದಲೂ ನಾನಾ ವಿವಾದಗಳು ಹಬೆಯಾಡಲಾರಂಭಿಸಿವೆ. ಈ ಚಿತ್ರದಲ್ಲಿ ಸೂರ್ಯ ನಾಯಕ ಎಂಬ ಕಾರಣದಿಂದ ನಿರೀಕ್ಷೆ ಮೂಡಿಕೊಂಡಿತ್ತು. ನಾಯಕಿಯಾಗಿ ಇದೇ ಮಮಿತಾ ಬೈಜು ಆಯ್ಕೆಯಾಗಿದ್ದಳು. ಈ ಸಂದರ್ಭದಲ್ಲಿ ಚಿತ್ರೀಕರಣದ ಪ್ರತೀ ಹಂತದಲ್ಲಿಯೂ ಬಾಲಾ ಮಮಿತಾಗೆ ಬೈದಾಡುತ್ತಿದ್ದನಂತೆ. ಕೆಲ ಸಂದರ್ಭದಲ್ಲಿ ಹಲ್ಲೆಯನ್ನೂ ನಡೆಸಿದ್ದನೆಂದು ಮಮಿತಾ ಹೇಳಿಕೊಂಡಿದ್ದಾಳೆ.
ಮಮಿತಾಳ ವಿಚಾರ ಹಾಗಿರಲಿ; ಸೂರ್ಯನಂಥಾ ಸೂರ್ಯನೇ ಬಾಲಾನ ವಿಚಿತ್ರ ಮನಃಸ್ಥಿತಿ ಕಂಡು ಕಂಗಾಲ;ಆಗಿ ಬಿಟ್ಟಿದ್ದ. ಈ ಕಾರಣದಿಂದಲೇ ಸೆಟ್ಟಿನಿಂದ ನಾನಾ ಗಾಸಿಪ್ಪುಗಳು ಎಗರಿ ಬೀಳಲಾರಂಭಿಸಿದ್ದವು. ಕಡೆಗೂ ಇತ್ತೀಚೆಗೆ ಸೂರ್ಯ ವನಂಗಾನ್ ಚಿತ್ರದಿಂದ ಎದ್ದು ಹೊರಟಿದ್ದಾನೆ. ಮಮಿತಾ ಕೂಡಾ ಹೊರಬಿದ್ದಿದ್ದಾಳೆ. ಸದ್ಯಕ್ಕೆ ನಾಯಕ ನಾಯಕಿಯರಿಬ್ಬರನ್ನೂ ಬದಲಾಯಿಸಿರುವ ಬಾಲಾ, ಚಿತ್ರೀಕರಣ ಮುಂದುವರೆಸಿದ್ದಾನಂತೆ. ಚಿತ್ರರಂಗದಲ್ಲಿ ಹೆಚ್ಚಿನದಾಗಿ ಕಳವು ವೀರರೇ ತುಂಬಿಕೊಳ್ಳೋದಿದೆ. ಪುಟಗೋಸಿಯೊಂದನ್ನು ಹೊರತುಪಡಿಸಿ ಸ್ವಂತದ್ದೆನ್ನುವಂಥಾದ್ದು ಏನೂ ಇಲ್ಲದ ಖಾಲಿ ತಪಲೆಗಳೇ ಕೆಲ ಸಂದರ್ಭದಲ್ಲಿ ಸದ್ದು ಮಾಡುತ್ತವೆ. ಯಾರದ್ದೋ ಸರಕನ್ನು ತನ್ನದೇ ಎಂಬಂತೆ ಪೋಸು ಕೊಡುತ್ತಾ ನಿರ್ದೇಶಕರು, ಕಥೆಗಾರರ ಅವತಾರವೆತ್ತೋ ಚೋದ್ಯಗಳೂ ಸಂಭವಿಸೋದಿದೆ. ಕನ್ನಡ ಚಿತ್ರರಂಗವೂ ಇದಕ್ಕೆ ಹೊರತಾಗಿಲ್ಲ.
ಅಂಥಾ ಫಟಿಂಗರಿಗೆ ಹೋಲಿಕೆಯನ್ನೂ ಮಾಡಲಾಗದ ಪ್ರತಿಭೆ ಬಾಲನದ್ದು. ಆದರೆ, ವಿಕ್ಷಿಪ್ತ ನಡವಳಿಕೆಗಳೇ ಆತನನ್ನು ಪದೇ ಪದೆ ವನವಾಸಕ್ಕೆ ತಳ್ಳುತ್ತಿವೆ. ಮೈಕೊಡವಿಕೊಂಡು ನಿಂತರೆ ಈ ಕ್ಷಣಕ್ಕೂ ಒಂದು ದೃಷ್ಯದ ಅಚ್ಚರಿ ಸೃಷ್ಟಿಸಬಲ್ಲ ಛಾತಿ ಬಾಲನಿಗಿದೆ. ಆದರೆ, ಅಂಥಾ ಬಾಲ ಕನಸು ಹೊತ್ತು ಬಂದ ಹೆಣ್ಣುಮಗಳೊಬ್ಬಳ ಮೇಲೆ ಕೈ ಮಾಡುವಷ್ಟು ಸಂವೇದನೆ ಕಳೆದುಕೊಂಡಿದ್ದಾನೆಂಬುದೇ ದುರಂತದ ವಿಚಾರ. ಅಷ್ಟಕ್ಕೂ ಬಾಲನ ಮೇಲಿನ ಆರೋಪಗಳು ತಮಿಳು ಚಿತ್ರರಂಗದಲ್ಲಾಗಲಿ, ಪ್ರೇಕ್ಷಕರ ಪಾಲಿಗಾಗಲಿ ಹೊಸತಲ್ಲ. ಆದರೆ, ಮಲೆಯಾಳಿ ಹುಡುಗಿ ಮಮಿತಾ ಮಾಡಿರೋ ಆರೋಪದ ದೆಸೆಯಿಂದಾಗಿ ಬೇರೆ ಬಾಲನ ಕಿತಾಪತಿಗಳು ತಮಿಳುನಾಡಿನ ಗಡಿದಾಟಿ ಹಬ್ಬಿಕೊಂಡಿವೆ. ಭಾಷೆಯನ್ನು ಮೀರಿದ ಸಿನಿಮಾ ಪ್ರೇಮಿಗಳು ಬಾಲನಂಥಾ ನಿರ್ದೇಶಕರು ಈ ಮಟ್ಟಕ್ಕಿಳಿದಿರೋದು ದುರಂತ ಅಂತೆಲ್ಲ ಅಭಿಪ್ರಾಯ ದಾಖಲಿಸುತ್ತಿದ್ದಾರೆ!