ಜೈಲರ್ ಚಿತ್ರದ ಮಹಾ ಗೆಲುವಿನ ಪ್ರಭೆಯಲ್ಲಿ (rajanikanth) ರಜನೀಕಾಂತ್ ಮತ್ತೆ ಮೈಕೊಡವಿಕೊಂಡು ನಿಂತಿದ್ದಾರೆ. ಅಷ್ಟಕ್ಕೂ ಒಂದು ಸೋಲಿಗೆ ಮುಕ್ಕಾಗುವ, ಮಂಕಾಗುವ ಘಟ್ಟವನ್ನು ರಜನಿ ಮೀರಿಕೊಂಡಿದ್ದಾರೆ. ಮಹಾ ಗೆಲುವಿಗೆ ಸಂಭ್ರಮಿಸುವ ಹಂತವನ್ನೂ ದಾಟಿಕೊಂಡಿದ್ದಾರೆ. ಆದರೆ, ವಯಸ್ಸನ್ನು ಕೇವಲ ಸಂಖ್ಯೆಗೆ ಮಾತ್ರವೇ ಸೀಮಿತವಾಗಿಸಿ, ಯುವಕರನ್ನೂ ನಾಚಿಸುವಂತೆ ಕ್ರಿಯಾಶೀಲರಾಗೋ ವಿಚಾರದಲ್ಲಿ ಮಾತ್ರ ರಜನಿಯದ್ದು ಸಾರ್ವಕಾಲಿಕ ಸ್ಫೂರ್ತಿಯಂಥಾ ವ್ಯಕ್ತಿತ್ವ. ತನ್ನೆಲ್ಲ ತೊಳಲಾಟಗಳನ್ನೂ ಸಾರಾಸಗಟಾಗಿ ಎತ್ತೆಸೆದು, ಮತ್ಯಾವುದೋ ಗಮ್ಯದತ್ತ ಮುಂದುವರೆಯುವ ರಜನಿಕಾಂತ್ ಎನರ್ಜಿಗೆ ಸರಿಸಾಟಿಯಿಲ್ಲ. ಬಹುಶಃ ಅಂಥಾದ್ದೊಂದು ಗಟ್ಟಿತನ ಇಲ್ಲದೇ ಹೋಗಿದ್ದರೆ ಸೂಪರ್ ಸ್ಟಾರ್ ಪಟ್ಟ ದಕ್ಕಿಸಿಕೊಂಡು, ಅದನ್ನು ವರ್ಷಾಂತರಗಳ ವರೆಗೆ ಮುಂದುವರೆಸಲು ಖಂಡಿತಾ ಸಾಧ್ಯವಾಗುತ್ತಿರಲಿಲ್ಲ!
ರಜನೀಕಾಂತ್ ಸದ್ಯಕ್ಕೆ ಒಂದಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತನ್ನದೇ ಮಗಳು ಐಶ್ವರ್ಯಾ ನಿರ್ದೇಶನ ಮಾಡಿದ್ದ (lal salam movie) ಲಾಲ್ ಸಲಾಮ್ ಚಿತ್ರ ಕವುಚಿಕೊಂಡರೂ, ಅದು ತಲೈವಾಗೆ ಲೆಕ್ಕಕ್ಕಿಲ್ಲ. ತಿಜೋರಿ ಸೇರಿದ ಮೂವತ್ತು ಕೋಟಿಯಷ್ಟೇ ಲಾಭದ ಬಾಬತ್ತೆಂಬಂತೆ ಅವರು ಬೇರೆ ಪ್ರಾಜೆಕ್ಟುಗಳತ್ತ ಗಮನ ಹರಿಸಿದ್ದಾರೆ. ಲೇಟೆಸ್ಟ್ ವಿಚಾರವೆಂದರೆ, ಎರಡೆರಡು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಜನೀಕಾಂತ್ ಇದೀಗ (bollywood) ಬಾಲಿವುಡ್ ನಿರ್ಮಾಪಕರಿಗೂ ಸೈ ಅಂದಿದ್ದಾರೆ. ಬಾಲಿವುಡ್ ನ ಜನಪ್ರಿಯ ನಿರ್ದೇಶಕ ಕಂ ನಿರ್ಮಾಪಕ ಸಾಜಿದ್ ಜೊತೆ ಸುದೀರ್ಘವಾದೊಂದು ಮೀಟಿಂಗು ನಡೆಸಿರುವ ರಜನೀ ಹೊಸಾ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಖುದ್ದು ಸಾಜಿದ್ ತಮ್ಮ ಬ್ಯಾನರಿನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಖಚಿತಪಡಿಸಿದ್ದಾರೆ.
ಇದೊಂದು ಬಿಗ್ ಬಜೆಟ್ ಸಿನಿಮಾ. ಬಹು ಹಿಂದಿನಿಂದಲೂ ಸಾಜಿದ್ ರಜನೀಕಾಂತ್ ಅವರ ಜೊತೆಗೊಂದು ಸಿನಿಮಾ ಮಾಡಬೇಕೆಂಬ ಹಂಬಲ ಹೊಂದಿದ್ದರಂತೆ. ಕಡೆಗೂ ಒಂದೊಳ್ಳೆ ಪ್ರಾಜೆಕ್ಟು ರೆಡಿ ಮಾಡಿಕೊಂಡು ರಜನಿಯನ್ನು ಸಂಪರ್ಕಿಸಿದ್ದಾರೆ. ಅವರ ಕಡೆಯಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಈಗಾಗಲೇ ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಸಾಜಿದ್ ಮತ್ತು ರಜನೀ ಜೋಡಿ ಈ ಬಾರಿ ಕಮಾಲ್ ಮಾಡುವ ಸಾಧ್ಯತೆಗಳಿದ್ದಾವೆ. ಸದ್ಯಕ್ಕೆ ರಜನೀಕಾಂತ್ ವೆಟ್ಟೈಯನ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ಹೊತ್ತಿನಲ್ಲಿ ಲೋಕೇಶ್ ಕನಗರಾಜನ್ ನಿರ್ದೇಶನದ ಚಿತ್ರಕ್ಕೂ ತಯಾರಾಗುತ್ತಿದ್ದಾರೆ. ಇದೆಲ್ಲವನ್ನೂ ಕಂಡು ತಲೈವಾ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಈ ವರ್ಷದ ಆಸುಪಾಸಲ್ಲಿ ರಜನೀ ಅಭಿಮಾನಿಗಳಿಗೆ ಹಬ್ಬವಾಗೋದು ಗ್ಯಾರೆಂಟಿ!